Azadi Ka Amrit Mahotsav: ವಿಶ್ವ ದಾಖಲೆ ಬರೆಯಲು ಮುಂದಾದ ಶಾಲಾ ವಿದ್ಯಾರ್ಥಿಗಳು
ಸ್ವಾತಂತ್ರ್ಯದ ಅಮೃತ ಮಹೋತ್ಸವದ ಪ್ರಯುಕ್ತ ಆ.12ರಂದು ರಾಜಸ್ಥಾನದಾದ್ಯಂತ ಸುಮಾರು 1 ಕೋಟಿ ವಿದ್ಯಾರ್ಥಿಗಳು ದೇಶಭಕ್ತಿ ಗೀತೆಗಳನ್ನು ಹಾಡುವ ಮೂಲಕ ವಿಶ್ವ ದಾಖಲೆ ಬರೆಯಲು ಸಜ್ಜಾಗಿದ್ದಾರೆ.
ಜೈಪುರ: ಭಾರತ ಸ್ವಾತಂತ್ರ್ಯಗೊಂಡು 75 ವರ್ಷಗಳು ತುಂಬುತ್ತಿರುವ ಹಿನ್ನೆಲೆ ದೇಶಾದ್ಯಂತ ಸ್ವಾತಂತ್ರ್ಯದ ಅಮೃತ ಮಹೋತ್ಸವ ಆಚರಿಸಲಾಗುತ್ತಿದೆ. ಈ ಅಭಿಯಾನದಡಿ ಆಗಸ್ಟ್ 12 ರಂದು ರಾಜಸ್ಥಾನದಲ್ಲಿ ಸುಮಾರು ಒಂದು ಕೋಟಿ ಶಾಲಾ ವಿದ್ಯಾರ್ಥಿಗಳು ದೇಶಭಕ್ತಿ ಗೀತೆಗಳನ್ನು ಹಾಡುವ ಮೂಲಕ ವಿಶ್ವ ದಾಖಲೆ ಬರೆಯಲು ಸಜ್ಜಾಗಿದ್ದಾರೆ. ದೇಶಭಕ್ತಿಯ ಭಾವನೆಗಳನ್ನು ಮೂಡಿಸುವ ಉದ್ದೇಶದಿಂದ ರಾಜ್ಯದ ಎಲ್ಲಾ ಸರ್ಕಾರಿ ಮತ್ತು ಸರ್ಕಾರೇತರ ಶಾಲೆಗಳಲ್ಲಿ ಆ.12 ರಂದು ಬೆಳಿಗ್ಗೆ 10.15 ಕ್ಕೆ ಕಾರ್ಯಕ್ರಮಗಳನ್ನು ಆಯೋಜಿಸಲಾಗಿದ್ದು, ಕಾರ್ಯಕ್ರಮಗಳಲ್ಲಿ ಶಾಲಾ ವಿದ್ಯಾರ್ಥಿಗಳು ದೇಶಭಕ್ತಿ ಗೀತೆಗಳನ್ನು ಹಾಡಲಿದ್ದಾರೆ ಎಂದು ಶಿಕ್ಷಣ ಇಲಾಖೆಯ ಅಧಿಕಾರಿಯೊಬ್ಬರು ಮಾಹಿತಿ ನೀಡಿದ್ದಾರೆ.
ಸುಮಾರು ಒಂದು ಕೋಟಿ ಶಾಲಾ ವಿದ್ಯಾರ್ಥಿಗಳು ಕಾರ್ಯಕ್ರಮದಲ್ಲಿ ಭಾಗವಹಿಸಲು ಉದ್ದೇಶಿಸಲಾಗಿದ್ದು, ಇದು ವಿಶ್ವ ದಾಖಲೆ ನಿರ್ಮಿಸುವ ಸಾಧ್ಯತೆಯಿದೆ. ಜೈಪುರದ ಸವಾಯಿ ಮಾನ್ಸಿಂಗ್ ಸ್ಟೇಡಿಯಂನಲ್ಲಿ ನಡೆಯಲಿರುವ ರಾಜ್ಯಮಟ್ಟದ ಕಾರ್ಯಕ್ರಮದಲ್ಲಿ ಮುಖ್ಯಮಂತ್ರಿ ಅಶೋಕ್ ಗೆಹ್ಲೋಟ್ ಪಾಲ್ಗೊಳ್ಳುವ ಸಾಧ್ಯತೆ ಇದೆಎಂದು ಶಾಲಾ ಶಿಕ್ಷಣ ಇಲಾಖೆಯ ಹೆಚ್ಚುವರಿ ಮುಖ್ಯ ಕಾರ್ಯದರ್ಶಿ ಪವನ್ ಕುಮಾರ್ ಗೋಯಲ್ ತಿಳಿಸಿದ್ದಾರೆ.
ಜಿಲ್ಲೆಯಲ್ಲಿ ಸ್ವಾತಂತ್ರ್ಯ ದಿನಾಚರಣೆ ಕಾರ್ಯಕ್ರಮಗಳನ್ನು ಆಯೋಜಿಸಿರುವ ಸ್ಥಳಗಳಲ್ಲಿ ಜಿಲ್ಲಾ ಮಟ್ಟದ ಕಾರ್ಯಕ್ರಮಗಳನ್ನು ಆಯೋಜಿಸಲಾಗುವುದು. ಜಿಲ್ಲಾ ಮಟ್ಟದಲ್ಲಿ ಸಂಬಂಧಪಟ್ಟ ಉಸ್ತುವಾರಿ ಸಚಿವರು ಕಾರ್ಯಕ್ರಮಗಳಲ್ಲಿ ಮುಖ್ಯ ಅತಿಥಿಗಳಾಗಿ ಭಾಗವಹಿಸಲಿದ್ದಾರೆ. ಬ್ಲಾಕ್ ಮಟ್ಟದ ಕಾರ್ಯಕ್ರಮಗಳನ್ನು ಕ್ರೀಡಾ ಮೈದಾನದಲ್ಲಿ ಆಯೋಜಿಸಲಾಗುತ್ತದೆ ಮತ್ತು ಶಾಲಾ ಮಟ್ಟದ ಕಾರ್ಯಕ್ರಮಗಳನ್ನು ಶಾಲಾ ಆವರಣದಲ್ಲಿ ಆಯೋಜಿಸಲಾಗುತ್ತದೆ ಎಂದು ಗೋಯಲ್ ಹೇಳಿದ್ದಾರೆ.
ಮತ್ತಷ್ಟು ರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ