ಪಂಜಾಬ್​ ರೈತರ ಬೇಡಿಕೆಗಳಿಗೆ ಭಾಗಶಃ ಒಪ್ಪಿಗೆ: ಜನವರಿ ನಾಲ್ಕಕ್ಕೆ ಮತ್ತೊಂದು ಸಭೆ

ಕನಿಷ್ಠ ಬೆಂಬಲ ಬೆಲೆ ನೀಡುವ ವಿಚಾರದಲ್ಲಿ ಸರ್ಕಾರ ಕೆಲ ಬೇಡಿಕೆಯನ್ನು ರೈತರ ಮುಂದಿಟ್ಟಿತ್ತು ಎನ್ನಲಾಗಿದೆ. ಆದರೆ, ಈ ಮೂರು ಕೃಷಿ ಕಾಯ್ದೆಯನ್ನುತೆಗೆದು ಹಾಕುವವರೆಗೆ ನಾವು ಪಟ್ಟು ಬಿಡುವುದಿಲ್ಲ ಎನ್ನುವ ಎಚ್ಚರಿಕೆಯನ್ನು ರೈತರು ನೀಡಿದ್ದಾರೆ.

ಪಂಜಾಬ್​ ರೈತರ ಬೇಡಿಕೆಗಳಿಗೆ ಭಾಗಶಃ ಒಪ್ಪಿಗೆ: ಜನವರಿ ನಾಲ್ಕಕ್ಕೆ ಮತ್ತೊಂದು ಸಭೆ
Follow us
ರಾಜೇಶ್ ದುಗ್ಗುಮನೆ
| Updated By: Ghanashyam D M | ಡಿ.ಎಂ.ಘನಶ್ಯಾಮ

Updated on:Dec 30, 2020 | 9:34 PM

ನವದೆಹಲಿ: ರೈತರು ಹಾಗೂ ಕೇಂದ್ರ ಸರ್ಕಾರದ ನಡುವೆ ನಡೆದ ಆರನೇ ಹಂತದ ಮಾತುಕತೆಯಲ್ಲಿ ಇದೇ ಮೊದಲ ಬಾರಿಗೆ ಧನಾತ್ಮಕ ಸುದ್ದಿ ಹೊರ ಬಿದ್ದಿದೆ. ಪ್ರತಿಭಟನಾ ರೈತರ ನಾಲ್ಕು ಬೇಡಿಕೆಯಲ್ಲಿ ಎರಡು ಬೇಡಿಕೆಗೆ ಕೇಂದ್ರ ಸರ್ಕಾರ ಸಮ್ಮತಿ ನೀಡಿದೆ. ಇನ್ನೂ ಎರಡು ಬೇಡಿಕೆ ಈಡೆರುವವರೆಗೆ ನಾವು ಪ್ರತಿಭಟನೆ ಮುಂದುವರಿಸುತ್ತೇವೆ ಎಂದು ರೈತ ಸಂಘಟನೆಗಳು ಹೇಳಿವೆ.  ಜನವರಿ ನಾಲ್ಕರಂದು ರೈತರು ಹಾಗೂ ಪ್ರತಿಭಟನಾಕಾರರು ಮತ್ತೊಮ್ಮೆ ಸಭೆ ಸೇರುತ್ತಿದ್ದಾರೆ.

ವಿಜ್ಞಾನ ಭವನದಲ್ಲಿ ಇಂದು ಕೇಂದ್ರ ಸರ್ಕಾರ ಸಭೆ ಹಮ್ಮಿಕೊಂಡಿತ್ತು. 41 ರೈತ ಸಂಘಟನೆಗಳ ಪ್ರತಿನಿಧಿಗಳು ಕೃಷಿ ಸಚಿವ ನರೇಂದ್ರ ಸಿಂಗ್ ತೋಮರ್​, ರೈಲ್ವೆ ಸಚಿವ ಪೀಯೂಷ್​ ಗೋಯಲ್​ ಹಾಗೂ ಕೆಲ ಹಿರಿಯ ನಾಯಕರು ಸಭೆಯಲ್ಲಿ ಪಾಲ್ಗೊಂಡಿದ್ದರು. ಸಭೆ ಮುಗಿದ ನಂತರ ಮಾಧ್ಯಮದ ಜೊತೆ ಮಾತನಾಡಿದ ನರೇಂದ್ರ ಸಿಂಗ್ ತೋಮರ್, ಇಂದಿನ ಸಭೆಯಲ್ಲಿ ನಾಲ್ಕು ಅಜೆಂಡಾಗಳಿದ್ದವು. ಈ ಪೈಕಿ, ಎಲೆಕ್ಟ್ರಸಿಟಿ ಆ್ಯಕ್ಟ್​ ಹಾಗೂ ಹುಲ್ಲು ಸುಡುವವರಿಗೆ ಶಿಕ್ಷೆ ನೀಡುವ ವಿಚಾರಕ್ಕೆ ಒಪ್ಪಿಗೆ ಸೂಚಿಸಿದ್ದೇವೆ. ಈ ಮೂಲಕ ರೈತರ ಎರಡು ಬೇಡಿಕೆ ಈಡೇರಿಸಿದ್ದೇವೆ. ನಾವು ನಮ್ಮ ಮಾತುಕತೆಯನ್ನು ಮುಂದುವರಿಸುತ್ತೇವೆ. ಜನವರಿ ನಾಲ್ಕರಂದು 2 ಗಂಟೆಗೆ ಮತ್ತೊಂದು ಸಭೆ ಇದೆ. ಚರ್ಚೆಗೆ ಬಾಕಿ ಇರುವ ಮತ್ತೆರಡು ವಿಚಾರಗಳನ್ನು ಅಂದು ಬಗೆಹರಿಸಿಕೊಳ್ಳುತ್ತೇವೆ, ಎಂದಿದ್ದಾರೆ.  ಈ ಮೂಲಕ ಹೊಸ ವರ್ಷಕ್ಕೆ ರೈತರ ಪ್ರತಿಭಟನೆ ಪೂರ್ಣಗೊಳ್ಳುವ ಸೂಚನೆ ನೀಡಿದ್ದಾರೆ.

ಕನಿಷ್ಠ ಬೆಂಬಲ ಬೆಲೆ ನೀಡುವ ವಿಚಾರದಲ್ಲಿ ಸರ್ಕಾರ ಕೆಲ ಬೇಡಿಕೆಯನ್ನು ರೈತರ ಮುಂದಿಟ್ಟಿತ್ತು ಎನ್ನಲಾಗಿದೆ. ಆದರೆ, ಈ ಮೂರು ಕೃಷಿ ಕಾಯ್ದೆಯನ್ನುತೆಗೆದು ಹಾಕುವವರೆಗೆ ನಾವು ಪಟ್ಟು ಬಿಡುವುದಿಲ್ಲ ಎನ್ನುವ ಎಚ್ಚರಿಕೆಯನ್ನು ರೈತರು ನೀಡಿದ್ದಾರೆ.

ರೈತರ ಬೇಡಿಕೆ ಏನು?

ಕೇಂದ್ರದ 3 ಕೃಷಿ ಕಾಯ್ದೆಗಳನ್ನು ಕೂಡಲೇ ರದ್ದು ಮಾಡಬೇಕು. ಕೃಷಿ ಆಯೋಗದ ಶಿಫಾರಸು ಪ್ರಕಾರ ಕೃಷಿ ಉತ್ಪನ್ನದ ಬೆಂಬಲ ಬೆಲೆ ನೀಡಿಕೆಗೆ ಕಾನೂನು ಬದ್ಧ ಗ್ಯಾರಂಟಿ ನೀಡಬೇಕು. NCR ಹಾಗೂ ಸುತ್ತಲಿನ ಪ್ರದೇಶದ ವಾಯುಗುಣಮಟ್ಟ ನಿರ್ವಹಣೆ ಸುಗ್ರೀವಾಜ್ಞೆಗೆ ತಿದ್ದುಪಡಿ ತರಬೇಕು. ರೈತರಿಗೆ ಈ‌ ಕಾಯಿದೆಯಡಿ ದಂಡವನ್ನು ವಿಧಿಸಬಾರದು. ರೈತರ ಹಿತ ರಕ್ಷಣೆಗೆ ವಿದ್ಯುತ್ ತಿದ್ದುಪಡಿ ಮಸೂದೆ 2020 ಕ್ಕೆ ತಿದ್ದುಪಡಿ ತರಬೇಕು ಎನ್ನುವುದು ಪ್ರಮುಖ ಬೇಡಿಕೆಗಳಾಗಿವೆ.

ಕೃಷಿ ಕಾಯ್ದೆ ವಿರುದ್ಧ ರೈತರ ಹೋರಾಟ: 7ನೇ ಸುತ್ತಿನ ಮಾತುಕತೆಗೆ ಸರ್ಕಾರ ಸಿದ್ಧತೆ, ಇಂದಾದರೂ ಈಡೇರುತ್ತಾ ರೈತರ ಬೇಡಿಕೆಗಳು?

Published On - 8:52 pm, Wed, 30 December 20