ಬಿಹಾರದಲ್ಲಿ ಸಿಎಂ ಗಾದಿಗೆ ಟಿಕೆಟ್ ವಿತರಣೆ ಸೂತ್ರ? ಜೆಡಿಯುಗೆ ಸಿಎಂ; ಬಿಜೆಪಿ, ಎಲ್​ಜೆಪಿಗೆ ಡಿಸಿಎಂ ಸ್ಥಾನ?

Bihar politics update: ಬಿಹಾರದಲ್ಲಿ ಬಿಜೆಪಿ ಅತಿದೊಡ್ಡ ಪಕ್ಷವಾದರೂ ಮುಖ್ಯಮಂತ್ರಿ ಸ್ಥಾನ ಸಿಗುವ ಸಾಧ್ಯತೆ ಕಡಿಮೆ ಎನ್ನಲಾಗಿದೆ. ಬಿಜೆಪಿಗಿಂತ 4 ಸ್ಥಾನ ಕಡಿಮೆ ಪಡೆದರೂ ಜೆಡಿಯುಗೆ ಸಿಎಂ ಸ್ಥಾನ ಮುಂದುವರಿಯಬಹುದು. ಚಿರಾಗ್ ಪಾಸ್ವಾನ್ ನೇತೃತ್ವದ ಎಲ್​ಜೆಪಿ ಹಾಗೂ ಬಿಜೆಪಿಗೆ ಒಂದೊಂದು ಡಿಸಿಎಂ ಸ್ಥಾನ ಸಿಗಬಹುದು ಎನ್ನಲಾಗುತ್ತಿದೆ.

ಬಿಹಾರದಲ್ಲಿ ಸಿಎಂ ಗಾದಿಗೆ ಟಿಕೆಟ್ ವಿತರಣೆ ಸೂತ್ರ? ಜೆಡಿಯುಗೆ ಸಿಎಂ; ಬಿಜೆಪಿ, ಎಲ್​ಜೆಪಿಗೆ ಡಿಸಿಎಂ ಸ್ಥಾನ?
ಬಿಜೆಪಿ

Updated on: Nov 16, 2025 | 4:56 PM

ಪಾಟ್ನಾ, ನವೆಂಬರ್ 16: ಬಿಹಾರ ವಿಧಾನಸಭಾ ಚುನಾವಣೆಯಲ್ಲಿ (Bihar elections) ಆಡಳಿತಾರೂಢ ಎನ್​ಡಿಎ ಮೈತ್ರಿಕೂಟ (NDA) 200ಕ್ಕೂ ಹೆಚ್ಚು ಸ್ಥಾನಗಳನ್ನು ಗೆದ್ದು ಭರ್ಜರಿ ಬಹುಮತ ಸಾಧಿಸಿದೆ. ಎನ್​ಡಿಎ ಮೈತ್ರಿಕೂಟದ ಪಕ್ಷಗಳಾದ ಜೆಡಿಯು, ಬಿಜೆಪಿ (BJP), ಎಲ್​ಜೆಪಿ ಪಕ್ಷಗಳು ಉತ್ತಮ ಸಾಧನೆ ಮಾಡಿವೆ. ಬಿಜೆಪಿ ಅತಿಹೆಚ್ಚು ಸ್ಥಾನ ಗೆದ್ದಿದೆಯಾದರೂ ಜೆಡಿಯು ಮತ್ತು ಅದರ ನಡುವಿನ ಸಂಖ್ಯೆಯಲ್ಲಿ ಹೆಚ್ಚಿನ ಅಂತರವೇನೂ ಇಲ್ಲ. ಹೀಗಾಗಿ, ಮುಖ್ಯಮಂತ್ರಿ ಸ್ಥಾನ ಯಾರಿಗೆ ಹೋಗಬಹುದು ಎಂದು ನಿಶ್ಚಿತವಾಗಿ ಹೇಳಲು ಆಗುವುದಿಲ್ಲ. ಅತಿದೊಡ್ಡ ಪಕ್ಷವಾಗಿರುವ ಬಿಜೆಪಿಗೆ ಸಿಎಂ ಸ್ಥಾನ ಹೋಗುತ್ತಾ ಎನ್ನುವ ವದಂತಿಗಳು ಇವೆ. ಆದರೆ, ಕೆಲ ವರದಿಗಳ ಪ್ರಕಾರ ಜೆಡಿಯು ಪಕ್ಷವೇ ಈ ಬಾರಿಯೂ ಸಿಎಂ ಸ್ಥಾನ ಇಟ್ಟುಕೊಳ್ಳಬಹುದು.

ಚುನಾವಣೆಗೆ ಮುನ್ನ ಟಿಕೆಟ್ ಹಂಚಿಕೆಯಲ್ಲಿ ಅನುಸರಿಸಲಾಗಿದ್ದ ಸೂತ್ರವನ್ನೇ ಸಿಎಂ ಸ್ಥಾನ ಹಾಗೂ ಮಂತ್ರಿ ಸ್ಥಾನ ಹಂಚಿಕೆಗೂ ಬಳಸಲು ನಿರ್ಧರಿಸಿರುವುದು ತಿಳಿದುಬಂದಿದೆ.

ಇದನ್ನೂ ಓದಿ: ಕೊಳಕು ಮೂತ್ರಪಿಂಡಕ್ಕೆ ಬದಲಾಗಿ ಚುನಾವಣಾ ಟಿಕೆಟ್, ಆರೋಪಗಳ ಬಗ್ಗೆ ರೋಹಿಣಿ ಆಚಾರ್ಯ ಬೇಸರ

ಸಂಸದರ ಸಂಖ್ಯೆಗೆ ಅನುಗುಣವಾಗಿ ಟಿಕೆಟ್ ಹಂಚುವುದು ಅಂದು ನಿರ್ಧರಿಸಿದ ಸೂತ್ರವಾಗಿತ್ತು. ಪ್ರತೀ ಸಂಸದರಿಗೆ 5-6 ವಿಧಾನಸಭಾ ಕ್ಷೇತ್ರಗಳನ್ನು ಹಂಚುವುದೆಂದು ನಿರ್ಧರಿಸಲಾಯಿತು. ಬಿಹಾರದಲ್ಲಿ ಬಿಜೆಪಿಯ 12, ಜೆಡಿಯುನ 12 ಸಂಸದರಿದ್ದಾರೆ. ಎಲ್​ಜೆಪಿ 5 ಮತ್ತು ಹೆಎಎಂಎಸ್​ನ 1 ಸಂಸದರಿದ್ದಾರೆ. ಅದರಂತೆ ಬಿಜೆಪಿ ಮತ್ತು ಜೆಡಿಯುಗೆ ಸಮವಾಗಿ 100 ಕ್ಷೇತ್ರಗಳ ಹಂಚಿಕೆ ಆಯಿತು.

ಅಂತಿಮವಾಗಿ ಬಿಹಾರದ 243 ಕ್ಷೇತ್ರಗಳ ವಿಧಾನಸಭೆಯಲ್ಲಿ ಎನ್​ಡಿಎ 202, ಮಹಾಘಟಬಂಧನ್ 35 ಸ್ಥಾನಗಳನ್ನು ಗೆದ್ದಿವೆ. ಇತರರು 6 ಸ್ಥಾನ ಗಳಿಸಿದ್ದಾರೆ.

ಎನ್​ಡಿಎ ಮೈತ್ರಿಕೂಟದಲ್ಲಿ ಬಿಜೆಪಿ 89, ಜೆಡಿಯು 85, ಎಲ್​ಜೆಪಿ 19, ಎಚ್​ಎಎಂಎಸ್ 5 ಮತ್ತು ಆರ್​ಎಲ್​ಎಂ 4 ಸ್ಥಾನಗಳನ್ನು ಗೆದ್ದಿವೆ. ಅದರಂತೆ ಮಂತ್ರಿಸ್ಥಾನದ ಹಂಚಿಕೆಯೂ ಅಗಬಹುದು. ಜೆಡಿಯು ಪಕ್ಷಕ್ಕೆ 14 ಮಂತ್ರಿಸ್ಥಾನ ಸಿಗಬಹುದು. ಬಿಜೆಪಿಗೂ ಅಷ್ಟೇ ಸ್ಥಾನ ಸಿಗಬಹುದು.

ಇದನ್ನೂ ಓದಿ: ಬಿಹಾರ ಚುನಾವಣೆ: 35 ಕ್ಷೇತ್ರಗಳಲ್ಲಿ ವಿರೋಧಿಗಳ ಗೆಲುವಿಗೆ ಕಾರಣರಾದ ಪ್ರಶಾಂತ್ ಕಿಶೋರ್

ಇಲ್ಲಿ ದಶಕಗಳಿಂದ ಬಿಜೆಪಿಯೊಂದಿಗಿನ ಮೈತ್ರಿಕೂಟದಲ್ಲಿ ಹಿರಿಯಣ್ಣನಾಗಿರುವ ಜೆಡಿಯು ಪಕ್ಷಕ್ಕೆ ಈ ಬಾರಿಯೂ ಸಿಎಂ ಸ್ಥಾನ ಸಿಗಬಹುದು. ಬಿಜೆಪಿ ಹಾಗು ಎಲ್​ಜೆಪಿಗೆ ಡಿಸಿಎಂ ಸ್ಥಾನ ಸಿಗಬಹುದು. ಲೋಕಜನಶಕ್ತಿ ಪಕ್ಷದ ಮುಖ್ಯಸ್ಥರಾಗಿರುವ ಚಿರಾಗ್ ಪಾಸ್ವಾನ್ ಉಪಮುಖ್ಯಮಂತ್ರಿ ಸ್ಥಾನ ಪಡೆಯಬಹುದು.

ಇನ್ನಷ್ಟು ರಾಷ್ಟ್ರೀಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ