Mullaperiyar Dam ರಾತ್ರೋರಾತ್ರಿ ಮುಲ್ಲಪೆರಿಯಾರ್ ಅಣೆಕಟ್ಟು ಶಟರ್ ತೆರೆದ ತಮಿಳುನಾಡು; ಸುಪ್ರೀಂ ಮೊರೆ ಹೋಗಲು ಕೇರಳ ಸಜ್ಜು, ಏನಿದು ವಿವಾದ?
ಕೇರಳದ ಇಡುಕ್ಕಿ ಜಿಲ್ಲೆಯಲ್ಲಿ ಪೆರಿಯಾರ್ ನದಿಗೆ 1895 ರಲ್ಲಿ ನಿರ್ಮಿಸಲಾದ ಅಣೆಕಟ್ಟು ಮುಲ್ಲಪೆರಿಯಾರ್ ಅಣೆಕಟ್ಟು. ನೀರಾವರಿ ಮತ್ತು ವಿದ್ಯುತ್ ಅಗತ್ಯಗಳಿಗಾಗಿ ತಮಿಳುನಾಡು ಸರ್ಕಾರ ಇದನ್ನು ನೋಡಿಕೊಳ್ಳುತ್ತದೆ. ತಮಿಳುನಾಡಿನಲ್ಲಿ ಹುಟ್ಟಿ ಕೇರಳಕ್ಕೆ ಹರಿಯುವ ಪೆರಿಯಾರ್ ನದಿಯ ಮೇಲ್ಭಾಗದಲ್ಲಿ ಈ ಅಣೆಕಟ್ಟು ಇದೆ.
ತಿರುವನಂತಪುರಂ: ಜಲಾಶಯದಲ್ಲಿ ಹೆಚ್ಚುತ್ತಿರುವ ನೀರಿನ ಮಟ್ಟವನ್ನು ಗಮನದಲ್ಲಿಟ್ಟುಕೊಂಡು ತಮಿಳುನಾಡು (Tamil Nadu) ಸೋಮವಾರ ಮುಲ್ಲಪೆರಿಯಾರ್ ಅಣೆಕಟ್ಟಿನ (Mullaperiyar Dam) ಒಂಬತ್ತು ಶೆಟರ್‌ಗಳನ್ನು ತೆರೆದು ರಾತ್ರಿ 10 ಗಂಟೆಯ ನಂತರ ಮೂರನ್ನು ಮುಚ್ಚಿದೆ. ಈ ಕ್ರಮವನ್ನು ‘ಬೇಜವಾಬ್ದಾರಿ’ ಎಂದು ಬಣ್ಣಿಸಿದ ಕೇರಳ ಸರ್ಕಾರ (Kerala Government) ಅಣೆಕಟ್ಟಿನ ಶಟರ್ ತೆರೆದ ಪರಿಣಾಮವಾಗಿ ಕೆಲವು ಪ್ರದೇಶಗಳು ಮುಳುಗಡೆಯಾಗಿದ್ದು ಸುಪ್ರೀಂಕೋರ್ಟ್ (Supreme Court) ಮೊರೆ ಹೋಗಲು ನಿರ್ಧರಿಸಿದೆ. ರಾತ್ರಿ 7.45ಕ್ಕೆ ತಲಾ 60 ಸೆಂಟಿಮೀಟರ್‌ಗಳಷ್ಟು ತೆರೆಯಲಾದ ಅಣೆಕಟ್ಟಿನ ಒಂಬತ್ತು ಶೆಟರ್‌ಗಳನ್ನು 120 ಸೆಂ (1.20 ಮೀ) ಹೆಚ್ಚಿಸಿ 12654.09 ಕ್ಯೂಸೆಕ್ ನೀರನ್ನು ಬಿಡುಗಡೆ ಮಾಡಲಾಗಿದೆ ಎಂದು ಜಿಲ್ಲಾಡಳಿತ ತಿಳಿಸಿದೆ. ನಂತರ ರಾತ್ರಿ 10 ಗಂಟೆಗೆ ಮೂರು ಶೆಟರ್‌ಗಳನ್ನು ಮುಚ್ಚಲಾಯಿತು. 8380.50 ಕ್ಯೂಸೆಕ್ ನೀರನ್ನು ಬಿಡುಗಡೆ ಮಾಡಲು ಆರನ್ನು ತೆರೆಯಲಾಯಿತು ಎಂದು ಜಿಲ್ಲಾಡಳಿತ ಹೇಳಿದೆ. ರಾತ್ರಿ ವೇಳೆ ಶಟರ್‌ಗಳನ್ನು ತೆರೆಯದಂತೆ ತಮಿಳುನಾಡು ಸರ್ಕಾರಕ್ಕೆ ಪದೇ ಪದೇ ಮನವಿ ಮಾಡಿದ್ದರೂ ಈ ಕ್ರಮ ಅನಿರೀಕ್ಷಿತವಾಗಿದೆ ಎಂದು ಕೇರಳ ಹೇಳಿದೆ. ಬಿಡುಗಡೆಯಾದ ನೀರು ಇಡುಕ್ಕಿಗೆ ಹೋಗುವುದರಿಂದ, ಇಡುಕ್ಕಿ ಅಣೆಕಟ್ಟನ್ನು ಮಂಗಳವಾರ ಬೆಳಿಗ್ಗೆ ತೆರೆಯಲಾಗುತ್ತದೆ. “ಈ ಕ್ರಮ ನಿರೀಕ್ಷಿಸಿರಲಿಲ್ಲ ಎಂದು ಕೇರಳದ ಜಲಸಂಪನ್ಮೂಲ ಸಚಿವ ರೋಶಿ ಆಗಸ್ಟಿನ್ ಹೇಳಿರುವುದಾಗಿ ಹಿಂದೂಸ್ತಾನ್ ಟೈಮ್ಸ್ ವರದಿ ಮಾಡಿದೆ.
ಎರಡು ರಾಜ್ಯಗಳ ನಡುವಿನ ದಶಕಗಳ ವಿವಾದಕ್ಕೆ ಅಣೆಕಟ್ಟು ಕಾರಣ. ಮುಲ್ಲಪೆರಿಯಾರ್ ಅಣೆಕಟ್ಟಿನ ಮಾಲೀಕತ್ವವನ್ನು ಹೊಂದಿರುವ ಮತ್ತು ನಡೆಸುತ್ತಿರುವ ತಮಿಳುನಾಡು, ಅದರ ಮೇಲಿನ ನಿಯಂತ್ರಣವನ್ನು ಕಳೆದುಕೊಳ್ಳುವ ಭಯದಿಂದ ಅಣೆಕಟ್ಟಿನ ಮರುನಿರ್ಮಾಣಕ್ಕೆ ವಿರುದ್ಧವಾಗಿದೆ.
ಏನಿದು ಮುಲ್ಲಪೆರಿಯಾರ್ ಅಣೆಕಟ್ಟು ವಿವಾದ? ಕೇರಳದ ಇಡುಕ್ಕಿ ಜಿಲ್ಲೆಯಲ್ಲಿ ಪೆರಿಯಾರ್ ನದಿಗೆ 1895 ರಲ್ಲಿ ನಿರ್ಮಿಸಲಾದ ಅಣೆಕಟ್ಟು ಮುಲ್ಲಪೆರಿಯಾರ್ ಅಣೆಕಟ್ಟು. ನೀರಾವರಿ ಮತ್ತು ವಿದ್ಯುತ್ ಅಗತ್ಯಗಳಿಗಾಗಿ ತಮಿಳುನಾಡು ಸರ್ಕಾರ ಇದನ್ನು ನೋಡಿಕೊಳ್ಳುತ್ತದೆ. ತಮಿಳುನಾಡಿನಲ್ಲಿ ಹುಟ್ಟಿ ಕೇರಳಕ್ಕೆ ಹರಿಯುವ ಪೆರಿಯಾರ್ ನದಿಯ ಮೇಲ್ಭಾಗದಲ್ಲಿ ಈ ಅಣೆಕಟ್ಟು ಇದೆ. ಈ ಜಲಾಶಯವು ಪೆರಿಯಾರ್ ಹುಲಿ ಸಂರಕ್ಷಿತ ಪ್ರದೇಶದಲ್ಲಿದೆ. ಜಲಾಶಯದಿಂದ ತಿರುಗಿಸಿದ ನೀರನ್ನು ವೈಗೈ ನದಿಯ ಉಪನದಿಯಾದ ಸುರುಳಿಯಾರ್‌ಗೆ ಹರಿಯುವ ಮೊದಲು ಕೆಳ ಪೆರಿಯಾರ್‌ನಲ್ಲಿ (ತಮಿಳುನಾಡಿನಿಂದ) ವಿದ್ಯುತ್ ಉತ್ಪಾದನೆಗೆ ಬಳಸಲಾಗುತ್ತದೆ. ನಂತರ ದೂರದ ಥೇಣಿ ಮತ್ತು ಇತರ ನಾಲ್ಕು ಜಿಲ್ಲೆಗಳಲ್ಲಿ ಸುಮಾರು 2.08 ಲಕ್ಷ ಹೆಕ್ಟೇರ್‌ಗೆ ನೀರಾವರಿಗಾಗಿ ಬಳಸಲಾಗುತ್ತದೆ.
ಮಾಧ್ಯಮಗಳು ಅಣೆಕಟ್ಟು ಅಸುರಕ್ಷಿತವಾಗಿದೆ ಎಂದು ವರದಿ ಮಾಡಿದ್ದ ಬೆನ್ನಲ್ಲೇ ಅಣೆಕಟ್ಟಿನ ಸುತ್ತಲಿನ ಸುರಕ್ಷತಾ ಕಾಳಜಿಗಳು 1960 ರ ದಶಕದಲ್ಲಿ ಮುನ್ನೆಲೆಗೆ ಬಂತು. ಕೇರಳವು 1961 ರಲ್ಲಿ ಕೇಂದ್ರ ಜಲ ಆಯೋಗದ ಮುಂದೆ ಸಮಸ್ಯೆಯನ್ನು ತಂದಿತು. 1964 ರಲ್ಲಿ ಕೇರಳ ಮತ್ತು ತಮಿಳುನಾಡು ಜಂಟಿ ಪರಿಶೀಲನೆಯ ನಂತರ, ಮೊದಲ ಬಾರಿಗೆ ನೀರಿನ ಮಟ್ಟವನ್ನು 155 ಅಡಿಯಿಂದ 152 ಅಡಿಗಳಿಗೆ ಇಳಿಸಲಾಯಿತು. ಏತನ್ಮಧ್ಯೆ, ಮುಂದಿನ ವರ್ಷಗಳಲ್ಲಿ, ತಮಿಳುನಾಡು ಮಟ್ಟವನ್ನು ಹೆಚ್ಚಿಸಬೇಕೆಂದು ಒತ್ತಾಯಿಸಿ ಹಲವಾರು ಸಾರ್ವಜನಿಕ ಆಂದೋಲನಗಳಿಗೆ ಸಾಕ್ಷಿಯಾಯಿತು ಮತ್ತು ಕೇರಳವು ಬೇಡಿಕೆಯನ್ನು ವಿರೋಧಿಸಿತು.
ನ್ಯಾಯಾಲಯದ ಮಧ್ಯಪ್ರವೇಶ ರಾಜ್ಯ ಸರ್ಕಾರಗಳು ಮಾತುಕತೆಯಲ್ಲಿ ವಿಫಲವಾದಾಗ ಎರಡೂ ರಾಜ್ಯಗಳ ಹೈಕೋರ್ಟ್‌ಗಳಲ್ಲಿ ಹಲವಾರು ಅರ್ಜಿಗಳನ್ನು ಸಲ್ಲಿಸಲಾಯಿತು. ನಂತರ ಇವುಗಳನ್ನು ಸುಪ್ರೀಂಕೋರ್ಟ್‌ಗೆ ವರ್ಗಾಯಿಸಲಾಯಿತು. 2000 ರಲ್ಲಿ ಸುರಕ್ಷತೆಯನ್ನು ನೋಡಲು ಮತ್ತು ಶೇಖರಣಾ ಮಟ್ಟವನ್ನು ಸೂಚಿಸಲು ಕೇಂದ್ರವು ತಜ್ಞರ ಸಮಿತಿಯನ್ನು ನೇಮಿಸಿತು. ಆದಾಗ್ಯೂ, 2006 ರಲ್ಲಿ ಸುಪ್ರೀಂಕೋರ್ಟ್ ತಮಿಳುನಾಡಿಗೆ ನೀರಿನ ಮಟ್ಟವನ್ನು 142 ಅಡಿಗಳಿಗೆ ಹೆಚ್ಚಿಸಲು ಅವಕಾಶ ಮಾಡಿಕೊಟ್ಟಿತು ಮತ್ತು ಬಲಪಡಿಸುವ ಕೆಲಸವನ್ನು ಪೂರ್ಣಗೊಳಿಸಿದ ನಂತರವೇ ಮಟ್ಟವನ್ನು ಹೆಚ್ಚಿಸಬೇಕು ಎಂದು ಹೇಳಿತು. ತಜ್ಞರ ಸಮಿತಿಯು ಪರಿಶೀಲಿಸಿ ಶಿಫಾರಸು ಮಾಡಿದರೆ ಮಟ್ಟವನ್ನು 152 ಅಡಿಗಳಿಗೆ ಮರುಸ್ಥಾಪಿಸಬಹುದು.
ಮಾರ್ಚ್ 2006 ರಲ್ಲಿ ಕೇರಳ ವಿಧಾನಸಭೆ ಕೇರಳ ನೀರಾವರಿ ಮತ್ತು ಜಲ ಸಂರಕ್ಷಣಾ ಕಾಯಿದೆ, 2003 ಅನ್ನು ತಿದ್ದುಪಡಿ ಮಾಡಿತು. ಈ ಮೂಲಕ ಮುಲ್ಲಪೆರಿಯಾರ್ ಅನ್ನು ‘ಅಳಿವಿನಂಚಿನಲ್ಲಿರುವ ಅಣೆಕಟ್ಟುಗಳ’ ಪಟ್ಟಿಗೆ ತಂದು ಅದರ ಸಂಗ್ರಹಣೆಯನ್ನು 136 ಅಡಿಗಳಿಗೆ ಸೀಮಿತಗೊಳಿಸಿತು. ಅಂದಿನಿಂದ ಸಮಸ್ಯೆಯು ಅಣೆಕಟ್ಟಿನ ಸುರಕ್ಷತೆಗೆ ಸ್ಥಳಾಂತರಗೊಂಡಿದೆ. ಏತನ್ಮಧ್ಯೆ, 2007 ರಲ್ಲಿ ಕೇರಳದ ಸಚಿವ ಸಂಪುಟ ಹೊಸ ಅಣೆಕಟ್ಟಿನ ಪ್ರಾಥಮಿಕ ಕೆಲಸಕ್ಕೆ ಅನುಮತಿ ನೀಡಿತು. ತಮಿಳುನಾಡು ಈ ಕ್ರಮದ ವಿರುದ್ಧ ಸುಪ್ರೀಂಕೋರ್ಟ್‌ಗೆ ಅರ್ಜಿ ಸಲ್ಲಿಸಿತು. 2010 ರಲ್ಲಿ, ಅಣೆಕಟ್ಟಿನ ಸುರಕ್ಷತೆಯನ್ನು ಪರಿಶೀಲಿಸಲು ಸುಪ್ರೀಂಕೋರ್ಟ್ ಅಧಿಕಾರ ಸಮಿತಿಯನ್ನು ರಚಿಸಿತು. ಆದಾಗ್ಯೂ, 2012 ರಲ್ಲಿ, ಅಣೆಕಟ್ಟಿನ ರಚನೆಯನ್ನು ಸುರಕ್ಷಿತವೆಂದು ಉಲ್ಲೇಖಿಸಿ ತಜ್ಞರ ಸಮಿತಿಯ ವರದಿಯನ್ನು ಎದುರಿಸಲು ಐಐಟಿ ದೆಹಲಿ ಮತ್ತು ಐಐಟಿ ರೂರ್ಕಿಯ ತಜ್ಞರ ಸಮಿತಿಯಿಂದ ದಾಖಲೆಯ ಡೇಟಾವನ್ನು ತರಬೇಕೆಂದ ಕೇರಳದ ಮನವಿಯನ್ನು ಸುಪ್ರೀಂಕೋರ್ಟ್ ತಿರಸ್ಕರಿಸಿತು.
2021 ರ ಅಕ್ಟೋಬರ್‌ನಲ್ಲಿ ಸುಪ್ರೀಂಕೋರ್ಟ್, ನ್ಯಾಯಾಲಯ ನೇಮಿಸಿದ ಮೇಲ್ವಿಚಾರಣಾ ಸಮಿತಿಯು 139.50 ಅಡಿಗಳನ್ನು ಅನುಮತಿಸುವ ಮಟ್ಟವೆಂದು ಸೂಚಿಸಿದೆ . ಸಮಿತಿಯ ಶಿಫಾರಸನ್ನು ಎರಡೂ ರಾಜ್ಯಗಳು ಪಾಲಿಸುವಂತೆ ನಿರ್ದೇಶಿಸಿತು. ತಮಿಳುನಾಡು 2014 ರಲ್ಲಿ ಸುಪ್ರೀಂಕೋರ್ಟ್ ನಿಗದಿಪಡಿಸಿದಂತೆ ಮಟ್ಟವನ್ನು 142 ಅಡಿಗಳಿಗೆ ಹೆಚ್ಚಿಸಬೇಕೆಂದು ಬಯಸಿತ್ತು, ಆದರೆ ಕೇರಳವು ತಿಂಗಳ ಅಂತ್ಯದವರೆಗೆ ನಿಗದಿಪಡಿಸಿದ ನಿಯಮದ ಪ್ರಕಾರ 139 ಅಡಿ ಒಳಗೆ ಮಟ್ಟ ಇರಬೇಕೆಂದು ಹೇಳಿತು.
ಇದನ್ನೂ ಓದಿ: ಮತಾಂತರ ಆರೋಪ: ಮಧ್ಯಪ್ರದೇಶದ ಕ್ಯಾಥೋಲಿಕ್ ಶಾಲೆ ಮೇಲೆ ವಿಶ್ವ ಹಿಂದೂ ಪರಿಷತ್, ಬಜರಂಗದಳ ಕಾರ್ಯಕರ್ತರ ದಾಳಿ