ಮಮತಾ ನಾಡಲ್ಲಿ ಪಕ್ಷ ಸಂಘಟನೆಗಿಳಿದ ಅಸ್ಸಾದುದ್ದೀನ್ ಒವೈಸಿ; TMC ನಾಯಕರು ಹೇಳಿದ್ದೇನು?
ಈ ಭೇಟಿ ಮತ್ತು ಮಾತುಕತೆಗಳಿಗೆ ಆಡಳಿತಾರೂಢ ಟಿಎಂಸಿ ತೀಕ್ಷ್ಣವಾಗಿ ಪ್ರತಿಕ್ರಿಯಿಸಿದೆ. ಇಲ್ಲಿನ ಮುಸ್ಲಿಮರು ಹೆಚ್ಚಾಗಿ ಬಂಗಾಳಿ ಮಾತನಾಡುವವರು, ಅವರೆಂದಿಗೂ ಒವೈಸಿಯನ್ನು ಬೆಂಬಲಿಸುವುದಿಲ್ಲ. ಈ ವಿಷಯ ಒವೈಸಿ ಅವರಿಗೆ ಚೆನ್ನಾಗಿ ತಿಳಿದಿದೆ ಎಂದು ಟಿಎಂಸಿ ನಾಯಕರು ವ್ಯಂಗ್ಯವಾಡಿದ್ದಾರೆ.
ಕೊಲ್ಕತ್ತಾ: AIMIM ಮುಖ್ಯಸ್ಥ ಅಸ್ಸಾದುದ್ದೀನ್ ಒವೈಸಿ ಭಾನುವಾರ ಪಶ್ಚಿಮ ಬಂಗಾಳದ ಹೂಗ್ಲಿ ಜಿಲ್ಲೆಯ ಫ್ಯೂಚುರಾ ಷರೀಫ್‌ಗೆ ಆಗಮಿಸಿ ರಾಜ್ಯದ ರಾಜಕೀಯ ಸನ್ನಿವೇಶ ಮತ್ತು ಮುಂಬರುವ ವಿಧಾನಸಭಾ ಚುನಾವಣೆಗಳ ಕುರಿತು ಪ್ರಮುಖ ಮುಸ್ಲಿಂ ಮುಖಂಡ ಅಬ್ಬಾಸ್ ಸಿದ್ದಿಕಿ ಅವರೊಂದಿಗೆ ಚರ್ಚೆ ನಡೆಸಿದ್ದಾರೆ ಎಂದು ಅವರ ಪಕ್ಷದ ಮೂಲಗಳು ತಿಳಿಸಿವೆ.
TMC ಸರ್ಕಾರ ಅಸ್ಸಾದುದ್ದೀನ್ ಒವೈಸಿಯನ್ನು ವಿಮಾನ ನಿಲ್ದಾಣದಲ್ಲೇ ತಡೆದು ನಿಲ್ಲಿಸುವ ಸಾಧ್ಯತೆಯಿದ್ದ ಕಾರಣ ಸಭೆಯನ್ನು ರಹಸ್ಯವಾಗಿಡಲು ಓವೈಸಿ ಬಯಸಿದ್ದರು. ನಂತರ ಕೋಲ್ಕತಾ ವಿಮಾನ ನಿಲ್ದಾಣದಿಂದ ನೇರವಾಗಿ ಅಬ್ಬಾಸ್ ಸಿದ್ದಿಕಿ ಅವರನ್ನು ಭೇಟಿಯಾಗಲು ಹೂಗ್ಲಿಗೆ ತೆರಳಿದ್ದಾರೆ ಎಂದು ಎಐಎಂಐಎಂ ರಾಜ್ಯ ಕಾರ್ಯದರ್ಶಿ ಜಮೀರುಲ್ ಹಸನ್ ಹೇಳಿಕೆ ನೀಡಿದ್ದಾರೆ.
ಸಿದ್ದಿಕಿ ಅವರೊಂದಿಗೆ ವರ್ಚುವಲ್ ಸಭೆ ನಡೆಸಲು ಒವೈಸಿ ನಿರ್ಧರಿಸಿದ್ದರು. ಆದರೆ ನಂತರ ಮನಸ್ಸು ಬದಲಿಸಿ ಸಿದ್ದಿಕಿ ಅವರನ್ನು ಭೇಟಿ ಮಾಡಲು ಬಂಗಾಳಕ್ಕೆ ತೆರಳಿದರು. ಕಳೆದ ವರ್ಷ ಬಿಹಾರ ಚುನಾವಣೆಯ ಸಂದರ್ಭದಲ್ಲಿ ಒವೈಸಿ ಪಕ್ಷ ಉತ್ತಮ ಪ್ರದರ್ಶನ ನೀಡಿತ್ತು. ಅಲ್ಲದೆ ಬಾಂಗ್ಲಾ ಗಡಿಯಲ್ಲಿರುವ ಪ್ರದೇಶಗಳಲ್ಲಿ ಐದು ಸ್ಥಾನಗಳನ್ನು ಗಳಿಸಿತ್ತು. ಹೀಗಾಗಿ ಪಶ್ಚಿಮ ಬಂಗಾಳದಲ್ಲಿ ಸೀಟು ಹಂಚಿಕೆ ಒಪ್ಪಂದದ ಬಗ್ಗೆ ಸಿದ್ದಿಕಿ ಅವರೊಂದಿಗೆ ಮಾತುಕತೆ ನಡೆಸಿರಬಹುದು ಎಂದು ಜಮೀರುಲ್ ಹಸನ್ ಹೇಳಿದರು.
ಈ ಭೇಟಿ ಮತ್ತು ಮಾತುಕತೆಗಳಿಗೆ ಆಡಳಿತಾರೂಢ ಟಿಎಂಸಿ ತೀಕ್ಷ್ಣವಾಗಿ ಪ್ರತಿಕ್ರಿಯಿಸಿದೆ. ಇಲ್ಲಿನ ಮುಸ್ಲಿಮರು ಹೆಚ್ಚಾಗಿ ಬಂಗಾಳಿ ಮಾತನಾಡುವವರು, ಅವರೆಂದಿಗೂ ಒವೈಸಿಯನ್ನು ಬೆಂಬಲಿಸುವುದಿಲ್ಲ. ಈ ವಿಷಯ ಒವೈಸಿ ಅವರಿಗೆ ಚೆನ್ನಾಗಿ ತಿಳಿದಿದೆ. ಅವರು ಅಬ್ಬಾಸ್ ಸಿದ್ದಿಕಿ ಅವರೊಂದಿಗೆ ಸಂಬಂಧವನ್ನು ಬೆಳೆಸಲು ಪ್ರಯತ್ನಿಸುತ್ತಿದ್ದಾರೆ. ಆದರೆ ಅದು ಯಾವುದೇ ಫಲಿತಾಂಶವನ್ನು ನೀಡುವುದಿಲ್ಲ. ಬಂಗಾಳದ ಮುಸ್ಲಿಮರು ಮಮತಾ ಬ್ಯಾನರ್ಜಿಯವರೊಂದಿಗಿದ್ದಾರೆ ಎಂದು ಹಿರಿಯ ಟಿಎಂಸಿ ಮುಖಂಡ ಮತ್ತು ಪಕ್ಷದ ಸಂಸದ ಸೌಗತಾ ರಾಯ್ ಹೇಳಿಕೆ ನೀಡಿದ್ದಾರೆ.
ಪ. ಬಂಗಾಳ ಅಸೆಂಬ್ಲಿ ಚುನಾವಣೆ: ಮಮತಾ ಬ್ಯಾನರ್ಜಿಗೆ ಶುರುವಾಯ್ತು ಓವೈಸಿ ನಡುಕ!