ಬದರಿನಾಥದಲ್ಲೂ ದೇಣಿಗೆ ಹಗರಣ, ಸಿಸಿಟಿವಿಯಲ್ಲಿ ಕಳ್ಳರ ಕೈಚಳಕ ಬಯಲು

ಬದರಿನಾಥ ದೇವಾಲಯದಲ್ಲಿ ಭಕ್ತರ ಕಾಣಿಕೆ ಹಣ ಕಳ್ಳತನದ ಬೃಹತ್ ಹಗರಣವನ್ನು SIT ಭೇದಿಸಿದೆ. ಸಿಸಿಟಿವಿ ದೃಶ್ಯಾವಳಿಗಳಿಂದ ದೇವಾಲಯದ ಹಿರಿಯ ಅಧಿಕಾರಿ ರಾಜೇಂದ್ರ ಚೌಹಾಣ್ ಮಾಸ್ಟರ್‌ಮೈಂಡ್ ಎಂದು ಬಯಲಾಗಿದೆ. ಈತ ಮತ್ತೊಬ್ಬ ಆರೋಪಿ ಪ್ರಮೋದ್ ನೌಟಿಯಾಲ್ ಜೊತೆ ಸೇರಿ ನಗದು, ಚಿನ್ನ ಮತ್ತು ಪವಿತ್ರ ಕೇಸರಿಯನ್ನೂ ಕದ್ದಿದ್ದಾನೆ. ತನಿಖೆ ತೀವ್ರಗೊಂಡಿದ್ದು, ಇಡೀ ದೇಶದಲ್ಲಿ ಆಕ್ರೋಶಕ್ಕೆ ಕಾರಣವಾಗಿದೆ.

ಬದರಿನಾಥದಲ್ಲೂ ದೇಣಿಗೆ ಹಗರಣ, ಸಿಸಿಟಿವಿಯಲ್ಲಿ ಕಳ್ಳರ ಕೈಚಳಕ ಬಯಲು
ಬದ್ರಿನಾಥ

Updated on: Jul 18, 2026 | 4:59 PM

ಬದರಿನಾಥ, ಜುಲೈ 18: ದೇಶದ ಅತ್ಯಂತ ಪವಿತ್ರ ಚಾರ್ ಧಾಮ್ ಯಾತ್ರಾ ಸ್ಥಳಗಳಲ್ಲಿ ಒಂದಾದ ಬದರಿನಾಥದಲ್ಲೂ ಭಕ್ತರು ದೇವರಿಗೆ ಅರ್ಪಿಸಿದ ಕಾಣಿಕೆ ಹಣವನ್ನು ದೋಚುತ್ತಿದ್ದ ಬೃಹತ್ ಜಾಲವನ್ನು ವಿಶೇಷ ತನಿಖಾ ತಂಡ (SIT) ಭೇದಿಸಿದೆ. ಭಕ್ತರು ತಟ್ಟೆಯಲ್ಲಿ ನೀಡುತ್ತಿದ್ದ ಕಾಣಿಕೆ ಹಣ ಮತ್ತು ಬೆಲೆಬಾಳುವ ವಸ್ತುಗಳನ್ನು ಕಳ್ಳತನ ಮಾಡುತ್ತಿದ್ದ ಪ್ರಕರಣಕ್ಕೆ ಸಂಬಂಧಿಸಿದಂತೆ ಎಸ್‌ಐಟಿ ಅಧಿಕಾರಿಗಳು ಈಗ ‘ಬದರಿನಾಥ-ಕೇದಾರನಾಥ ದೇವಾಲಯ ಸಮಿತಿ’ಯ (BKTC) ಹಿರಿಯ ಕಾಯಂ ಅಧಿಕಾರಿಯನ್ನು ಬಂಧಿಸಿದ್ದಾರೆ. ಈ ಹಗರಣದಲ್ಲಿ ಇಬ್ಬರನ್ನು ಬಂಧಿಸಿದ್ದಾರೆ.

ದೇವಾಲಯದ ಸಿಸಿಟಿವಿ (CCTV) ದೃಶ್ಯಾವಳಿಗಳನ್ನು ದಿನಗಟ್ಟಲೆ ಸೂಕ್ಷ್ಮವಾಗಿ ಪರಿಶೀಲಿಸಿದ ಎಸ್‌ಐಟಿ ಅಧಿಕಾರಿಗಳಿಗೆ ಆರೋಪಿಗಳ ಆಘಾತಕಾರಿ ಕೈಚಳಕ ಪತ್ತೆಯಾಗಿದೆ.

ಅಧಿಕಾರಿಯದೇ ಸ್ಕೆಚ್: ದೇವಾಲಯದ ಕಾಣಿಕೆ ತಟ್ಟೆಯ ಎಣಿಕೆ ಪ್ರಕ್ರಿಯೆಯ ಸಂಪೂರ್ಣ ಉಸ್ತುವಾರಿ ಹೊತ್ತಿದ್ದ ಹಿರಿಯ ಅಧಿಕಾರಿ ರಾಜೇಂದ್ರ ಚೌಹಾಣ್ ಎಂಬಾತನೇ ಈ ಕಳ್ಳತನದ ಮಾಸ್ಟರ್ ಮೈಂಡ್. ಈತ ಭಕ್ತರು ನೀಡಿದ ನಗದು ಹಣ ಮತ್ತು ಕಾಣಿಕೆಗಳನ್ನು ದೋಚಲು ಮತ್ತೊಬ್ಬ ಆರೋಪಿ ಪ್ರಮೋದ್ ನೌಟಿಯಾಲ್ ಎಂಬಾತನೊಂದಿಗೆ ಕೈಜೋಡಿಸಿ ಸಂಚು ರೂಪಿಸಿದ್ದ.

ಕೇಸರಿಯನ್ನೂ ಬಿಡದ ಕಳ್ಳರು: ಭಕ್ತರು ದೇವರಿಗೆ ಸಮರ್ಪಿಸುತ್ತಿದ್ದ ಕೋಟ್ಯಂತರ ರೂಪಾಯಿ ಮೌಲ್ಯದ ನಗದು ಮತ್ತು ಚಿನ್ನಾಭರಣಗಳಷ್ಟೇ ಅಲ್ಲದೆ, ಅತ್ಯಂತ ದುಬಾರಿ ವಸ್ತುವಾದ ಪವಿತ್ರ ‘ಕೇಸರಿ’ಯನ್ನು ಕೂಡ ಈ ಭ್ರಷ್ಟ ಅಧಿಕಾರಿಗಳು ಕಣ್ತಪ್ಪಿಸಿ ಜೇಬಿಗೆ ಇಳಿಸುತ್ತಿದ್ದ ದೃಶ್ಯಗಳು ಸಿಸಿಟಿವಿಯಲ್ಲಿ ಸಾಬೀತಾಗಿವೆ.

ದೇವಾಲಯದ ಮಂಡಳಿಯು ನೀಡಿದ ಅಧಿಕೃತ ದೂರಿನ ಮೇರೆಗೆ ಬದರಿನಾಥ್ ಪೊಲೀಸ್ ಠಾಣೆಯಲ್ಲಿ ಎಫ್‌ಐಆರ್ (FIR) ದಾಖಲಾಗಿತ್ತು. ತನಿಖೆ ಆರಂಭಿಸಿದ ಪೊಲೀಸರು ಜುಲೈ 12 ರಂದು ಮೊದಲ ಆರೋಪಿ ಪ್ರಮೋದ್ ನೌಟಿಯಾಲ್‌ನನ್ನು ಕರಾರುವಕ್ಕಾಗಿ ಬಂಧಿಸಿ ಜೈಲಿಗಟ್ಟಿದ್ದರು. ತದನಂತರ ನಡೆದ ಆಳವಾದ ವಿಚಾರಣೆ ಮತ್ತು ಪ್ರತ್ಯಕ್ಷದರ್ಶಿಗಳ ಸಾಕ್ಷ್ಯದ ಆಧಾರದ ಮೇಲೆ, ಈಗ ಮುಖ್ಯ ಸೂತ್ರಧಾರ ಹಾಗೂ ದೇವಾಲಯ ಸಮಿತಿಯ ಖಾಯಂ ನೌಕರನಾಗಿದ್ದ ರಾಜೇಂದ್ರ ಚೌಹಾಣ್‌ನನ್ನು ಎಸ್‌ಐಟಿ ಬಿಗಿ ಭದ್ರತೆಯಲ್ಲಿ ವಶಕ್ಕೆ ಪಡೆದಿದೆ.

ಮತ್ತಷ್ಟು ಓದಿ: ಅಯೋಧ್ಯೆ ಹಗರಣ ಬೆನ್ನಲ್ಲೇ ರಾಜ್ಯ ಸರ್ಕಾರ ಅಲರ್ಟ್: ರಾಜ್ಯದ ಎಲ್ಲಾ ದೇವಾಲಯದ ಹುಂಡಿಗಳ ರಕ್ಷಣೆಗೆ ಬಿಗಿ ಭದ್ರತೆ

ಕಠಿಣ ಸಿಸಿಟಿವಿ ಕಣ್ಗಾವಲು ಮತ್ತು ಭಕ್ತರ ಆಕ್ರೋಶ
ಈ ಪವಿತ್ರ ಧಾಮದ ಹಗರಣವು ಇಡೀ ದೇಶದಾದ್ಯಂತ ಇರುವ ಕೋಟ್ಯಂತರ ಹಿಂದೂ ಭಕ್ತರ ಭಾವನೆಗಳಿಗೆ ಧಕ್ಕೆ ತಂದಿದ್ದು, ತನಿಖೆ ಮತ್ತಷ್ಟು ತೀವ್ರಗೊಂಡಿದೆ.

ಕಳೆದ ಕೆಲವು ವರ್ಷಗಳಿಂದ ಬದರಿನಾಥ ಮತ್ತು ಕೇದಾರನಾಥ ದೇವಾಲಯಗಳಲ್ಲಿ ಭಕ್ತರು ನೀಡಿದ ಒಟ್ಟು ದೇಣಿಗೆ, ಸಂಗ್ರಹವಾದ ಚಿನ್ನ ಮತ್ತು ಇತರ ಕಾಣಿಕೆಗಳ ಸಂಪೂರ್ಣ ಆಡಿಟಿಂಗ್ ನಡೆಸಲು ಉತ್ತರಾಖಂಡ್ ಸರ್ಕಾರ ಮುಂದಾಗಿದೆ. ಈ ಕಳ್ಳತನದ ಜಾಲದಲ್ಲಿ ಇನ್ನೂ ಹಲವು ದೊಡ್ಡ ವ್ಯಕ್ತಿಗಳು ಭಾಗಿಯಾಗಿರುವ ಶಂಕೆಯಿದ್ದು, ಎಸ್‌ಐಟಿ ತನಿಖೆಯನ್ನು ವಿಸ್ತರಿಸಿದೆ.

ಹೊಸ ನಿಯಮಗಳ ಜಾರಿ: ಈ ಘಟನೆಯ ಬೆನ್ನಲ್ಲೇ, ದೇವಾಲಯದ ಹಣ ಎಣಿಕೆ ಕೊಠಡಿಗೆ ಪ್ರವೇಶಿಸುವ ಪ್ರತಿಯೊಬ್ಬ ಸಿಬ್ಬಂದಿಗೂ ಕಿಸೆಗಳಿಲ್ಲದ ವಿಶೇಷ ಉಡುಪನ್ನು ಕಡ್ಡಾಯಗೊಳಿಸಲು ಮತ್ತು ಎಣಿಕೆಯ ಸಂಪೂರ್ಣ ಪ್ರಕ್ರಿಯೆಯನ್ನು ನೇರ ಪ್ರಸಾರ ಮಾಡುವ ಮೂಲಕ ಪಾರದರ್ಶಕತೆ ತರಲು ಭಕ್ತರು ಹಾಗೂ ಧಾರ್ಮಿಕ ಮುಖಂಡರು ತೀವ್ರ ಒತ್ತಾಯ ಹೇರಿದ್ದಾರೆ. ಇತ್ತೀಚೆಗೆ ಅಯೋಧ್ಯೆಯ ರಾಮ ಮಂದಿರದಲ್ಲಿ ದೇಣಿಗೆ ಹಗರಣ ನಡೆದಿತ್ತು.

 

ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ 

Follow Us