Covid-19: ಕೊವಿಡ್ ಮೂಲ ಪತ್ತೆಹಚ್ಚಲು ಹೊಸ ತಂಡ ರಚನೆ; ಇದೇ ಕೊನೆಯ ಅವಕಾಶ ಎಂದ WHO

Covid Origin: ಕೊರೊನಾವೈರಸ್ ಮೂಲವನ್ನು ಪತ್ತೆಹಚ್ಚಲು 26 ತಜ್ಞರನ್ನು ಒಳಗೊಂಡ ಹೊಸ ತಂಡವನ್ನು ವಿಶ್ವ ಆರೋಗ್ಯ ಸಂಸ್ಥೆ ರಚಿಸಿದೆ. ಈ ಬಗ್ಗೆ ತನಿಖೆ ನಡೆಸಲು ಇದೇ ಕೊನೆಯ ಅವಕಾಶ ಎಂದು ಹೇಳಿದೆ.

Covid-19: ಕೊವಿಡ್ ಮೂಲ ಪತ್ತೆಹಚ್ಚಲು ಹೊಸ ತಂಡ ರಚನೆ; ಇದೇ ಕೊನೆಯ ಅವಕಾಶ ಎಂದ WHO
ಪ್ರಾತಿನಿಧಿಕ ಚಿತ್ರ
Follow us
TV9 Web
| Updated By: ಸುಷ್ಮಾ ಚಕ್ರೆ

Updated on:Oct 14, 2021 | 1:59 PM

ವಾಷಿಂಗ್ಟನ್: ಇಡೀ ಜಗತ್ತನ್ನೇ ಕಾಡುತ್ತಿರುವ ಕೊವಿಡ್-19 ಸೋಂಕಿನ ಮೂಲ ಇನ್ನೂ ನಿಗೂಢವಾಗಿಯೇ ಉಳಿದಿದೆ. ಕೊರೊನಾವೈರಸ್ ಮೂಲವನ್ನು ಪತ್ತೆಹಚ್ಚಲು ವಿಶ್ವ ಆರೋಗ್ಯ ಸಂಸ್ಥೆ (WHO) ಹೊಸ ಟಾಸ್ಕ್‌ಫೋರ್ಸ್ ರಚಿಸಿದ್ದು, ಕೋವಿಡ್ -1 9 ರ ಮೂಲವನ್ನು ಕಂಡುಹಿಡಿಯಲು ಕೊನೆಯ ಅವಕಾಶ ನೀಡುತ್ತಿರುವುದಾಗಿ ಹೇಳಿದೆ.

ಕೊರೊನಾವೈರಸ್ ಮೂಲವನ್ನು ಪತ್ತೆಹಚ್ಚಲು 26 ತಜ್ಞರನ್ನು ಒಳಗೊಂಡ ಹೊಸ ತಂಡವನ್ನು ನಾಮನಿರ್ದೇಶನ ಮಾಡಲಾಗಿದೆ. ನಾವೆಲ್ ಪ್ಯಾಥೋಜೆನ್ಸ್ (Sago) ಮೂಲದ ವೈಜ್ಞಾನಿಕ ಸಲಹಾ ತಂಡ ಕೊವಿಡ್ ಸೋಂಕು ಎಲ್ಲಿಂದ, ಹೇಗೆ ಹರಡಿತು ಎಂಬುದನ್ನು ಪತ್ತೆಹಚ್ಚಲಿದೆ. ಚೀನಾದ ವುಹಾನ್ ನಗರದಲ್ಲಿ ಕೊರೊನಾವೈರಸ್ ಪತ್ತೆಯಾಗಿ ಒಂದೂವರೆ ವರ್ಷಗಳಿಗಿಂತಲೂ ಹೆಚ್ಚು ಸಮಯವಾಗಿದೆ. ಆದರೆ, ಇದು ಮೊದಲು ಹೇಗೆ ಕಾಣಿಸಿಕೊಂಡಿತು ಎಂಬ ಪ್ರಶ್ನೆಗೆ ಇನ್ನೂ ಉತ್ತರ ಸಿಕ್ಕಿಲ್ಲ.

ಈ ವೈಜ್ಞಾನಿಕ ಸಲಹೆಗಾರರ ತಂಡ ಚೀನಾದ ವುಹಾನ್ ಮಾರುಕಟ್ಟೆಗಳಲ್ಲಿ ಕೊವಿಡ್ ವೈರಸ್ ಪ್ರಾಣಿಗಳಿಂದ ಮನುಷ್ಯರಿಗೆ ಹರಡಿತೆ ಅಥವಾ ಲ್ಯಾಬ್​ನಿಂದ ಸೋರಿಕೆಯಾಯಿತೆ ಎಂಬ ಬಗ್ಗೆ ಖಚಿತ ಮಾಹಿತಿಯನ್ನು ಕಲೆಹಾಕಲಿದೆ. ಲ್ಯಾಬ್​ನಿಂದ ಆದ ತಪ್ಪಿನಿಂದ ಕೊವಿಡ್ ವೈರಸ್ ಹರಡಿತು ಎಂಬುದನ್ನು ಚೀನಾ ಈಗಾಗಲೇ ಬಲವಾಗಿ ನಿರಾಕರಿಸಿದೆ.

ಕಳೆದ ಫೆಬ್ರವರಿಯಲ್ಲಿ ವಿಶ್ವ ಆರೋಗ್ಯ ಸಂಸ್ಥೆಯ ತಜ್ಞರ ತಂಡವು ಕೋವಿಡ್‌ನ ಮೂಲವನ್ನು ತನಿಖೆ ಮಾಡಲು ಚೀನಾಗೆ ಹಾರಿತ್ತು. ಇದು ಬಾವಲಿಗಳಿಂದ ಹರಡಿರಬಹುದು ಎಂದು ಆ ತಂಡ ಅಭಿಪ್ರಾಯಪಟ್ಟಿತ್ತು. ಆದರೆ, ಚೀನಾದವರ ಸಹಕಾರ ಮತ್ತು ಮಾಹಿತಿಯ ಕೊರತೆಯಿಂದ ಈ ಕುರಿತ ತನಿಖೆಗೆ ತೊಂದರೆಯಾಗಿದೆ ಎಂದು ವಿಶ್ವ ಆರೋಗ್ಯ ಸಂಸ್ಥೆಯ ಮಹಾನಿರ್ದೇಶಕ ಡಾ. ಟೆಡ್ರೊಸ್ ಅಧಾನೊಮ್ ಘೆಬ್ರೆಯೆಸಸ್ ಹೇಳಿದ್ದರು. ಹೀಗಾಗಿ, ಇದೀಗ ಹೊಸ ತಂಡವೊಂದನ್ನು ರಚಿಸಲಾಗಿದ್ದು, ಕೊವಿಡ್ ಮೂಲವನ್ನು ಪತ್ತೆಹಚ್ಚಲು ಕೊನೆಯ ಅವಕಾಶ ನೀಡುತ್ತಿರುವುದಾಗಿ ವಿಶ್ವ ಆರೋಗ್ಯ ಸಂಸ್ಥೆ ಹೇಳಿದೆ.

2019ರ ಅಂತ್ಯದಲ್ಲಿ ಮೊದಲ ಬಾರಿಗೆ ಕೋವಿಡ್ ಸೋಂಕು ವುಹಾನ್ ನಲ್ಲಿ ಕಾಣಿಸಿಕೊಂಡಿತ್ತು. ಆ ಬಳಿಕ ಕ್ರಮೇಣ ಜಾಗತಿಕ ಸಾಂಕ್ರಾಮಿಕವಾಗಿ ಮಾರ್ಪಟ್ಟಿತ್ತು. ವುಹಾನ್​ನಲ್ಲೇ 100 ಮಿಲಿಯನ್​ಗೂ ಹೆಚ್ಚು ಜನರು ಕೊವಿಡ್ ಸೋಂಕಿಗೆ ತುತ್ತಾಗಿದ್ದರು. ಅಲ್ಲದೆ 2 ಮಿಲಿಯನ್​ಗೂ ಅಧಿಕ ಮಂದಿ ಕೊರೊನಾ ಸೋಂಕಿನಿಂದ ಸಾವನ್ನಪ್ಪಿದ್ದರು.

ವಿಶ್ವ ಆರೋಗ್ಯ ಸಂಸ್ಥೆ ಕೊರೋನಾವೈರಸ್ ಸಾಂಕ್ರಾಮಿಕ ರೋಗ ಎಂಬುದನ್ನು ಮೊದಲೇ ಘೋಷಿಸಬಹುದಿತ್ತು. ಆದರೆ ಕಳೆದ ವರ್ಷ ಮಾರ್ಚ್ 11ರವರೆಗೆ ಈ ಪದವನ್ನು ಬಳಸಲಿಲ್ಲ. ಒಂದುವೇಳೆ ಸಾಂಕ್ರಾಮಿಕ ಎಂಬ ಪದವನ್ನು ಮೊದಲೇ ಬಳಸಿದ್ದರೆ ಎಲ್ಲ ದೇಶಗಳು ಇದನ್ನು ಹೆಚ್ಚು ಗಂಭೀರವಾಗಿ ಪರಿಗಣಿಸುತ್ತಿದ್ದವು ಎಂದು ಈ ಹೊಂದಿನ ತಜ್ಞರ ತಂಡ ವರದಿ ನೀಡಿತ್ತು.

ಕೊರೋನಾವೈರಸ್ ಮೂಲ ಪತ್ತೆ ಮಾಡುವ ವಿಶ್ವ ಆರೋಗ್ಯ ಸಂಸ್ಥೆ ಪ್ರಯತ್ನಕ್ಕೆ ಚೀನಾ ಸರ್ಕಾರ ಅಡ್ಡಗಾಲು ಹಾಕಿ, WHO ತನಿಖೆಯನ್ನು ತಿರಸ್ಕರಿಸಿತ್ತು. ವಿಶ್ವ ಆರೋಗ್ಯ ಸಂಸ್ಥೆ 2ನೇ ಹಂತದ ತನಿಖೆಗೆ ಸಿದ್ಧತೆ ನಡೆಸಿರುವಂತೆಯೇ ಇತ್ತ ಚೀನಾ ಸರ್ಕಾರ ತನಿಖೆಗೆ ಅಡ್ಡಗಾಲು ಹಾಕಿತ್ತು. ವಿಶ್ವ ಆರೋಗ್ಯ ಸಂಸ್ಥೆ ಮತ್ತೆ ಕೊವಿಡ್ ವೈರಸ್‌ ಹುಟ್ಟಿದ ಬಗ್ಗೆ ತನಿಖೆ ನಡೆಸಲು ಮುಂದಾದ ಹಿನ್ನೆಲೆಯಲ್ಲಿ ಆರಂಭದ ತನಿಖೆ ಸಾಕು, ಮತ್ತೆ ತನಿಖೆ ನಡೆಸುವ ಅಗತ್ಯವಿಲ್ಲ ಎಂದು ಚೀನಾ ಹೇಳಿತ್ತು.

ಈ ಹಿಂದೆ ಅಮೆರಿಕದ ಅಧ್ಯಕ್ಷರಾಗಿದ್ದ ಡೊನಾಲ್ಡ್‌ ಟ್ರಂಪ್‌ ಚೀನಾದ ವುಹಾನ್‌ ಲ್ಯಾಬ್‌ನಿಂದಲೇ ಈ ಕೊರೊನಾವೈರಸ್‌ ಸೋಂಕು ಹೊರಹೊಮ್ಮಿದೆ ಎಂದು ಆರೋಪ ಮಾಡಿದ್ದರು. ಅಮೆರಿಕ ಅಧ್ಯಕ್ಷ ಜೋ ಬೈಡನ್ ಕೂಡ ತಮ್ಮ ಗುಪ್ತಚರ ಸಂಸ್ಥೆಗಳಿಗೆ ವೈರಸ್ ಮೂಲದ ಕುರಿತು ತನಿಖೆ ನಡೆಸುವಂತೆ ಆದೇಶಿಸಿದ್ದರು.

ಇದನ್ನೂ ಓದಿ: ಕೊವಿಡ್​ 19ನಿಂದ ಮೃತಪಟ್ಟವರ ಕುಟುಂಬಕ್ಕೆ 5000 ರೂ. ಮಾಸಾಶನ ನೀಡಲಿದೆ ಕೇರಳ ಸರ್ಕಾರ; ಷರತ್ತು ಅನ್ವಯ

Explainer: ಕೊವಿಡ್ ಲಸಿಕೆ ಹಾಕಿಸಿಕೊಂಡವರಲ್ಲಿ ಕಂಡುಬರುವ ಕೊರೊನಾವೈರಸ್ ಸೋಂಕು ಲಕ್ಷಣಗಳು

Published On - 1:52 pm, Thu, 14 October 21