ಪಾಟ್ನಾ: ಬಿಹಾರದಲ್ಲಿ ಇಂದು ನಿತೀಶ್ ಕುಮಾರ್ (Nitish Kumar) ವಿಶ್ವಾಸಮತ ಯಾಚನೆ ಮಾಡಲಿದ್ದು, ಇದಕ್ಕೂ ಮೊದಲೇ ಬಿಜೆಪಿ ನಾಯಕ ವಿಜಯ್ ಕುಮಾರ್ ಸಿನ್ಹಾ (Vijay Kumar Sinha) ಇಂದು ಸ್ಪೀಕರ್ ಸ್ಥಾನಕ್ಕೆ ರಾಜೀನಾಮೆ ನೀಡಿದ್ದಾರೆ. ನಿತೀಶ್ ಕುಮಾರ್ ನೇತೃತ್ವದ ಮಹಾಮೈತ್ರಿ ಸರ್ಕಾರ ಸ್ಪೀಕರ್ ವಿಜಯ್ ಕುಮಾರ್ ಸಿನ್ಹಾ ವಿರುದ್ಧ ಅವಿಶ್ವಾಸ ನಿರ್ಣಯ ಮಂಡನೆ ಮಾಡಿದ ಹಿನ್ನೆಲೆಯಲ್ಲಿ ವಿಜಯ್ ಕುಮಾರ್ ಸಿನ್ಹಾ ತಮ್ಮ ಸ್ಪೀಕರ್ ಸ್ಥಾನಕ್ಕೆ ರಾಜೀನಾಮೆ ನೀಡಬೇಕಾಯಿತು.
ನಿತೀಶ್ ಕುಮಾರ್ ಸರ್ಕಾರದ ವಿಶ್ವಾಸಮತಯಾಚನೆ ವೇಳೆ ಬಿಹಾರದ ಸ್ಪೀಕರ್ ವಿಜಯ್ ಕುಮಾರ್ ಸಿನ್ಹಾ ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಿದ್ದಾರೆ. “ಬಹುಮತಕ್ಕೆ ತಲೆಬಾಗಿದ್ದೇನೆ” ಎಂದು ಅವರು ಹೇಳಿದ್ದಾರೆ. ವಿಧಾನಸಭೆಯಲ್ಲಿ ಮಾತನಾಡಿದ ವಿಜಯ್ ಕುಮಾರ್ ಸಿನ್ಹಾ, ನರೇಂದ್ರ ನಾರಾಯಣನ್ ಯಾದವ್ ಅವರು ಸ್ಪೀಕರ್ ಸ್ಥಾನವನ್ನು ವಹಿಸಿಕೊಳ್ಳಲಿದ್ದಾರೆ ಎಂದು ಹೇಳಿದರು. ಸ್ಪೀಕರ್ ಪೀಠದ ಮೇಲೆ ಅನುಮಾನಗಳನ್ನು ಮೂಡಿಸುವ ಮೂಲಕ ನೀವು ಯಾವ ಸಂದೇಶವನ್ನು ನೀಡಲು ಬಯಸುತ್ತೀರಿ? ಜನರೇ ತೀರ್ಮಾನ ಮಾಡುತ್ತಾರೆ ಎಂದು ಅವರು ಹೇಳಿದ್ದಾರೆ.
ಇದನ್ನೂ ಓದಿ: ಬಿಹಾರದ ಕಾನೂನು ಸಚಿವರ ವಿರುದ್ಧ ಬಂಧನ ವಾರೆಂಟ್; ಇದರ ಬಗ್ಗೆ ನನಗೇನೂ ಗೊತ್ತಿಲ್ಲ ಎಂದ ಸಿಎಂ ನಿತೀಶ್ ಕುಮಾರ್
ಮುಖ್ಯಮಂತ್ರಿ ನಿತೀಶ್ ಕುಮಾರ್ ಅವರ ಸಲಹೆಯ ಮೇರೆಗೆ ಬಿಹಾರ ವಿಧಾನಸಭೆಯ ಸೆಕ್ರೆಟರಿಯೇಟ್ ಮಂಗಳವಾರ ಸಂಜೆ ಸಿನ್ಹಾ ವಿರುದ್ಧ ಅವಿಶ್ವಾಸ ನಿರ್ಣಯ ಮಂಡಿಸಲು 2 ದಿನಗಳ ವಿಶೇಷ ಅಧಿವೇಶನದ ವೇಳಾಪಟ್ಟಿಯನ್ನು ಬದಲಾಯಿಸಿತ್ತು. ಇದಕ್ಕೂ ಮುನ್ನ ಸಿನ್ಹಾ ರಾಜೀನಾಮೆ ನೀಡಲು ನಿರಾಕರಿಸಿದ್ದರು. ಬಳಿಕ ರಾಜೀನಾಮೆಯನ್ನು ಪ್ರಕಟಿಸಿದ ಸ್ಪೀಕರ್ ವಿಜಯ್ ಕುಮಾರ್ ಸಿನ್ಹಾ ವಿಧಾನಸಭೆ ಕಲಾಪವನ್ನು ಮಧ್ಯಾಹ್ನ 2 ಗಂಟೆಗೆ ಮುಂದೂಡಿದರು.
Vijay Kumar Sinha resigns as the Speaker of the Bihar Assembly. pic.twitter.com/9KFXjR28Gt
— ANI (@ANI) August 24, 2022
ಆದರೆ, ಸಂಸತ್ತಿನ ವ್ಯವಹಾರಗಳ ಸಚಿವ ವಿಜಯ್ ಕುಮಾರ್ ಚೌಧರಿ ಇದಕ್ಕೆ ಆಕ್ಷೇಪ ಎತ್ತಿದ್ದು, ಇದರಿಂದ ವಿಶ್ವಾಸಮತ ಪರೀಕ್ಷೆ ವಿಳಂಬವಾಗಲಿದೆ ಎಂದಿದ್ದಾರೆ. ವಿಶ್ವಾಸಮತ ಯಾಚನೆಗೂ ಮುನ್ನವೇ ಸ್ಪೀಕರ್ ವಿಜಯ್ ಕುಮಾರ್ ಸಿನ್ಹಾ ರಾಜೀನಾಮೆ ನೀಡಿದ್ದಾರೆ. ಆದರೆ, ತಮ್ಮ ವಿರುದ್ಧ ಅವಿಶ್ವಾಸ ನಿರ್ಣಯ ಕಾನೂನುಬದ್ಧವಲ್ಲ ಎಂದು ಬಿಹಾರ ಸ್ಪೀಕರ್ ಹೇಳಿದ್ದಾರೆ.
ಇದನ್ನೂ ಓದಿ: Big News: ಬಿಹಾರದಲ್ಲಿ ಇಂದು ವಿಶ್ವಾಸಮತಯಾಚನೆ; 165 ಶಾಸಕರ ಬೆಂಬಲದಿಂದ ನಿತೀಶ್ ಕುಮಾರ್ ಸರ್ಕಾರಕ್ಕೆ ಗೆಲುವು ಖಚಿತ
9 ಜನರ ಪತ್ರಗಳಲ್ಲಿ 8 ಪತ್ರಗಳು ನಿಯಮದ ಪ್ರಕಾರ ಇಲ್ಲದಿರುವುದರಿಂದ ತಮ್ಮ ವಿರುದ್ಧ ಮಂಡಿಸಲಾದ ಅವಿಶ್ವಾಸ ನಿರ್ಣಯವು ಅಸ್ಪಷ್ಟವಾಗಿದೆ ಎಂದು ಬಿಹಾರ ಸ್ಪೀಕರ್ ವಿಜಯ್ ಕುಮಾರ್ ಸಿನ್ಹಾ ಹೇಳಿದ್ದಾರೆ.
I would like to tell you that your No Confidence Motion (against him – the Speaker) is unclear. Eight of the nine people’s letters, which were received, were not as per rule: Bihar Assembly Speaker Vijay Kumar Sinha, in the House pic.twitter.com/9txlkodo9u
— ANI (@ANI) August 24, 2022
ಏಕಸದಸ್ಯ ಎಐಎಂಐಎಂ ಮಂಗಳವಾರ ಮಹಾಮೈತ್ರಿಕೂಟ ಸರ್ಕಾರಕ್ಕೆ ತನ್ನ ಬೆಂಬಲವನ್ನು ನೀಡಲು ನಿರ್ಧರಿಸಿದ ನಂತರ 243 ಸದಸ್ಯರ ವಿಧಾನಸಭೆಯಲ್ಲಿ ಸರ್ಕಾರವನ್ನು ಬೆಂಬಲಿಸುವ ಶಾಸಕರ ಸಂಖ್ಯೆ 165ಕ್ಕೆ ಏರಿಕೆಯಾಗಿದೆ. 2 ಸ್ಥಾನಗಳು ಖಾಲಿ ಇರುವುದರಿಂದ ಸದನದ ಒಟ್ಟು ಬಲ 241 ಆಗಿದೆ. 7 ಪಕ್ಷಗಳ ಒಟ್ಟು 163 ಶಾಸಕರು ಮತ್ತು ಒಬ್ಬ ಸ್ವತಂತ್ರ ಶಾಸಕ (ಸುಮಿತ್ ಕುಮಾರ್ ಸಿಂಗ್) ಆರ್‌ಜೆಡಿಯೊಂದಿಗೆ ಮತ್ತೆ ಕೈಜೋಡಿಸಲು ಬಿಜೆಪಿಯಿಂದ ಹೊರಬಂದಿದ್ದರು. ಇದರ ಬೆನ್ನಲ್ಲೇ ಆಗಸ್ಟ್ 9ರಂದು ನಿತೀಶ್ ಕುಮಾರ್ ನೇತೃತ್ವದ ಮಹಾಮೈತ್ರಿಗೆ ತಮ್ಮ ಬೆಂಬಲವನ್ನು ನೀಡಿದ್ದರು.
165 ಶಾಸಕರು ಮಹಾಮೈತ್ರಿ ಸರ್ಕಾರವನ್ನು ಬೆಂಬಲಿಸುವ ಮೂಲಕ ಅಗತ್ಯವಿರುವ 121ಕ್ಕಿಂತ ಹೆಚ್ಚು ಶಾಸಕರ ಬೆಲೆ ನಿತೀಶ್ ಕುಮಾರ್ ಸರ್ಕಾರಕ್ಕೆ ಸಿಕ್ಕಿದಂತಾಗಿದೆ. ಇಂದು ನಡೆಯುವ ವಿಶ್ವಾಸಮತ ಯಾಚನೆ ವೇಳೆ ನಿತೀಶ್ ಕುಮಾರ್ ಸರ್ಕಾರ ಉಳಿಯುವುದರಲ್ಲಿ ಅನುಮಾನವಿಲ್ಲ.
Published On - 12:16 pm, Wed, 24 August 22