ವಾಜಪೇಯಿಯವರು ರಾಮಚಂದ್ರೇ ಗೌಡರನ್ನು ಗೌಡಜೀ ಎಂದು ಪ್ರೀತಿಯಿಂದ ಕರೆಯುತ್ತಿದ್ದರು. ಗೌಡಜೀ ಕಂಡ ಅಟಲ್ ಬಿಹಾರಿ ವಾಜಪೇಯಿ ನಿಮ್ಮ ಮುಂದೆ.
1984ರಲ್ಲಿ ನಡೆದ ಲೋಕಸಭೆ ಚುನಾವಣೆಯಲ್ಲಿ ಅಟಲ್ ಬಿಹಾರಿ ವಾಜಪೇಯಿ ಪರಾಭವಗೊಂಡ ಸುದ್ದಿ ಕೇಳಿದ ಬಳ್ಳಾರಿಯ ಬಿಜೆಪಿ ಕಾರ್ಯಕರ್ತ ಲಕ್ಷ್ಮೀ ನಾರಾಯಣ ಆತ್ಮಹತ್ಯೆ ಮಾಡಿಕೊಂಡರು. ಈ ಸುದ್ದಿ ಕೇಳಿದ ವಾಜಪೇಯಿ ಮಮ್ಮಲ ಮರುಗಿ, ಕೂಡಲೆ ಬಳ್ಳಾರಿಗೆ ಧಾವಿಸಿದರು. ಬಳ್ಳಾರಿಯಲ್ಲಿನ ಲಕ್ಷ್ಮೀ ನಾರಾಯಣ ಮನೆಗೆ ಭೇಟಿ ನೀಡಿ ಕುಟುಂಬಕ್ಕೆ ಸಾಂತ್ವಾನ ಹೇಳಿದರು.
ವಾಜಪೇಯಿ ಹೃದಯ ಕಾರ್ಯಕರ್ತರ ಸಂಕಷ್ಟಕ್ಕೆ ಮಿಡಿಯುತ್ತಿತ್ತು. ವಾಜಪೇಯಿ ಕರ್ನಾಟಕಕ್ಕೆ ಬಂದಾಗಲೆಲ್ಲ ತಮ್ಮನ್ನು ಭೇಟಿಯಾದ ಪ್ರತಿಯೊಬ್ಬ ಕಾರ್ಯಕರ್ತನನ್ನೂ ಮಾತನಾಡಿಸಿ, ಅವರೊಂದಿಗೆ ಕೆಲ ಕ್ಷಣಗಳನ್ನು ಕಳೆಯುತ್ತಿದ್ದರು. ಹಾಗೆಯೇ ಅವರು ಮಾತನಾಡಿಸಿದ ಕಾರ್ಯಕರ್ತನನ್ನು ಎಂದಿಗೂ ಮರೆಯುತ್ತಿರಲಿಲ್ಲ.
ಇದಕ್ಕೆ ಸೂಕ್ತ ಊದಾಹರಣೆ ಹರಿಹರದ ಟಿ. ಇನಾಯತ್ ಉಲ್ಲಾ. ರಾಷ್ಟ್ರೀಯ ಕಾರ್ಯಕ್ರಮ ನಿಮಿತ್ತ ವಾಜಪೇಯಿ ಕರ್ನಾಟಕಕ್ಕೆ ಬಂದಿದ್ದರು. ಈ ವೇಳೆ ವಾಜಪೇಯಿ ತಂಗುವ ಕೋಣೆ ವ್ಯಸ್ಥೆಯನ್ನು ನೋಡಿಕೊಳ್ಳಲು ಇನಾಯತ್ ಅವರನ್ನು ನೇಮಿಸಲಾಗಿತ್ತು.
ಇನಾಯತ್ರ ಅಚ್ಚುಕಟ್ಟಾದ ಕೆಲಸವನ್ನು ವಾಜಪೇಯಿ ಮೆಚ್ಚುಕೊಂಡಿದ್ದರು. ಮರಳಿ ದೆಹಲಿಗೆ ಹೋದ ಬಳಿಕ ವಾಜಪೇಯಿ ಇನಾಯತ್ಗೆ ಪತ್ರ ಬರೆದು ಶಹಭಾಸ್ಗಿರಿ ನೀಡಿದ್ದರು.
ವಾಜಪೇಯಿ ಕಾರ್ಯಕರ್ತರ ಜೊತೆಗೆನೇ ಊಟ, ಉಪಹಾರ ಸೇವಿಸುತ್ತಿದ್ದರು. ಕಾರ್ಯಕರ್ತರ ಕಷ್ಟ-ಸುಖಗಳನ್ನು ಕೇಳುತ್ತಿದ್ದರು. ಅವರಲ್ಲಿದ್ದ ಪ್ರಶ್ನೆಗಳಿಗೆ ಉತ್ತರ ನೀಡುತ್ತಾ, ತಮ್ಮ ಪ್ರೇಮ ಬಾಹುಗಳಿಂದ ಬಾಚಿ ತಪ್ಪುಕೊಳ್ಳುತ್ತಿದ್ದರು. ಅಟಲ್ ಬಿಹಾರಿ ವಾಜಯಪೇಯಿ ಒಬ್ಬ ಶ್ರೇಷ್ಠ ನಾಯಕರಾಗಲೂ ಈ ಗುಣ ಬಹಳ ಮುಖ್ಯ ಪಾತ್ರ ವಹಿಸಿತ್ತು.
ವಾಜಪೇಯಿ ಆಗಾಗ ಶಿವಮೊಗ್ಗಕ್ಕೆ ಬರುತ್ತಲೇ ಇದ್ದರು. 1984ರ ಸೋಲಿನ ನಂತರವೂ ಅಟಲ್ ಬಿಹಾರಿ ವಾಜಪೇಯಿ ಶಿವಮೊಗ್ಗಕ್ಕೆ ಭೇಟಿ ನೀಡಿದ್ದರು. ಕಾರ್ಯಕ್ರಮವೊಂದರಲ್ಲಿ ಮಾಡಿದ ಭಾಷಣ ಈಗಿನ ರಾಜಕಾರಣಿಗಳಿಗೆ ಪ್ರೇರಣಾದಾಯಕವಾಗಿದೆ.
ಭಾಷಣದಲ್ಲಿ ವಾಜಪೇಯಿಯವರು “ಏನು ನಡೆಯಬೇಕೋ ಅದು ನಡೆಯಲೇಬೇಕು, ಏನು ನಡೆದಿದೆಯೋ ಅದು ಒಳ್ಳೆಯದಕ್ಕೇ ಆಗಿದೆ. ನಾನು ಚುನಾವಣೆಯಲ್ಲಿ ಸೋತಿದ್ದೇನೆ, ಒಳ್ಳೆಯದಾಗಿದೆ. ನ ದೈನ್ಯಂ ನ ಪಲಾಯನಂ” ಎಂದು ವಾಜಪೇಯಿ ಹೇಳಿದ್ದರು.
ವಾಜಪೇಯಿ ಪ್ರಕಾರ ರಾಜಕೀಯ ಅಂದ್ರೆ ದೇಶ ಮೊದಲು, ಉಳಿದಿದ್ದು ನಂತರ. ವಾಜಪೇಯಿ ಎಂದಿಗೂ ಯಾರ ವಿರುದ್ಧ ಆಪಾದನೆ ಮಾಡಿದವರಲ್ಲ. ನೀನು ತಪ್ಪು ಮಾಡಿದ್ದೀಯಾ ಅಂತ ನೇರವಾಗಿ ಹೇಳುತ್ತಿದ್ದರೇ ಹೊರತು, ಯಾರ ಮೇಲೂ ಆಪಾದನೆ ಮಾಡುತ್ತಿರಲಿಲ್ಲ. ಯಾವೊಬ್ಬ ರಾಜಕಾರಣಿಯೂ ವಾಜಪೇಯಿ ಮೇಲೆ ಆರೋಪ ಮಾಡಿದ್ದ ಉದಾಹರಣೆಯೇ ಇಲ್ಲ.
ಪ್ರಧಾನಿ ಯಾರಾಗುತ್ತಾರೆ ಎಂದು ಪತ್ರಕರ್ತರು ವಾಜಪೇಯಿಗೆ ಪ್ರಶ್ನಿಸದಾಗಲೆಲ್ಲ ಅವರಿಂದ ಬಂದ ಉತ್ತರ ಎಲ್ಕೆ ಅಡ್ವಾಣಿ. ಎಲ್ಕೆ ಅಡ್ವಾಣಿಗೂ ಕೂಡ ಇದೇ ಪ್ರಶ್ನೆ ಕೇಳಿದಾಗ ಅವರು ನೀಡಿದ ಉತ್ತರ ಅಟಲ್ ಬಿಹಾರಿ ವಾಜಪೇಯಿ. ಅಟಲ್ ವಾಜಪೇಯಿ ಎಂದಿಗೂ ಅಧಿಕಾರಕ್ಕಾಗಿ ಆಸೆಪಟ್ಟಿರಲಿಲ್ಲ. ಅಧಿಕಾರ ಶಾಶ್ವತವಲ್ಲ, ದೇಶ ಶಾಶ್ವತ ಎಂದು ಸಾರಿದ ವ್ಯಕ್ತಿ ಅಟಲ್ ಬಿಹಾರಿ ವಾಜಪೇಯಿ.
ವಾಜಪೇಯಿ ಬಾಲ್ಯದಿಂದಲೇ ಉತ್ತಮ ವಾಗ್ಮಿ. ಮಾತನಾಡುವ ಕಲೆ ದೇವರು ಕೊಟ್ಟ ವರದಾನ. ವಾಜಪೇಯಿ ವಿದ್ಯಾರ್ಥಿಯಾಗಿದ್ದ ಸಂದರ್ಭದಲ್ಲಿ ಲಖನೌನಲ್ಲಿ ನಡೆದಿದ್ದ ಭಾಷಣ ಸ್ಪರ್ಧೆಗೆ ಹೋಗಿದ್ದರು. ಇವರು ಹೋಗುವಷ್ಟರಲ್ಲಿ ಕಾರ್ಯಕ್ರಮ ಮುಗಿದು ಬಹುಮಾನ ವಿತರಣೆಯಾಗಿತ್ತು. ಕೊನೆಯಲ್ಲಿ ಹೋಗಿದ್ದ ವಾಜಪೇಯಿ ನನಗೆ ಮಾತನಾಡಲು ಕೇವಲ ಐದು ನಿಮಿಷ ಸಮಯ ಕೊಡಿ ಎಂದು ಮನವಿ ಮಾಡಿಕೊಂಡಿದ್ದರು.
ಮನವಿಗೆ ಸಮ್ಮತಿಸಿದ ಕಾರ್ಯಕ್ರಮ ಆಯೋಜಕರು ವಾಜಪೇಯಿಗೆ ಐದು ನಿಮಿಷ ಮಾತನಾಡಲು ಅವಕಾಶ ನೀಡಿದರು. ಅಟಲ್ ಬಿಹಾರಿ ವಾಜಪೇಯಿ ಐದು ನಿಮಿಷದ ಒಳಗಡೆಯೇ ಭಾಷಣ ಮುಗಿಸಿದರು. ಇವರ ಭಾಷಣ ಕೇಳಿ ನೆರದಿದ್ದ ಜನರು ವಾಜಪೇಯಿ ಇನ್ನೂ ಸ್ವಲ್ಪ ಹೊತ್ತು ಮಾತನಾಡಲಿ ಎಂದು ಆಸೆ ಪಟ್ಟರು.
ಜನರ ಆಸೆಯಂತೆ ವಾಜಪೇಯಿ ಬರೋಬ್ಬರಿ ಒಂದು ಗಂಟೆ ಮಾತನಾಡಿದರು. ಇವರ ಮಾತು ಕೇಳಿದ ಜನರು ಮಂತ್ರ ಮುಗ್ದರಾದರು. ವಾಜಪೇಯಿ ಪ್ರಖರ ವಾಗ್ಮಿಗಳು ಎನ್ನುವುದಕ್ಕೆ ಇದು ಒಂದು ಉದಾಹರಣೆಯಾಗಿದೆ.
ವಾಜಪೇಯಿ ಒಮ್ಮೆ ಮಾಡಿದ ಭಾಷಣ ಮತ್ತೊಂದು ಕಡೆ ಪುನರಾವರ್ತಿಸುತ್ತಿರಲಿಲ್ಲ. ಪ್ರತಿ ಭಾಷಣದಲ್ಲೂ ಹೊಸ ವಿಷಯಗಳನ್ನೇ ಹೇಳುತ್ತಿದ್ದರು.
Published On - 6:31 am, Wed, 25 December 24