Narendra Modi: ಮೋದಿ ಕುರಿತ ಬಿಬಿಸಿ ಸಾಕ್ಷ್ಯಚಿತ್ರ; ನಿವೃತ್ತ ಜಡ್ಜ್, ರಾಯಭಾರಿಗಳು ಸೇರಿ ಗಣ್ಯರಿಂದ ಭಾರೀ ವಿರೋಧ
ಮತ್ತೊಮ್ಮೆ ಬಿಬಿಸಿಯು ಬಣ್ಣ ಬಣ್ಣದ ಋಣಾತ್ಮಕತೆಯನ್ನು ಬಿತ್ತಲು ಹೊರಟಿದೆ. ಭಾರತದ ಬಗ್ಗೆ ಅದಕ್ಕಿರುವ ತಪ್ಪುಕಲ್ಪನೆಗಳು ಸಾಕ್ಷ್ಯಚಿತ್ರದ ರೂಪದಲ್ಲಿ ಹೊರಹೊಮ್ಮಿದೆ ಎಂದು ಗಣ್ಯರು ಪತ್ರದಲ್ಲಿ ಉಲ್ಲೇಖಿಸಿದ್ದಾರೆ.
ನವದೆಹಲಿ: ಪ್ರಧಾನ ಮಂತ್ರಿ ನರೇಂದ್ರ ಮೋದಿ (Narendra Modi) ಮತ್ತು 2002ರ ಗುಜರಾತ್ ಗಲಭೆಗಳಿಗೆ ಸಂಬಂಧಿಸಿ ‘ಬಿಬಿಸಿ’ ನಿರ್ಮಿಸಿರುವ ಸಾಕ್ಷ್ಯಚಿತ್ರಕ್ಕೆ (BBC Documentary) ನಿವೃತ್ತ ಜಡ್ಜ್ಗಳು, ರಾಯಭಾರಿಗಳು, ಮಾಜಿ ಸೇನಾಧಿಕಾರಿಗಳು ಹಾಗೂ ಗಣ್ಯರ ವಲಯದಿಂದಲೂ ಭಾರೀ ವಿರೋಧ ವ್ಯಕ್ತವಾಗಿದೆ. ಸಾಕ್ಷ್ಯಚಿತ್ರವನ್ನು ಆಕ್ಷೇಪಿಸಿ ಸುಮಾರು 302 ಮಂದಿ ಗಣ್ಯರು ತಮ್ಮ ಸಹಿಯುಳ್ಳ ಪತ್ರ ಬಿಡುಗಡೆ ಮಾಡಿದ್ದು, ‘ಬಿಬಿಸಿ’ಯ ನಡೆಯ ಬಗ್ಗೆ ಆಕ್ಷೇಪ ವ್ಯಕ್ತಪಡಿಸಿದ್ದಾರೆ. ಮೋದಿ ಕುರಿತ ಸಾಕ್ಷ್ಯಚಿತ್ರವು ಬ್ರಿಟಿಷ್ ವಸಾಹತುಶಾಹಿ ಪುನರುತ್ಥಾನದ ಭ್ರಮೆಗಳಿಂದ ಕೂಡಿದೆ ಎಂದು ಅವರು ಟೀಕಿಸಿದ್ದಾರೆ. ಬಿಬಿಸಿ ಸರಣಿ ಮಾತ್ರವಲ್ಲ. ಈವರೆಗಿನ ಇತರ ಭ್ರಮಾಧೀನ ವರದಿಗಳನ್ನೂ ನಾವು ಗಮನಿಸಿದ್ದೇವೆ. ಇವುಗಳು ಜನರ ಇಚ್ಛೆಗೆ ಅನುಸಾರ ನಡೆಯುವ ಭಾರತದ ಪ್ರಜಾಪ್ರಭುತ್ವವನ್ನೇ ಪ್ರಶ್ನಿಸುವಂತಿವೆ. 75 ವರ್ಷಗಳ ಹಳೆ ಪ್ರಜಾಪ್ರಭುತ್ವದ ಆಧಾರ ಸ್ತಂಭವನ್ನೇ ಪ್ರಶ್ನಿಸುವಂತಿವೆ ಎಂದು ಗಣ್ಯರು ಪತ್ರದಲ್ಲಿ ಉಲ್ಲೇಖಿಸಿದ್ದಾರೆ.
ಮತ್ತೊಮ್ಮೆ ಬಿಬಿಸಿಯು ಬಣ್ಣ ಬಣ್ಣದ ಋಣಾತ್ಮಕತೆಯನ್ನು ಬಿತ್ತಲು ಹೊರಟಿದೆ. ಭಾರತದ ಬಗ್ಗೆ ಅದಕ್ಕಿರುವ ತಪ್ಪುಕಲ್ಪನೆಗಳು ಸಾಕ್ಷ್ಯಚಿತ್ರದ ರೂಪದಲ್ಲಿ ಹೊರಹೊಮ್ಮಿದೆ. ಬ್ರಿಟಿಷ್ ವಸಾಹತುಶಾಹಿಯು ಒಡೆದು ಆಳುವ ನೀತಿಯನ್ನು ಅನುಸರಿಸಿತ್ತು. ಇದೀಗ ಮತ್ತೆ ಬ್ರಿಟಿಷ್ ರಾಜ್ ಸ್ಥಾಪಿಸಲು ಮುಂದಾಗಿದೆ. ಹಿಂದೂ-ಮುಸ್ಲಿಮರನ್ನು ವಿಭಜಿಸುವ ಮೂಲಕ ಬ್ರಿಟಿಷ್ ರಾಜ್ ನೀತಿ ಅನುಸರಿಸಲು ಮುಂದಾಗಿದೆ ಎಂದು ಗಣ್ಯರು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಇದನ್ನೂ ಓದಿ: ಪಿಎಂ ಮೋದಿ ಕುರಿತ ಬಿಬಿಸಿ ವಿಮರ್ಶಾತ್ಮಕ ಸಾಕ್ಷ್ಯಚಿತ್ರ: ಟ್ವಿಟರ್, ಯೂಟ್ಯೂಬ್ ಪ್ರಸಾರಕ್ಕೆ ಕೇಂದ್ರ ನಿರ್ಬಂಧ
ಆರೋಪಿಸಿದಂತೆ, ವರದಿಯಾಗಿರುವಂತೆ ಎಂಬ ಹಲವು ಪದಗಳು ಸಾಕ್ಷ್ಯಚಿತ್ರದಲ್ಲಿ ಬಳಕೆಯಾಗಿದೆಯೇ ವಿನಃ ವಾಸ್ತವಿಕವಾಗಿ ಎಂಬುದಿಲ್ಲ. ಅಸ್ಪಷ್ಟತೆ ಮತ್ತು ಆಧಾರರಹಿತವಾಗಿದೆ. ಸ್ವಾಭಾವಿಕವಾಗಿ ಸುಳ್ಳೆಂಬುದು ತಿಳಿದಿದ್ದರೂ ವಾಸ್ತವದಲ್ಲಿ ಪ್ರಚೋದನೆ ನೀಡಲು ಯತ್ನಿಸಲಾಗಿದೆ. ಇದು ಬಿಬಿಸಿಯ ದುಷ್ಕೃತ್ಯಗಳನ್ನು ಬಹಿರಂಗಪಡಿಸುವುದರ ಜತೆಗೆ ಸಾಕ್ಷ್ಯಚಿತ್ರ ನಿರ್ಮಿಸಲು ಪ್ರೇರಣೆ ಯಾರು ಎಂಬುದನ್ನು ಪ್ರಶ್ನಿಸುವಂತೆ ಮಾಡಿದೆ ಎಂದು ಗಣ್ಯರ ಪತ್ರದಲ್ಲಿ ಉಲ್ಲೇಖಿಸಲಾಗಿದೆ.
ಬಿಬಿಸಿ ಸಾಕ್ಷ್ಯಚಿತ್ರವನ್ನು ಕೇಂದ್ರ ಸರ್ಕಾರ ಈಗಾಗಲೇ ಬಲವಾಗಿ ಖಂಡಿಸಿದೆ. ಈ ಮಧ್ಯೆ, ಬಿಬಿಸಿ ಸಾಕ್ಷ್ಯಚಿತ್ರದ ಲಿಂಕ್‌ಗಳನ್ನು ತೆಗೆದುಹಾಕುವಂತೆ ಕೇಂದ್ರ ಸರ್ಕಾರವು ಟ್ವಿಟರ್ ಮತ್ತು ಯೂಟ್ಯೂಬ್‌ಗೆ ಆದೇಶಿಸಿದೆ ಎಂದು ಮೂಲಗಳು ತಿಳಿಸಿವೆ.
ಮತ್ತಷ್ಟು ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
Published On - 5:23 pm, Sat, 21 January 23