AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಪ್ರಧಾನಿ ಮೋದಿಯನ್ನು ಭೇಟಿಯಾದ ಬಿಲ್ ಗೇಟ್ಸ್; ಭಾರತದ ಅಭಿವೃದ್ಧಿಯ ಪ್ರಗತಿಗೆ ಶ್ಲಾಘನೆ

ಬಿಲ್ ಗೇಟ್ಸ್ ತಮ್ಮ ಭಾರತ ಭೇಟಿಯ ಸಮಯದಲ್ಲಿ ಪ್ರಧಾನಿ ನರೇಂದ್ರ ಮೋದಿ ಮತ್ತು ಹಿರಿಯ ಸಚಿವರನ್ನು ಭೇಟಿಯಾಗಿದ್ದಾರೆ. ಈ ವೇಳೆ ಭಾರತ ದೇಶದ ಅಭಿವೃದ್ಧಿಯನ್ನು ಶ್ಲಾಘಿಸಿದ್ದಾರೆ. AI, ಆರೋಗ್ಯ ರಕ್ಷಣೆ, ಕೃಷಿ, ಸುಸ್ಥಿರತೆ ಮತ್ತು ವಿಕಸಿತ್ ಭಾರತ್ 2047ನಂತಹ ದೀರ್ಘಕಾಲೀನ ಬೆಳವಣಿಗೆಯ ಗುರಿಗಳ ಮೇಲೆ ಪ್ರಮುಖ ಚರ್ಚೆಗಳು ನಡೆದವು. ಪ್ರಧಾನಿ ಮೋದಿಯವರನ್ನು ಮಾತ್ರವಲ್ಲದೆ ಚಂದ್ರಬಾಬು ನಾಯ್ಡು, ಬಿಜೆಪಿ ರಾಷ್ಟ್ರಾಧ್ಯಕ್ಷ ಜೆ.ಪಿ. ನಡ್ಡಾ ಮುಂತಾದವರನ್ನು ಕೂಡ ಬಿಲ್ ಗೇಟ್ಸ್ ಭೇಟಿಯಾಗಿದ್ದಾರೆ. ಈ ವೇಳೆ ಅವರು ಭಾರತದ ನಾವೀನ್ಯತೆ ಮತ್ತು ಅಭಿವೃದ್ಧಿಯ ಪ್ರಗತಿಯನ್ನು ಶ್ಲಾಘಿಸಿದ್ದಾರೆ.

ಪ್ರಧಾನಿ ಮೋದಿಯನ್ನು ಭೇಟಿಯಾದ ಬಿಲ್ ಗೇಟ್ಸ್; ಭಾರತದ ಅಭಿವೃದ್ಧಿಯ ಪ್ರಗತಿಗೆ ಶ್ಲಾಘನೆ
Bill Gates With Pm Modi
ಸುಷ್ಮಾ ಚಕ್ರೆ
|

Updated on: Mar 19, 2025 | 9:47 PM

Share

ನವದೆಹಲಿ, ಮಾರ್ಚ್ 19: ಖ್ಯಾತ ಲೋಕೋಪಕಾರಿ ಮತ್ತು ಮೈಕ್ರೋಸಾಫ್ಟ್ ಸಹ ಸಂಸ್ಥಾಪಕ ಬಿಲ್ ಗೇಟ್ಸ್ ಇಂದು ಭಾರತದ ಭೇಟಿಯ ಸಮಯದಲ್ಲಿ ಪ್ರಧಾನಿ ನರೇಂದ್ರ ಮೋದಿ ಮತ್ತು ಹಲವಾರು ಹಿರಿಯ ನಾಯಕರನ್ನು ಭೇಟಿಯಾದರು. ಈ ವೇಳೆ ತಂತ್ರಜ್ಞಾನ, ಆರೋಗ್ಯ ರಕ್ಷಣೆ, ಸುಸ್ಥಿರತೆ ಮತ್ತು ಭವಿಷ್ಯದ ಅಭಿವೃದ್ಧಿಯ ಕುರಿತು ವ್ಯಾಪಕ ಚರ್ಚೆಗಳಲ್ಲಿ ತೊಡಗಿಕೊಂಡರು. ಸಾಮಾಜಿಕ ಮಾಧ್ಯಮ ವೇದಿಕೆ ಎಕ್ಸ್​ ನಲ್ಲಿ ಪೋಸ್ಟ್ ಮಾಡಿದ ಬಿಲ್ ಗೇಟ್ಸ್, “ಭಾರತದ ಅಭಿವೃದ್ಧಿ, ವಿಕಸಿತ್ ಭಾರತ್ @ 2047ರ ಹಾದಿ ಮತ್ತು ಆರೋಗ್ಯ, ಕೃಷಿ, ಎಐ ಹಾಗೂ ಇಂದು ಪ್ರಭಾವ ಬೀರುತ್ತಿರುವ ಇತರ ವಲಯಗಳಲ್ಲಿನ ಅತ್ಯಾಕರ್ಷಕ ಪ್ರಗತಿಗಳ ಬಗ್ಗೆ ನರೇಂದ್ರ ಮೋದಿ ಅವರೊಂದಿಗೆ ನಾನು ಉತ್ತಮ ಚರ್ಚೆ ನಡೆಸಿದೆ” ಎಂದು ಹೇಳಿದ್ದಾರೆ.

“ಬಿಲ್ ಗೇಟ್ಸ್ ಜೊತೆಗಿನ ನಮ್ಮ ಸಭೆ ಬಹಳ ಅತ್ಯುತ್ತಮವಾಗಿತ್ತು. ಮುಂಬರುವ ಪೀಳಿಗೆಗೆ ಉತ್ತಮ ಭವಿಷ್ಯವನ್ನು ರೂಪಿಸುವ ನಿಟ್ಟಿನಲ್ಲಿ ತಂತ್ರಜ್ಞಾನ, ನಾವೀನ್ಯತೆ ಮತ್ತು ಸುಸ್ಥಿರತೆ ಸೇರಿದಂತೆ ವೈವಿಧ್ಯಮಯ ವಿಷಯಗಳ ಬಗ್ಗೆ ನಾವು ಮಾತನಾಡಿದ್ದೇವೆ” ಎಂದು ಪ್ರಧಾನಿ ಮೋದಿ ಕೂಡ ಎಕ್ಸ್​ ನಲ್ಲಿ ಪೋಸ್ಟ್ ಮಾಡಿದ್ದಾರೆ. ತಮ್ಮ ಭೇಟಿಯ ಸಮಯದಲ್ಲಿ ಬಿಲ್ ಗೇಟ್ಸ್ ಕೇಂದ್ರ ಆರೋಗ್ಯ ಸಚಿವ ಜೆ.ಪಿ ನಡ್ಡಾ ಅವರನ್ನು ಭೇಟಿ ಮಾಡಿ, ಸಾರ್ವಜನಿಕ ಆರೋಗ್ಯ ವ್ಯವಸ್ಥೆಗಳನ್ನು ಬಲಪಡಿಸುವಲ್ಲಿ ಭಾರತ ಸರ್ಕಾರ ಮತ್ತು ಬಿಲ್ & ಮೆಲಿಂಡಾ ಗೇಟ್ಸ್ ಫೌಂಡೇಶನ್ ನಡುವಿನ ಸಹಯೋಗವನ್ನು ಪರಿಶೀಲಿಸಿದ್ದಾರೆ.

ಇದನ್ನೂ ಓದಿ: ಹೈನುಗಾರಿಕೆ, ರಸಗೊಬ್ಬರ ಮತ್ತು ಡಿಜಿಟಲ್ ಪಾವತಿ ಕ್ಷೇತ್ರಗಳಿಗೆ 16,000 ಕೋಟಿ ರೂ. ಅನುದಾನಕ್ಕೆ ಮೋದಿ ಸರ್ಕಾರ ಅನುಮೋದನೆ

“ಎಲ್ಲಾ ನಾಗರಿಕರಿಗೆ ಕೈಗೆಟುಕುವ ಮತ್ತು ಗುಣಮಟ್ಟದ ಆರೋಗ್ಯ ರಕ್ಷಣೆಯನ್ನು ಖಾತ್ರಿಪಡಿಸಿಕೊಳ್ಳಲು ನಮ್ಮ ಹಂಚಿಕೆಯ ಬದ್ಧತೆಯನ್ನು ಮತ್ತಷ್ಟು ಹೆಚ್ಚಿಸಲು, ನಮ್ಮ ಸಹಕಾರದ ಜ್ಞಾಪಕ ಪತ್ರವನ್ನು ನವೀಕರಿಸಲು ನಾವು ಎದುರು ನೋಡುತ್ತಿದ್ದೇವೆ” ಎಂದು ಜೆ.ಪಿ. ನಡ್ಡಾ ಹೇಳಿದರು.

ಬಳಿಕ, ಬಿಲ್ ಗೇಟ್ಸ್ ಆಂಧ್ರಪ್ರದೇಶದ ಮುಖ್ಯಮಂತ್ರಿ ಎನ್ ಚಂದ್ರಬಾಬು ನಾಯ್ಡು ಅವರೊಂದಿಗೆ ಕೂಡ ಚರ್ಚೆ ನಡೆಸಿದರು. ಆರೋಗ್ಯ, ಶಿಕ್ಷಣ, ಕೃಷಿ ಮತ್ತು ಉದ್ಯೋಗದಲ್ಲಿ ಸೇವೆಗಳ ವಿತರಣೆಯನ್ನು ಸುಧಾರಿಸಲು ಕೃತಕ ಬುದ್ಧಿಮತ್ತೆ (AI) ಮತ್ತು ಮುನ್ಸೂಚಕ ವಿಶ್ಲೇಷಣೆಯ ಬಳಕೆಯ ಮೇಲೆ ಕೇಂದ್ರೀಕರಿಸಿದರು. ಎಕ್ಸ್​ ನಲ್ಲಿ ಪೋಸ್ಟ್ ಮಾಡಿರುವ ಚಂದ್ರಬಾಬು ನಾಯ್ಡು, ಸ್ವರ್ಣ ಆಂಧ್ರಪ್ರದೇಶ 2047ರ ರಾಜ್ಯದ ದೀರ್ಘಕಾಲೀನ ಅಭಿವೃದ್ಧಿ ದೃಷ್ಟಿಕೋನವನ್ನು ಸಾಕಾರಗೊಳಿಸುವಲ್ಲಿ ಬಿಲ್ ಗೇಟ್ಸ್ ಫೌಂಡೇಶನ್ ನೀಡಿದ ಬೆಂಬಲವನ್ನು ಶ್ಲಾಘಿಸಿದ್ದಾರೆ.

ಇನ್ನಷ್ಟು ರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ