ವಿದಿಶಾ: ಬಜರಂಗದಳ (Bajrang Dal) ಮತ್ತು ವಿಶ್ವ ಹಿಂದೂ ಪರಿಷತ್ (Vishwa Hindu Parishad) ಕಾರ್ಯಕರ್ತರು ಸೋಮವಾರ ಮಧ್ಯಾಹ್ನ ಮಧ್ಯಪ್ರದೇಶದ(Madhya Pradesh) ವಿದಿಶಾ ಜಿಲ್ಲೆಯ ಗಂಜ್ ಬಸೋಡಾ ತಹಸಿಲ್‌ನಲ್ಲಿರುವ ಕ್ಯಾಥೋಲಿಕ್ ಶಾಲೆ (Catholic school) ಮೇಲೆ ದಾಳಿ ನಡೆಸಿದ್ದಾರೆ. ಶಾಲೆಯ ಅಧಿಕಾರಿಗಳು ಮತಾಂತರ ಮಾಡುತ್ತಿದ್ದಾರೆ ಎಂದು ಈ ಸಂಘಟನೆಗಳು ಆರೋಪಿಸಿವೆ. ಘಟನೆಗೆ ಸಂಬಂಧಿಸಿದಂತೆ ನಾಲ್ವರನ್ನು ಬಂಧಿಸಲಾಗಿದ್ದು, ಇತರ ಆರೋಪಿಗಳ ಪತ್ತೆಗೆ ಸಿಸಿಟಿವಿ ದೃಶ್ಯಾವಳಿಗಳನ್ನು ಪರಿಶೀಲಿಸಲಾಗುತ್ತಿದೆ ಎಂದು ಪೊಲೀಸರು ತಿಳಿಸಿದ್ದಾರೆ. ಮಧ್ಯಾಹ್ನ 12:10 ರ ಸುಮಾರಿಗೆ ಈ ಘಟನೆ ಸಂಭವಿಸಿದೆ. ಶಾಲೆಯಲ್ಲಿ 12 ನೇ ತರಗತಿ ವಿದ್ಯಾರ್ಥಿಗಳಿಗೆ ಪರೀಕ್ಷೆಗಳು ನಡೆಯುತ್ತಿದ್ದಾಗ ಸುಮಾರು 300 ಜನರು ಸೇಂಟ್ ಜೋಸೆಫ್ ಹೈಸ್ಕೂಲ್ (St Joseph High School) ಹೊರಗೆ ಜಮಾಯಿಸಿ ಪ್ರತಿಭಟಿಸಿದರು. ಆಮೇಲೆ ಗುಂಪು ಕೂಡಲೇ ಹಿಂಸಾಚಾರಕ್ಕೆ ತಿರುಗಿ ಶಾಲೆಯ ಆವರಣಕ್ಕೆ ನುಗ್ಗಿ ಆಸ್ತಿಗೆ ಹಾನಿ ಮಾಡಿದೆ. ಗುಂಪು ಕಬ್ಬಿಣದ ರಾಡ್ ಮತ್ತು ಕಲ್ಲುಗಳಿಂದ ಶಸ್ತ್ರಸಜ್ಜಿತರಾಗಿದ್ದರು ಮತ್ತು ಶಾಲೆಯ ಆಸ್ತಿಗೆ ಹಾನಿ ಮಾಡುವಾಗ ‘ಜೈ ಶ್ರೀ ರಾಮ್’ ಎಂದು ಘೋಷಣೆ ಕೂಗಿದರು ಎಂದು ಶಾಲೆಯ ಪ್ರಾಂಶುಪಾಲ ಬ್ರದರ್ ಆಂಥೋನಿ ಟೈನುಮ್ಕಲ್ ಹೇಳಿರುವುದಾಗಿ ಇಂಡಿಯನ್ ಎಕ್ಸ್‌ಪ್ರೆಸ್ ವರದಿ ಮಾಡಿದೆ.
ಪೋಲೀಸರು ಕ್ರಮಕೈಗೊಂಡಿಲ್ಲ ಎಂದು ಆರೋಪಿಸಿದ ಟೈನುಮ್ಕಲ್ “ನಾವು ರಕ್ಷಣೆಗಾಗಿ ಪೊಲೀಸರಲ್ಲಿ ವಿನಂತಿಸಿ ಮಾಡಿದ್ದೇವೆ. ಆಗ ಅವರು ಗುಂಪು ಕೆಲವೇ ಘೋಷಣೆಗಳನ್ನು ಕೂಗುತ್ತದೆ ಮತ್ತು ಶಾಂತಿಯುತವಾಗಿ ಅವರನ್ನು ಚದುರಿಸುತ್ತೇವೆ ಎಂದು ಅವರು ನಮಗೆ ಭರವಸೆ ನೀಡಿದರು. ಆದರೆ ಗೂಂಡಾಗಳು ಬಂದುಹೋದ ನಂತರ ಪೊಲೀಸರು ಬಂದರು ಎಂದು ಹೇಳಿದ್ದಾರೆ.
ಗಂಜ್ ಬಸೋಡಾ ತಹಸಿಲ್‌ನ ಉಪವಿಭಾಗೀಯ ಪೊಲೀಸ್ ಅಧಿಕಾರಿ ಭರತ್ ಭೂಷಣ್ ಅವರು ಆರೋಪವನ್ನು ನಿರಾಕರಿಸಿದ್ದಾರೆ. “ಇದು ಶಾಂತಿಯುತ ಪ್ರತಿಭಟನೆಯ ಉದ್ದೇಶವಾಗಿತ್ತು. ಕೆಲವು ಕಿಡಿಗೇಡಿಗಳು ಅವಕಾಶವನ್ನು ಬಳಸಿಕೊಂಡರು ಮತ್ತು ಶಾಲಾ ಕಟ್ಟಡದ ಮೇಲಿನ ಗಾಜಿನ ಹೊದಿಕೆಗೆ ಕಲ್ಲುಗಳನ್ನು ಎಸೆದು ಅದನ್ನು ಹಾನಿಗೊಳಿಸಿದರು.ಶಾಲಾ ಅಧಿಕಾರಿಗಳಿಗೆ ರಕ್ಷಣೆ ನೀಡಿದ್ದು ಮಾತ್ರವಲ್ಲದೆ ಪೊಲೀಸರು ಈಗಾಗಲೇ ಬಜರಂಗದಳದ ನಾಲ್ವರನ್ನು ವಶಕ್ಕೆ ತೆಗೆದುಕೊಂಡಿದ್ದಾರೆ ಎಂದು ಹೇಳಿದ್ದಾರೆ. ಪೊಲೀಸರು ಐಪಿಸಿ ಸೆಕ್ಷನ್ 147 (ಗಲಭೆ), 148 (ಮಾರಕ ಆಯುಧಗಳೊಂದಿಗೆ ಗಲಭೆ) ಮತ್ತು 427 ಅಡಿಯಲ್ಲಿ ಪ್ರಕರಣ ದಾಖಲಿಸಿದ್ದಾರೆ. ವಿದಿಶಾ ಎಸ್ಪಿ ಮತ್ತು ಜಿಲ್ಲಾ ಮ್ಯಾಜಿಸ್ಟ್ರೇಟ್ ಶಾಲೆಗೆ ಭೇಟಿ ನೀಡಿ ಪರಿಸ್ಥಿತಿಯನ್ನು ಅವಲೋಕಿಸಿದ್ದಾರೆ ಎಂದು ಭೂಷಣ್ ಹೇಳಿದರು.
ಸೇಂಟ್ ಜೋಸೆಫ್ ಶಾಲೆ 11 ವರ್ಷಗಳ ಹಿಂದೆ ಸ್ಥಾಪನೆ ಆಗಿದ್ದು ಭೋಪಾಲ್ ಮೂಲದ ಮಲಬಾರ್ ಮಿಷನರಿ ಸೊಸೈಟಿ ಆಫ್ ASSISI ಪ್ರಾಂತ್ಯದಿಂದ ನಡೆಸಲ್ಪಡುತ್ತದೆ. ಶಾಲೆಯಲ್ಲಿ ಸುಮಾರು 1,500 ವಿದ್ಯಾರ್ಥಿಗಳು ಇದ್ದಾರೆ ಮತ್ತು ಅವರಲ್ಲಿ ಹೆಚ್ಚಿನವರು ಹಿಂದೂಗಳು.
ಶಾಲೆಯಲ್ಲಿ ಪ್ರತಿಭಟನೆಯ ನೇತೃತ್ವ ವಹಿಸಿದ್ದ ವಿಎಚ್‌ಪಿ ಮುಖಂಡ ನೀಲೇಶ್ ಅಗರ್ವಾಲ್, ಮಾಧ್ಯಮ ವರದಿಯಂತೆ ಅಕ್ಟೋಬರ್ 31 ರಂದು ಶಾಲೆಯಲ್ಲಿ ಎಂಟು ಹಿಂದೂ ಹುಡುಗಿಯರನ್ನು ಮತಾಂತರಿಸಲಾಗಿದೆ ಈ ಬಗ್ಗೆ ರಾಷ್ಟ್ರೀಯ ಮಕ್ಕಳ ಹಕ್ಕುಗಳ ರಕ್ಷಣಾ ಆಯೋಗದ ಅಧ್ಯಕ್ಷ ಪ್ರಿಯಾಂಕ್ ಕಾನೂಂಗೊ ವಿದಿಶಾ ಜಿಲ್ಲಾಧಿಕಾರಿಗೆ ಪತ್ರ ಬರೆದಿದ್ದಾರೆ ಎಂದು ಹೇಳಿದರು.
ಆದಾಗ್ಯೂ, ಟೈನುಮ್ಕಲ್ ಈ ಆರೋಪಗಳನ್ನು ನಿರಾಕರಿಸಿದ್ದಾರೆ. ಶಾಲೆಯು ತನ್ನ ಕ್ರಿಶ್ಚಿಯನ್ ವಿದ್ಯಾರ್ಥಿಗಳಿಗೆ ಪವಿತ್ರ ಕಮ್ಯುನಿಯನ್ (holy communion) ಅನ್ನು ಅಕ್ಟೋಬರ್ 31 ರಂದು ಆಯೋಜಿಸಿದೆ ಎಂದು ಹೇಳಿದರು. “ಆ ಘಟನೆಯ ವಿಡಿಯೊವನ್ನು ಚಿತ್ರೀಕರಿಸಲಾಯಿತು ಮತ್ತು ಯೂಟ್ಯೂಬ್‌ನಲ್ಲಿ ಪ್ರಸಾರ ಮಾಡಲಾಯಿತು. ಶಾಲೆಯ ವಿದ್ಯಾರ್ಥಿಗಳನ್ನು ಮತಾಂತರಿಸಲಾಗುತ್ತಿದೆ ಎಂದು ತಪ್ಪಾಗಿ ಸೂಚಿಸಲಾಗಿದೆ. ಆದರೆ ಕಾರ್ಯಕ್ರಮದಲ್ಲಿ ಭಾಗವಹಿಸಿರುವ ಯಾವೊಬ್ಬ ವಿದ್ಯಾರ್ಥಿಯೂ ಆ ಶಾಲಾ ವಿದ್ಯಾರ್ಥಿ ಅಲ್ಲ ಎಂದು ಅವರು ಹೇಳಿದರು.
ಎನ್‌ಸಿಪಿಸಿಆರ್ ಅಧ್ಯಕ್ಷರು ಜಿಲ್ಲಾಧಿಕಾರಿಗೆ ಪತ್ರ ಬರೆದಿದ್ದರೂ ಜಿಲ್ಲಾಧಿಕಾರಿಗಳು ಯಾವುದೇ ಕ್ರಮ ಕೈಗೊಂಡಿಲ್ಲ. ಇದು ಸಂಪೂರ್ಣ ಆಧಾರ ರಹಿತ ದೂರು ಆಗಿರುವುದರಿಂದ ನಮಗೆ ಜಿಲ್ಲಾಧಿಕಾರಿ ಕಚೇರಿಯಿಂದ ಯಾವುದೇ ಹೆಚ್ಚಿನ ಮಾಹಿತಿ ಬಂದಿಲ್ಲ ಎಂದು ಟೈನುಕಲ್ ಹೇಳಿದ್ದಾರೆ. ಶಾಲಾ ಅಧಿಕಾರಿಗಳ ವಿರುದ್ಧದ ಮತಾಂತರ ದೂರು ಆಧಾರರಹಿತವಾಗಿದೆ ಮತ್ತು ಹೊರಹೊಮ್ಮಿದ ವಿಡಿಯೊ ಸುಳ್ಳು ಎಂದು ಭೂಷಣ್ ಸ್ಪಷ್ಟಪಡಿಸಿದ್ದಾರೆ.
ಇದನ್ನೂ ಓದಿ: ಬೆಳಗಾವಿ ಅಧಿವೇಶನದಲ್ಲಿ ಮತಾಂತರ ನಿಷೇಧ ಖಾಸಗಿ ವಿಧೇಯಕ ಮಂಡನೆಗೆ ನಿರ್ಧಾರ
Published On - 10:24 am, Tue, 7 December 21