
ಪಟ್ನಾ, ನವೆಂಬರ್ 14: ಬಿಹಾರ ವಿಧಾನಸಭಾ ಚುನಾವಣೆಯಲ್ಲಿ (Bihar assembly elections) ಎನ್ಡಿಎ ಮೈತ್ರಿಕೂಟ 243 ಸ್ಥಾನಗಳ ಪೈಕಿ 200ರ ಗಡಿ ದಾಟಿದೆ. ಬಿಜೆಪಿ ಇದೇ ಮೊದಲ ಬಾರಿಗೆ ಈ ರಾಜ್ಯದಲ್ಲಿ ಇತರ ಪಕ್ಷಗಳಿಗಿಂತ ಹೆಚ್ಚು ಸೀಟು ಜಯಿಸಿದೆ. ಎನ್ಡಿಎ ನಿಚ್ಚಳ ಬಹುಮತ ಬರುತ್ತಿದ್ದಂತೆಯೇ ಮುಂದಿನ ಸಿಎಂ ಯಾರು ಎನ್ನುವ ಸಹಜ ಪ್ರಶ್ನೆ ಎದುರಾಗಿದೆ. ಬರೋಬ್ಬರಿ 9 ಬಾರಿ ಮುಖ್ಯಮಂತ್ರಿಯಾಗಿರುವ ನಿತೀಶ್ ಕುಮಾರ್ (Nitish Kumar) ಅವರೇ ಸಿಎಂ ಆಗಿ ಮುಂದುವರಿಯುತ್ತಾರೆ ಎಂದು ಹೇಳಲಾಗುತ್ತಿದೆ. ಆದರೆ, ಬಿಜೆಪಿ ಅತಿಹೆಚ್ಚು ಸ್ಥಾನ ಪಡೆದ ಹಿನ್ನೆಲೆಯಲ್ಲಿ ಕೇಸರಿಪಾಳಯದಿಂದಲೇ ಒಬ್ಬರು ಸಿಎಂ ಆಗಬಹುದು ಎನ್ನುವ ಲೆಕ್ಕಾಚಾರ ಶುರುವಾಗಿದೆ.
ಮಹಾರಾಷ್ಟ್ರದಲ್ಲಿಯೂ ಇಂಥದ್ದೇ ಪರಿಸ್ಥಿತಿ ಇತ್ತು. ಶಿವಸೇನೆ ಮತ್ತು ಬಿಜೆಪಿ ಮೈತ್ರಿಕೂಟದ ಹಿಂದಿನ ಸರ್ಕಾರದಲ್ಲಿ ಶಿವಸೇನೆ ಹೆಚ್ಚು ಸ್ಥಾನ ಗಳಿಸಿತ್ತು. ಏಕನಾಥ್ ಶಿಂಧೆ ಸಿಎಂ ಆದರು. 2024ರಲ್ಲಿ ನಡೆದ ಚುನಾವಣೆಯಲ್ಲಿ ಶಿವಸೇನೆಗಿಂತ ಬಿಜೆಪಿ ಹೆಚ್ಚು ಸ್ಥಾನ ಗಳಿಸಿತು. ಶಿಂಧೆಯವರೇ ಸಿಎಂ ಆಗಿ ಮುಂದುವರಿಯಬಹುದು ಎಂದು ಎಲ್ಲರೂ ಎಣಿಸುತ್ತಿರುವಂತೆಯೇ ಬಿಜೆಪಿಯ ದೇವೇಂದ್ರ ಫಡಣವಿಸ್ ಅವರನ್ನು ಸಿಎಂ ಮಾಡಲಾಯಿತು. ಅಂಥದ್ದೇ ತಂತ್ರವನ್ನು ಬಿಹಾರದಲ್ಲೂ ಬಿಜೆಪಿ ಮಾಡುತ್ತಾ ಎಂಬುದು ಸ್ಪಷ್ಟ ಇಲ್ಲ.
ಬಿಹಾರದಲ್ಲಿ ಬಿಜೆಪಿಯವರೇ ಸಿಎಂ ಆಗುವುದಾದರೆ, ಹಿಂದಿನ ಸರ್ಕಾರದಲ್ಲಿ ಡಿಸಿಎಂ ಆಗಿದ್ದ ಸಾಮ್ರಾಟ್ ಚೌಧರಿ ಹೆಸರು ಮುಂಚೂಣಿಗೆ ಬರುತ್ತದೆ. ಚೌಧರಿ ಅವರು ಅಪಾರ ಸಂಘಟನಾ ಚಾತುರ್ಯ ಹೊಂದಿದ್ದು, ಸಾಕಷ್ಟು ರಾಜಕೀಯ ಅನುಭವ ಗಳಿಸಿದ್ದಾರೆ.
ಇದನ್ನೂ ಓದಿ: ಬಿಹಾರದಲ್ಲಿ ನಿಮೋ ಮೋಡಿ; ಫಲಿತಾಂಶಕ್ಕೂ ಮೊದಲೇ ಗೆಲುವಿನ ನಗು ಬೀರಿದ ನಿತೀಶ್-ಮೋದಿ ಜೋಡಿ
ಆದರೆ, 20 ವರ್ಷ ಕಾಲ 9 ಬಾರಿ ಮುಖ್ಯಮಂತ್ರಿಯಾಗಿರುವ ನಿತೀಶ್ ಕುಮಾರ್ ಅವರನ್ನು ಹಿಂದಿಕ್ಕಿ ಬಿಜೆಪಿ ಸಿಎಂ ಸ್ಥಾನ ಗಿಟ್ಟಿಸುವುದು ಕಷ್ಟದ ಕೆಲಸ. ಆದರೆ, ರಾಜಕೀಯದಲ್ಲಿ ಏನು ಬೇಕಾದರೂ ಆಗಬಹುದು. ಜೆಡಿಯು ಪಕ್ಷದ ಎಕ್ಸ್ ಅಕೌಂಟ್ನಲ್ಲಿ ಇವತ್ತು ಅಪ್ಲೋಡ್ ಆಗಿದ್ದ ಒಂದು ಪೋಸ್ಟ್ ಡಿಲೀಟ್ ಆಗಿರುವುದು ಊಹಾಪೋಹಗಳಿಗೆ ಎಡೆ ಮಾಡಿಕೊಟ್ಟಿದೆ.
ಎನ್ಡಿಎ ಮೈತ್ರಿಕೂಟ ಭರ್ಜರಿ ಬಹುಮತ ಗಳಿಸುವುದು ಖಚಿತವಾದೊಡನೆ ಜೆಡಿಯು, ‘ಹಿಂದೆಂದೂ ಕಂಡು ಕೇಳರಿಯದಂಥ ಗೆಲುವು. ನಿತೀಶ್ ಕುಮಾರ್ ಹಿಂದೆಯೂ ಮುಖ್ಯಮಂತ್ರಿ, ಮುಂದೆಯೂ ಮುಖ್ಯಮಂತ್ರಿ’ ಎಂದು ಎಕ್ಸ್ನಲ್ಲಿ ಪೋಸ್ಟ್ ಹಾಕಿತ್ತು. ಅದಾಗಿ ಕೆಲ ನಿಮಿಷಗಳಲ್ಲಿ ಪೋಸ್ಟ್ ಡಿಲೀಟ್ ಆಗಿತ್ತು.
ಹೀಗಾಗಿ, ನಿತೀಶ್ ಕುಮಾರ್ ಅವರು ಸಿಎಂ ಆಗಿ ಮುಂದುವರಿಯದೇ ಇರಬಹುದು. ಬಿಜೆಪಿ ಅಗ್ರಮಾನ್ಯ ಪಕ್ಷವಾದ್ದರಿಂದ ಸಿಎಂ ಸ್ಥಾನ ಕೂಡ ಆ ಪಕ್ಷಕ್ಕೇ ಹೋಗಬಹುದು ಎನ್ನುವ ವದಂತಿ ಹಬ್ಬುತ್ತಿದೆ. ಬಹಳ ಅನಿರೀಕ್ಷಿತ ನಿರ್ಧಾರಗಳನ್ನು ತೆಗೆದುಕೊಳ್ಳಲು ಖ್ಯಾತರಾಗಿರುವ ನಿತೀಶ್ ಕುಮಾರ್ ಅವರನ್ನು ಸಿಎಂ ಸ್ಥಾನಕ್ಕಾಗಿ ಎದುರಾಕಿಕೊಳ್ಳುವುದು ಬಿಜೆಪಿಗೆ ಸಾಧ್ಯವಾಗುತ್ತದಾ?
ಇದನ್ನೂ ಓದಿ: ಆರ್ಥಿಕತೆಯ ಉಸಿರುಗಟ್ಟಿಸುವ ಉಚಿತ ಕೊಡುಗೆಗಳು; ಕರ್ನಾಟಕದಂಥ ಕರ್ನಾಟಕವೇ ಥರಗುಟ್ಟುತ್ತಿರುವಾಗ ಬಿಹಾರ ನಿಲ್ಲಬಲ್ಲುದಾ?
ಒಟ್ಟು ಸ್ಥಾನ: 243
ಬಹುಮತಕ್ಕೆ ಬೇಕಿರುವುದು: 122 ಸ್ಥಾನ
ಇನ್ನಷ್ಟು ರಾಷ್ಟ್ರೀಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ