ಶಬರಿಮಲೆ ದೇವಾಲಯ ಪ್ರವೇಶಿಸಿ ವಿವಾದ ಸೃಷ್ಟಿಸಿದ್ದ ಬಿಂದು ಅಮ್ಮಿನಿ ಮೇಲೆ ಹಲ್ಲೆ; ಕೆಳಗೆ ಬೀಳುವವರೆಗೂ ಹೊಡೆದ ಎಂದ ಹೋರಾಟಗಾರ್ತಿ
ಶಬರಿಮಲೆಗೆ ಎಲ್ಲ ವಯಸ್ಸಿನ ಮಹಿಳೆಯರೂ ಪ್ರವೇಶಿಸಬಹುದು ಎಂದು ಸುಪ್ರೀಂಕೋರ್ಟ್ ತೀರ್ಪು ನೀಡಿದ ಮೇಲೆ, ಆ ದೇಗುಲ ಪ್ರವೇಶಿಸಿ ಮೊದಲ ಮಹಿಳೆ ಈ ಬಿಂದು ಅಮ್ಮಿನಿ. ಇವರ ಪ್ರವೇಶ ಆಗುತ್ತಿದ್ದಂತೆ ಶಬರಿಮಲೆ ಪ್ರದೇಶ ರಣರಂಗವಾದಂತೆ ಆಗಿತ್ತು.
ಬಿಂದು ಅಮ್ಮಿನಿ (Bindu Ammini) ನೆನಪಿರಬೇಕಲ್ಲ. 2018ರಲ್ಲಿ ಶಬರಿಮಲೆ ದೇಗುಲ(Sabarimala Temple)ಪ್ರವೇಶಿಸಿ ಪ್ರಾರ್ಥನೆ ಸಲ್ಲಿಸುವ ಮೂಲಕ ಬಹುದೊಡ್ಡ ಮಟ್ಟದ ವಿವಾದ ಸೃಷ್ಟಿಸಿದ ಮಹಿಳೆ ಈಕೆ. ದೇವಾಲಯಕ್ಕೆ 10-50ವರ್ಷದ ಮಹಿಳೆಯರು ಪ್ರವೇಶ ಮಾಡಬಾರದು ಎಂಬ ನಿಯಮ ಹಿಂದೆ ಇತ್ತು. ನಂತರ 2018ರಲ್ಲಿ ಸುಪ್ರೀಂಕೋರ್ಟ್ ಐತಿಹಾಸಿಕ ತೀರ್ಪು ನೀಡುವ ಮೂಲಕ, ಶಬರಿಮಲೆ ದೇಗುಲಕ್ಕೆ ಎಲ್ಲ ವಯಸ್ಸಿನ ಮಹಿಳೆಯೂ ಪ್ರವೇಶಿಸಿ, ಪೂಜೆ ಸಲ್ಲಿಸಬಹುದು ಎಂದು ಹೇಳಿತ್ತು. ಅದರ ಬೆನ್ನಲ್ಲೇ 2019ರಲ್ಲಿ ಬಿಂದು ಅಮ್ಮಿನಿ ಶಬರಿಮಲೆಗೆ ಹೋಗಿ, ಪ್ರಾರ್ಥನೆ ಸಲ್ಲಿಸಿದ್ದರು. ಆದರೂ ಕೂಡ ಇದು ವಿವಾದಕ್ಕೆ ಕಾರಣವಾಗಿತ್ತು. ಆ ಬಿಂದು ಅಮ್ಮಿನಿ ಮೇಲೆ ಕೋಝಿಕ್ಕೋಡ್ ಬೀಚ್ನಲ್ಲಿ ಅಪರಿಚಿತ ವ್ಯಕ್ತಿಯೊಬ್ಬ ಹಲ್ಲೆ ಮಾಡಿದ್ದಾನೆ. ನಾನು ಕೋರ್ಟ್ ಕೇಸ್ಗೆ ಸಂಬಂಧಪಟ್ಟ ಕೆಲಸಕ್ಕೆ ಕೋಝಿಕ್ಕೋಡ್ನ ಉತ್ತರದ ಬೀಚ್ಗೆ ಭೇಟಿ ಕೊಟ್ಟಿದ್ದೆ. ಅಲ್ಲಿಗೆ ಹೋಗುತ್ತಿದ್ದಂತೆ ನನ್ನ ಮೇಲೆ ಹಲ್ಲೆಯಾಗಿದೆ ಎಂದು ದಲಿತ ಹೋರಾಟಗಾರ್ತಿ ಬಿಂದು ಅಮ್ಮಿನಿ ಆರೋಪಿಸಿದ್ದಾರೆ. ಪೊಲೀಸರಿಗೆ ದೂರು ನೀಡಿದ್ದು, ಆ ವ್ಯಕ್ತಿ ನನಗೆ ಹೊಡೆದಿದ್ದಾನೆ. ನಾನು ಕೆಳಗೆ ರಸ್ತೆಯಮೇಲೆ ಬೀಳುವವರೆಗೂ ಹೊಡೆದ ಎಂದು ತಿಳಿಸಿದ್ದಾರೆ. ಈ ಬಗ್ಗೆ ಪ್ರತಿಕ್ರಿಯೆ ನೀಡಿರುವ ಪೊಲೀಸರು, ಪ್ರಕರಣ ದಾಖಲಿಸಿಕೊಳ್ಳಲಾಗಿದೆ. ಅಲ್ಲಿನ ಸಿಸಿಟಿವಿ ದೃಶ್ಯಗಳನ್ನು ಪರಿಶೀಲಿಸಲಾಗುತ್ತಿದೆ ಎಂದು ಮಾಹಿತಿ ನೀಡಿದ್ದಾರೆ.
ತನ್ನ ಮೇಲೆ ಹಲ್ಲೆ ನಡೆಸಿದ್ದು ಹಿಂದು ಸಂಘಟನೆಗಳು ಎಂದು ಬಿಂದು ಅಮ್ಮಿನಿ ಆರೋಪಿಸಿದ್ದಾರೆ. ಹಾಗೇ, ನನ್ನ ಮೇಲೆ ಹಲ್ಲೆಯಾಗಿದ್ದು ಇದೇ ಮೊದಲೂ ಅಲ್ಲ. ಕಳೆದ ತಿಂಗಳು ವೇಗವಾಗಿ ಬಂದ ಆಟೋರಿಕ್ಷಾ ನನಗೆ ಡಿಕ್ಕಿ ಹೊಡೆದಿತ್ತು. ಆಗ ನಾನು ಆಸ್ಪತ್ರೆಯಲ್ಲಿ ದಾಖಲಾಗಿದ್ದೆ ಎಂದೂ ಬಿಂದು ಅಮ್ಮಿನಿ ಹೇಳಿದ್ದಾರೆ. ಹಾಗೇ, ಬುಧವಾರ ವಕೀಲರೊಬ್ಬರನ್ನು ಭೇಟಿಯಾಗಲು ಕೋಝಿಕ್ಕೋಡ್ ಬೀಚ್ಗೆ ತೆರಳಿದ್ದೆ. ಒಮ್ಮೆಲೇ ಬಂದ ವ್ಯಕ್ತಿ ನನ್ನ ದ್ವಿಚಕ್ರವಾಹನವನ್ನು ಅಡ್ಡಗಟ್ಟಿದ. ನನ್ನ ಮೇಲೆ ಹಲ್ಲೆ ನಡೆಯುತ್ತಿರುವುದನ್ನು ನೋಡಿ ಒಂದಷ್ಟು ಜನರು ಅಲ್ಲಿಗೆ ಬಂದರು. ಆಗ ಆತ ಓಡಿ ಹೋದ ಎಂದು ದೂರಿನಲ್ಲಿ ಉಲ್ಲೇಖಿಸಿದ್ದಾರೆ.
ಶಬರಿಮಲೆಗೆ ಎಲ್ಲ ವಯಸ್ಸಿನ ಮಹಿಳೆಯರೂ ಪ್ರವೇಶಿಸಬಹುದು ಎಂದು ಸುಪ್ರೀಂಕೋರ್ಟ್ ತೀರ್ಪು ನೀಡಿದ ಮೇಲೆ, ಆ ದೇಗುಲ ಪ್ರವೇಶಿಸಿ ಮೊದಲ ಮಹಿಳೆ ಈ ಬಿಂದು ಅಮ್ಮಿನಿ. ಇವರ ಪ್ರವೇಶ ಆಗುತ್ತಿದ್ದಂತೆ ಶಬರಿಮಲೆ ಪ್ರದೇಶ ರಣರಂಗವಾದಂತೆ ಆಗಿತ್ತು. ದೇಗುಲ ಶುದ್ಧೀಕರಣಕ್ಕಾಗಿ ಆಡಳಿತ ಮಂಡಳಿಯವರು ದೇವಾಲಯದ ಬಾಗಿಲನ್ನೇ ಮುಚ್ಚಿಬಿಟ್ಟಿದ್ದರು. ಬಹುದೊಡ್ಡ ಮಟ್ಟದ ಪ್ರತಿಭಟನೆಗಳು ಕೇರಳದ ಬೀದಿಬೀದಿಯಲ್ಲಿ ನಡೆದಿದ್ದವು. ಬಸ್ಗೆ ಬೆಂಕಿ ಹಚ್ಚಲಾಗಿತ್ತು. ಪ್ರಮುಖ ನಾಯಕರ ಮನೆಗಳ ಮೇಲೆ ಬಾಂಬ್ ಎಸೆಯಲಾಗಿತ್ತು. ಈ ಘಟನೆಗೆ ಸಂಬಂಧಪಟ್ಟಂತೆ ಪೊಲೀಸರು 10 ಸಾವಿರ ಮಂದಿಯನ್ನು ವಶಕ್ಕೆ ಪಡೆದಿದ್ದರು. ಇದೀಗ ಹಲ್ಲೆಗೆ ಒಳಗಾಗಿರುವ ಬಿಂದು ಅಮ್ಮಿನಿ, ತನಗೆ ಕೇರಳ ಪೊಲೀಸರ ಮೇಲೆ ನಂಬಿಕೆಯಿಲ್ಲ. ಅವರು ನನಗೆ ನ್ಯಾಯ ಒದಗಿಸುತ್ತಾರೆ ಎಂದು ಅನ್ನಿಸುವುದಿಲ್ಲ ಎಂದು ಕೂಡ ಹೇಳಿದ್ದಾರೆ.
ಇದನ್ನೂ ಓದಿ: ವಯಸ್ಕರಿಗೆ 2ನೇ ಡೋಸ್ ಲಸಿಕೆ ನೀಡಿಕೆಯಲ್ಲಿ ಕರ್ನಾಟಕಕ್ಕೆ 3ನೇ ಸ್ಥಾನ; ಆರೋಗ್ಯ ಸಚಿವ ಸುಧಾಕರ್ ಟ್ವೀಟ್
Published On - 9:26 am, Thu, 6 January 22