ನವದೆಹಲಿ: ಭಾರತ ಮೂಲದ ಲಕ್ಷ್ಮಣ್ ನರಸಿಂಹನ್ (Laxman Narasimhan) ಅವರನ್ನು ಪ್ರಸಿದ್ಧ ಕಾಫಿ ಕಂಪನಿಯಾಗಿರುವ ಸ್ಟಾರ್‌ಬಕ್ಸ್‌ನ (Starbucks) ಹೊಸ ಸಿಇಒ ಆಗಿ ನೇಮಕ ಮಾಡಲಾಗಿದೆ. ಈ ಮೂಲಕ 55 ವರ್ಷದ ಲಕ್ಷ್ಮಣ್ ನರಸಿಂಹನ್ ಜಾಗತಿಕ ನಿಗಮಗಳ ಚುಕ್ಕಾಣಿ ಹಿಡಿದಿರುವ ಭಾರತೀಯ ಮೂಲದ ಉದ್ಯಮಿಗಳ ಸಾಲಿಗೆ ಸೇರ್ಪಡೆಯಾಗಿದ್ದಾರೆ. ಲಕ್ಷ್ಮಣ್ ನರಸಿಂಹನ್ ಈ ಹಿಂದೆ ಬಹುರಾಷ್ಟ್ರೀಯ ಗ್ರಾಹಕ ಆರೋಗ್ಯ, ನೈರ್ಮಲ್ಯ ಮತ್ತು ಪೌಷ್ಟಿಕಾಂಶ ಕಂಪನಿಯಾದ ಇಂಗ್ಲೆಂಡ್ ಮೂಲದ ರೆಕಿಟ್ ಬೆನ್‌ಕೈಸರ್‌ನ ಸಿಇಒ ಆಗಿದ್ದರು.
ಲಕ್ಷ್ಮಣ್ ನರಸಿಂಹನ್ ಸ್ಟಾರ್‌ಬಕ್ಸ್ ಕಂಪನಿಯ ಮುಂದಿನ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಮತ್ತು ಸ್ಟಾರ್‌ಬಕ್ಸ್ ನಿರ್ದೇಶಕರ ಮಂಡಳಿಯ ಸದಸ್ಯರಾಗಲಿದ್ದಾರೆ ಎಂದು ಸ್ಟಾರ್‌ಬಕ್ಸ್ ಗುರುವಾರ ಘೋಷಿಸಿದೆ. ಲಕ್ಷ್ಮಣ್ ನರಸಿಂಹನ್ ಅವರು ಲಂಡನ್‌ನಿಂದ ಸಿಯಾಟಲ್ ಪ್ರದೇಶಕ್ಕೆ ಸ್ಥಳಾಂತರಗೊಂಡ ನಂತರ 2022ರ ಅಕ್ಟೋಬರ್ 1ರಂದು ಸ್ಟಾರ್‌ಬಕ್ಸ್‌ನ CEO ಆಗಿ ಸೇರಿಕೊಳ್ಳಲಿದ್ದಾರೆ.
ಲಕ್ಷ್ಮಣ್ ನರಸಿಂಹನ್ ಅವರು ಸೆಪ್ಟೆಂಬರ್ 30ರಂದು ತಮ್ಮ ಕಂಪನಿಯ ಸಿಇಒ ಹುದ್ದೆಯಿಂದ ಕೆಳಗಿಳಿಯಲಿದ್ದಾರೆ ಎಂದು ರೆಕಿಟ್ ಬೆಂಕಿಸರ್ ತಿಳಿಸಿದೆ. ಲಕ್ಷ್ಮಣ್ ನರಸಿಂಹನ್ ವೈಯಕ್ತಿಕ ಮತ್ತು ಕೌಟುಂಬಿಕ ಕಾರಣಗಳಿಂದ ಇಂಗ್ಲೆಂಡ್ಗೆ ಮರಳಲು ನಿರ್ಧರಿಸಿದ್ದಾರೆ ಎಂದು ಖಚಿತಪಡಿಸಿದೆ.
ಇದನ್ನೂ ಓದಿ: NSE Phone Tapping: ಮಾಜಿ ಸಿಇಒ ಚಿತ್ರಾ ರಾಮಕೃಷ್ಣ ಜಾಮೀನು ಅರ್ಜಿ ವಜಾ ಮಾಡಿದ ದೆಹಲಿ ನ್ಯಾಯಾಲಯ
ಈ ಮೂಲಕ ಮೈಕ್ರೋಸಾಫ್ಟ್ ಸಿಇಒ ಸತ್ಯ ನಡೆಲ್ಲಾ, ಅಡೋಬ್ ಸಿಇಒ ಶಾಂತನು ನಾರಾಯಣ್, ಆಲ್ಫಾಬೆಟ್ ಸಿಇಒ ಸುಂದರ್ ಪಿಚೈ ಮತ್ತು ಟ್ವಿಟರ್ ಮುಖ್ಯಸ್ಥ ಪರಾಗ್ ಅಗರವಾಲ್ ಸೇರಿದಂತೆ ಅಮೆರಿಕ ಮೂಲದ ಜಾಗತಿಕ ದೈತ್ಯ ಕಂಪನಿಗಳ ಚುಕ್ಕಾಣಿ ಹಿಡಿದಿರುವ ಭಾರತೀಯ ಮೂಲದ ಸಿಇಒಗಳ ಪಟ್ಟಿಗೆ ಲಕ್ಷ್ಮಣ್ ನರಸಿಂಹನ್ ಕೂಡ ಸೇರಿದ್ದಾರೆ.
ಲಕ್ಷ್ಮಣ್ ನರಸಿಂಹನ್ ಭಾರತದ ಪುಣೆ ವಿಶ್ವವಿದ್ಯಾಲಯದ ಕಾಲೇಜ್ ಆಫ್ ಇಂಜಿನಿಯರಿಂಗ್‌ನಿಂದ ಮೆಕ್ಯಾನಿಕಲ್ ಇಂಜಿನಿಯರಿಂಗ್‌ನಲ್ಲಿ ಪದವಿ ಪಡೆದಿದ್ದಾರೆ. ಅವರು ಪೆನ್ಸಿಲ್ವೇನಿಯಾ ವಿಶ್ವವಿದ್ಯಾನಿಲಯದ ಲಾಡರ್ ಇನ್ಸ್ಟಿಟ್ಯೂಟ್‌ನಿಂದ ಜರ್ಮನ್ ಮತ್ತು ಅಂತಾರಾಷ್ಟ್ರೀಯ ಅಧ್ಯಯನಗಳಲ್ಲಿ ಎಂಎ ಮತ್ತು ವಾರ್ಟನ್ ಸ್ಕೂಲ್ ಆಫ್ ದಿ ಯೂನಿವರ್ಸಿಟಿ ಆಫ್ ಪೆನ್ಸಿಲ್ವೇನಿಯಾದಿಂದ ಹಣಕಾಸು ವಿಷಯದಲ್ಲಿ ಎಂಬಿಎ ಪದವಿ ಹೊಂದಿದ್ದಾರೆ.