ಲಖಿಂಪುರ ಖೇರಿ: ಇಲ್ಲಿನ ಹಿಂಸಾಚಾರದಲ್ಲಿ (Lakhimpur Kheri violence) ಪ್ರಮುಖ ಆರೋಪಿಯಾಗಿರುವ ಕೇಂದ್ರ ಸಚಿವ ಅಜಯ್ ಮಿಶ್ರಾ ಪುತ್ರ ಆಶೀಶ್ ಮಿಶ್ರಾ (Ashish Mishra)ರಿಗೆ ಜಾಮೀನು ನೀಡಲು ಸೆಷನ್ಸ್ ಕೋರ್ಟ್ ನಿರಾಕರಿಸಿದೆ. ಹಾಗೇ, ಅಕ್ಟೋಬರ್ 3ರ ಹಿಂಸಾಚಾರಕ್ಕೆ ಸಂಬಂಧಪಟ್ಟಂತೆ ಪೊಲೀಸರು ಇಂದು ಇನ್ನಿಬ್ಬರನ್ನೂ ಬಂಧಿಸಿದ್ದಾರೆ. ಘಟನೆಗೆ ಸಂಬಂಧಪಟ್ಟಂತೆ ಬಂಧಿತರಾಗಿರುವ ಆಶೀಶ್ ಮಿಶ್ರಾ ಮತ್ತು ಅವರ ಸಹಚರರಾರ ಆಶಿಶ್ ಪಾಂಡೆ ಅವರ ಅರ್ಜಿ ವಿಚಾರಣೆ ಇಂದು ಇತ್ತು. ಆದರೆ ಸೆಷನ್ಸ್ ಕೋರ್ಟ್ನ ಮುಖ್ಯ ಮ್ಯಾಜಿಸ್ಟ್ರೇಟ್ ಚಿಂತಾರಾಮ್ ಜಾಮೀನು ನಿರಾಕರಿಸಿದ್ದಾರೆ ಎಂದು ಪ್ರಾಸಿಕ್ಯೂಷನ್ ಹಿರಿಯ ಅಧಿಕಾರಿ ಎಸ್.ಪಿ.ಯಾದವ್ ತಿಳಿಸಿದ್ದಾರೆ.
ಲಖಿಂಪುರ ಖೇರಿಯಲ್ಲಿ ರೈತರ ಮೇಲೆ ವಾಹನ ಹರಿದು ರೈತರು ಮೃತಪಟ್ಟ ಘಟನೆಗೆ ಸಂಬಂಧಪಟ್ಟಂತೆ ಆಶೀಶ್ ಮಿಶ್ರಾರನ್ನು ಅಕ್ಟೋಬರ್9ರಂದು ರಾಜ್ಯದ ವಿಶೇಷ ತನಿಖಾ ತಂಡ (SIT) ಬಂಧಿಸಿದೆ. ಅದರೊಂದಿಗೆ ಎಸ್ಐಟಿ ಎದುರು ವಿಚಾರಣೆಗೆ ಹಾಜರಾಗಿದ್ದ ಅಂಕಿತ್ ದಾಸ್ ಮತ್ತು ಲತೀಫ್ ಕಾಳೆ ಎಂಬುವರನ್ನೂ ಬಂಧಿಸಲಾಗಿದ್ದು, ಅವರನ್ನು 14ದಿನಗಳ ನ್ಯಾಯಾಂಗ ಬಂಧನಕ್ಕೆ ನೀಡಲಾಗಿದೆ. ಅಲ್ಲಿಗೆ ಲಖಿಂಪುರ ಖೇರಿ ಹಿಂಸಾಚಾರಕ್ಕೆ ಸಂಬಂಧಪಟ್ಟಂತೆ ಆಶೀಶ್ ಮಿಶ್ರಾ, ಆಶೀಶ್ ಪಾಂಡೆ, ಲವಕುಶ್, ಶೇಖರ್ ಭಾರ್ತಿ, ಅಂಕಿತ್ ಮತ್ತು ಲತೀಫ್ ಕಾಳೆ ಬಂಧಿತರಾಗಿದ್ದು, ಸದ್ಯಕ್ಕಂತೂ ಯಾರಿಗೂ ಜಾಮೀನು ಸಿಕ್ಕಿಲ್ಲ.
ಲಖಿಂಪುರ ಖೇರಿಯಲ್ಲಿ ಪ್ರತಿಭಟನಾ ಮೆರವಣಿಗೆ ನಡೆಸುತ್ತಿದ್ದ ರೈತರ ಮೇಲೆ ಎರಡು ವಾಹನಗಳು ಹರಿದು, ಇಬ್ಬರು ರೈತರು ಮೃತಪಟ್ಟಿದ್ದರು. ಅದಾದ ಬಳಿಕ ನಡೆದ ಹಿಂಸಾಚಾರದಲ್ಲಿ ಒಟ್ಟು 8 ಜನರು ಸಾವನ್ನಪ್ಪಿದ್ದರು. ಹೀಗೆ ರೈತರ ಮೇಲೆ ಹರಿದ ವಾಹನದಲ್ಲಿ ಕೇಂದ್ರ ಗೃಹ ಇಲಾಖೆ ರಾಜ್ಯ ಸಚಿವ ಅಜಯ್ ಮಿಶ್ರಾ ಪುತ್ರ ಆಶೀಶ್ ಮಿಶ್ರಾ ಇದ್ದರು ಎಂದು ಸ್ಥಳದಲ್ಲಿದ್ದ ರೈತರು ಪ್ರತಿಪಾದಿಸಿದ್ದರು. ಆದರೆ ನಾನು ಇರಲಿಲ್ಲ ಎಂದು ಆಶೀಶ್ ಮಿಶ್ರಾ ಹೇಳಿಕೊಂಡಿದ್ದರು. ಆಶೀಶ್ ಮಿಶ್ರಾ ವಿರುದ್ಧ ಕೊಲೆ ಪ್ರಕರಣ ದಾಖಲಾಗಿದ್ದರೂ ಅವರ ಬಂಧನ ಆಗಿರಲಿಲ್ಲ. ನಂತರ ಪ್ರಕರಣವನ್ನು ಸುಮೊಟೊ ವಿಚಾರಣೆಗೆ ಎತ್ತಿಕೊಂಡಿದ್ದ ಸುಪ್ರೀಂಕೋರ್ಟ್ ಉತ್ತರ ಪ್ರದೇಶ ಸರ್ಕಾರವನ್ನು ತರಾಟೆಗೆ ತೆಗೆದುಕೊಂಡಿತ್ತು. ಕೊಲೆ ಕೇಸ್ ದಾಖಲಾದ ಆರೋಪಿಗೆ ಸಮನ್ಸ್ ನೀಡುವ ಅಗತ್ಯವೇನಿದೆ? ಉಳಿದವರಂತೆ ಅವರನ್ನೂ ನಡೆಸಿಕೊಳ್ಳಿ ಎಂದು ಹೇಳಿತ್ತು. ಅದಾದ ಮರುದಿನವೇ ಆಶೀಶ್ ಮಿಶ್ರಾ ಎಸ್ಐಟಿ ಎದುರು ಹಾಜರಾಗಿ, ವಿಚಾರಣೆ ಎದುರಿಸಿದ್ದರು. ನಂತರ ಅವರನ್ನು ಬಂಧಿಸಲಾಗಿತ್ತು.
ಇದನ್ನೂ ಓದಿ: ದಸರಾ ಸಂಭ್ರಮ ಕಿತ್ತುಕೊಂಡ ಮಳೆ; ಅಬ್ಬಯ್ಯ ಲೇಔಟ್‌ನ ಮನೆಗಳಿಗೆ ನುಗ್ಗಿದ ಮಳೆ ನೀರು, ಮುಳುಗಿದ ವಾಹನಗಳು
Nirmala Sitharaman In US: ಭಾರತದಲ್ಲಿ ಹೂಡಿಕೆ ಮಾಡಲು ಅಮೆರಿಕದ ಸಿಇಒಗಳಿಗೆ ನಿರ್ಮಲಾ ಸೀತಾರಾಮನ್ ಆಹ್ವಾನ