AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಕೃಷಿ ಕಾಯ್ದೆ ಖಂಡಿಸಿ ಭಾರತ್ ಬಂದ್ : 32 ಸ್ಥಳಗಳಲ್ಲಿ ರೈಲು ಸಂಚಾರಕ್ಕೆ ಅಡ್ಡಿ, 4 ಶತಾಬ್ದಿ ರೈಲು ರದ್ದು

Bharat Bandh: ಶುಕ್ರವಾರ ಬೆಳಗ್ಗೆ 32 ಪ್ರದೇಶಗಳಲ್ಲಿ ರೈಲು ಸಂಚಾರಕ್ಕೆ ಅಡ್ಡಿಯಾಗಿದ್ದು 4 ಶತಾಬ್ದಿ ರೈಲು ರದ್ದುಗೊಂಡಿದೆ ಎಂದು ಭಾರತೀಯ ರೈಲ್ವೆ ಹೇಳಿದೆ. ಪಂಜಾಬ್, ಹರ್ಯಾಣ ಮತ್ತು ದೆಹಲಿಯ 31 ಪ್ರದೇಶಗಳಲ್ಲಿ ರೈತರು ಪ್ರತಿಭಟನೆ ನಿರತರಾಗಿದ್ದಾರೆ.

ಕೃಷಿ ಕಾಯ್ದೆ ಖಂಡಿಸಿ ಭಾರತ್ ಬಂದ್ : 32 ಸ್ಥಳಗಳಲ್ಲಿ ರೈಲು ಸಂಚಾರಕ್ಕೆ ಅಡ್ಡಿ, 4 ಶತಾಬ್ದಿ ರೈಲು ರದ್ದು
ರೈಲ್ವೆ ಹಳಿಗೆ ಇಳಿದು ರೈತರ ಪ್ರತಿಭಟನೆ
Follow us
ರಶ್ಮಿ ಕಲ್ಲಕಟ್ಟ
|

Updated on:Mar 26, 2021 | 12:21 PM

ನವದೆಹಲಿ: ಕೇಂದ್ರ ಸರ್ಕಾರದ ಕೃಷಿ ಕಾಯ್ದೆ ವಿರುದ್ಧ ರೈತರು ದೆಹಲಿ ಗಡಿಭಾಗದಲ್ಲಿ ಕಳೆದ ನಾಲ್ಕು ತಿಂಗಳಿನಿಂದ ಪ್ರತಿಭಟನೆ ನಡೆಸುತ್ತಿದ್ದಾರೆ. ಕೃಷಿ ಕಾಯ್ದೆಗೆ ವಿರೋಧ ಮತ್ತು ರೈತರ ಪ್ರತಿಭಟನೆಗೆ ಬೆಂಬಲ ಸೂಚಿಸಿ ಭಾರತೀಯ ಕಿಸಾನ್ ಮೋರ್ಚಾ (SKM) ಕರೆ ನೀಡಿದ ಭಾರತ್ ಬಂದ್ ಗೆ ಮಿಶ್ರ ಪ್ರತಿಕ್ರಿಯೆ ವ್ಯಕ್ತವಾಗಿದೆ. ಶುಕ್ರವಾರ ಬೆಳಗ್ಗೆ 32 ಪ್ರದೇಶಗಳಲ್ಲಿ ರೈಲು ಸಂಚಾರಕ್ಕೆ ಅಡ್ಡಿಯಾಗಿದ್ದು 4 ಶತಾಬ್ದಿ ರೈಲು ರದ್ದುಗೊಂಡಿದೆ ಎಂದು ಭಾರತೀಯ ರೈಲ್ವೆ ಹೇಳಿದೆ. ಪಂಜಾಬ್, ಹರ್ಯಾಣ ಮತ್ತು ದೆಹಲಿಯ 31 ಪ್ರದೇಶಗಳಲ್ಲಿ ರೈತರು ಪ್ರತಿಭಟನೆ ನಿರತರಾಗಿದ್ದಾರೆ. ಅಂಬಾಲ ಮತ್ತು ಫಿರೋಜ್​ಪುರ್ ವಿಭಾಗದಲ್ಲಿ ರೈಲು ಸಂಚಾರಕ್ಕೆ ಅಡ್ಡಿಯಾಗಿದೆ ಎಂದು ಉತ್ತರ ವಿಭಾಗದ ರೈಲ್ವೆ ಹೇಳಿದೆ. ಅಮೃತ್​ಸರ್​ನಲ್ಲಿ ಪ್ರತಿಭಟನಾ ನಿರತ ರೈತರು ರೈಲು ಹಳಿಯಲ್ಲಿ ಧರಣಿ ಕೂತು ರೈಲು ಸಂಚಾರಕ್ಕೆ ಅಡ್ಡಿ ಪಡಿಸಿದ್ದಾರೆ. ಬರ್ನಾಲದಲ್ಲಿ ರೈತರು ರೈಲಿಗೆ ತಡೆಯೊಡ್ಡಿದ್ದಾರೆ.

ಪಂಜಾಬ್, ಹರ್ಯಾಣದಲ್ಲಿ ಬಂದ್​ಗೆ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದ್ದು, ಚಂಡೀಗಢದಲ್ಲಿ ಸಾಮಾನ್ಯರ ಜನಜೀವನವನ್ನು ಇದು ಭಾದಿಸಿಲ್ಲ.ದೆಹಲಿ, ಚಂಡಿಗಢ, ಫಿರೋಜ್ ಪುರ್ ಮತ್ತು ಅಮೃತಸರ ರೈಲು ನಿಲ್ದಾಣದ ಬಳಿ ರೈತರು ಪ್ರತಿಭಟನೆ ನಡೆಸಿದ್ದು 30 ರೈಲುಗಳಿಗೆ ತಡೆಯೊಡ್ಡಿದ್ದಾರೆ. ಗಾಜಿಪುರ್ ಗಡಿಭಾಗದಲ್ಲಿರುವ ರಾಷ್ಟ್ರೀಯ ಹೆದ್ದಾರಿ ಬಳಿ ರೈತರು ಪ್ರತಿಭಟನೆ ನಡೆಸಿದ್ದಾರೆ. ರೈತರ ಚಳವಳಿಗೆ ತಡೆಯೊಡ್ಡಲು ಪೊಲೀಸರು ಬ್ಯಾರಿಕೇಡ್​ಗಳನ್ನು ಹಾಕಿದ್ದಾರೆ.

ಆಂಧ್ರಪ್ರದೇಶದಲ್ಲಿ ಎಡಪಕ್ಷದ ನಾಯಕರು ಭಾರತ್ ಬಂದ್​ಗೆ ಬೆಂಬಲ ಘೋಷಿಸಿ ವಿಜಯವಾಡದಲ್ಲಿ ಮೆರವಣಿಗೆ ನಡೆಸಿದ್ದಾರೆ. ವಿಶಾಖಪಟ್ಟಣಂ ಉಕ್ಕು ಘಟಕ (VSP) ಖಾಸಗೀಕರಣಗೊಳಿಸುವ ಕೇಂದ್ರ ಸರ್ಕಾರದ ನಿರ್ಧಾರದ ವಿರುದ್ಧವೂ ಎಡಪಕ್ಷ ಕಿಡಿ ಕಾರಿದೆ. ದೆಹಲಿಯಲ್ಲಿ ಕಳೆದ ನಾಲ್ಕು ತಿಂಗಳುಗಳಿಂದ ಪ್ರತಿಭಟನೆ ನಡೆಸುತ್ತಿರುವ ರೈತರನ್ನು ಪ್ರಧಾನಿ ನರೇಂದ್ರ ಮೋದಿ ಭೇಟಿ ಮಾಡದಿರುವುದನ್ನು ಸಿಪಿಐ ರಾಜ್ಯ ಕಾರ್ಯದರ್ಶಿ ರಾಮಕೃಷ್ಣ ಖಂಡಿಸಿದ್ದಾರೆ . ವಿಎಸ್​ಪಿ ಖಾಸಗೀಕರಣ ವಿರೋಧಿಸಿ ನಡೆಯುತ್ತಿರುವ ಚಳವಳಿ ಜನಾಂದೋಲವಾಗಿ ಮಾರ್ಪಟ್ಟಿದೆ. ಜನಾಂದೋಲ ಮಾತ್ರ ಆರ್ ಐಎನ್ ಎಲ್ ಖಾಸಗೀಕರಣವನ್ನು ತಡೆಯಬಲ್ಲದು ಎಂದು ಸಿಪಿಎಂ ರಾಜ್ಯ ಕಾರ್ಯದರ್ಶಿ ಮಧು ಹೇಳಿದ್ದಾರೆ.

ಸತ್ಯಾಗ್ರಹದ ಮೂಲಕವೇ  ಅತ್ಯಾಚಾರ, ಅನ್ಯಾಯ ಮತ್ತು ಅಹಂಕಾರ ಕೊನೆಯಾಗುತ್ತದೆ  ಎಂಬುದಕ್ಕೆ ಭಾರತದ ಇತಿಹಾಸವೇ ಸಾಕ್ಷಿ. ಆಂದೋಲನ ದೇಶದ ಹಿತಕ್ಕಾಗಿರಲಿ ಮತ್ತು ಶಾಂತಿಪೂರ್ಣವಾಗಿರಲಿ ಎಂದು ರಾಹುಲ್ ಗಾಂಧಿ ಟ್ವೀಟ್ ಮಾಡಿದ್ದಾರೆ.

ಅಂಬಾಲದ ಶಹ್​ಪುರ್ ಬಳಿ ಜಿಟಿ ರಸ್ತೆ ಮತ್ತು ರೈಲ್ವೆ ಹಳಿಗೆ ಇಳಿದು ರೈತರು ಪ್ರತಿಭಟನೆ ಮಾಡಿದ್ದಾರೆ.

ಇದನ್ನೂ ಓದಿ: Bharat Bandh Today: ಭಾರತ್ ಬಂದ್; ಕರ್ನಾಟಕ ರಾಜ್ಯದಲ್ಲಿ ಸಾರಿಗೆ ಸಂಚಾರದಲ್ಲಿ ಇಲ್ಲ ಯಾವುದೇ ವ್ಯತ್ಯಯ

Published On - 12:07 pm, Fri, 26 March 21