ಬಿಹಾರ ಚುನಾವಣೆಗೆ ‘ಸುಶಾಂತ್ ಸಾವು’ ಪ್ರಚಾರದ ಅಸ್ತ್ರ

  • Publish Date - 7:46 am, Tue, 8 September 20
ಬಿಹಾರ ಚುನಾವಣೆಗೆ ‘ಸುಶಾಂತ್ ಸಾವು’ ಪ್ರಚಾರದ ಅಸ್ತ್ರ

ದೆಹಲಿ: ಬಾಲಿವುಡ್ ನಟ ಸುಶಾಂತ್ ಸಿಂಗ್ ನಿಗೂಡ ಸಾವಿನ ಪ್ರಕರಣ ಸಂಪೂರ್ಣ ರಾಜಕೀಯಗೊಂಡಿದೆ. ಅದರಲ್ಲೂ ಬಿಜೆಪಿ ಈ ಪ್ರಕರಣವನ್ನು ಇಷ್ಟು ಗಂಭೀರವಾಗಿ ಯಾಕೆ ಪರಿಗಣಿಸಿದೆ ಎಂಬ ಅನುಮಾನಗಳು ಪದೇ ಪದೆ ಕಾಡುತ್ತಲೇ ಇತ್ತು. ಈಗ ಆ ಅನುಮಾನ ಬಟಾಬಯಲಾಗಿದೆ. ಬಿಹಾರದಲ್ಲಿ ಇದೀಗ ಅದೇ ದೊಡ್ಡ ಸುದ್ದಿಯಾಗಿದೆ.

ಬಿಹಾರ ಬಿಜೆಪಿ ವಿರುದ್ಧ ಕಾಂಗ್ರೆಸ್ ಕೆಂಡಾಮಂಡಲ
ಬಿಹಾರ ವಿಧಾನಸಭಾ ಚುನಾವಣೆಗೆ ಕೌಂಟ್‌ಡೌನ್ ಶುರುವಾಗಿದೆ. ಮುಂದಿನ ತಿಂಗಳು ನಡೆಯಲಿರುವ ಎಲೆಕ್ಷನ್‌ಗೆ ಈಗಾಗಲೇ ಬಿಜೆಪಿ ಅಖಾಡ ಸಿದ್ಧಮಾಡಿಟ್ಟುಕೊಂಡಿದೆ. ಆದ್ರೆ ಚುನಾವಣಾ ಪ್ರಚಾರಕ್ಕೆ ನಟ ಸುಶಾಂತ್ ಸಿಂಗ್ ಸಾವನ್ನು ಬಿಜೆಪಿ ಬಳಸಿಕೊಳ್ಳುತ್ತಿದೆ. ಈಗಾಗಲೇ ಬಿಜೆಪಿ ತನ್ನ ಕರಪತ್ರಗಳಲ್ಲಿ ಸುಶಾಂತ್ ಫೋಟೊ ಜೊತೆಗೆ ಜಸ್ಟೀಸ್ ಫಾರ್ ಸುಶಾಂತ್ ಎಂದು ಬರೆದಿರುವ ಪೋಸ್ಟರ್, ಸ್ಟಿಕ್ಕರ್‌ಗಳನ್ನ ಬಿಡುಗಡೆ ಮಾಡಿದೆ. ಬಿಹಾರದ ಬಿಜೆಪಿ ಸಾಂಸ್ಕೃತಿಕ ಘಟಕ ಕಲಾ ಸಂಸ್ಕೃತಿ ಮಂಚ್ ಹೊರತಂದಿರುವ ಸ್ಟಿಕ್ಕರ್, ಮಾಸ್ಕ್‌ಗಳಲ್ಲಿ ಸುಶಾಂತ್ ಚಿತ್ರವಿದ್ದು, ನಾವು ಮರೆತಿಲ್ಲ, ಮರೆಯಲೂ ಬಿಡುವುದಿಲ್ಲ ಎಂಬ ಸಂದೇಶಗಳು ಇವೆ.

ಸುಶಾಂತ್ ಸಾವಿನ ಪ್ರಕರಣದ ಸಿಬಿಐ ತನಿಖೆ ಹಿಂದೆ ನಿತೀಶ್ ಕುಮಾರ್ ನೇತೃತ್ವದ ಸರ್ಕಾರದ ಪ್ರಮುಖ ಪಾತ್ರವಿದೆ. ಈ ಬಗ್ಗೆ ಸಂದೇಶವನ್ನು ಜನರಿಗೆ ನೀಡುವ ಉದ್ದೇಶದಿಂದ ಸುಮಾರು 25 ಸಾವಿರ ಸ್ಟಿಕ್ಕರ್‌ಗಳನ್ನು ಮತ್ತು 30 ಸಾವಿರ ಮಾಸ್ಕ್ ಗಳನ್ನು ಸುಶಾಂತ್ ಭಾವಚಿತ್ರ ಸಮೇತ ಮುದ್ರಿಸಿ ಹಲವು ಕಡೆ ವಿತರಿಸಿದೆ‌ ಎನ್ನಲಾಗಿದೆ. ಇದಿಷ್ಟೇ ಅಲ್ಲ ಬಿಜೆಪಿ ಸುಶಾಂತ್ ಸಿಂಗ್ ಸಾವನ್ನು ಮತಗಳಾಗಿ ಪರಿವರ್ತಿಸಲು ಇನ್ನೂ ಹಲವು ತಂತ್ರಗಳನ್ನ ಮಾಡಿದೆ..

ಮತಕ್ಕಾಗಿ ಸುಶಾಂತ್ ಸಿಂಗ್ ಮಂತ್ರ:
ಈಗಾಗಲೇ ಬಿಜೆಪಿ ಸುಶಾಂತ್ ಸಿಂಗ್ ಜೀವನ ಮತ್ತು ಸಾಧನೆ ಕುರಿತ ವಿಡಿಯೋ ರೆಡಿಮಾಡಿಟ್ಟುಕೊಂಡಿದೆ. ಎರಡು ಕಂತುಗಳಲ್ಲಿ ವಿಡಿಯೋ ಸಿದ್ಧ ಮಾಡಿಟ್ಟುಕೊಂಡಿದೆ. ಅದನ್ನ ಶೀಘ್ರದಲ್ಲೇ ಸೋಷಿಯಲ್ ಮೀಡಿಯಾಗಳಲ್ಲಿ ಬಿಜೆಪಿ ರಿಲೀಸ್ ಮಾಡಲಿದೆ. ಇನ್ನು ಪಾಟ್ನಾದ ರಾಜೀವ್ ನಗರ ಚೌಕಕ್ಕೆ ಸುಶಾಂತ್ ಹೆಸರಿಡಲು ಪ್ಲ್ಯಾನ್ ಮಾಡಿದ್ದು, ಈ ಸಂಬಂಧ ಬಿಹಾರ ಸಿಎಂ ನಿತೀಶ್ ಕುಮಾರ್‌ಗೆ ಪತ್ರ ಬರೆದಿದೆ.

ಬಿಜೆಪಿಯ ಈ ಪ್ರಚಾರ ತಂತ್ರವನ್ನು, ನಟನ ಸಾವನ್ನು ಮತಗಳಿಗಾಗಿ ಬಳಸಿಕೊಳ್ಳುತ್ತಿರುವ ಬಿಜೆಪಿಯ ನಿಲುವನ್ನು ಕಾಂಗ್ರೆಸ್ ಖಂಡಿಸಿ‌ದೆ. ಸುಶಾಂತ್ ಫೋಟೋ ಬಳಸಿ ರೆಡಿ ಮಾಡಿರುವ ಪೋಸ್ಟರ್ ಮತ್ತು ಸ್ಟಿಕ್ಕರ್ ವಿಚಾರವಾಗಿ ಬಿಜೆಪಿ ಮತ್ತು ಬಿಜೆಪಿಯೇತರ ಪಕ್ಷಗಳ ನಡುವೆ ವಾದ-ವಿವಾದ ಶುರುವಾಗಿದೆ.

Click on your DTH Provider to Add TV9 Kannada