ಬಿಹಾರ ಮತದಾರರ ಪಟ್ಟಿ ಪರಿಷ್ಕರಣೆ, ಚುನಾವಣಾ ಆಯೋಗ ಮಾಡಬಾರದ್ದೇನೂ ಮಾಡಿಲ್ಲ ಎಂದ ಸುಪ್ರೀಂ

ಮತದಾರರ ಪಟ್ಟಿ ಪರಿಷ್ಕರಣೆಗೆ ಸಂಬಂಧಿಸಿದಂತೆ ಚುನಾವಣಾ ಆಯೋಗದ ಸೂಚನೆ ಸಂವಿಧಾನದ ಅಡಿಯಲ್ಲಿ ಕಡ್ಡಾಯವಾಗಿದೆ, ಕೊನೆಯ ಬಾರಿ 2003ರಲ್ಲಿ ಮಾಡಲಾಗಿತ್ತು ಎಂದು ಸುಪ್ರೀಂಕೋರ್ಟ್​ ಅಭಿಪ್ರಾಯಪಟ್ಟಿದೆ. ಬಿಹಾರ ವಿಧಾನಸಭಾ ಚುನಾವಣೆಗೂ ಮುನ್ನ ಮತದಾರರ ಪಟ್ಟಿ ಪರಿಷ್ಕರಣೆಗೆ ಸಂಬಂಧಿಸಿದಂತೆ ಚುನಾವಣಾ ಆಯೋಗ ನೀಡಿರುವ ಸೂಚನೆ ವಿರೋಧಿಸಿ ಹಲವರು ಸುಪ್ರೀಂಕೋರ್ಟ್​ ಮೆಟ್ಟಿಲೇರಿದ್ದರು.

ಬಿಹಾರ ಮತದಾರರ ಪಟ್ಟಿ ಪರಿಷ್ಕರಣೆ, ಚುನಾವಣಾ ಆಯೋಗ ಮಾಡಬಾರದ್ದೇನೂ ಮಾಡಿಲ್ಲ ಎಂದ ಸುಪ್ರೀಂ
ಸುಪ್ರೀಂಕೋರ್ಟ್​

Updated on: Jul 10, 2025 | 3:29 PM

ನವದೆಹಲಿ, ಜುಲೈ 10: ಬಿಹಾರದಲ್ಲಿ ಮತದಾರರ ಪಟ್ಟಿ ವಿಶೇಷ ಪರಿಷ್ಕರಣೆ(Special Intensive Revision )ಗೆ ಸಂಬಂಧಿಸಿದಂತೆ ಚುನಾವಣಾ ಆಯೋಗ ತೆಗೆದುಕೊಂಡಿರುವ ಕ್ರಮ ಸರಿಯಾಗಿಯೇ ಇದೆ ಎಂದು ಸುಪ್ರೀಂಕೋರ್ಟ್​ ಅಭಿಪ್ರಾಯಪಟ್ಟಿದೆ. ಚುನಾವಣಾ ಆಯೋಗ ತೆಗೆದುಕೊಂಡಿರುವ ಕ್ರಮ ಸಂವಿಧಾನದ ಅಡಿಯಲ್ಲಿ ಕಡ್ಡಾಯವಾಗಿದೆ. ಬಿಹಾರದಲ್ಲಿ 2003ರಲ್ಲಿ ಮತದಾರರ ಪಟ್ಟಿ ಪರಿಷ್ಕರಣೆ ಮಾಡಲಾಗಿತ್ತು ಎಂದು ಪೀಠ ಹೇಳಿದೆ. ಬಿಹಾರ ವಿಧಾನಸಭಾ ಚುನಾವಣೆ(Bihar Assembly Election)ಗೂ ಮುನ್ನ ಮತದಾರರ ಪಟ್ಟಿ ಪರಿಷ್ಕರಣೆಗೆ ಸಂಬಂಧಿಸಿದಂತೆ ಚುನಾವಣಾ ಆಯೋಗ ನೀಡಿರುವ ಸೂಚನೆ ವಿರೋಧಿಸಿ ಹಲವರು ಸುಪ್ರೀಂಕೋರ್ಟ್​ ಮೆಟ್ಟಿಲೇರಿದ್ದರು.

ಇಂದು ಅರ್ಜಿಗಳ ವಿಚಾರಣೆ ನಡೆಸಿರುವ ನ್ಯಾಯಮೂರ್ತಿಗಳಾದ ಸುಧಾಂಶು ಧುಲಿಯಾ ಮತ್ತು ಜೋಯ್ಮಲ್ಯ ಬಾಗ್ಚಿ ಅವರ ಪೀಠ ಈ ಅಭಿಪ್ರಾಯ ವ್ಯಕ್ತಪಡಿಸಿದೆ. ಚುನಾವಣಾ ಆಯೋಗ ಮಾಡುತ್ತಿರುವ ಕೆಲಸ ಸರಿ ಇದೆ.ಈ ಕ್ರಮ ಸಂವಿಧಾನದ ಆದೇಶಕ್ಕೆ ಅನುಗುಣವಾಗಿದೆ ಎಂದು ಹೇಳಿದೆ.

ಬಿಹಾರದಲ್ಲಿ ಮತದಾರರ ಪಟ್ಟಿಯ ವಿಶೇಷ ಪರಿಷ್ಕರಣೆ (SIR) ಪ್ರಕ್ರಿಯೆಯನ್ನು ಇಷ್ಟು ತಡವಾಗಿ ಏಕೆ ಪ್ರಾರಂಭಿಸಿದೆ ಎಂದು ಸುಪ್ರೀಂ ಕೋರ್ಟ್ ಚುನಾವಣಾ ಆಯೋಗವನ್ನು ಕೇಳಿದೆ.ಅವರು ಸಂವಿಧಾನದ ಅಡಿಯಲ್ಲಿ ಏನುಮಾಡಬೇಕೋ ಅದನ್ನೇ ಮಾಡಿದ್ದಾರೆ, ಮಾಡಬಾರದ್ದನ್ನೇನು ಮಾಡಿಲ್ಲ ಎಂದು ಪೀಠ ಹೇಳಿದೆ. ಸುಪ್ರೀಂ ಕೋರ್ಟ್‌ನಲ್ಲಿ 10 ಕ್ಕೂ ಹೆಚ್ಚು ಅರ್ಜಿಗಳನ್ನು ಸಲ್ಲಿಸಲಾಗಿದ್ದು, ಅದರಲ್ಲಿ ‘ಅಸೋಸಿಯೇಷನ್ ​​ಫಾರ್ ಡೆಮಾಕ್ರಟಿಕ್ ರಿಫಾರ್ಮ್ಸ್’ ಎಂಬ ಸರ್ಕಾರೇತರ ಸಂಸ್ಥೆ ಕೂಡ ಒಂದು ಅರ್ಜಿಯನ್ನು ಸಲ್ಲಿಸಿದೆ.

ಜೂನ್ 24 ರಂದು, ಚುನಾವಣಾ ಆಯೋಗ ಬಿಹಾರದಲ್ಲಿ ಮತದಾರರ ಪಟ್ಟಿಯ ವಿಶೇಷ ಪರಿಷ್ಕರಣೆ (SIR) ನಡೆಸಲು ಸೂಚನೆಗಳನ್ನು ನೀಡಿತು, ಇದು ಅನರ್ಹ ಹೆಸರುಗಳನ್ನು ತೆಗೆದುಹಾಕುವ ಮತ್ತು ಅರ್ಹ ನಾಗರಿಕರನ್ನು ಮಾತ್ರ ಸೇರಿಸುವುದನ್ನು ಖಚಿತಪಡಿಸಿಕೊಳ್ಳುವ ಗುರಿಯನ್ನು ಹೊಂದಿದೆ.
ಮತದಾರರ ಪರಿಶೀಲನೆಗಾಗಿ ಬೂತ್ ಮಟ್ಟದ ಅಧಿಕಾರಿಗಳು ಮನೆ-ಮನೆ ಸಮೀಕ್ಷೆಯ ಮೂಲಕ ಈ ಕಾರ್ಯವನ್ನು ನಡೆಸುತ್ತಿದ್ದಾರೆ.

ಮತ್ತಷ್ಟು ಓದಿ: ಬಿಹಾರ: ಮತದಾರರ ಪಟ್ಟಿ ವಿಶೇಷ ಪರಿಷ್ಕರಣೆಗೆ ಮಧ್ಯಂತರ ತಡೆ ನೀಡಲು ಸುಪ್ರೀಂ ನಕಾರ, ಜು. 10ಕ್ಕೆ ವಿಚಾರಣೆ

ಸಂವಿಧಾನದ 326 ನೇ ವಿಧಿ ಮತ್ತು 1950 ರ ಜನತಾ ಪ್ರಾತಿನಿಧ್ಯ ಕಾಯ್ದೆಯ ಸೆಕ್ಷನ್ 16 ರಲ್ಲಿ ವಿವರಿಸಿರುವಂತೆ ಈ ಪ್ರಕ್ರಿಯೆಯು ಸಾಂವಿಧಾನಿಕ ಮತ್ತು ಕಾನೂನು ನಿಬಂಧನೆಗಳನ್ನು ಕಟ್ಟುನಿಟ್ಟಾಗಿ ಅನುಸರಿಸುತ್ತದೆ ಎಂದು ಚುನಾವಣಾ ಆಯೋಗವು ಭರವಸೆ ನೀಡಿದೆ. ಈ ಪಟ್ಟಿ ಪರಿಷ್ಕರಣೆ ಮಾಡದಿದ್ದರೆ ಹೊಸ ಮತದಾರರು, ಅಥವಾ ಸವನ್ನಪ್ಪಿರುವವರ ಕುರಿತು ದಾಖಲೆ ಲಭ್ಯವಾಗುವುದಿಲ್ಲ.

ಆರ್‌ಜೆಡಿ ಸಂಸದ ಮನೋಜ್ ಝಾ ಮತ್ತು ತೃಣಮೂಲ ಕಾಂಗ್ರೆಸ್ ಸಂಸದ ಮಹುವಾ ಮೊಯಿತ್ರಾ, ಕಾಂಗ್ರೆಸ್‌ನ ಕೆ.ಸಿ. ವೇಣುಗೋಪಾಲ್, ಎನ್‌ಸಿಪಿ (ಎಸ್‌ಪಿ) ನಾಯಕಿ ಸುಪ್ರಿಯಾ ಸುಳೆ, ಸಿಪಿಐ ನಾಯಕ ಡಿ. ರಾಜಾ, ಸಮಾಜವಾದಿ ಪಕ್ಷದ ಹರಿಂದರ್ ಸಿಂಗ್ ಮಲಿಕ್, ಶಿವಸೇನೆ (ಯುಬಿಟಿ) ನಾಯಕ ಅರವಿಂದ್ ಸಾವಂತ್, ಜೆಎಂಎಂನ ಸರ್ಫರಾಜ್ ಅಹ್ಮದ್ ಮತ್ತು ಸಿಪಿಐ (ಎಂಎಲ್) ನ ದೀಪಂಕರ್ ಭಟ್ಟಾಚಾರ್ಯ ಕೂಡ ಚುನಾವಣಾ ಆಯೋಗದ ಆದೇಶವನ್ನು ರದ್ದುಗೊಳಿಸಲು ನಿರ್ದೇಶನ ಕೋರಿ ಸುಪ್ರೀಂ ಕೋರ್ಟ್‌ಗೆ ಅರ್ಜಿ ಸಲ್ಲಿಸಿದ್ದಾರೆ.

 

ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ 

Published On - 12:58 pm, Thu, 10 July 25