ರಾಹುಲ್ ಗಾಂಧಿ ಭೇಟಿ ಬೆನ್ನಲ್ಲೇ ಇಂದು ಕೇಜ್ರಿವಾಲ್, ಶರದ್ ಪವಾರ್ ಜೊತೆ ಸಿಎಂ ನಿತೀಶ್ ಕುಮಾರ್ ಭೇಟಿ

2024ರ ಲೋಕಸಭೆ ಚುನಾವಣೆಯಲ್ಲಿ ಆಡಳಿತಾರೂಢ ಬಿಜೆಪಿಯನ್ನು ಸೋಲಿಸುವ ತಂತ್ರವನ್ನು ನಿತೀಶ್ ಕುಮಾರ್ ಈ ವೇಳೆ ಚರ್ಚಿಸಲಿದ್ದಾರೆ.

ರಾಹುಲ್ ಗಾಂಧಿ ಭೇಟಿ ಬೆನ್ನಲ್ಲೇ ಇಂದು ಕೇಜ್ರಿವಾಲ್, ಶರದ್ ಪವಾರ್ ಜೊತೆ ಸಿಎಂ ನಿತೀಶ್ ಕುಮಾರ್ ಭೇಟಿ
ಜೆಡಿಯು ನಾಯಕ ನಿತೀಶ್ ಕುಮಾರ್Image Credit source: PTI
Follow us
TV9 Web
| Updated By: ಸುಷ್ಮಾ ಚಕ್ರೆ

Updated on: Sep 06, 2022 | 9:38 AM

ನವದೆಹಲಿ: ದೆಹಲಿಯಲ್ಲಿ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ (Rahul Gandhi) ಅವರೊಂದಿಗೆ ಸಭೆ ನಡೆಸಿದ ನಂತರ ಬಿಹಾರದ ಮುಖ್ಯಮಂತ್ರಿ ನಿತೀಶ್ ಕುಮಾರ್ (Nitish Kumar) ಇಂದು ಇತರ ಪ್ರಮುಖ ಪ್ರತಿಪಕ್ಷ ನಾಯಕರನ್ನು ಭೇಟಿ ಮಾಡುವ ನಿರೀಕ್ಷೆಯಿದೆ. ದೆಹಲಿ ಸಿಎಂ ಅರವಿಂದ್ ಕೇಜ್ರಿವಾಲ್ (Arvind Kejriwal) ಮತ್ತು ಎನ್‌ಸಿಪಿ ಮುಖ್ಯಸ್ಥ ಶರದ್ ಪವಾರ್ (Sharad Pawar) ಅವರನ್ನು ಸಿಎಂ ನಿತೀಶ್ ಕುಮಾರ್ ಭೇಟಿ ಮಾಡುವ ಸಾಧ್ಯತೆಯಿದೆ. ಈ ವೇಳೆ ಪ್ರತಿಪಕ್ಷಗಳನ್ನು ಒಗ್ಗೂಡಿಸುವ ಬಗ್ಗೆ ಚರ್ಚೆ ನಡೆಸಲಿದ್ದಾರೆ. ನಿನ್ನೆ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ, ಜೆಡಿಎಸ್ ನಾಯಕರಾದ ಹೆಚ್​ಡಿ ಕುಮಾರಸ್ವಾಮಿ, ಸಿಎಂ ಇಬ್ರಾಹಿಂ ಅವರನ್ನು ಭೇಟಿಯಾಗಿದ್ದ ನಿತೀಶ್ ಕುಮಾರ್ ಎಲ್ಲ ವಿರೋಧ ಪಕ್ಷಗಳು ಒಗ್ಗೂಡಿದರೆ ಒಳ್ಳೆಯದು. ನನಗೆ ಪ್ರಧಾನಿಯಾಗುವ ಆಸೆ ಮತ್ತು ಆಕಾಂಕ್ಷೆ ಇಲ್ಲ ಎಂದಿದ್ದರು.

ವರದಿಗಳ ಪ್ರಕಾರ, 2024ರ ಲೋಕಸಭೆ ಚುನಾವಣೆಯಲ್ಲಿ ಆಡಳಿತಾರೂಢ ಬಿಜೆಪಿಯನ್ನು ಸೋಲಿಸುವ ತಂತ್ರವನ್ನು ನಿತೀಶ್ ಕುಮಾರ್ ಈ ವೇಳೆ ಚರ್ಚಿಸಲಿದ್ದಾರೆ. ರಾಹುಲ್ ಗಾಂಧಿ ಅವರೊಂದಿಗಿನ ಭೇಟಿಯ ಸಂದರ್ಭದಲ್ಲಿ ನಿತೀಶ್ ಕುಮಾರ್ ಸಮಾನ ಮನಸ್ಕ ಪಕ್ಷಗಳನ್ನು ಒಟ್ಟುಗೂಡಿಸುವ ಸಾಧ್ಯತೆಯ ಬಗ್ಗೆಯೂ ಚರ್ಚಿಸಿದ್ದರು.

ಇದನ್ನೂ ಓದಿ: ದೆಹಲಿಯಲ್ಲಿ ರಾಹುಲ್ ಗಾಂಧಿ, ಹೆಚ್​ಡಿ ಕುಮಾರಸ್ವಾಮಿಯನ್ನು ಭೇಟಿ ಮಾಡಿದ ಬಿಹಾರ ಮುಖ್ಯಮಂತ್ರಿ ನಿತೀಶ್ ಕುಮಾರ್

ಕಾಂಗ್ರೆಸ್ ಮೂಲಗಳ ಪ್ರಕಾರ, ಬಿಹಾರದಲ್ಲಿ ಬಿಜೆಪಿಯೊಂದಿಗಿನ ಮೈತ್ರಿಯನ್ನು ಮುರಿದುಕೊಂಡ ನಂತರ ತಮ್ಮ ಜೆಡಿಯುಗೆ ಬೆಂಬಲಿಸಿದ್ದಕ್ಕೆ ರಾಹುಲ್ ಗಾಂಧಿಗೆ ನಿತೀಶ್ ಕುಮಾರ್ ಧನ್ಯವಾದ ಅರ್ಪಿಸಿದ್ದಾರೆ. 2024ರಲ್ಲಿ ನಿತೀಶ್ ಕುಮಾರ್ ಅವರನ್ನು ಪ್ರಧಾನಿ ಅಭ್ಯರ್ಥಿಯಾಗಿ ಬಿಂಬಿಸಲಾಗುವುದು ಎಂಬ ವದಂತಿಗಳ ಬೆನ್ನಲ್ಲೇ ನಿತೀಶ್ ಕುಮಾರ್ ಪ್ರಮುಖ ಪ್ರತಿಪಕ್ಷಗಳ ನಾಯಕರನ್ನು ಭೇಟಿಯಾಗಿರುವುದು ಕುತೂಹಲ ಮೂಡಿಸಿದೆ.

ನಿತೀಶ್ ಕುಮಾರ್ ಅವರು ಬಿಹಾರದಲ್ಲಿ ಬಿಜೆಪಿಯೊಂದಿಗಿನ ಮೈತ್ರಿ ಮುರಿದುಕೊಂಡು ಆರ್‌ಜೆಡಿಯೊಂದಿಗೆ ಹೊಸ ಮೈತ್ರಿ ಮಾಡಿಕೊಂಡ ನಂತರ ಬಿಜೆಪಿಯಿಂದ ಸಾಕಷ್ಟು ಟೀಕೆಗೆ ಗುರಿಯಾಗಿದ್ದಾರೆ. ಬಿಹಾರದಲ್ಲಿ ಬಿಜೆಪಿ ಮಹಾರಾಷ್ಟ್ರದಂತಹ” ಪರಿಸ್ಥಿತಿಯನ್ನು ಸೃಷ್ಟಿಸುತ್ತಿದೆ, ಇಡೀ ರಾಜ್ಯದ ಮೇಲೆ ನಿಯಂತ್ರಣ ಪಡೆದುಕೊಳ್ಳಲು ಪ್ರಯತ್ನಿಸುತ್ತಿದೆ ಎಂದು ನಿತೀಶ್ ಕುಮಾರ್ ಆರೋಪಿಸಿದ್ದರು.

ಇನ್ನಷ್ಟು ರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ