ಪಟನಾ: ಬಿಜೆಪಿಯಿಂದ ವಜಾಗೊಂಡಿರುವ ವಕ್ತಾರೆ ನೂಪುರ್ ಶರ್ಮಾ (Nupur Sharma) ಅವರನ್ನು ಬೆಂಬಲಿಸಿ ವಾಟ್ಸ್ಆಪ್ನಲ್ಲಿ (WhatsApp) ವಿಡಿಯೊವೊಂದನ್ನು ಶೇರ್ ಮಾಡಿದ್ದಕೆ ಇರಿತಕ್ಕೊಳಗಾಗಿರುವುದಾಗಿ ಬಿಹಾರದ(Bihar) ಸೀತಾಮರ್ಹಿಯ ಯುವಕನೊಬ್ಬ ಆರೋಪಿಸಿದ್ದಾನೆ. ಆದಾಗ್ಯೂ, ಈ ರೀತಿಯ ಯಾವುದೇ ಘಟನೆಗಳು ನಮ್ಮ ಗಮನಕ್ಕೆ ಬಂದಿಲ್ಲ ಎಂದು ಪೊಲೀಸರು ಹೇಳಿದ್ದಾರೆ. ಸ್ಥಳೀಯರಿಂದ ಲಭಿಸಿದ ಮಾಹಿತಿ ಪ್ರಕಾರ ಜುಲೈ 15ರಂದು ಸಂಜೆ ಸಿಗರೇಟ್ ನಶೆಯಲ್ಲಿದ್ದ ಯುವಕರ ನಡುವೆ ವಾಗ್ವಾದ ನಡೆದು ಯುವಕ ಇರಿತಕ್ಕೊಳಗಾಗಿದ್ದ ಎಂದು ಪೊಲೀಸರು ಹೇಳಿದ್ದಾರೆ. ದರ್ಭಂಗಾದಲ್ಲಿರುವ ನರ್ಸಿಂಗ್ ಹೋಂನಲ್ಲಿ ಅಂಕಿತ್ ಝಾ ಎಂಬ ಯುವಕ ಚಿಕಿತ್ಸೆ ಪಡೆಯುತ್ತಿದ್ದಾನೆ. ನೂಪುರ್ ಶರ್ಮಾ ಅವರ ವಿಡಿಯೊವನ್ನು ನಾನು ವಾಟ್ಸ್ಆಪ್ ಸ್ಟೇಟಸ್ ಮಾಡಿಕೊಂಡಿದ್ದೆ. ಅದನ್ನು ನಾನು ನೋಡುತ್ತಿರುವಾಗ ಹಿಂದಿನಿಂದ ಯಾರೋ ಬಂದು ಇರಿದಿದ್ದಾರೆ ಎಂದು ಝಾ ಆರೋಪಿಸಿದ್ದಾರೆ.
ಮರುದಿನವೇ ಝಾ ನಾಲ್ವರ ವಿರುದ್ಧ ದೂರು ನೀಡಿದ್ದಾರೆ. ಇದರಲ್ಲಿ ಇಬ್ಬರನ್ನು ಬಂಧಿಸಿ ಜೈಲಿಗಟ್ಟಲಾಗಿದೆ.
ನಾನ್ಪುರ್ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಜುಲೈ 15ರಂದು ಸಂಜೆ ಈ ಘಟನೆ ನಡೆದಿದೆ. ಇಲ್ಲಿನ ಪಾನ್ ಅಂಗಡಿಯ ಮುಂದೆ ನಾಲ್ವರು ಯುವಕರು ಸಿಗರೇಟ್ ವಿಷಯದಲ್ಲಿ ಜಗಳವಾಡಿದ್ದಾರೆ. ನಿನ್ನೆ ಮಧ್ಯಾಹ್ನ ಆತ ಈ ಘಟನೆಯನ್ನು ನೂಪುರ್ ಶರ್ಮಾ ಘಟನೆಗೆ ಲಿಂಕ್ ಮಾಡಿ ಮಾಧ್ಯಮಗಳಿಗೆ ಹೇಳಿಕೆ ನೀಡಿದ್ದಾನೆ. ಈ ಬಗ್ಗೆ ತನಿಖೆ ನಡೆಸಲಾಗುವುದು ಎಂದು ಸೀತಾಮರ್ಹಿಯ ಎಸ್ ಪಿ ಹರ್ ಕಿಶೋರ್ ರಾಯ್ ಹೇಳಿದ್ದಾರೆ. ಅಂಕಿತ್ ಝಾ ಆರೋಪದ ಮೇಲೆ ಹೊಸ ಎಫ್ಐಆರ್ ದಾಖಲಿಸಲಾಗಿದೆ ಎಂದು ಅವರು ಹೇಳಿದ್ದಾರೆ.
ಈ ಘಟನೆಯಲ್ಲಿ ಭಾಗಿಯಾಗಿದ್ದವರು ಎಲ್ಲರೂ ಹತ್ತಿರದ ಗ್ರಾಮದವರೇ ಆಗಿದ್ದು ಪರಸ್ಪರ ಪರಿಚಿತರು. ರಸ್ತೆ ಬದಿಯಲ್ಲಿರುವ ಪಾನ್ ಅಂಗಡಿ ಮುಂದೆ ಸಿಗರೇಟ್ ಸೇದುತ್ತಿರುವಾಗ ಜಗಳ ನಡೆದಿತ್ತು ಎಂದು ಸ್ಥಳೀಯರು ಹೇಳಿದ್ದಾರೆ.