Bharat Jodo Yatra: 3,570 ಕಿ.ಮೀ, 150 ದಿನ; ರಾಹುಲ್ ಗಾಂಧಿ ನೇತೃತ್ವದಲ್ಲಿ ಇಂದಿನಿಂದ ಭಾರತ್ ಜೋಡೋ ಯಾತ್ರೆ

| Updated By: ಸುಷ್ಮಾ ಚಕ್ರೆ

Updated on: Sep 07, 2022 | 12:36 PM

3,500 ಕಿಲೋಮೀಟರ್ ಉದ್ದದ ಈ ಭಾರತ್ ಜೋಡೋ ಯಾತ್ರೆಯನ್ನು ಕಾಂಗ್ರೆಸ್ ಕಳೆದ 1 ಶತಮಾನದಲ್ಲಿ ದೇಶದಲ್ಲಿ ನಡೆದ ಅತಿ ಉದ್ದದ ಪಾದಯಾತ್ರೆ ಎಂದು ಕರೆದಿದೆ. ಇಂದು ಸಂಜೆ 5 ಗಂಟೆಗೆ ರ್ಯಾಲಿಯೊಂದಿಗೆ ಈ ಯಾತ್ರೆಯನ್ನು ಪ್ರಾರಂಭಿಸಲಾಗುವುದು.

Bharat Jodo Yatra: 3,570 ಕಿ.ಮೀ, 150 ದಿನ; ರಾಹುಲ್ ಗಾಂಧಿ ನೇತೃತ್ವದಲ್ಲಿ ಇಂದಿನಿಂದ ಭಾರತ್ ಜೋಡೋ ಯಾತ್ರೆ
ರಾಹುಲ್ ಗಾಂಧಿ
Follow us on

ಚೆನ್ನೈ: ಇಂದು ಕನ್ಯಾಕುಮಾರಿಯಿಂದ ಕಾಂಗ್ರೆಸ್​ ಪಕ್ಷದ ‘ಭಾರತ್ ಜೋಡೋ ಯಾತ್ರೆ’ಗೆ (Bharat Jodo Yatra) ಚಾಲನೆ ನೀಡಲಿರುವ ಕಾಂಗ್ರೆಸ್ ಸಂಸದ ರಾಹುಲ್ ಗಾಂಧಿ (Rahul Gandhi) ತಮಿಳುನಾಡಿನ ಪೆರಂಬದೂರಿನಲ್ಲಿರುವ ತಮ್ಮ ತಂದೆ ಮತ್ತು ಮಾಜಿ ಪ್ರಧಾನಿ ರಾಜೀವ್ ಗಾಂಧಿ (Rajeev Gandhi) ಅವರ ಸ್ಮಾರಕಕ್ಕೆ ಭೇಟಿ ನೀಡಿದ್ದಾರೆ. ಕನ್ಯಾಕುಮಾರಿಯ ಮಹಾತ್ಮಗಾಂಧಿ ಮಂಟಪದಲ್ಲಿ ನಡೆಯಲಿರುವ ಸಮಾರಂಭದಲ್ಲಿ ರಾಹುಲ್ ಗಾಂಧಿ ಪಾಲ್ಗೊಳ್ಳಲಿದ್ದು, ತಮಿಳುನಾಡು ಮುಖ್ಯಮಂತ್ರಿ ಎಂ.ಕೆ ಸ್ಟಾಲಿನ್ ಅವರು ಭಾರತ್ ಜೋಡೋ ಯಾತ್ರೆಗೆ ಚಾಲನೆ ನೀಡಲು ಖಾದಿ ರಾಷ್ಟ್ರಧ್ವಜವನ್ನು ಹಸ್ತಾಂತರಿಸಲಿದ್ದಾರೆ ಎಂದು ಕಾಂಗ್ರೆಸ್ ಮೂಲಗಳು ತಿಳಿಸಿವೆ.

ಈ ಭಾರತ್ ಜೋಡೋ ಯಾತ್ರೆಯ ಪ್ರಮುಖ ಅಂಶಗಳು ಹೀಗಿವೆ:

  1. 3,500 ಕಿಲೋಮೀಟರ್ ಉದ್ದದ ಈ ಭಾರತ್ ಜೋಡೋ ಯಾತ್ರೆಯನ್ನು ಕಾಂಗ್ರೆಸ್ ಕಳೆದ 1 ಶತಮಾನದಲ್ಲಿ ದೇಶದಲ್ಲಿ ನಡೆದ ಅತಿ ಉದ್ದದ ಪಾದಯಾತ್ರೆ ಎಂದು ಕರೆದಿದೆ. ಇಂದು ಸಂಜೆ 5 ಗಂಟೆಗೆ ರ್ಯಾಲಿಯೊಂದಿಗೆ ಈ ಯಾತ್ರೆಯನ್ನು ಪ್ರಾರಂಭಿಸಲಾಗುವುದು. ಗುರುವಾರ ಬೆಳಿಗ್ಗೆ ‘ಪಾದಯಾತ್ರೆ’ ಪ್ರಾರಂಭವಾಗಲಿದೆ.
  2. ಈ ಯಾತ್ರೆಯು 150 ದಿನಗಳಲ್ಲಿ 3,570 ಕಿ.ಮೀ ಕ್ರಮಿಸಲಿದೆ. ಜಮ್ಮು ಮತ್ತು ಕಾಶ್ಮೀರದಲ್ಲಿ ಈ ಭಾರತ್ ಜೋಡೋ ಯಾತ್ರೆ ಕೊನೆಗೊಳ್ಳಲಿದೆ.
  3. ಭಾರತ್ ಜೋಡೋ ಯಾತ್ರೆಯ ಯಾತ್ರಿಗಳು ಯಾವುದೇ ಹೋಟೆಲ್‌ನಲ್ಲಿ ಉಳಿಯುವುದಿಲ್ಲ. ತಮ್ಮ ರಾತ್ರಿಗಳನ್ನು ಅವರು ಕಂಟೈನರ್‌ಗಳಲ್ಲಿ ಕಳೆಯುತ್ತಾರೆ. ಇಂತಹ ಒಟ್ಟು 60 ಕಂಟೈನರ್​ಗಳ ವ್ಯವಸ್ಥೆ ಮಾಡಲಾಗಿದೆ. ಕೆಲವು ಕಂಟೈನರ್‌ಗಳಲ್ಲಿ ಮಲಗುವ ಹಾಸಿಗೆಗಳು, ಶೌಚಾಲಯಗಳು ಮತ್ತು ಎಸಿಗಳನ್ನು ಸಹ ಅಳವಡಿಸಲಾಗಿದೆ.
  4. ಭದ್ರತಾ ಕಾರಣಗಳಿಂದಾಗಿ ರಾಹುಲ್ ಗಾಂಧಿ ಒಬ್ಬರೇ ಒಂದು ಕಂಟೈನರ್‌ನಲ್ಲಿ ಉಳಿದುಕೊಳ್ಳುತ್ತಾರೆ. ಇತರರು ಉಳಿದ ಕಂಟೈನರ್‌ಗಳನ್ನು ಹಂಚಿಕೊಳ್ಳುತ್ತಾರೆ.
  5. ಕಂಟೈನರ್‌ಗಳನ್ನು ಪ್ರತಿದಿನ ಹೊಸ ಸ್ಥಳದಲ್ಲಿ ನಿಲ್ಲಿಸಲಾಗುತ್ತದೆ. ಯಾತ್ರಿಗಳು ರಸ್ತೆಯಲ್ಲೇ ತಿಂಡಿ ತಿನ್ನಲಿದ್ದಾರೆ. ಅವರಿಗೆ ಲಾಂಡ್ರಿ ಸೇವೆಗಳನ್ನು ಒದಗಿಸಲಾಗುವುದು.
  6. ಭಾರತ್ ಜೋಡೋ ಯಾತ್ರೆಯ ಈ 5 ತಿಂಗಳುಗಳಲ್ಲಿ ಹವಾಮಾನ ಬದಲಾವಣೆಯನ್ನು ಗಮನದಲ್ಲಿಟ್ಟುಕೊಂಡು ವ್ಯವಸ್ಥೆಗಳನ್ನು ಮಾಡಲಾಗಿದೆ. ಯಾತ್ರಿಗಳು ಪ್ರತಿದಿನ 6ರಿಂದ 7 ಗಂಟೆಗಳ ಕಾಲ ನಡೆಯುತ್ತಾರೆ.
  7. 12 ರಾಜ್ಯಗಳು ಮತ್ತು ಎರಡು ಕೇಂದ್ರಾಡಳಿತ ಪ್ರದೇಶಗಳನ್ನು ಕವರ್ ಮಾಡಲು ಸಾವಿರಾರು ಕಾಂಗ್ರೆಸ್ ಕಾರ್ಯಕರ್ತರು ಮತ್ತು ನಾಯಕರು ಪ್ರತಿದಿನ 6-7 ಗಂಟೆಗಳ ಕಾಲ ನಡೆಯಲಿದ್ದಾರೆ. ಎಲ್ಲಾ ರಾಜ್ಯ ಘಟಕಗಳ ಅಧ್ಯಕ್ಷರು ಮತ್ತು ಕಾಂಗ್ರೆಸ್ ಶಾಸಕಾಂಗ ಪಕ್ಷದ ನಾಯಕರು ತಮ್ಮ ರಾಜ್ಯಗಳಲ್ಲಿ ‘ಭಾರತ್ ಜೋಡೋ ಯಾತ್ರೆ’ ನಡೆಸಲಿದ್ದಾರೆ. ಸುಮಾರು 150 ದಿನಗಳಲ್ಲಿ ಈ ಯಾತ್ರೆ ಪೂರ್ಣಗೊಳ್ಳಲಿದೆ.
  8. ಬೆಳಿಗ್ಗೆ ಮತ್ತು ಸಂಜೆ ಎರಡು ಬ್ಯಾಚ್ ಯಾತ್ರಿಗಳು ಇರುತ್ತಾರೆ. ಬೆಳಗಿನ ಬ್ಯಾಚ್ 7ರಿಂದ 10.30ರವರೆಗೆ ಮತ್ತು ಸಂಜೆ ಬ್ಯಾಚ್ 3.30ರಿಂದ 6.30ರವರೆಗೆ ನಡೆಯಲಿವೆ. ಪ್ರತಿನಿತ್ಯ 22ರಿಂದ 23 ಕಿ.ಮೀ ನಡೆಯಲು ಯೋಜನೆ ರೂಪಿಸಲಾಗಿದೆ.
  9. ಭಾರತ ಜೋಡೋ ಯಾತ್ರಿಗಳಲ್ಲಿ ಸುಮಾರು 30% ಮಹಿಳೆಯರಿರಲಿದ್ದಾರೆ. ಮಾರ್ಗ ನಕ್ಷೆಯ ಪ್ರಕಾರ, ಭಾರತ್ ಜೋಡೋ ಯಾತ್ರೆಯು ಈ 20 ಪ್ರಮುಖ ಸ್ಥಳಗಳನ್ನು ತಲುಪಲಿದೆ. ಕನ್ಯಾಕುಮಾರಿ, ತಿರುವನಂತಪುರಂ, ಕೊಚ್ಚಿ, ನಿಲಂಬೂರ್, ಮೈಸೂರು, ಬಳ್ಳಾರಿ, ರಾಯಚೂರು, ವಿಕಾರಾಬಾದ್, ನಾಂದೇಡ್, ಜಲಗಾಂವ್ ಜಮೋದ್, ಇಂದೋರ್, ಕೋಟಾ, ದೌಸಾ, ಅಲ್ವಾರ್, ಬುಲಂದ್‌ಶಹರ್, ದೆಹಲಿ, ಅಂಬಾಲಾ, ಪಠಾಣ್‌ಕೋಟ್, ಜಮ್ಮು, ಶ್ರೀನಗರಕ್ಕೆ ತಲುಪಲಿದೆ.
  10. ಈ ಭಾರತ್ ಜೋಡೋ ಯಾತ್ರೆಯು ಕೇರಳದಲ್ಲಿ 18 ದಿನ ಹಾಗೂ ಕರ್ನಾಟಕದಲ್ಲಿ 21 ದಿನಗಳ ಕಾಲ ನಡೆಯಲಿದೆ. ಕಾಂಗ್ರೆಸ್ ಪಕ್ಷದ ಅಧ್ಯಕ್ಷ ಸ್ಥಾನಕ್ಕೆ ಚುನಾವಣೆ ನಡೆಯುವಾಗ ಈ ಯಾತ್ರಿಗಳು ಕರ್ನಾಟಕದಲ್ಲಿ ಸಂಚರಿಸುತ್ತಿರುತ್ತಾರೆ.

ಇನ್ನಷ್ಟು ರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On - 8:50 am, Wed, 7 September 22