AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ದೆಹಲಿಯಲ್ಲಿ ರಾಹುಲ್ ಗಾಂಧಿಯನ್ನು ಭೇಟಿ ಮಾಡಿದ ನಿತೀಶ್ ಕುಮಾರ್, ದೇಶದ ಪ್ರಸ್ತುತ ರಾಜಕೀಯ ಪರಿಸ್ಥಿತಿ ಬಗ್ಗೆ ಚರ್ಚೆ

ಬಿಹಾರದಲ್ಲಿ ಅವರ ಜೆಡಿಯು ಎನ್‌ಡಿಎ ಜೊತೆಗಿನ ಸಂಬಂಧವನ್ನು ಮುರಿದುಕೊಂಡು ಆರ್‌ಜೆಡಿ, ಕಾಂಗ್ರೆಸ್ ಮತ್ತು ಇತರ ಪಕ್ಷಗಳೊಂದಿಗೆ ಮಹಾಘಟಬಂಧನ್ ಸರ್ಕಾರವನ್ನು ರಚಿಸಿದ ನಂತರ ಇದು ನಿತೀಶ್ ಕುಮಾರ್ ಅವರ ಮೊದಲ ಭೇಟಿಯಾಗಿದೆ.

ದೆಹಲಿಯಲ್ಲಿ ರಾಹುಲ್ ಗಾಂಧಿಯನ್ನು ಭೇಟಿ ಮಾಡಿದ ನಿತೀಶ್ ಕುಮಾರ್, ದೇಶದ ಪ್ರಸ್ತುತ ರಾಜಕೀಯ ಪರಿಸ್ಥಿತಿ ಬಗ್ಗೆ ಚರ್ಚೆ
ರಾಹುಲ್ ಗಾಂಧಿ
TV9 Web
| Updated By: ರಶ್ಮಿ ಕಲ್ಲಕಟ್ಟ|

Updated on:Sep 05, 2022 | 9:34 PM

Share

ಬಿಹಾರ ಮುಖ್ಯಮಂತ್ರಿ ನಿತೀಶ್ ಕುಮಾರ್ (Nitish Kumar) ಸೋಮವಾರ ನವದೆಹಲಿಯಲ್ಲಿ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ (Rahul Gandhi) ಅವರನ್ನು ಭೇಟಿ ಮಾಡಿದ್ದು ದೇಶದ ಪ್ರಸ್ತುತ ರಾಜಕೀಯ ಪರಿಸ್ಥಿತಿ ಮತ್ತು 2024 ರ ಸಾರ್ವತ್ರಿಕ ಚುನಾವಣೆಗೆ ಪಕ್ಷಗಳು ಸಜ್ಜಾಗುತ್ತಿರುವಾಗ ಪ್ರತಿಪಕ್ಷಗಳ ಏಕತೆಯನ್ನು ಕಾಪಾಡಿಕೊಳ್ಳುವ ಮಾರ್ಗಗಳ ಬಗ್ಗೆ ಚರ್ಚಿಸಿದ್ದಾರೆ ಎಂದು ವರದಿಯಾಗಿದೆ. ಈ ಭೇಟಿಯಲ್ಲಿ ನಿತೀಶ್ ಕುಮಾರ್ ತಾವು ಪ್ರಧಾನಿ ಆಕಾಂಕ್ಷಿಯಲ್ಲ ಎಂಬುದನ್ನು ಪುನರುಚ್ಛರಿಸಿದ್ದಾರೆ. ಬಿಹಾರದಲ್ಲಿ ಅವರ ಜೆಡಿಯು ಎನ್‌ಡಿಎ ಜೊತೆಗಿನ ಸಂಬಂಧವನ್ನು ಮುರಿದುಕೊಂಡು ಆರ್‌ಜೆಡಿ, ಕಾಂಗ್ರೆಸ್ ಮತ್ತು ಇತರ ಪಕ್ಷಗಳೊಂದಿಗೆ ಮಹಾಘಟಬಂಧನ್ ಸರ್ಕಾರವನ್ನು ರಚಿಸಿದ ನಂತರ ಇದು ನಿತೀಶ್ ಕುಮಾರ್ ಅವರ ಮೊದಲ ಭೇಟಿಯಾಗಿದೆ. ಬಿಹಾರ ಸರ್ಕಾರ ರಚನೆಗೆ ಕಾಂಗ್ರೆಸ್ ಬೆಂಬಲವನ್ನು ನೀಡಿದ್ದಕ್ಕಾಗಿ ಕುಮಾರ್, ರಾಹುಲ್ ಗಾಂಧಿ ಅವರಿಗೆ ಕೃತಜ್ಞತೆ ಸಲ್ಲಿಸಿದ್ದಾರೆ ಎಂದು ಎಎನ್ಐ ಸುದ್ದಿಸಂಸ್ಥೆ ವರದಿ ಮಾಡಿದೆ. ಈ ಭೇಟಿಯಲ್ಲಿ ಇಬ್ಬರೂ ನಾಯಕರು ಸಮಾನ ಮನಸ್ಕ ಪಕ್ಷಗಳನ್ನು ಒಟ್ಟುಗೂಡಿಸುವ ಸಾಧ್ಯತೆಯ ಬಗ್ಗೆ ಮತ್ತು 2024 ರ ಚುನಾವಣೆಯ ಕಾರ್ಯತಂತ್ರಗಳ ಕುರಿತು ಚರ್ಚೆಗಳನ್ನು ಮುಂದುವರಿಸುವ ಉದ್ದೇಶದ ಬಗ್ಗೆ ಮಾತನಾಡಿದರು ಎಂದು ವರದಿಯಾಗಿದೆ.

ಪ್ರತಿಪಕ್ಷಗಳು ಒಗ್ಗೂಡಿದರೆ ಉತ್ತಮ ವಾತಾವರಣ ನಿರ್ಮಾಣವಾಗಲಿದೆ. ನನಗೆ ಪ್ರಧಾನಿಯಾಗುವ ಯಾವುದೇ ಆಸೆ ಮತ್ತು ಆಕಾಂಕ್ಷೆ ಇಲ್ಲ ಎಂದು ಕುಮಾರ್ ಹೇಳಿರುವುದಾಗಿ ಎಎನ್‌ಐ ವರದಿ ಮಾಡಿದೆ. ಕುಮಾರ್ ದೆಹಲಿ ಪ್ರವಾಸದ ವೇಳೆ ಎನ್‌ಸಿಪಿ ಮುಖ್ಯಸ್ಥ ಸರದ್ ಪವಾರ್, ಎಎಪಿಯ ಅರವಿಂದ ಕೇಜ್ರಿವಾಲ್ ಮತ್ತು ಜೆಡಿಎಸ್ ವರಿಷ್ಠ ಎಚ್‌ಡಿ ಕುಮಾರಸ್ವಾಮಿ ಅವರನ್ನು ಭೇಟಿ ಮಾಡುವ ನಿರೀಕ್ಷೆಯಿದೆ. ಕುಮಾರ್ ಅವರು ಸಮಾಜವಾದಿ ಪಕ್ಷದ ಮುಖ್ಯಸ್ಥ ಅಖಿಲೇಶ್ ಯಾದವ್ ಮತ್ತು ಎಡಪಕ್ಷಗಳ ನಾಯಕರನ್ನು ಭೇಟಿಯಾಗಲಿದ್ದಾರೆ ಎಂದು ಸುದ್ದಿ ಸಂಸ್ಥೆ ಪಿಟಿಐ ವರದಿ ಮಾಡಿದೆ.

2024 ರಲ್ಲಿ ಕುಮಾರ್ ಅವರು ಪ್ರಧಾನಿ ಅಭ್ಯರ್ಥಿಯಾಗಬಹುದು ಮತ್ತು ಮುಂದಿನ ಲೋಕಸಭೆ ಚುನಾವಣೆಯಲ್ಲಿ ಬಿಜೆಪಿಯನ್ನು ಸೋಲಿಸಲು ಎಲ್ಲಾ ಪಕ್ಷಗಳನ್ನು ಒಗ್ಗೂಡಿಸುವ ಪ್ರಯತ್ನವಾಗಿ ಅವರ ಪ್ರಯತ್ನಗಳು ಕಂಡುಬರುತ್ತವೆ ಎಂಬ ಸುದ್ದಿಗಳ ನಡುವೆ ಈ ಭೇಟಿ ನಡೆದಿದೆ.

2024 ರ ಸಾರ್ವತ್ರಿಕ ಚುನಾವಣೆಯಲ್ಲಿ ಬಿಜೆಪಿಯನ್ನು ಸೋಲಿಸಲು ಅವರ ಪ್ರಯತ್ನಗಳನ್ನು ಮಾಡಿದ್ದಕ್ಕಾಗಿ ಕಾಂಗ್ರೆಸ್ ಪಕ್ಷ ಕುಮಾರ್ ಅವರನ್ನು ಶ್ಲಾಘಿಸಿದೆ.  ಪಾಟ್ನಾದಲ್ಲಿ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಪಕ್ಷದ ಅಲ್ಪಸಂಖ್ಯಾತ ಘಟಕದ ಮುಖ್ಯಸ್ಥ ಮತ್ತು ರಾಜ್ಯಸಭಾ ಸಂಸದ ಇಮ್ರಾನ್ ಪ್ರತಾಪ್‌ಘರ್ಹಿ ಇತ್ತೀಚೆಗಷ್ಟೇ ನಿತೀಶ್ ಕುಮಾರ್ ನಮ್ಮೊಂದಿಗೆ ಮೈತ್ರಿ ಮಾಡಿಕೊಂಡರು, ಅವರು ಉತ್ತಮ ಕೆಲಸ ಮಾಡುತ್ತಿದ್ದಾರೆ. ಬಿಜೆಪಿಯನ್ನು ಅಧಿಕಾರದಿಂದ ಕೆಳಗಿಳಿಸುವ ಉತ್ಸಾಹವನ್ನು ಕಾಂಗ್ರೆಸ್ ಅವರೊಂದಿಗೆ ಹಂಚಿಕೊಳ್ಳುತ್ತದೆ ಎಂದಿದ್ದರು.

Published On - 9:29 pm, Mon, 5 September 22