Bharat Ratna for LK Advani: ಎಲ್​​ಕೆ ಅಡ್ವಾಣಿಗೆ ಭಾರತ ರತ್ನ: ಪ್ರಧಾನಿ ಮೋದಿ ಘೋಷಣೆ

|

Updated on: Feb 03, 2024 | 12:25 PM

ಬಿಜೆಪಿಯ ಹಿರಿಯ ನಾಯಕ, ಮಾಜಿ ಉಪ ಪ್ರಧಾನಿ ಎಲ್​ಕೆ ಅಡ್ವಾಣಿ ಅವರು ದೇಶದ ಪರಮೋಚ್ಚ ಗೌರವವಾದ ಭಾರತ ರತ್ನಕ್ಕೆ ಭಾಜನರಾಗಿದ್ದಾರೆ. ತಮ್ಮ ರಾಜಕೀಯ ಗುರುವೂ ಆಗಿರುವ ಅಡ್ವಾಣಿ ಅವರಿಗೆ ಶನಿವಾರ ಭಾರತ ರತ್ನ ಘೋಷಣೆ ಮಾಡಿದ ಪ್ರಧಾನಿ ನರೇಂದ್ರ ಮೋದಿ, ಅಂಥ ಮಹಾನ್ ನಾಯಕನಿಂದ ಕಲಿಯಲು ಅಸಂಖ್ಯ ಅವಕಾಶಗಳು ದೊರೆತಿರುವುದು ಪುಣ್ಯ ವಿಶೇಷ ಎಂದು ಬಣ್ಣಿಸಿದ್ದಾರೆ.

Bharat Ratna for LK Advani: ಎಲ್​​ಕೆ ಅಡ್ವಾಣಿಗೆ ಭಾರತ ರತ್ನ: ಪ್ರಧಾನಿ ಮೋದಿ ಘೋಷಣೆ
ಎಲ್​ಕೆ ಅಡ್ವಾಣಿ ಜತೆ ಪ್ರಧಾನಿ ಮೋದಿ
Follow us on

ನವದೆಹಲಿ, ಫೆಬ್ರವರಿ 3: ಬಿಜೆಪಿಯ ಹಿರಿಯ ನಾಯಕ ಲಾಲ್ ಕೃಷ್ಣ ಅಡ್ವಾಣಿ (LK Advani) ಅವರಿಗೆ ದೇಶದ ಪರಮೋಚ್ಚ ಗೌರವವಾದ ಭಾರತ ರತ್ನ (Bharat Ratna) ನೀಡಿ ಗೌರವಿಸಲಾಗುವುದು ಎಂದು ಪ್ರಧಾನಿ ನರೇಂದ್ರ ಮೋದಿ (Narendra Modi) ಶನಿವಾರ ಘೋಷಣೆ ಮಾಡಿದ್ದಾರೆ. ಎಲ್​​ಕೆ ಅಡ್ವಾಣಿ ಜೀ ಅವರಿಗೆ ಭಾರತ ರತ್ನ ನೀಡುವ ಬಗ್ಗೆ ಮಾಹಿತಿ ಹಂಚಿಕೊಳ್ಳಲು ನನಗೆ ತುಂಬಾ ಸಂತೋಷವಾಗಿದೆ. ನಾನು ಕೂಡ ಅವರೊಂದಿಗೆ ಮಾತನಾಡಿ ಈ ಗೌರವಕ್ಕೆ ಪಾತ್ರರಾಗಿದ್ದಕ್ಕೆ ಅಭಿನಂದಿಸಿದ್ದೇನೆ. ನಮ್ಮ ಕಾಲದ ಅತ್ಯಂತ ಗೌರವಾನ್ವಿತ ರಾಜಕಾರಣಿಗಳಲ್ಲಿ ಅವರು ಒಬ್ಬರು. ಭಾರತದ ಅಭಿವೃದ್ಧಿಗೆ ಅವರ ಕೊಡುಗೆ ಸ್ಮರಣಾರ್ಹ. ತಳಮಟ್ಟದಲ್ಲಿ ಕೆಲಸ ಮಾಡುವುದರಿಂದ ಹಿಡಿದು ನಮ್ಮ ಉಪಪ್ರಧಾನಿಯಾಗಿ ದೇಶಸೇವೆ ಮಾಡುವವರೆಗಿನ ಜೀವನ ಅವರದು ಎಂದು ಪ್ರಧಾನಿ ಮೋದಿ ಬಣ್ಣಿಸಿದ್ದಾರೆ.

ಸಾರ್ವಜನಿಕ ಜೀವನದಲ್ಲಿ ಅಡ್ವಾಣಿ ಜೀಯವರ ದಶಕಗಳ ಸುದೀರ್ಘ ಸೇವೆಯು ಅಚಲವಾದ ಬದ್ಧತೆಯಿಂದ ಗುರುತಿಸಲ್ಪಟ್ಟಿದೆ. ಇಷ್ಟೇ ಅಲ್ಲದೆ, ಪಾರದರ್ಶಕತೆ ಮತ್ತು ಸಮಗ್ರತೆಗೆ ಹೆಸರಾಗಿದೆ. ಅದು ರಾಜಕೀಯ ನೀತಿಶಾಸ್ತ್ರದಲ್ಲಿ ಅನುಕರಣೀಯ ಮಾನದಂಡವನ್ನು ಹೊಂದಿಸಿದೆ. ಅವರು ರಾಷ್ಟ್ರೀಯ ಏಕತೆ ಮತ್ತು ಸಾಂಸ್ಕೃತಿಕ ಪುನರುತ್ಥಾನದ ವಿಚಾರದಲ್ಲಿ ದೇಶಕ್ಕೆ ಕೊಡುಗೆ ಸಲ್ಲಿಸಲು ಅಪ್ರತಿಮ ಪ್ರಯತ್ನ ಮಾಡಿದ್ದಾರೆ. ಅವರಿಗೆ ಭಾರತರತ್ನ ಪ್ರಶಸ್ತಿ ಪ್ರದಾನ ಮಾಡುವುದು ನನ್ನ ಪಾಲಿಗೆ ಅತ್ಯಂತ ಭಾವನಾತ್ಮಕ ಕ್ಷಣ. ಅವರೊಂದಿಗೆ ಸಂವಹನ ನಡೆಸಲು ಮತ್ತು ಅವರಿಂದ ಕಲಿಯಲು ನನಗೆ ಅಸಂಖ್ಯಾತ ಅವಕಾಶಗಳು ಸಿಕ್ಕಿರುವುದು ನನ್ನ ಪುಣ್ಯ ವಿಶೇಷ ಎಂದು ನಾನು ಯಾವಾಗಲೂ ಪರಿಗಣಿಸುತ್ತೇನೆ ಎಂದು ಸಾಮಾಜಿಕ ಮಾಧ್ಯಮ ಎಕ್ಸ್​ನಲ್ಲಿ ಮೋದಿ ಉಲ್ಲೇಖಿಸಿದ್ದಾರೆ.

ಅಡ್ವಾಣಿಗೆ ಭಾರತ ರತ್ನ ಘೋಷಣೆ ಬಗ್ಗೆ ಪ್ರಧಾನಿ ಮೋದಿ ಟ್ವೀಟ್

 

ಬಿಜೆಪಿಯ ಭೀಷ್ಮನಿಗೆ ಸಂದಿತು ಗೌರವ

ಅಟಲ್ ಬಿಹಾರಿ ವಾಜಪೇಯಿ ಅವರ ನೇತೃತ್ವದ ಎನ್​ಡಿಎ ಸರ್ಕಾರದಲ್ಲಿ ಉಪ ಪ್ರಧಾನಿಯಾಗಿ ಎಲ್​ಕೆ ಅಡ್ವಾಣಿ ಕಾರ್ಯನಿರ್ವಹಿಸಿದ್ದಾರೆ. 90 ರ ದಶಕದಲ್ಲಿ ದೇಶದಾದ್ಯಂತ ಹಮ್ಮಿಕೊಂಡಿದ್ದ ರಥಯಾತ್ರೆ ಮೂಲಕ ರಾಷ್ಟ್ರದಾದ್ಯಂತ ಸಂಚಲನ ಮೂಡಿಸಿದ್ದ ಎಲ್​ಕೆ ಅಡ್ವಾಣಿ, ಬಿಜೆಪಿಯ ಭೀಷ್ಮ ಎಂದೇ ಖ್ಯಾತರಾಗಿದ್ದಾರೆ.

ಮಾಜಿ ಪ್ರಧಾನಿ ಅಟಲ್ ಬಿಹಾರಿ ವಾಜಪೇಯಿ ಸಹ ಭಾರತ ರತ್ನ ಗೌರವಕ್ಕೆ ಪಾತ್ರರಾಗಿದ್ದರು. ಇದೀಗ ಅವರ ಸಮಕಾಲೀನ ರಾಜಕೀಯ ಧುರೀಣ ಅಡ್ವಾಣಿ ಅವರೂ ಭಾರತ ರತ್ನ ಪುರಸ್ಕಾರಕ್ಕೆ ಭಾಜನರಾದಂತಾಗಿದೆ.

ಪ್ರಧಾನಿ ನರೇಂದ್ರ ಮೋದಿ ಹಗೂ ಅಡ್ವಾಣಿ

ಸಮರ್ಪಣೆ ಮತ್ತು ದೃಢತೆಯ ಪ್ರತೀಕ ಅಡ್ವಾಣಿ: ರಾಜನಾಥ ಸಿಂಗ್

ನಮಗೆಲ್ಲರಿಗೂ ಸ್ಫೂರ್ತಿಯಾಗಿರುವ ಪೂಜ್ಯ ಲಾಲ್ ಕೃಷ್ಣ ಅಡ್ವಾಣಿಯವರಿಗೆ ಭಾರತ ರತ್ನ ನೀಡುವ ನಿರ್ಧಾರ ಅತೀವ ಸಂತಸ ಮತ್ತು ಸಂತಸ ತಂದಿದೆ ಎಂದು ರಕ್ಷಣಾ ಸಚಿವ ರಾಜನಾಥ್ ಸಿಂಗ್ ಹೇಳಿದ್ದಾರೆ. ಅಡ್ವಾಣಿ ಅವರು ರಾಜಕೀಯದಲ್ಲಿ ಶುದ್ಧತೆ, ಸಮರ್ಪಣೆ ಮತ್ತು ದೃಢತೆಯ ಪ್ರತೀಕ. ಅಡ್ವಾಣಿ ಅವರು ತಮ್ಮ ಸುದೀರ್ಘ ಸಾರ್ವಜನಿಕ ಜೀವನದಲ್ಲಿ ವಿವಿಧ ಕ್ಷೇತ್ರಗಳಲ್ಲಿ ದೇಶದ ಅಭಿವೃದ್ಧಿ ಮತ್ತು ರಾಷ್ಟ್ರ ನಿರ್ಮಾಣಕ್ಕೆ ನೀಡಿದ ಮಹತ್ವದ ಕೊಡುಗೆ ಅವಿಸ್ಮರಣೀಯ ಮತ್ತು ಸ್ಪೂರ್ತಿದಾಯಕವಾಗಿದೆ. ಭಾರತದ ಏಕತೆ ಮತ್ತು ಸಮಗ್ರತೆಯನ್ನು ಅಖಂಡವಾಗಿಡುವಲ್ಲಿ ಅವರು ಪ್ರಮುಖ ಪಾತ್ರ ವಹಿಸಿದ್ದಾರೆ. ರಾಷ್ಟ್ರೀಯ ನಾಯಕರಾಗಿ, ಅವರು ತಮ್ಮ ಪಾಂಡಿತ್ಯ, ಸಂಸದೀಯ ಮತ್ತು ಆಡಳಿತಾತ್ಮಕ ಸಾಮರ್ಥ್ಯಗಳಿಂದ ದೇಶ ಮತ್ತು ಪ್ರಜಾಪ್ರಭುತ್ವವನ್ನು ಬಲಪಡಿಸಿದ್ದಾರೆ. ಅವರಿಗೆ ಭಾರತ ರತ್ನ ಲಭಿಸಿರುವುದು ಪ್ರತಿಯೊಬ್ಬ ಭಾರತೀಯನಿಗೂ ಸಂತಸದ ವಿಚಾರ ಎಂದು ರಾಜನಾಥ್ ಸಿಂಗ್ ಹೇಳಿದ್ದಾರೆ.

ದೇಶದ ಪುನರ್​ ನಿರ್ಮಾಣದಲ್ಲಿ ಮಹತ್ವದ ಪಾತ್ರ: ಗಡ್ಕರಿ

ನಮ್ಮ ಗುರುಗಳಾದ ಲಾಲ್ ಕೃಷ್ಣ ಅಡ್ವಾಣಿ ಅವರಿಗೆ ಭಾರತ ರತ್ನ ಘೋಷಣೆ ಮಾಡಿರುವುದು ಸಂತಸ ತಂದಿದೆ ಎಂದು ಕೇಂದ್ರ ಸಚಿವ ನಿತಿನ್ ಗಡ್ಕರಿ ಹೇಳಿದ್ದಾರೆ. ಸ್ವಾತಂತ್ರ್ಯಾನಂತರ ದೇಶದ ಪುನರ್ ನಿರ್ಮಾಣದಲ್ಲಿ ಅಡ್ವಾಣಿ ಮಹತ್ವದ ಪಾತ್ರ ವಹಿಸಿದ್ದಾರೆ. ಅವರಿಗೆ ಭಾರತ ರತ್ನ ಘೋಷಿಸಿದ್ದಕ್ಕಾಗಿ ಪ್ರಧಾನಿ ನರೇಂದ್ರ ಮೋದಿ ಅವರಿಗೆ ಧನ್ಯವಾದಗಳು. ಅಡ್ವಾಣಿ ಅವರ ಆರೋಗ್ಯ ಮತ್ತು ದೀರ್ಘಾಯುಷ್ಯಕ್ಕಾಗಿ ಪ್ರಾರ್ಥಿಸುತ್ತೇನೆ ಎಂದು ಗಡ್ಕರಿ ಹೇಳಿದ್ದಾರೆ.

ಇದನ್ನೂ ಓದಿ: Karpoori Thakur: ಕರ್ಪೂರಿ ಠಾಕೂರ್​​ಗೆ ಮರಣೋತ್ತರ ಭಾರತ ರತ್ನ ಪ್ರಶಸ್ತಿ

ಇತ್ತೀಚೆಗೆ, ಬಿಹಾರದ ಮುಖ್ಯಮಂತ್ರಿ ಮತ್ತು ಇತರ ಹಿಂದುಳಿದ ವರ್ಗಗಳ ಪ್ರಮುಖ ನಾಯಕ ಕರ್ಪೂರಿ ಠಾಕೂರ್ ಅವರನ್ನು ಮರಣೋತ್ತರವಾಗಿ ಭಾರತ ರತ್ನಕ್ಕೆ ಆಯ್ಕೆ ಮಾಡಲಾಗಿತ್ತು.

ಭಾರತ ರತ್ನ ದೇಶದ ಅತ್ಯುನ್ನತ ನಾಗರಿಕ ಪ್ರಶಸ್ತಿ

ಭಾರತ ರತ್ನ ಪ್ರಶಸ್ತಿಯು ಭಾರತದ ಅತ್ಯುನ್ನತ ನಾಗರಿಕ ಪ್ರಶಸ್ತಿಯಾಗಿದೆ. ಇದನ್ನು ಮೊದಲು 1954 ರಲ್ಲಿ ಮಾಜಿ ರಾಷ್ಟ್ರಪತಿ ಡಾ. ಸರ್ವಪಲ್ಲಿ ರಾಧಾಕೃಷ್ಣನ್ ಅವರಿಗೆ ನೀಡಲಾಯಿತು. ಸಾರ್ವಜನಿಕ ಸೇವೆ, ಸಾಹಿತ್ಯ, ವಿಜ್ಞಾನ ಮತ್ತು ಕಲೆಯಂತಹ ಕ್ಷೇತ್ರಗಳಲ್ಲಿ ಅಸಾಧಾರಣ ಕೆಲಸ ಮಾಡಿದವರಿಗೆ ಭಾರತ ರತ್ನ ನೀಡಲಾಗುತ್ತದೆ. ಒಂದು ವರ್ಷದಲ್ಲಿ ಗರಿಷ್ಠ 3 ಜನರಿಗೆ ಭಾರತ ರತ್ನ ಪ್ರಶಸ್ತಿ ನೀಡಿ ಗೌರವಿಸಲಾಗುತ್ತದೆ. ಈ ಪ್ರಶಸ್ತಿಯನ್ನು ಭಾರತದ ರಾಷ್ಟ್ರಪತಿಗಳು ನೀಡುತ್ತಾರೆ.

ದೇಶದ ಪ್ರಮುಖ ಸುದ್ದಿಗಳನ್ನು ಓದಲು ಇದರ ಮೇಲೆ ಕ್ಲಿಕ್ ಮಾಡಿ

Published On - 11:43 am, Sat, 3 February 24