Viral Video: ಐವರು ಸಹೋದ್ಯೋಗಿಗಳನ್ನೇ ಲಾಕಪ್​ಗೆ ತಳ್ಳಿದ ಪೊಲೀಸ್ ಅಧಿಕಾರಿ; ಸಿಬ್ಬಂದಿಯಿಂದ ವ್ಯಾಪಕ ಆಕ್ರೋಶ

| Updated By: Ghanashyam D M | ಡಿ.ಎಂ.ಘನಶ್ಯಾಮ

Updated on: Sep 11, 2022 | 7:10 AM

ಪೊಲೀಸರು ಲಾಕಪ್​ನಲ್ಲಿರುವ ವಿಡಿಯೊ ಇದೀಗ ವೈರಲ್ ಆಗಿದ್ದು, ಸಾವಿರಾರು ಮಂದಿ ಆಕ್ಷೇಪಿಸಿದ್ದಾರೆ.

Viral Video: ಐವರು ಸಹೋದ್ಯೋಗಿಗಳನ್ನೇ ಲಾಕಪ್​ಗೆ ತಳ್ಳಿದ ಪೊಲೀಸ್ ಅಧಿಕಾರಿ; ಸಿಬ್ಬಂದಿಯಿಂದ ವ್ಯಾಪಕ ಆಕ್ರೋಶ
ಪೊಲೀಸ್ ಅಧಿಕಾರಿಗಳನ್ನು ಲಾಕಪ್​ಗೆ ಹಾಕಿರುವುದು ವ್ಯಾಪಕ ಆಕ್ರೋಶಕ್ಕೆ ಕಾರಣವಾಗಿದೆ.
Follow us on

ಪಾಟ್ನಾ: ಐವರು ಅಧೀನ ಪೊಲೀಸ್ ಸಿಬ್ಬಂದಿಯನ್ನು ಲಾಕಪ್​ಗೆ ಹಾಕಿದ ಅಧಿಕಾರಿಯ ಕಾರ್ಯವೈಖರಿ ಬಗ್ಗೆ ದೇಶಾದ್ಯಂತ ವ್ಯಾಪಕ ಆಕ್ರೋಶ ವ್ಯಕ್ತವಾಗಿದೆ. ಬಿಹಾರದ ನವಾಡ ಪಟ್ಟಣದಲ್ಲಿ (Bihar’s Nawada town) ಈ ಘಟನೆ ನಡೆದಿದೆ. ಪೊಲೀಸ್ ಸಿಬ್ಬಂದಿ ನಿರೀಕ್ಷೆಯಂತೆ ಕೆಲಸ ಮಾಡುತ್ತಿಲ್ಲ ಎನ್ನುವ ಕಾರಣಕ್ಕೆ ಅಧಿಕಾರಿಯು ಅವರನ್ನು ಲಾಕಪ್​ಗೆ ದೂಡಿ, ಬೀಗ ಜಡಿದಿದ್ದಾರೆ. ಪೊಲೀಸರು ಲಾಕಪ್​ನಲ್ಲಿರುವ ವಿಡಿಯೊ ಇದೀಗ ವೈರಲ್ ಆಗಿದ್ದು, ಸಾವಿರಾರು ಮಂದಿ ಆಕ್ಷೇಪಿಸಿದ್ದಾರೆ. ‘ಇದು ವಿಷಾದಕರ ಬೆಳವಣಿಗೆ’ ಎಂದು ಹೇಳಿರುವ ಬಿಹಾರದ ಪೊಲೀಸ್ ಸಿಬ್ಬಂದಿಯ ಸಂಘ ‘ಬಿಹಾರ ಪೊಲೀಸ್ ಒಕ್ಕೂಟ’ವು ಘಟನೆಯ ಬಗ್ಗೆ ವಿಸ್ತೃತ ತನಿಖೆ ನಡೆಯಬೇಕು. ಎಸ್​ಪಿ ಗೌರವ್ ಮಂಗ್ಲಾ ಅವರ ಕಾರ್ಯವೈಖರಿಯ ಬಗ್ಗೆ ಪರಿಶೀಲನೆ ನಡೆಯಬೇಕಿದೆ ಎಂದು ಆಗ್ರಹಿಸಿದೆ.

ಸಬ್​-ಇನ್​ಸ್ಪೆಕ್ಟರ್​ಗಳಾದ ಶತ್ರುಘ್ನ ಪಾಸ್ವಾನ್ ಮತ್ತು ರಾಮ್​ರೇಖಾ ಸಿಂಗ್, ಎಎಸ್​ಐಗಳಾದ ಸಂತೋಷ್ ಪಾಸ್ವಾನ್, ಸಂಜಯ್ ಸಿಂಗ್ ಮತ್ತು ರಾಮೇಶ್ವರ್ ಉರೌನ್ ಅವರು ಲಾಕಪ್​ನಲ್ಲಿರುವುದನ್ನು ಸೆಕ್ಯುರಿಟಿ ಕ್ಯಾಮೆರಾಗಳು ತೋರಿಸಿವೆ. ಸುಮಾರು ಎರಡು ಗಂಟೆಯ ನಂತರ ಇವರೆಲ್ಲರೂ ಲಾಕಪ್​ನಿಂದ ಹೊರಗೆ ಬಂದಿದ್ದಾರೆ. ‘ನಡೆಯಬಾರದ್ದು ನಡೆದಿದೆ ಎನ್ನುವ ರೀತಿಯಲ್ಲಿ ಮಾಧ್ಯಮಗಳು ವರದಿ ಮಾಡುತ್ತಿವೆ. ವಾಸ್ತವದಲ್ಲಿ ಅಂಥದ್ದೇನೂ ನಡೆದಿಲ್ಲ’ ಎಂದು ಎಸ್​ಪಿ ಮಂಗ್ಲಾ ಹೇಳಿದ್ದಾರೆ. ಸ್ಟೇಷನ್ ಜವಾಬ್ದಾರಿ ಹೊತ್ತಿರುವ ಇನ್​ಸ್ಪೆಕ್ಟರ್ ವಿಜಯ್ ಕುಮಾರ್ ಸಿಂಗ್ ಸಹ ಎಸ್​ಪಿ ಹೇಳಿಕೆಯನ್ನು ಪುಷ್ಟೀಕರಿಸಿದ್ದಾರೆ.

ಕೆಲವು ಪ್ರಕರಣಗಳನ್ನು ಪರಿಶೀಲಿಸಲೆಂದು ಸೆಪ್ಟೆಂಬರ್ 8ರಂದು ಎಸ್​ಪಿ ಸ್ಥಳಕ್ಕೆ ಬಂದರು. ಈ ವೇಳೆ ಕೆಲ ಅಧಿಕಾರಿಗಳು ಕರ್ತವ್ಯ ನಿರ್ವಹಣೆಯಲ್ಲಿ ಲೋಪ ಎಸಗಿರುವುದು ಪತ್ತೆಯಾಗಿತ್ತು. ಇದರಿಂದ ಕೋಪಗೊಂಡ ತಪ್ಪು ಮಾಡಿದವರನ್ನು ಲಾಕಪ್​ನಲ್ಲಿ ಇರಿಸುವಂತೆ ಹೇಳಿದರು. ಆದರೆ ಇವರ ಕರ್ತವ್ಯಲೋಪ ಅಥವಾ ತಪ್ಪು ಏನು ಎಂದು ಮೂಲಗಳು ಹೇಳಿಲ್ಲ. ಈ ಬಗ್ಗೆ ಎಸ್​ಪಿ ಸಹ ಯಾವುದೇ ಪ್ರತಿಕ್ರಿಯೆ ನೀಡಿಲ್ಲ. ‘ಪೊಲೀಸರನ್ನು ಲಾಕಪ್​ಗೆ ಹಾಕಿರುವ ಯಾವುದೇ ವಿಡಿಯೊ ಬಹಿರಂಗಗೊಂಡಿಲ್ಲ’ ಎಂದು ಎಸ್​ಪಿ ಹೇಳಿದ್ದರು. ಆದರೆ ಅವರು ಹೇಳಿಕೆ ನೀಡಿದ ಮಾರನೇ ದಿನವೇ ವಾಟ್ಸಾಪ್​ ಗ್ರೂಪ್​ಗಳಲ್ಲಿ ಸಿಸಿಟಿವಿ ಫೂಟೇಜ್​ನ ವಿಡಿಯೊ ತುಣುಕು ಹರಿದಾಡಲು ಆರಂಭಿಸಿತು.

ಬಿಹಾರ ಪೊಲೀಸ್ ಒಕ್ಕೂಟದ ಅಧ್ಯಕ್ಷ ಮೃತ್ಯುಂಜಯ ಕುಮಾರ್ ಸಿಂಗ್ ಈ ಸಂಬಂಧ ಪತ್ರಿಕಾ ಹೇಳಿಕೆಯನ್ನು ಬಿಡುಗಡೆ ಮಾಡಿದ್ದಾರೆ. ‘ಎಸ್​ಪಿ ನಮ್ಮ ಫೋನ್ ಕರೆ ಸ್ವೀಕರಿಸುತ್ತಿಲ್ಲ. ಅಧೀನ ಸಿಬ್ಬಂದಿಯನ್ನು ಲಾಕಪ್​ಗೆ ಹಾಕಿರುವ ಬಗ್ಗೆ ತನಿಖೆ ನಡೆಯಬೇಕು’ ಎಂದು ಅವರು ಆಗ್ರಹಿಸಿದ್ದಾರೆ. ‘ಸಿಸಿಟಿವಿ ಫೂಟೇಜ್​ಗಳನ್ನು ಎಸ್​ಪಿ ತಿರುಚಬಹುದು. ಈ ಕೃತ್ಯವು ಪೊಲೀಸರ ಸ್ಥೈರ್ಯವನ್ನು ಕುಗ್ಗಿಸಿದೆ’ ಎಂದು ಅವರು ಆತಂಕ ವ್ಯಕ್ತಪಡಿಸಿದ್ದಾರೆ. ಈ ನಡುವೆ ಬಿಹಾರದ ಮುಖ್ಯ ಕಾರ್ಯದರ್ಶಿ ಮಾರ್ಗದರ್ಶಿ ಸೂಚನೆಗಳನ್ನು ಹೊರಡಿಸಿದ್ದು, ‘ಅಧೀನ ಸಿಬ್ಬಂದಿಯ ಬಗ್ಗೆ ವಿಪರೀತ ಕ್ರಮಗಳಿಗೆ ಮುಂದಾಗಬೇಡಿ’ ಎಂದು ಹೇಳಿದ್ದಾರೆ.

Published On - 7:10 am, Sun, 11 September 22