ರಸ್ತೆ ಮಾರ್ಗದಲ್ಲಿ ಪ್ರಧಾನಿ ಬರುತ್ತಾರೆ ಎಂದು ಪೊಲೀಸರು ಹೇಳಿದ್ದರೂ, ನಾವು ಪ್ರತಿಭಟನೆ ನಡೆಸಿದ್ದೇವೆ: ಸತ್ಯ ಒಪ್ಪಿಕೊಂಡ ರೈತ ಮುಖಂಡ
ಪ್ರಧಾನಮಂತ್ರಿ ನರೇಂದ್ರ ಮೋದಿಯರು ರಸ್ತೆ ಮಾರ್ಗದಲ್ಲೇ ಬರುತ್ತಾರೆ ಎಂದು ಮನವರಿಕೆ ಮಾಡಿಕೊಟ್ಟಿದ್ದರೆ ನಾವು ಖಾಲಿ ಮಾಡುತ್ತಿದ್ದೆವು ಎಂದೂ ರೈತ ಮುಖಂಡ ಹೇಳಿದ್ದಾರೆ.
ದೆಹಲಿ: ನಿನ್ನೆ ಪಂಜಾಬ್ನಲ್ಲಿ ಪ್ರಧಾನಮಂತ್ರಿ ನರೇಂದ್ರ ಮೋದಿಯವರ ಭದ್ರತಾ ಲೋಪವಾಗಿದೆ. ಹುಸ್ಸೇನಿವಾಲಾ ರಾಷ್ಟ್ರೀಯ ಹುತಾತ್ಮರ ಸ್ಮಾರಕ್ಕೆ ರಸ್ತೆ ಮಾರ್ಗದ ಮೂಲಕ ಹೊರಟಿದ್ದ ಅವರನ್ನು ತಡೆದಿದ್ದು ರೈತರ ಪ್ರತಿಭಟನೆ. ಪ್ರಧಾನಿ ಹೊರಟಿದ್ದ ರಸ್ತೆಯನ್ನು ರೈತರು ಬ್ಲಾಕ್ ಮಾಡಿದ್ದರಿಂದ ಅವರು ಫ್ಲೈಓವರ್ ಮೇಲೆ ಸುಮಾರು 20 ನಿಮಿಷ ಕಾಯುವಂತಾಯ್ತು. ನಂತರ ಅಲ್ಲಿಂದ ವಾಪಸ್ ದೆಹಲಿಗೆ ಬಂದರು. ಭದ್ರತೆ ಲೋಪವಾದ ಬಗ್ಗೆ ಬಿಜೆಪಿ ಪಂಜಾಬ್ ಸರ್ಕಾರದ, ಕಾಂಗ್ರೆಸ್ ವಿರುದ್ಧ ಆರೋಪ ಮಾಡಿದೆ. ಆದರೆ ಪಂಜಾಬ್ ಸಿಎಂ ಚರಣಜಿತ್ ಸಿಂಗ್ ಛನ್ನಿ, ಭದ್ರತೆಯಲ್ಲಿ ಯಾವುದೇ ಲೋಪವೂ ಆಗಿಲ್ಲ ಎಂದು ಸಮರ್ಥನೆ ಮಾಡಿಕೊಂಡಿದ್ದಾರೆ. ಈ ಮಧ್ಯೆ ಪ್ರತಿಭಟನೆ ನಡೆಸಿ ರಸ್ತೆ ತಡೆ ನಡೆಸಿದ್ದ ಭಾರತೀಯ ಕಿಸಾನ್ ಯೂನಿಯನ್ (ಕ್ರಾಂತಿಕಾರಿ) ಸಂಘ ತಮ್ಮ ಕಾರ್ಯಕರ್ತರು ಪ್ರಧಾನಿ ನರೇಂದ್ರ ಮೋದಿಯವರು ಹೊರಟಿದ್ದ ಮಾರ್ಗವನ್ನು ಬ್ಲಾಕ್ ಮಾಡಿದ್ದನ್ನು ಒಪ್ಪಿಕೊಂಡಿದೆ ಎಂದು ಟೈಮ್ಸ್ ನೌ ವರದಿ ಮಾಡಿದೆ.
ಭಾರತೀಯ ಕಿಸಾನ್ ಯೂನಿಯನ್ (BKU) ಮುಖ್ಯಸ್ಥ ಸುರ್ಜಿತ್ ಸಿಂಗ್ ಫೂಲ್ ಮಾತನಾಡಿ, ಕೇಂದ್ರ ಸರ್ಕಾರ ಇನ್ನೂ ಕೂಡ ಕನಿಷ್ಠ ಬೆಂಬಲ ಬೆಲೆ (MSP)ಗೆ ಕಾನೂನಾತ್ಮಕ ಗ್ಯಾರಂಟಿ ಕೊಡುವ ಸಂಬಂಧ ಸಮಿತಿ ರಚನೆ ಮಾಡಿಲ್ಲ. ಹೀಗಾಗಿ ನಾವು 12-13 ಜನ ಪ್ರಧಾನಿ ಮೋದಿ ಭೇಟಿ ಹಿನ್ನೆಲೆ ಪ್ರತಿಭಟನೆ ಮಾಡಲು ನಿರ್ಧರಿಸಿದ್ದೆವು. ನಾವು ಪ್ರಧಾನಿ ಮೋದಿ ರ್ಯಾಲಿ ನಡೆಸುವ ಸ್ಥಳದಿಂದ 8 ಕಿಮೀ ದೂರದಲ್ಲಿ ಪ್ರತಿಭಟನೆ ನಡೆಸುತ್ತಿದ್ದೆವು. ಆದರೆ ಕೊನೇ ಕ್ಷಣದಲ್ಲಿ ಪ್ರಧಾನಿ ಮೋದಿ ಮಾರ್ಗ ಬದಲಾವಣೆ ಆಗಿದ್ದರಿಂದ ಹೀಗಾಯಿತು ಎಂದು ತಿಳಿಸಿದ್ದಾರೆ ಎಂದು ಟೈಮ್ಸ್ ನೌ ತಿಳಿಸಿದೆ. ಸುಮಾರು 2 ಗಂಟೆ ಹೊತ್ತಿಗೆ ನಮಗೆ ಪೊಲೀಸರು ಹೇಳಿದರು. ಭಟಿಂಡಾ ವಿಮಾನ ನಿಲ್ದಾಣದಿಂದ ಪ್ರಧಾನಿ ರಸ್ತೆ ಮಾರ್ಗದಲ್ಲಿ ಬರುತ್ತಾರೆ ಎಂದು ತಿಳಿಸಿದರು. ಆದರೆ ನಾವು ಅದನ್ನು ನಂಬಲಿಲ್ಲ. ಪಿಎಂ ರ್ಯಾಲಿ ನಡೆಯಿದ್ದ ಜಾಗದ ಬಳಿಯೇ ದೊಡ್ಡ ಹೆಲಿಪ್ಯಾಡ್ ಇತ್ತು. ಹಾಗಾಗಿ ಅವರು ಹೆಲಿಕಾಪ್ಟರ್ನಲ್ಲೇ ಬರುತ್ತಾರೆ ಎಂದು ನಂಬ ನಂಬಿಕೆಯಾಗಿತ್ತು. ಪೊಲೀಸರು ನಮಗೆ ಹೇಳಿದರೂ ಕೂಡ, ನೀವು ಸುಳ್ಳು ಹೇಳುತ್ತೀರಿ ಎಂದು ಅವರಿಗೆ ಹೇಳಿದೆವು ಎಂದು ಸುರ್ಜಿತ್ ಸಿಂಗ್ ತಿಳಿಸಿದ್ದಾರೆ.
ನಾವು ಖಾಲಿ ಮಾಡುತ್ತಿದ್ದೆವು ಪ್ರಧಾನಮಂತ್ರಿ ನರೇಂದ್ರ ಮೋದಿಯರು ರಸ್ತೆ ಮಾರ್ಗದಲ್ಲೇ ಬರುತ್ತಾರೆ ಎಂದು ಮನವರಿಕೆ ಮಾಡಿಕೊಟ್ಟಿದ್ದರೆ ನಾವು ಖಾಲಿ ಮಾಡುತ್ತಿದ್ದೆವು. ನಾವು ಹೇಳಿದ ಮಾತು ಕೇಳದೆ ಇದ್ದಾಗ, ಪೊಲೀಸರು ಒಮ್ಮೆಲೇ ರೈತರನ್ನು ತಡೆಯಲು ಆಕ್ರಮಣಕಾರಿ ಮನೋಭಾವದಲ್ಲಿ ಮುಂದಾದರು. ಆದರೆ ಪೊಲೀಸರು ಮತ್ತು ರೈತರ ಸಂಖ್ಯೆ ಸಮಾನವಾಗಿದೆ. 12-13 ಸಂಘಟನೆಗಳ ರೈತರು ಅಲ್ಲಿ ಸೇರಿದ್ದರು. ನಾವು ಕೊನೆಗೆ ರಸ್ತೆಯನ್ನು ತೆರವುಗೊಳಿಸಲಿಲ್ಲ. ಒಟ್ಟಾರೆ ಎಲ್ಲ ಗೊಂದಲವಾಯಿತು ಎಂದು ಸುರ್ಜಿತ್ ಸಿಂಗ್ ತಿಳಿಸಿದ್ದಾರೆ.
ಇದನ್ನೂ ಓದಿ: ಪಂಜಾಬ್ನಲ್ಲಿ ಉಂಟಾದ ತೀವ್ರ ಸ್ವರೂಪದ ಭದ್ರತಾ ಲೋಪದಿಂದ ಪ್ರಧಾನಿ ಮೋದಿಯವರು ಱಲಿಯಲ್ಲಿ ಪಾಲ್ಗೊಳ್ಳದೆ ವಾಪಸ್ಸಾದರು
Published On - 8:07 am, Thu, 6 January 22