ಬಿಜೆಪಿಯ ಭೀಷ್ಮ ಲಾಲ ಕೃಷ್ಣ ಅಡ್ವಾಣಿ ಅವರಿಗೆ ದೇಶದ ಪರಮೋಚ್ಚ ಗೌರವವಾದ ಭಾರತ ರತ್ನ ನೀಡಿ ಗೌರವಿಸಲಾಗಿದೆ. ಈ ಕುರಿತು ಪ್ರಧಾನಿ ನರೇಂದ್ರ ಮೋದಿಯವರು ಟ್ವೀಟ್ ಮಾಡಿ ಸಂತಸ ವ್ಯಕ್ತಪಡಿಸಿದ್ದಾರೆ. ಹಾಗಿದ್ದರೆ ಬಿಜೆಪಿಯ ಹಿರಿಯ ನಾಯಕ ಎಲ್ಕೆ ಅಡ್ವಾಣಿ ಅವರ ಕುರಿತು ಕಿರು ಪರಿಚಯ ಚಿತ್ರ ಸಹಿತ ಇಲ್ಲಿದೆ...
ಲಾಲ್ ಕೃಷ್ಣ ಅಡ್ವಾಣಿ ಅವರು 1927 ನವೆಂಬರ್ 8 ಸ್ವತಂತ್ರ್ಯ ಪೂರ್ವ ಭಾರತದ ಸಿಂಧ್ ಪ್ರಾಂತ್ಯದ ಗೊರೆಗಾಂವ್ ನಲ್ಲಿ ಜನಿಸಿದರು.
ಎಲ್ಕೆ ಅಡ್ವಾಣಿ ಅವರು 1941ರಲ್ಲಿ ತಮ್ಮ 14ನೇ ವಯಸ್ಸಿನಲ್ಲಿ ರಾಷ್ಟ್ರೀಯ ಸ್ವಯಂಸೇವ ಸಂಘ (RSS)ಗೆ ಸೇರಿದರು. 1951 ರಲ್ಲಿ, ಅಡ್ವಾಣಿ ಅವರು ಶ್ಯಾಮ ಪ್ರಸಾದ್ ಮುಖರ್ಜಿ ಸ್ಥಾಪಿಸಿದ ಭಾರತೀಯ ಜನಸಂಘದ ಸದಸ್ಯರಾದರು. 1970 ರಲ್ಲಿ, ಅಡ್ವಾಣಿ ಅವರು ಮೊದಲ ಬಾರಿಗೆ ರಾಜ್ಯಸಭೆಯ ಸದಸ್ಯರಾದರು ಮತ್ತು 1989 ರವರೆಗೆ ನಾಲ್ಕು ಅವಧಿಗೆ ಸೇವೆ ಸಲ್ಲಿಸಿದರು.
1973 ರಲ್ಲಿ ಜನಸಂಘದ ಅಧ್ಯಕ್ಷರಾದರು ಮತ್ತು 1977 ರ ಸಾರ್ವತ್ರಿಕ ಚುನಾವಣೆಗೆ ಮೊದಲು ಜನಸಂಘವು ಜನತಾ ಪಕ್ಷದಲ್ಲಿ ವಿಲೀನಗೊಂಡಿತು. ಚುನಾವಣೆಯಲ್ಲಿ ಜನತಾ ಪಕ್ಷದ ಗೆಲುವಿನ ನಂತರ, ಅಡ್ವಾಣಿ ಕೇಂದ್ರ ಮಾಹಿತಿ ಮತ್ತು ಪ್ರಸಾರ ಖಾತೆಯ ಮಂತ್ರಿ ಮತ್ತು ರಾಜ್ಯಸಭೆಯ ಸದನದ ನಾಯಕರಾದರು.
1980 ರಲ್ಲಿ, ಅವರು ಅಟಲ್ ಬಿಹಾರಿ ವಾಜಪೇಯಿ ಅವರೊಂದಿಗೆ ಬಿಜೆಪಿಯ ಸ್ಥಾಪಕರಲ್ಲಿ ಒಬ್ಬರಾಗಿದ್ದರು. ಮತ್ತು ಮೂರು ಬಾರಿ ಪಕ್ಷದ ಅಧ್ಯಕ್ಷರಾಗಿ ಸೇವೆ ಸಲ್ಲಿಸಿದರು. ಅವರು 1989 ರಲ್ಲಿ ಮೊದಲ ಬಾರಿಗೆ ಲೋಕಸಭೆಗೆ ಆಯ್ಕೆಯಾದರು.
80ರ ದಶಕದಲ್ಲಿ ರಾಮ ಮಂದಿರಕ್ಕಾಗಿ ನಡೆದ ಚಳುವಳಿಯ ನೇತೃತ್ವವನ್ನು ಎಲ್.ಕೆ.ಅಡ್ವಾಣಿ ಮತ್ತು ಮುರಳಿ ಮನೋಹರ್ ಜೋಷಿ ವಹಿಸಿದ್ದರು. ಅಡ್ವಾಣಿ ಸೋಮನಾಥದಿಂದ ಅಯೋಧ್ಯೆಯವರೆಗೆ ‘ರಥಯಾತ್ರೆ’ ನಡೆಸಿದರು.
ಇದಾದ ಬಳಿಕ 1992 ಡಿ.6ರಂದು ಅಡ್ವಾಣಿ, ಜೋಷಿ, ಉಮಾ ಭಾರತಿ ನೇತೃತ್ವದ ಕರಸೇವಕರಿಂದ ಬಾಬರಿ ಮಸೀದಿ ಧ್ವಂಸ ನಡೆಯುತ್ತದೆ.
1998 ರಿಂದ 2004 ರವರೆಗೆ ಗೃಹ ವ್ಯವಹಾರಗಳ ಸಚಿವರಾಗಿದ್ದರು. ಮತ್ತು 2002 ರಿಂದ 2004 ರವರೆಗೆ ಉಪ ಪ್ರಧಾನ ಮಂತ್ರಿಯಾಗಿದ್ದರು. ಅವರು 2019 ರವರೆಗೆ ಭಾರತೀಯ ಸಂಸತ್ತಿನಲ್ಲಿ ಸೇವೆ ಸಲ್ಲಿಸಿದರು. ಪ್ರಮುಖ ರಾಜಕೀಯ ಪಕ್ಷವಾಗಿ ಬಿಜೆಪಿಯ ಬೆಳವಣಿಗೆಗೆ ಕಾರಣರಾಗಿದ್ದಾರೆ. 2015 ರಲ್ಲಿ, ಅವರಿಗೆ ಭಾರತದ ಎರಡನೇ ಅತ್ಯುನ್ನತ ನಾಗರಿಕ ಗೌರವವಾದ ಪದ್ಮವಿಭೂಷಣವನ್ನು ನೀಡಲಾಯಿತು.
Published On - 1:00 pm, Sat, 3 February 24