ಬಿಹಾರದಲ್ಲಿ ಏರುಗತಿಯಲ್ಲಿ ತಾಪಮಾನ, ಹೀಟ್ಸ್ಟ್ರೋಕ್ನಿಂದ 19 ಮಂದಿ ಸಾವು
ದೆಹಲಿ, ಬಿಹಾರ, ಹರ್ಯಾಣ ಸೇರಿದಂತೆ ಹಲವೆಡೆ ಶಾಖದ ಅಲೆ ಹೆಚ್ಚಾಗಿದೆ. ಬಿಹಾರದಲ್ಲಿ ಹೀಟ್ಸ್ಟ್ರೋಕ್ನಿಂದ 19 ಮಂದಿ ಸಾವನ್ನಪ್ಪಿರುವ ಘಟನೆ ವರದಿಯಾಗಿದೆ.
ಬಿಹಾರ(Bihar)ದಲ್ಲಿ ಬಿಸಿಲಿನ ತಾಪ ದಿನದಿಂದ ದಿನಕ್ಕೆ ಹೆಚ್ಚುತ್ತಿದ್ದು, ಹೀಟ್ಸ್ಟ್ರೋಕ್(Heat Stroke)ನಿಂದ 19 ಮಂದಿ ಸಾವನ್ನಪ್ಪಿದ್ದಾರೆ. ಬಿಹಾರದ ಔರಂಗಾಬಾದ್‌ನಲ್ಲಿ ಬಿಸಿಗಾಳಿಯಿಂದ ಸಾವನ್ನಪ್ಪಿದವರ ಸಂಖ್ಯೆ 12 ಕ್ಕೆ ತಲುಪಿದ್ದು, ಕೈಮೂರ್ ಜಿಲ್ಲೆಯಲ್ಲಿ ಗುರುವಾರ (ಮೇ 30) ಚುನಾವಣಾ ಕರ್ತವ್ಯದಲ್ಲಿದ್ದ ಸಿಬ್ಬಂದಿ ಸೇರಿದಂತೆ ನಾಲ್ವರು ಸಾವನ್ನಪ್ಪಿದ್ದಾರೆ ಮತ್ತು ಭೋಜ್‌ಪುರ ಜಿಲ್ಲೆಯ ಬಿಹಾರದ ಅರ್ರಾದಲ್ಲಿ ಮೂವರು ಸಾವನ್ನಪ್ಪಿದ್ದಾರೆ.
ಮೊಹಾನಿಯಾ ಆಸ್ಪತ್ರೆಯ ಡಾ. ಸಾಹಿಲ್ ಮಾತನಾಡಿ, ಗುರುವಾರ 40 ಮಂದಿ ಹೀಟ್ಸ್ಟ್ರೋಕ್ ಕಾರಣದಿಂದ ಆಸ್ಪತ್ರೆಗೆ ದಾಖಲಾಗಿದ್ದಾರೆ ಎಂದು ಹೇಳಿದ್ದಾರೆ. ವೃತ್ತಿಯಲ್ಲಿ ಶಿಕ್ಷಕರಾಗಿರುವ ಶಹನವಾಜ್ ಖಾನ್ ಅವರು ಚುನಾವಣಾ ಕರ್ತವ್ಯ ಮುಗಿಸಿ ಮನೆಗೆ ಮರಳಿದ್ದರು, ಮನೆಯಲ್ಲಿ ಮಲಿಗಿದ್ದಲ್ಲೇ ಅಸುನೀಗಿದ್ದಾರೆ.
ಭೋಜ್‌ಪುರ ಜಿಲ್ಲೆಯಲ್ಲಿ ಬಿಸಿಲಿನ ತಾಪಕ್ಕೆ ಮೂವರು ಸಾವನ್ನಪ್ಪಿದ್ದಾರೆ. ಅವರನ್ನು ಚಂದ್ರಮ ಗಿರಿ (80), ಗುಪ್ತನಾಥ ಶರ್ಮಾ (60) ಮತ್ತು ಕೇಶವ್ ಪ್ರಸಾದ್ ಸಿಂಗ್ (30) ಎಂದು ಗುರುತಿಸಲಾಗಿದೆ.
ಬಿಹಾರದ ಔರಂಗಾಬಾದ್‌ನಲ್ಲಿ, ಶಾಖದ ಅಲೆಯ ಪರಿಸ್ಥಿತಿಗಳಿಂದ ಸಾವನ್ನಪ್ಪಿದವರ ಸಂಖ್ಯೆ 12 ಕ್ಕೆ ತಲುಪಿದೆ, ಜಿಲ್ಲೆಯಾದ್ಯಂತ 20 ಕ್ಕೂ ಹೆಚ್ಚು ರೋಗಿಗಳು ವಿವಿಧ ಆಸ್ಪತ್ರೆಗಳಲ್ಲಿ ದಾಖಲಾಗಿದ್ದಾರೆ ಎಂದು ಔರಂಗಾಬಾದ್ ಆರೋಗ್ಯ ಇಲಾಖೆಯ ಅಧಿಕಾರಿಗಳು ತಿಳಿಸಿದ್ದಾರೆ.
ಮತ್ತಷ್ಟು ಓದಿ: Heat stroke: ಹೀಟ್ ಸ್ಟ್ರೋಕ್ ನಿರ್ಲಕ್ಷ್ಯವು ಬಹು ಅಂಗಾಂಗ ವೈಫಲ್ಯಕ್ಕೆ ಕಾರಣವಾದೀತು ಎಚ್ಚರ!
ಹವಾಮಾನ ಇಲಾಖೆಯು ಬಿಹಾರದಲ್ಲಿ ಮುಂದಿನ ಎರಡು ದಿನಗಳ ಕಾಲ ತೀವ್ರ ಶಾಖದ ಅಲೆಗಳ ಎಚ್ಚರಿಕೆಯನ್ನು ನೀಡಿದೆ. ಬಹುತೇಕ ಜಿಲ್ಲೆಗಳಲ್ಲಿ ಗರಿಷ್ಠ ತಾಪಮಾನ 45 ಡಿಗ್ರಿ ಸೆಲ್ಸಿಯಸ್ ದಾಟಿದೆ.
ರಾಜ್ಯದಲ್ಲಿ ಬಿಸಿಗಾಳಿಯ ಪರಿಸ್ಥಿತಿಗಳ ನಡುವೆ, ಬಿಹಾರ ಸರ್ಕಾರವು ಎಲ್ಲಾ ಖಾಸಗಿ ಮತ್ತು ಸರ್ಕಾರಿ ಶಾಲೆಗಳು, ಕೋಚಿಂಗ್ ಸಂಸ್ಥೆಗಳು ಮತ್ತು ಅಂಗನವಾಡಿ ಕೇಂದ್ರಗಳನ್ನು ಜೂನ್ 8 ರವರೆಗೆ ಮುಚ್ಚಲು ಬುಧವಾರ ಆದೇಶಿಸಿದೆ.
ಶೇಖ್‌ಪುರ, ಬೇಗುಸರೈ, ಮುಜಾಫರ್‌ಪುರ ಮತ್ತು ಪೂರ್ವ ಚಂಪಾರಣ್ ಜಿಲ್ಲೆಗಳು ಮತ್ತು ಇತರ ಪ್ರದೇಶಗಳಲ್ಲಿ ಬಿಸಿಲಿನ ತಾಪದಿಂದಾಗಿ ಶಾಲಾ ಶಿಕ್ಷಕರು ಮೂರ್ಛೆ ಹೋದ ಘಟನೆಗಳು ವರದಿಯಾಗಿವೆ. ಸರ್ಕಾರಿ ಶಾಲೆಗಳನ್ನು ವಿದ್ಯಾರ್ಥಿಗಳಿಗೆ ಮುಚ್ಚಲಾಗಿದೆ. ಆದರೆ ಶಿಕ್ಷಕರು ಬರುತ್ತಿದ್ದಾರೆ.
ದೆಹಲಿಯಲ್ಲಿ ಶಾಖದ ಅಲೆ ಜೋರಾಗಿದೆ. ನಗರದ ಹೊರವಲಯದಲ್ಲಿನ ಮುಂಗೇಶ್ ಪುರ ಹವಾಮಾನ ಕೇಂದ್ರವು 52.9 ಡಿಗ್ರಿ ಸೆಲ್ಸಿಯಸ್ ತಾಪಮಾನ ದಾಖಲಿಸಿದೆ. ದೆಹಲಿ ನಗರದಾದ್ಯಂತ ಸರಾಸರಿ 45-50% ಸೆಲ್ಸಿಯಸ್ ವ್ಯಾಪ್ತಿಯಲ್ಲಿದೆ ಎಂದು ಭಾರತೀಯ ಹವಾಮಾನ ಇಲಾಖೆ ಹೇಳಿದೆ.
ಔರಂಗಾಬಾದ್ (46.1 ಡಿಗ್ರಿ ಸಿ), ಡೆಹ್ರಿ (46 ಡಿಸೆ), ಗಯಾ (45.2 ಡಿಸೆ), ಅರ್ವಾಲ್ (44.8 ಡಿಸೆ) ಮತ್ತು ಭೋಜ್‌ಪುರ (44.1 ಡಿಗ್ರಿ ಸೆಲ್ಸಿಯಸ್) ದಾಖಲಾಗಿದೆ.
ಬಿಹಾರ ಮೂಲದ ವ್ಯಕ್ತಿಯೊಬ್ಬರು ಹೀಟ್ ಸ್ಟ್ರೋಕ್ ನಿಂದ ಸಾವನ್ನಪ್ಪಿರುವ ಘಟನೆಯೊಂದು ನಡೆದಿದೆ. ಈ ವ್ಯಕ್ತಿ ಕೂಲರ್ ಅಥವಾ ಫ್ಯಾನ್ ಇಲ್ಲದ ಕೋಣೆಯಲ್ಲಿ ಇರುತ್ತಿದ್ದರು. ಹೀಗಾಗಿ ಅವರಿಗೆ ಜ್ವರ ಕಾಣಿಸಿಕೊಂಡಿತ್ತು. ದೇಹದ ಉಷ್ಣಾಂಶವು 107 ಡಿಗ್ರಿ ಸೆಲ್ಸಿಯಸ್ ನಷ್ಟಿತ್ತು. ಸಾಮಾನ್ಯಕ್ಕಿಂತ ಸುಮಾರು 10 ಡಿಗ್ರಿ ಹೆಚ್ಚಾಗಿತ್ತು. ಆದರೆ, ಚಿಕಿತ್ಸೆ ಫಲಕಾರಿಯಾಗದೆ ಸಾವನ್ನಪ್ಪಿದ್ದಾರೆ ಎಂದು ವೈದ್ಯರು ಹೇಳಿದ್ದಾರೆ. ಹೀಗಾಗಿ ಅಲ್ಲಿಯ ಜನ ತೀವ್ರ ತರವಾದ ತೊಂದರೆ ಅನುಭವಿಸುವಂತಾಗಿದೆ.
ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
Published On - 8:01 am, Fri, 31 May 24