‘ಲಸಿಕೆ ಬಗೆಗಿನ ವದಂತಿಗಳಿಗೆ ಕಿವಿಗೊಡಬೇಡಿ’ ದೇಶವಾಸಿಗಳಿಗೆ ಪ್ರಧಾನಿ ನರೇಂದ್ರ ಮೋದಿ ಮನವಿ
2020ರ ಕೊನೆಯ ದಿನ ಗುಜರಾತ್ನ ರಾಜ್ಕೋಟ್ನಲ್ಲಿ ಏಮ್ಸ್ ಘಟಕಕ್ಕೆ ಶಿಲಾನ್ಯಾಸ ಮಾಡಿದ ಪ್ರಧಾನಿ ನರೇಂದ್ರ ಮೋದಿ, ಕೊರೊನಾ ಲಸಿಕೆ ಕುರಿತು ವದಂತಿಗಳಿಗೆ ಕೊವಿಗೊಡದಿರಲು ಮನವಿ ಮಾಡಿದರು. ಕೊರೊನಾ ವಾರಿಯರ್ಸ್ಗಳನ್ನು ಸ್ಮರಿಸುವಂತೆ ಕರೆ ನೀಡಿದರು.
ದೆಹಲಿ: ಕೊರೊನಾ ಲಸಿಕೆ ವಿತರಣೆ ಆರಂಭಗೊಂಡ ನಂತರ ಲಸಿಕೆ ಕುರಿತು ವದಂತಿಗಳು ಹೆಚ್ಚಬಹುದು. ದೇಶವಾಸಿಗಳು ದಯವಿಟ್ಟು ಲಸಿಕೆ ಕುರಿತ ವದಂತಿಗಳಿಗೆ ಕಿವಿಗೊಡಬೇಡಿ ಎಂದು ಪ್ರಧಾನಿ ನರೇಂದ್ರ ಮೋದಿ ಮನವಿ ಮಾಡಿದರು.
ಗುಜರಾತ್ನ ರಾಜ್ಕೋಟ್ನಲ್ಲಿ ಏಮ್ಸ್ ಘಟಕಕ್ಕೆ ವರ್ಚುವಲ್ ಮೂಲಕ ಶಿಲಾನ್ಯಾಸ ಮಾಡಿದ ಅವರು ‘ಜಗತ್ತಿನ ಅತಿ ದೊಡ್ಡ ಕೊರೊನಾ ಲಸಿಕೆ ವಿತರಣಾ ವ್ಯವಸ್ಥೆಯನ್ನು ಆರಂಭಿಸಲು ಸರ್ಕಾರ ಸಿದ್ಧತೆ ನಡೆಸುತ್ತಿದೆ. ಈ ಮೊದಲು ಕೊರೊನಾ ಸೋಂಕಿಗೆ ‘ಔಷಧವಿಲ್ಲ, ಎಚ್ಚರಿಕೆ ಇರಲಿ’ ಎಂದು ಹೇಳುತ್ತಿದ್ದೆವು. ಆದರೆ ಈಗ, ‘ಔಷಧವಿದೆ, ಜೊತೆಗೆ ಎಚ್ಚರಿಕೆಯೂ ಇರಲಿ’ ಎಂದು ಘೋಷಿಸುತ್ತೇನೆ. ಈ ವರ್ಷದ ಕೊನೆಯ ದಿನವನ್ನು ಕೊರೊನಾ ವಾರಿಯರ್ಗಳ ಸ್ಮರಣೆಗೆ ಮೀಸಲಿಡೋಣ’ ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದರು.
ಕೊರೊನಾ ವಾರಿಯರ್ಗಳ ಸ್ಮರಣೆ ಕೊರೊನಾ ವಾರಿಯರ್ಗಳನ್ನು ಸ್ಮರಿಸಿದ ಪ್ರಧಾನಿ ನರೇಂದ್ರ ಮೋದಿ, ಆರೋಗ್ಯದ ಪ್ರಾಮುಖ್ಯತೆಯನ್ನು ಕೊರೊನಾ ಮನದಟ್ಟುಮಾಡಿದೆ. ಕೊರೊನಾ ಲಸಿಕೆ ವಿತರಣೆಯಲ್ಲಿ ಕೊರೊನಾ ವಾರಿಯರ್ಗಳಿಗೆ ಆದ್ಯತೆ ನೀಡಲಾಗುವುದು. ಆರೋಗ್ಯ ಸೌಲಭ್ಯಗಳು ಎಲ್ಲಾ ವರ್ಗದ ಜನರಿಗೂ ಕೈಗೆಟುಕುವ ವ್ಯವಸ್ಥೆ ಏರ್ಪಡಿಸಲು ಸರ್ಕಾರ ಬದ್ಧವಾಗಿದೆ’ ಎಂದು ಮನವಿ ಮಾಡಿದರು.
ಜಾಗತಿಕವಾಗಿ ಭಾರತನ್ನು ಆರೋಗ್ಯ ಕೇಂದ್ರವಾಗಿ ರೂಪಿಸಬೇಕಿದೆ. ಆರೋಗ್ಯ ಕ್ಷೇತ್ರದಲ್ಲಿ ಮೂಲಭೂತ ಸೌಕರ್ಯಗಳನ್ನು ಅಭಿವೃದ್ಧಿಪಡಿಸುವ ಯೋಜನೆಗಳನ್ನು ರೂಪಿಸಬೇಕಿದೆ. ಭವಿಷ್ಯದಲ್ಲಿ ಭಾರತ ವಿಶ್ವದ ಆರೋಗ್ಯ ಕೇಂದ್ರವಾಗಲಿದೆ. 2020 ರಲ್ಲಿ ಆರೋಗ್ಯ ಕ್ಷೇತ್ರದಲ್ಲಿ ಎದುರಾದ ಸವಾಲುಗಳನ್ನು ಧೈರ್ಯದಿಂದ ಎದುರಿಸಿದ್ದೇವೆ. 2021ರಲ್ಲಿ ಈ ಧೈರ್ಯವನ್ನು ಇಮ್ಮಡಿಗೊಳಿಸಿಕೊಳ್ಳಬೇಕಿದೆ ಎಂದು ಹೇಳಿದರು.