BIG NEWS: 6 ತಿಂಗಳಲ್ಲಿ ಭಾರತಕ್ಕೆ ಬರಲಿದೆ ಒಮಿಕ್ರಾನ್ ವಿರುದ್ಧದ ಲಸಿಕೆ: ಪೂನಾವಾಲ
ವರ್ಷಾಂತ್ಯದ ವೇಳೆಗೆ ಒಮಿಕ್ರಾನ್ ವಿರುದ್ಧದ ಲಸಿಕೆ ಬರಲಿದೆ ಎಂದು ಪೂನಾವಾಲ ಹೇಳಿದರು. ಲಸಿಕೆಯು ಒಮಿಕ್ರಾನ್‌ನ BA5 ಉಪ-ವೇರಿಯಂಟ್‌ಗೆ ನಿರ್ದಿಷ್ಟವಾಗಿರುತ್ತದೆ, ಇದಕ್ಕಾಗಿ UK ನವೀಕರಿಸಿದ ಮಾಡರ್ನಾ ಲಸಿಕೆಯನ್ನು ಅನುಮೋದಿಸಿದೆ.
ಒಮಿಕ್ರಾನ್ (Omicron) ವೈರಸ್ ವಿರುದ್ಧ ಹೋರಾಡುವ ನಿರ್ದಿಷ್ಟ ಲಸಿಕೆ ತಯಾರಿಸಲು ನೋವಾವ್ಯಾಕ್ಸ್ (Novavax) ನೊಂದಿಗೆ ಸೆರಮ್ ಇನ್ಸಿಟ್ಯೂಟ್ ಕೆಲಸ ಮಾಡುತ್ತಿದೆ ಎಂದು ಸೋಮವಾರ ಎನ್ ಡಿಟಿವಿಗೆ ನೀಡಿದ ವಿಶೇಷ ಸಂದರ್ಶನದಲ್ಲಿ ಆದಾರ್ ಪೂನಾವಾಲಾ (Adar Poonawalla) ಹೇಳಿದ್ದಾರೆ. ಈ ಲಸಿಕೆ ಬಿಎ 5 ಉಪ ತಳಿ ವಿರುದ್ಧ ಹೋರಾಡುವ ಲಸಿಕೆಯಾಗಿದ್ದು 6 ತಿಂಗಳಲ್ಲಿ ಬರುವ ನಿರೀಕ್ಷೆ ಇದೆ ಎಂದಿದ್ದಾರೆ. ಇದಕ್ಕಿಂತ ಮುನ್ನ ಒಮಿಕ್ರಾನ್ ವೈರಸ್ ವಿರುದ್ಧ ಪರಿಣಾಮಕಾರಿಯಾಗಿರುವ ನವೀಕರಿಸಿದ ಮಾಡೆರ್ನಾ ಲಸಿಕೆಗೆ ಯುಕೆ ಅನುಮೋದನೆ ನೀಡಿತ್ತು. ಈ ಲಸಿಕೆ ಒಮಿಕ್ರಾನ್ ತಳಿ ಮತ್ತು ಮೂಲ ರೂಪದ ವಿರುದ್ಧ ಪರಿಣಾಮಕಾರಿಯಾಗಿದೆ. ಈ ಲಸಿಕೆ ಬೂಸ್ಟರ್ ನಂತೆಯೇ ಮುಖ್ಯವಾಗಿದೆ ಎಂದಿದ್ದಾರೆ ಪೂನಾವಾಲಾ. ಒಮಿಕ್ರಾನ್ ವಿರುದ್ಧದ ನಿರ್ದಿಷ್ಟ ಲಸಿಕೆ ಭಾರತಕ್ಕೆ ಮುಖ್ಯವಾಗಿದೆ ಎಂದು ಹೇಳಿದ ಪೂನಾವಾಲಾ, ಒಮಿಕ್ರಾನ್ ಸೌಮ್ಯ ಸ್ವಭಾವದಲ್ಲ. ಇದು ಗಂಭೀರ ಫ್ಲೂನಂತೆ ಕಾಣಿಸುತ್ತದೆ ಎಂದಿದ್ದಾರೆ.
ಭಾರತದ ನಿಯಂತ್ರಕರಿಂದ ಅನುಮೋದನೆ ಯಾವಾಗ ಸಿಗುತ್ತದೆ ಎಂಬ ಆಧಾರದ ಮೇಲೆ ಲಸಿಕೆ ಮಾರುಕಟ್ಟೆಗೆ ಬರಲಿದೆ. ಭಾರತದಲ್ಲಿ ಪ್ರತ್ಯೇಕವಾಗಿ ಕ್ಲಿನಿಕಲ್ ಪ್ರಯೋಗದ ಅಗತ್ಯವಿದೆಯೇ ಎಂಬುದು ಇಲ್ಲಿಯವರೆಗೆ ಸ್ಪಷ್ಟವಾಗಿಲ್ಲ ಎಂದಿದ್ದಾರೆ ಅವರು. ಪ್ರಸ್ತುತ ಆಸ್ಟ್ರೇಲಿಯಾದಲ್ಲಿ ನೋವಾವ್ಯಾಕ್ಸ್ ಪ್ರಯೋಗ ನಡೆಯುತ್ತಿದೆ. ನವೆಂಬರ್- ಡಿಸೆಂಬರ್ ತಿಂಗಳಲ್ಲಿ ಇದು ಅಮೆರಿಕದ ಔಷಧ ನಿಯಂತ್ರಕವನ್ನು ಸಮೀಪಿಸುವ ಸಾಧ್ಯತೆ ಇದೆ ಪೂನಾವಾಲಾ ಹೇಳಿದ್ದಾರೆ. ದೆಹಲಿ ಸೇರಿದಂತೆ ದೇಶದ ಇತರ ರಾಜ್ಯಗಳಲ್ಲಿ ಒಮಿಕ್ರಾನ್ ನಿಂದ ಕೋವಿಡ್ ಪ್ರಕರಣಗಳು ಏರಿಕೆಯಾಗುತ್ತಿವೆ ಎಂದು ಅವರು ಹೇಳಿದ್ದಾರೆ .
ಕಳೆದ ವಾರ ಎನ್ ಡಿಟಿವಿ ಜತೆ ಮಾತನಾಡಿದ ಕೊವಿಡ್ ಟಾಸ್ಕ್ ಫೋರ್ಸ್ ಮುಖ್ಯಸ್ಥ ಎನ್ ಕೆ ಅರೋರಾ, ದೆಹಲಿಯಲ್ಲಿ ಪ್ರಸರಣವಾಗುತ್ತಿರುವ ಒಮಿಕ್ರಾನ್ ರೂಪಾಂತರಿ ಹೆಚ್ಚು ಸಾಂಕ್ರಾಮಿಕ ಎಂದು ಹೇಳಿದ್ದಾರೆ.
Published On - 6:30 pm, Mon, 15 August 22