National Defence: ಶ್ರೀಲಂಕಾದಲ್ಲಿ ಚೀನಾದ ಬೇಹುಗಾರಿಕೆ ನೌಕೆ; ಭಾರತದ ಭದ್ರತೆಗೆ ಹಲವು ಆತಂಕ

| Updated By: Ghanashyam D M | ಡಿ.ಎಂ.ಘನಶ್ಯಾಮ

Updated on: Aug 21, 2022 | 12:03 PM

ಭಾರತೀಯ ನೌಕಾಪಡೆಯ ವಕ್ತಾರರ ಪ್ರಕಾರ, ಯುವಾನ್ ವಾಂಗ್ ಹಡಗು ಹಂಬಂಟೋಟಾ ಬಂದರಿನಿಂದ ಪಶ್ಚಿಮ ಗುಜರಾತ್ ಹೊರತುಪಡಿಸಿ ಭಾರತದ ಬಹುತೇಕ ಪ್ರದೇಶಗಳ ಮೇಲೆ ಬೇಹುಗಾರಿಕೆ ನಡೆಸಬಲ್ಲದು.

National Defence: ಶ್ರೀಲಂಕಾದಲ್ಲಿ ಚೀನಾದ ಬೇಹುಗಾರಿಕೆ ನೌಕೆ; ಭಾರತದ ಭದ್ರತೆಗೆ ಹಲವು ಆತಂಕ
ಯುವಾನ್ ವಾಂಗ್ ಹಡಗು
Follow us on

ಚೀನಾದ ಸರ್ವೇಕ್ಷಣಾ ಹಡಗು ಯುವಾನ್ ವಾಂಗ್ 5 (Yuan Wang) ಶ್ರೀಲಂಕಾದ ಹಂಬಂಟೋಟಾ ಬಂದರಿಗೆ ಆಗಮಿಸುವ ಮೂಲಕ ಹೊಸದೊಂದು ವಿವಾದಕ್ಕೆ ನಾಂದಿ ಹಾಡಿದೆ. ಯುವಾನ್ ವಾಂಗ್ 5 ಎನ್ನುವುದು ಚೀನಾದ (China) ಯುವಾನ್ ವಾಂಗ್ ಸರಣಿಯ ಐದನೇ ಟ್ರ್ಯಾಕಿಂಗ್ ಹಡಗಾಗಿದ್ದು, 2007ರ ಸೆಪ್ಟೆಂಬರ್ 29ರಂದು ಸೇವೆಗೆ ಸೇರ್ಪಡೆಗೊಂಡಿತು. ಜಿಯಾಂಗಾನ್ ಶಿಪ್‌ಯಾರ್ಡ್ ನಿರ್ಮಿಸಿರುವ ಈ ಹಡಗು 25,000 ಟನ್ ತೂಕ ಹೊಂದಿದೆ.

ಇದು ಚೀನಾದ ಓವರ್-ದ-ಹಾರಿಜಾನ್ ಅಗತ್ಯಗಳನ್ನು ಪೂರೈಸಲು ನಿರ್ಮಿಸಿರುವ ಹಡಗಾಗಿದೆ. ತನ್ನ ಕ್ಷಿಪಣಿ ಆಯುಧಗಳ ಸಾಮರ್ಥ್ಯವನ್ನು ಪೂರ್ಣವಾಗಿ ಪ್ರಯೋಗಿಸಲು ಚೀನಾದ ಪಿಎಲ್ಎ ಸೇನೆಗೆ ಒಂದು ಓವರ್​ದ ಹಾರಿಜಾನ್ ಟಾರ್ಗೆಟ್ ಡೆಸಿಗ್ನೇಷನ್ ವ್ಯವಸ್ಥೆಯ ಅಗತ್ಯವಿದೆ. ಇದನ್ನು ಪೂರೈಸಿಕೊಳ್ಳಲು ಚೀನಾ ಬಾಹ್ಯಾಕಾಶ ತಂತ್ರಜ್ಞಾನದ ಅಭಿವೃದ್ಧಿಗಾಗಿ ಅಪಾರ ಪ್ರಮಾಣದ ಹೂಡಿಕೆಗಳನ್ನು ಕೈಗೊಂಡಿದೆ. ಅಮೆರಿಕಾ ಮತ್ತು ರಷ್ಯಾ ಬಳಿ ಕ್ರಮವಾಗಿ 882 ಮತ್ತು 150 ಉಪಗ್ರಹಗಳಿದ್ದರೆ, ಚೀನಾದ ಬಳಿ 300 ಉಪಗ್ರಹಗಳಿವೆ. ಉಪಗ್ರಹಗಳನ್ನು ಚೀನಾದ ಎಂಟು ಕೇಂದ್ರಗಳಿಂದ ನಿಯಂತ್ರಿಸಲಾಗುತ್ತಿದ್ದು, ಹಲವು ನಿಯಂತ್ರಣ ಕೇಂದ್ರಗಳು ವಿದೇಶಗಳಲ್ಲಿ ಮತ್ತು ಯುವಾನ್ ವಾಂಗ್ ಕ್ಲಾಸ್ ಹಡಗುಗಳಲ್ಲಿ ಕಾರ್ಯ ನಿರ್ವಹಿಸುತ್ತಿವೆ. 2018ರಲ್ಲಿ ಚೀನಾ 39 ಉಡಾವಣಾ ರಾಕೆಟ್‌ಗಳನ್ನು ಪ್ರಯೋಗಿಸಿತ್ತು (38 ಯಶಸ್ವಿ ಉಡಾವಣೆ). 2019ರಲ್ಲಿ 34 (32 ಯಶಸ್ವಿ) ರಾಕೆಟ್ ಉಡಾವಣೆಗೊಳಿಸಿ, ಒಟ್ಟು 70ಕ್ಕೂ ಹೆಚ್ಚು ಉಪಗ್ರಹಗಳನ್ನು ಕಕ್ಷೆಗೆ ಜೋಡಿಸಿತ್ತು.

ಈ ಹಡಗು ಅತ್ಯಾಧುನಿಕ ಮಿಸೈಲ್ ರೇಂಜ್ ಇನ್ಸ್ಟ್ರುಮೆಂಟೇಷನ್ ಆ್ಯಂಟೆನಾ ಹೊಂದಿದ್ದು, 750 ಕಿಲೋಮೀಟರ್‌ಗೂ ಹೆಚ್ಚು ದೂರದಿಂದ ಯಾವುದೇ ಕ್ಷಿಪಣಿ ಅಥವಾ ರಾಕೆಟ್‌ಗಳನ್ನು ಗ್ರಹಿಸಿ, ಕಂಪ್ಯೂಟರ್ ಮೂಲಕ ಅವುಗಳ ಸಂಪೂರ್ಣ ಪಥ ವಿನ್ಯಾಸ ರಚಿಸಬಲ್ಲದು. ಹಡಗು ಅತ್ಯಂತ ಪ್ರಬಲ ಟೈಪ್180 ಮೋನೋಪಲ್ಸ್ ರೇಡಾರ್ ಹಾಗೂ ಟೈಪ್ 450-3 ರೇಡಿಯೋ ಟೆಲಿಮೆಟ್ರಿ ವ್ಯವಸ್ಥೆ ಹೊಂದಿದೆ. ವ್ಯಾಪ್ತಿಯೊಳಗಿರುವ ಯಾವುದೇ ಕ್ಷಿಪಣಿಯನ್ನು ಉಡಾವಣೆಯಿಂದ ಅಂತಿಮ ಗುರಿಯ ತನಕ ಟ್ರ್ಯಾಕ್ ಮಾಡುವ ಸಾಮರ್ಥ್ಯ ಗಳಿಸಿದ್ದು, ಅತ್ಯಾಧುನಿಕ ಎನ್ಕ್ರಿಪ್ಟೆಡ್ ರೇಡಿಯೋ/ಸ್ಯಾಟಲೈಟ್ ಸಂವಹನ ಹೊಂದಿದೆ. ಚೀನೀ ನೌಕಾಪಡೆಯ ನಾಕೂ ಟ್ರ್ಯಾಕಿಂಗ್ ಹಡಗುಗಳೂ ಒಂದು ಸ್ವಯಂ ಸರಿಪಡಿಸಿಕೊಳ್ಳುವ, ಬೀಜಿಂಗ್‌ನಲ್ಲಿನ ಸ್ಟೇಷನ್‌ಗಳ ಸುರಕ್ಷಿತ ಜಾಲದ ಮೂಲಕ ಸಂಪರ್ಕ ಹೊಂದಿದ್ದು, ಒಂದೇ ನಿಯಂತ್ರಣ ಕೇಂದ್ರದಿಂದ ನಿಯಂತ್ರಿಸಲ್ಪಡುತ್ತವೆ. ಅವುಗಳು ನೈಜ ಸಮಯದಲ್ಲಿ ಇತರ ಸ್ಟೇಷನ್‌ಗಳು ಹಾಗೂ ನಿಯಂತ್ರಣ ಕೇಂದ್ರಕ್ಕೆ ಎಲ್ಲಾ ಮಾಹಿತಿಗಳನ್ನೂ ಒದಗಿಸುತ್ತವೆ. ಇದನ್ನು ಚೀನಾದ ಸ್ಟ್ರಾಟೆಜಿಕ್ ಸಪೋರ್ಟ್ ಫೋರ್ಸ್‌ಗೆ (ಎಸ್ಎಸ್ಎಫ್) ಕಳುಹಿಸಲಾಗುತ್ತದೆ.

ಇದನ್ನೂ ಓದಿ: Chinese Threat: ಚೀನಾದ ಬೇಹುಗಾರಿಕೆ ಹಡಗು ಬರುವುದಕ್ಕೆ ಒಂದು ದಿನ ಮೊದಲು ಶ್ರೀಲಂಕಾಕ್ಕೆ ಮಿಲಿಟರಿ ವಿಮಾನ ಕಳಿಸಿದ ಭಾರತ

ಹಡಗು ಹಂಬಂಟೋಟಾ ಬಂದರಿಗೆ ಬರುವುದು ದೀರ್ಘಕಾಲದಿಂದಲೂ ವಿವಾದದ ವಿಚಾರವಾಗಿದೆ. ಶ್ರೀಲಂಕಾ ಹಂಬಂಟೋಟಾ ಬಂದರಿನ ನಿರ್ಮಾಣಕ್ಕೆ ಪಡೆದುಕೊಂಡ ಸಾಲ ಮರುಪಾವತಿ ಮಾಡದಿರುವುದರಿಂದ, ಬಂದರನ್ನು ಚೀನಾ 99 ವರ್ಷಗಳ ಕಾಲ ಗುತ್ತಿಗೆಗೆ ಪಡೆದುಕೊಂಡಿದೆ.

ಆಗಲೇ ಈ ಒಪ್ಪಂದದಿಂದಾಗಿ ಚೀನಾಗೆ ಈ ಮಹತ್ವದ ಸಾಗರಮಾರ್ಗದಲ್ಲಿ ಪ್ರವೇಶ ಸಿಗಲಿದ್ದು, ಭಾರತದ ಪಾರಂಪರಿಕ ಪ್ರಭಾವಕ್ಕೆ ಅಡ್ಡಿಯಾಗಬಹುದೆಂದು ಕಳವಳ ವ್ಯಕ್ತವಾಗಿತ್ತು. ಇಂತಹ ಅತ್ಯಾಧುನಿಕ ತಂತ್ರಜ್ಞಾನ ಹೊಂದಿರುವ ಹಡಗಿನ ಆಗಮನ ಸಹಜವಾಗೇ ಭಾರತಕ್ಕೆ ಚಿಂತೆ ಮೂಡಿಸಿತ್ತು.

ಅಮೆರಿಕಾದ ರಕ್ಷಣಾ ಸಚಿವಾಲಯದ ವರದಿಯೊಂದರ ಪ್ರಕಾರ, ಹಡಗು ಪಿಎಲ್ಎಯ ಎಸ್ಎಸ್ಎಫ್ ನಿಯಂತ್ರಣದಲ್ಲಿದೆ ಎನ್ನಲಾಗಿತ್ತು. ಎಸ್ಎಸ್ಎಫ್ ಕಾರ್ಯತಂತ್ರದ ಜಾಗ, ಸೈಬರ್ನೆಟಿಕ್ಸ್, ಇಲೆಕ್ಟ್ರಾನಿಕ್ಸ್, ಮಾಹಿತಿ, ಸಂವಹನ, ಹಾಗೂ ಸೈಕಾಲಜಿಕಲ್ ವಾರ್‌ಫೇರ್ ಸೇರಿದಂತೆ ಎಲ್ಲ ಕಾರ್ಯಾಚರಣೆಗಳನ್ನೂ ಕೇಂದ್ರೀಕೃತಗೊಳಿಸಲು ಸ್ಥಾಪಿಸಿರುವ ವ್ಯವಸ್ಥೆಯಾಗಿದೆ.

ಎಸ್ಎಸ್ಎಫ್ ಯುವಾಂಗ್ ವಾನ್ ಸ್ಪೇಸ್ ಸಪೋರ್ಟ್ ವೆಹಿಕಲ್‌ಗಳಲ್ಲೂ ಕಾರ್ಯ ನಿರ್ವಹಿಸುತ್ತಿದ್ದು, ಉಪಗ್ರಹಗಳು ಹಾಗೂ ಇಂಟರ್‌ಕಾಂಟಿನೆಂಟಲ್ ಬ್ಯಾಲಿಸ್ಟಿಕ್ ಮಿಸೈಲ್ (ಐಸಿಬಿಎಂ) ಉಡಾವಣೆಗಳನ್ನೂ ಟ್ರ್ಯಾಕ್ ಮಾಡಬಲ್ಲದು. ಅಮೆರಿಕಾ ನೌಕಾಪಡೆಯ ಮಾಜಿ ಕ್ಯಾಪ್ಟನ್ ಹಾಗೂ ಯುಎಸ್ ಪೆಸಿಫಿಕ್ ಕಮಾಂಡಿ‌ನ ಜಾಯಿಂಟ್ ಇಂಟಲಿಜೆನ್ಸ್ ಸೆಂಟರ್‌ನ ಮಾಜಿ ಕಾರ್ಯಾಚರಣೆಗಳ ನಿರ್ದೇಶಕರಾದ ಕಾರ್ಲ್ ಶುಸ್ಟರ್ ಪ್ರಕಾರ, ಆ ಹಡಗಿನ ಬೇಹುಗಾರಿಕಾ ಸಾಮರ್ಥ್ಯದ ಕಾರಣದಿಂದಲೇ ಭಾರತ ಯುವಾನ್ ವಾಂಗ್ 5 ಶ್ರೀಲಂಕಾಗೆ ಬಂದಿರುವುದರ ಕುರಿತು ಕಳವಳ ವ್ಯಕ್ತಪಡಿಸಿದೆ.

ಬೇಹುಗಾರಿಕೆ ಈ ಹಡಗಿನ ಪ್ರಾಥಮಿಕ ಕಾರ್ಯವಲ್ಲ. ಇದರ ಪ್ರಾಥಮಿಕ ಕಾರ್ಯವೆಂದರೆ ಉಪಗ್ರಹಗಳ ಟ್ರ್ಯಾಕಿಂಗ್ ಮತ್ತು ಪಿಆರ್‌ಸಿ ಕ್ಷಿಪಣಿ ಉಡಾವಣೆಗಳನ್ನು ನೋಡಿಕೊಳ್ಳುವುದು. ಆದರೆ ಈ ಹಡಗಿಗೆ ಬೇರೆ ರಾಷ್ಟ್ರಗಳ ಉಪಗ್ರಹ ಕಾರ್ಯಾಚರಣೆಗಳನ್ನು ನಿಯಂತ್ರಿಸುವ, ಸಂವಹನ ಸಾಧಿಸುವ ಮತ್ತು ಕ್ಷಿಪಣಿ ಟೆಲಿಮೆಟ್ರಿ ಸಾಮರ್ಥ್ಯವೂ ಇದೆ ಎಂದಿದ್ದಾರೆ. ಚೀನಾದ ವಿದೇಶಾಂಗ ಸಚಿವಾಲಯ ಹಡಗು ಅಂತಾರಾಷ್ಟ್ರೀಯ ಕಾನೂನುಗಳಿಗೆ ಬದ್ಧವಾಗಿ, ಕೇವಲ ವೈಜ್ಞಾನಿಕ ಸಂಶೋಧನೆ ನಡೆಸುತ್ತದೆ ಎಂದು ಹೇಳಿಕೆ ನೀಡಿತ್ತು. ಸಚಿವಾಲಯದ ವಕ್ತಾರ ವಾಂಗ್ ವೆನ್‌ಬಿನ್ ಯುವಾನ್ ವಾಂಗ್ 5 ಯಾವುದೇ ರಾಷ್ಟ್ರದ ರಕ್ಷಣಾ ಮತ್ತು ಆರ್ಥಿಕ ವಿಚಾರಗಳ ಮೇಲೆ ಪ್ರಭಾವ ಬೀರುವುದಿಲ್ಲ. ಇದರ ವಿಚಾರಕ್ಕೆ ಯಾವ ಮೂರನೇ ರಾಷ್ಟ್ರವೂ ಮಧ್ಯಪ್ರವೇಶ ಮಾಡುವಂತಿಲ್ಲ ಎಂದಿದ್ದಾರೆ.

ಭಾರತೀಯ ನೌಕಾಪಡೆಯ ವಕ್ತಾರರ ಪ್ರಕಾರ, ಹಡಗು ಹಂಬಂಟೋಟಾ ಬಂದರಿನಿಂದ ಪಶ್ಚಿಮ ಗುಜರಾತ್ ಹೊರತುಪಡಿಸಿ ಭಾರತದ ಬಹುತೇಕ ಗಮನಾರ್ಹ ಪ್ರದೇಶಗಳ ಮೇಲೆ ಬೇಹುಗಾರಿಕೆ ನಡೆಸಬಲ್ಲದು. ಅಂದರೆ, ಯುವಾನ್ ವಾಂಗ್ 5 ಶ್ರೀಹರಿಕೋಟಾದಲ್ಲಿರುವ ಇಸ್ರೋದ ನೆಲೆ, ವೀಲರ್ ದ್ವೀಪದಲ್ಲಿರುವ ಕ್ಷಿಪಣಿ ಉಡಾವಣಾ ನೆಲೆ, ಹಾಗೂ ಅತ್ಯಂತ ಕಡಿಮೆ ಫ್ರೀಕ್ವೆನ್ಸಿಯ ಐಎನ್ಎಸ್ ಕಟ್ಟಬೊಮ್ಮನ್ ಸಬ್‌ಮರೀನ್ ಸಂವಹನದ ಮೇಲೂ ಬೇಹುಗಾರಿಕೆ ನಡೆಸಬಲ್ಲದು.

ಇದನ್ನೂ ಓದಿ: ತಮಿಳುನಾಡು-ಜಾಫ್ನಾ ಸಂಪರ್ಕ ಯೋಜನೆಗೆ ಶ್ರೀಲಂಕಾ ಅಸ್ತು: ಶ್ರೀಘ್ರ ವಿಮಾನ, ಹಡಗು ಸಂಚಾರ ಆರಂಭ

ಶ್ರೀಲಂಕಾದಲ್ಲಿರುವ ಚೀನಾದ ಬೇಹುಗಾರಿಕಾ ನೌಕೆ (ಒಳಚಿತ್ರದಲ್ಲಿ ಲೇಖಕ ಗಿರೀಶ್ ಲಿಂಗಣ್ಣ)

ಈ ನೆಲೆಗಳಷ್ಟೇ ಅಲ್ಲದೆ, ಯುವಾನ್ ವಾಂಗ್ 5 ಈಗ ಇಂಡಿಯನ್ ರೀಜನಲ್ ಸ್ಯಾಟಲೈಟ್ ಸಿಸ್ಟಂ (ಎನ್ಎವಿಎಲ್‌ಸಿ) ಹಾಗೂ ಭಾರತೀಯ ಸೇನಾ ಉಪಗ್ರಹಗಳಾದ ಜಿಸ್ಯಾಟ್-7, ಜಿಸ್ಯಾಟ್-7ಎ, ಜಿಸ್ಯಾಟ್-7ಆರ್, ಎಮಿಸ್ಯಾಟ್ ಹಾಗೂ ಮೈಕ್ರೋಸ್ಯಾಟ್-ಆರ್ ಸೇರಿದಂತೆ ಭಾರತದ ಉಪಗ್ರಹಗಳು ಕಾರ್ಯಾಚರಿಸುವ ಭಾಗದಲ್ಲಿದೆ.

ಶ್ರೀಲಂಕಾ ಯುವಾನ್ ವಾಂಗ್ 5 ತನ್ನ ಟ್ರ್ಯಾಕಿಂಗ್ ಉಪಕರಣಗಳನ್ನು ಸ್ಥಗಿತಗೊಳಿಸುವಂತೆ ಮಾಡಬೇಕಿದ್ದರೂ, ಅದರ ಬಳಿ ಹಡಗು ಟ್ರ್ಯಾಕಿಂಗ್ ನಡೆಸುತ್ತಿದೆಯೇ ಎಂದು ಪತ್ತೆಹಚ್ಚುವ ಉಪಕರಣಗಳಿಲ್ಲ. ಒಂದು ವೇಳೆ ಈ ಹಡಗು ಟ್ರ್ಯಾಕಿಂಗ್ ವ್ಯವಸ್ಥೆ ಸ್ಥಗಿತಗೊಳಿಸಿದರೂ, ಶ್ರೀಲಂಕಾದ ಬಂದರಿನಲ್ಲಿ ಅದು ತೈಲ ಮರುಪೂರಣ ನಡೆಸುವುದು ಹಿಂದೂಮಹಾಸಾಗರ ಪ್ರದೇಶದಲ್ಲಿ ಅದಕ್ಕೆ ಪ್ರವೇಶ ಒದಗಿಸಲಿದೆ. 400 ಜನ ಸಿಬ್ಬಂದಿಗಳೊಂದಿಗೆ ಅದು 120 ದಿನಗಳ ಕಾಲ ಸಮುದ್ರದಲ್ಲಿ ಕಾರ್ಯ ನಿರ್ವಹಿಸಬಲ್ಲದಾಗಿದ್ದು, 34,000 ಕಿಲೋಮೀಟರ್ ಚಲಿಸಬಲ್ಲದು. ಇದು ಜುಲೈ 14ರಂದು ಚೀನಾದ ಬಂದರಿಂದ ಹೊರಟಿದ್ದು, ಈಗಾಗಲೇ ಹಿಂದೂ ಮಹಾಸಾಗರದಲ್ಲಿದೆ. ಹಂಬಂಟೋಟಾ ಬಂದರಿನ ಲಭ್ಯತೆ ಅದಕ್ಕೆ ಹಿಂದೂ ಮಹಾಸಾಗರದಲ್ಲಿ ಇನ್ನೂ 30 ದಿನಗಳ ಸಮಯ ಒದಗಿಸಲಿದೆ. ಇದೇ ಸರಣಿಯ ಯುವಾನ್ ವಾಂಗ್ 6 2021ರಲ್ಲಿ 73 ಕಡಲ ಮೇಲ್ವಿಚಾರಣೆ ಮತ್ತು ನಿಯಂತ್ರಣ ಕಾರ್ಯಾಚರಣೆಗಳಲ್ಲಿ ಭಾಗವಹಿಸಿ, 240 ದಿನಗಳಲ್ಲಿ 50,000 ನಾಟಿಕಲ್ ಮೈಲಿಗೂ ಹೆಚ್ಚು ಸಂಚರಿಸಿತ್ತು. ಕಳೆದ ಡಿಸೆಂಬರ್‌ನಲ್ಲಿ ಚೀನಾದ ಜಿಯಾಂಗ್ಸು ಬಂದರಿನಿಂದ ತೆರಳಿದ ಅದು, ಮಾರ್ಚ್ ವೇಳೆಗೆ ಹಿಂದೂ ಮಹಾಸಾಗರ ಪ್ರಾಂತ್ಯಕ್ಕೆ ಬಂದಿತ್ತು.

ಭಾರತದ ಬಳಿಯೂ ಎರಡು ಕ್ಷಿಪಣಿ ಟ್ರ್ಯಾಕಿಂಗ್ ಮತ್ತು ಮಾನಿಟರಿಂಗ್ ಹಡಗುಗಳಿದೆ. ಐಎನ್ಎಸ್ ಅನ್ವೇಶ್ ಒಂದು ಮಿಸೈಲ್ ಟೆಲಿಮೆಟ್ರಿ ಹಡಗಾಗಿದ್ದು, ಮೊದಲಿಗೆ ಡಿಆರ್‌ಡಿಓ ನಿಯಂತ್ರಣದಲ್ಲಿತ್ತು. ಐಎನ್ಎಸ್ ಧ್ರುವ್ ಪೂರ್ಣ ಪ್ರಮಾಣದ ಕ್ಷಿಪಣಿ ಟ್ರ್ಯಾಕಿಂಗ್ ಹಡಗಾಗಿದ್ದು, ಇದನ್ನು ನೌಕಾಪಡೆ, ನ್ಯಾಷನಲ್ ಟೆಕ್ನಿಕಲ್ ರಿಸರ್ಚ್ ಆರ್ಗನೈಸೇಷನ್ (ಎನ್‌ಟಿಆರ್‌ಓ) ಹಾಗೂ ಡಿಆರ್‌ಡಿಓ ಜಂಟಿಯಾಗಿ ನಿಯಂತ್ರಿಸುತ್ತವೆ.

ಇದು 10,000 ಟನ್ನಿಗಿಂತ ಹೆಚ್ಚು ತೂಕ ಹೊಂದಿದ್ದು, 175 ಮೀಟರ್ ಉದ್ದ, 22 ಮೀಟರ್ ಬೀಮ್ ಹಾಗೂ 6 ಮೀಟರ್ ಡ್ರಾಟ್ ಹೊಂದಿದೆ. ಇದು 21 ನಾಟ್ ಗರಿಷ್ಠ ವೇಗ ಹೊಂದಿದೆ. 2 ಆಮದು ಮಾಡಿಕೊಂಡ 9,000 ಕಿಲೋವ್ಯಾಟ್ ಸಿಓಡಿಎಡಿ ಕಾನ್ಫಿಗರೇಷನ್ ಇಂಜಿನ್‌ಗಳನ್ನು ಹೊಂದಿದ್ದು, 1,200 ಕಿಲೋವ್ಯಾಟಿನ ಮೂರು ಆಕ್ಸಿಲರಿ ಜನರೇಟರ್‌ಗಳನ್ನು ಹೊಂದಿದೆ.

ಇದರಲ್ಲಿ ಒಂದು ಎಕ್ಸ್ ಬ್ಯಾಂಡ್ ಹಾಗೂ ಒಂದು ಎಸ್ ಬ್ಯಾಂಡ್ ಸೆಕೆಂಡರಿ ಆ್ಯಕ್ಟಿವ್ ಇಲೆಕ್ಟ್ರಾನಿಕಲಿ ಸ್ಕ್ಯಾನ್ಡ್ ಅರೇ (ಎಇಎಸ್ಎ) ರೇಡಾರ್ ಇರಲಿದೆ. ಇದರಲ್ಲಿ ಉದ್ದವಾದ, ತೆರೆದ ಡೆಕ್ ಇದ್ದು, ಹಲವು ಮಿಸೈಲ್ ಟ್ರ್ಯಾಕಿಂಗ್ ಆ್ಯಂಟೆನಾಗಳನ್ನು ಅಳವಡಿಸಲು ಅವಕಾಶವಿದೆ. ಇದು ಒಂದು ಹೆಲಿಕಾಪ್ಟರನ್ನೂ ಒಯ್ಯಲಿದ್ದು, 300 ಸಿಬ್ಬಂದಿಗಳನ್ನೂ ಹೊಂದಿರಲಿದೆ.

 

(ಲೇಖನ: ಗಿರೀಶ್ ಲಿಂಗಣ್ಣ, ಬಾಹ್ಯಾಕಾಶ ಮತ್ತು ರಕ್ಷಣಾ ವಿಶ್ಲೇಷಕ)

ಇನ್ನಷ್ಟು ರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On - 4:13 pm, Fri, 19 August 22