ಕೇರಳ ರಾಜ್ಯಾದ್ಯಂತ ಹಲಾಲ್ ಆಹಾರ (Halal Food) ಮತ್ತು ರೆಸ್ಟೋರೆಂಟ್ಗಳಲ್ಲಿ ಹಾಕುವ ಹಲಾಲ್ ಬೋರ್ಡ್ಗಳನ್ನು ನಿಷೇಧಿಸಬೇಕು ಎಂದು ಅಲ್ಲಿನ ರಾಜ್ಯ ಸರ್ಕಾರಕ್ಕೆ ಬಿಜೆಪಿ ಆಗ್ರಹಿಸಿದೆ. ಇತ್ತೀಚೆಗೆ ಶಬರಿಮಲೆಯಲ್ಲಿ ತಯಾರಾಗುವ ಪ್ರಸಾದಲ್ಲಿ ಹಲಾಲ್ ಪ್ರಮಾಣೀಕೃತ ಬೆಲ್ಲ ಬಳಸಲಾಗುತ್ತದೆ ಎಂದು ಆರೋಪಿಸಿ ವಿಶ್ವ ಹಿಂದು ಪರಿಷತ್ ರಾಜ್ಯ ಅಧ್ಯಕ್ಷ ಎಸ್.ಜೆ.ಆರ್.ಕುಮಾರ್ ಹೈಕೋರ್ಟ್ ಮೆಟ್ಟಿಲೇರಿದ್ದಾರೆ. ಅಷ್ಟೇ ಅಲ್ಲ, ಆಹಾರವನ್ನು ಅಪವಿತ್ರಗೊಳಿಸಲು ಇಸ್ಲಾಂ ಮೌಲ್ವಿಗಳು ಅದರ ಮೇಲೆ ಉಗುಳುತ್ತಾರೆ ಎಂಬುದೊಂದು ಸುದ್ದಿಯೂ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿದೆ. ಇದೀಗ ಬಿಜೆಪಿ ಕೇರಳ ಸರ್ಕಾರವನ್ನು ಹೀಗೆಂದು ಆಗ್ರಹಿಸಿದೆ.
ಈ ಬಗ್ಗೆ ಮಾಧ್ಯಮಗಳೊಂದಿಗೆ ಮಾತನಾಡಿದ ಬಿಜೆಪಿ ರಾಜ್ಯ ಪ್ರಧಾನಕಾರ್ಯದರ್ಶಿ ಪಿ.ಸುಧೀರ್, ಹಲಾಲ್ ಕೂಡ ತ್ರಿವಳಿ ತಲಾಖ್ನಂತೆ ಒಂದು ಅನಿಷ್ಠ ಪದ್ಧತಿ. ಹಲಾಲ್ ಒಂದು ಧಾರ್ಮಿಕ ಪದ್ಧತಿಯೆಂದು ಬಿಜೆಪಿ ಎಂದಿಗೂ ನಂಬುವುದಿಲ್ಲ. ಇಸ್ಲಾಮಿಕ್ ಪಂಡಿತರೂ ಕೂಡ ಇದನ್ನು ಧಾರ್ಮಿಕ ಪದ್ಧತಿ ಎಂದು ಭಾವಿಸಿದ್ದಾರೆಂದು ನಾವು ನಂಬುವುದಿಲ್ಲ. ಆದರೆ ಹಲಾಲ್ಗೆ ಧಾರ್ಮಿಕ ಸ್ವರೂಪ ಕೊಡುವ ಮೂಲಕ ಉಗ್ರವಾದಿಗಳ ಗುಂಪುಗಳು ಕೇರಳದಲ್ಲಿ ಕೋಮುವಾದ ಸೃಷ್ಟಿಸಲು ಪ್ರಯತ್ನಿಸುತ್ತಿವೆ ಎಂದು ಆರೋಪಿಸಿದ್ದಾರೆ. ರಾಜ್ಯದಲ್ಲಿ ಈಗ ಹಲಾಲ್ ಬೋರ್ಡ್ಗಳು ಹೆಚ್ಚುತ್ತಿವೆ. ಹಾಗೊಮ್ಮೆ ಧರ್ಮದ ಪರವಾಗಿಯೇ ಇದನ್ನು ಮಾಡುತ್ತಿದ್ದರೆ, ಇದನ್ನು ಸರಿಪಡಿಸಲು ಇಸ್ಲಾಮಿಕ್ ಪಂಡಿತರು ಕೂಡಲೇ ಪ್ರಯತ್ನ ಮಾಡಬೇಕು ಎಂದು ಆಗ್ರಹಿಸಿದ್ದಾರೆ.
ಬಿಜೆಪಿ ಕೇರಳ ರಾಜ್ಯಾಧ್ಯಕ್ಷ ಕೆ.ಸುರೇಂದ್ರನ್ ಕೂಡ ಇದನ್ನೇ ಹೇಳಿದ್ದಾರೆ. ಕೇರಳದಲ್ಲಿ ನಡೆಯುತ್ತಿರುವ ಈ ಹಲಾಲ್ ಸಂಬಂಧಿತ ವಿದ್ಯಮಾನ ಆಕಸ್ಮಿಕವೂ ಅಲ್ಲ, ಅದು ಮುಗ್ಧತೆಯಿಂದ ಆಗುತ್ತಿರುವುದೂ ಅಲ್ಲ. ಧರ್ಮದ ಹೆಸರಲ್ಲಿ ಕೆಲವು ಉಗ್ರಗಾಮಿಗಳು ಈ ಹಲಾಲ್ ಸಂಸ್ಕೃತಿಯನ್ನು ಉತ್ತೇಜಿಸುತ್ತಿವೆ. ಕೇರಳದಲ್ಲಿ ಜನರನ್ನು ವಿಭಜಿಸಿ, ಸಮಾಜದಲ್ಲಿ ಉದ್ವಿಗ್ನತೆ ಸೃಷ್ಟಿಸುವುದು ಇದರ ಹಿಂದಿನ ಸ್ಪಷ್ಟವಾದ ಉದ್ದೇಶ ಎಂದು ಆರೋಪಿಸಿದ್ದಾರೆ. ಇನ್ನು ಕೇರಳ ಪ್ರಾದೇಶಿಕ ಕ್ರಿಶ್ಚಿಯನ್ ಪಕ್ಷ ಕೇರಳ ಕಾಂಗ್ರೆಸ್ (ಎಂ) ಪಿ.ಸಿ.ಜಾರ್ಜ್ ಕೂಡ ಈ ವಿಚಾರದಲ್ಲಿ ಬಿಜೆಪಿ ನಾಯಕರಿಗೆ ಬೆಂಬಲ ನೀಡಿದ್ದಾರೆ. ಹಲಾಲ್ ಆಹಾರವೆಂಬುದು ಧಾರ್ಮಿಕ ಮೂಲಭೂತವಾದದ ಭಾಗವಾಗುತ್ತಿದೆ ಎಂದು ತಿಳಿಸಿದ್ದಾರೆ.
ಇದನ್ನೂ ಓದಿ: ಹಾಲಕೆರೆ ಶ್ರೀ ಅಭಿನವ ಅನ್ನದಾನೇಶ್ವರ ಸ್ವಾಮಿಗಳು ಲಿಂಗೈಕ್ಯ; ಅಂತಿಮ ದರ್ಶನಕ್ಕೆ ವ್ಯವಸ್ಥೆ
Published On - 8:54 pm, Mon, 22 November 21