ಮತ್ತೊಂದು ಅಚ್ಚರಿ ಆಯ್ಕೆ: ಬಿಜೆಪಿ ರಾಷ್ಟ್ರೀಯ ಕಾರ್ಯಾಧ್ಯಕ್ಷ ಸ್ಥಾನಕ್ಕೆ ಯುವ ನಾಯಕನಿಗೆ ಮಣೆ
ಹಲವು ತಿಂಗಳಿನಿಂದ ನೆನೆಗುದಿಗೆ ಬಿದ್ದಿರುವ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಸ್ಥಾನಕ್ಕೆ, ಈ ವರ್ಷಾಂತ್ಯದ ವೇಳೆ ಹೆಸರು ಘೋಷಣೆಯಾಗುವುದು ಬಹುತೇಕ ಖಚಿತ ಎಂದು ಹೇಳಲಾಗುತ್ತಿದೆ. ಜೆಪಿ ನಡ್ಡಾ ಅವರ ಸ್ಥಾನಕ್ಕೆ ಬೇರೊಬ್ಬರನ್ನು ಕೂರಿಸಲು ಚಿಂತನೆಗಳು ನಡೆದಿದ್ದು, ರಾಷ್ಟ್ರೀಯ ಅಧ್ಯಕ್ಷರ ರೇಸ್ನಲ್ಲಿ ಹಲವರ ಹೆಸರುಳು ಕೇಳಿಬರುತ್ತಿವೆ. ಇದರ ನಡುವೆ ಇದೀಗ ಬಿಜೆಪಿ ರಾಷ್ಟ್ರೀಯ ಕಾರ್ಯಧ್ಯಕ್ಷರನ್ನ ಆಯ್ಕೆ ಮಾಡಲಾಗಿದ್ದು, ಅತ್ಯಂತ ಕಿರಿಯ, ಯುವ ನಾಯಕನಿಗೆ ಮಣೆಹಾಕಲಾಗಿದೆ. ಹಾಗಾದ್ರೆ, ಕಿರಿಯ ವಯಸ್ಸಿನಲ್ಲೇ ಬಿಜೆಪಿ ಕಾರ್ಯಧ್ಯಕ್ಷರಾಗಿ ಆಯ್ಕೆಯಾದವರು ಯಾರು? ಅವರ ರಾಜಕೀಯ ಹಾದಿ ಈ ಕೆಳಗಿನಂತಿದೆ ನೋಡಿ.

ನವದೆಹಲಿ, (ಡಿಸೆಂಬರ್ 14): ಬಿಜೆಪಿ (BJP) ರಾಷ್ಟ್ರೀಯ ಅಧ್ಯಕ್ಷರ ಆಯ್ಕೆ ಮುನ್ನ ರಾಜ್ಯಾಧ್ಯಕ್ಷ, ಕಾರ್ಯಾಧ್ಯಕ್ಷರನ್ನು ಆಯ್ಕೆ ಮಾಡಲಾಗಿದೆ. ತೀವ್ರ ಕುತೂಹಲಕ್ಕೆ ಕಾರಣವಾಗಿದ್ದ ಉತ್ತರ ಪ್ರದೇಶ ರಾಜ್ಯಾಧ್ಯಕ್ಷರಾಗಿ ಕೇಂದ್ರ ಹಣಕಾಸು ರಾಜ್ಯ ಸಚಿವರಾಗಿರುವ ಪಂಕಜ್ ಚೌಧರಿ ಅವರನ್ನು ನೇಮಕ ಮಾಡಲಾಗಿದೆ. ಇದರ ಜೊತೆಗೆ ಬಿಜೆಪಿ ರಾಷ್ಟ್ರೀಯ ಕಾರ್ಯಾಧ್ಯಕ್ಷರನ್ನಾಗಿ ಯುವ ನಾಯಕ ನಿತಿನ್ ನಬಿನ್ ( Nitin Nabin) ಅವರನ್ನು ಆಯ್ಕೆ ಮಾಡಲಾಗಿದೆ. ಈ ಕುರಿತು ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಅರುಣ್ ಸಿಂಗ್ ಇಂದು (ಡಿಸೆಂಬರ್ 14) ಅಧಿಕೃತ ಪ್ರಕಟಣೆ ಹೊರಡಿಸಿದ್ದಾರೆ. ಈ ಮೂಲಕ ಕಾರ್ಯಧ್ಯಕ್ಷ ಸ್ಥಾನಕ್ಕೆ ಕಿರಿಯ ನಾಯಕನಿಗೆ ಮಣೆ ಹಾಕಿರುವುದು ಅಚ್ಚರಿ ಮೂಡಿಸಿದೆ.
ಅಭಿನಂದನೆ ತಿಳಿಸಿದ ಪ್ರಧಾನಿ ಮೋದಿ
ನಿತಿನ್ ನಬಿ ಆಯ್ಕೆಗೆ ಪ್ರಧಾನಿ ನರೇಂದ್ರ ಮೋದಿ ಅಭಿನಂದನೆ ಸಲ್ಲಿಸಿದ್ದಾರೆ. ಪಕ್ಷದ ನಿಷ್ಠಾವಂತ ಕಾರ್ಯಕರ್ತ, ಪಕ್ಷದ ಚಟುವಟಿಕೆಗಳಲ್ಲಿ ಗುರುತಿಸಿಕೊಂಡಿರುವ ನಾಯಕ ನಿತಿನ್ ನಬಿನ್ ಅವರಿಗೆ ಅಭಿನಂದನೆಗಳು. ಯುವ ನಾಯಕ ತನ್ನ ಕಠಿಣ ಪರಿಶ್ರಮದ ಮೂಲಕ ಪಕ್ಷದಲ್ಲಿ ಅಪಾರ ಅನುಭವ ಪಡೆದಿದ್ದಾರೆ. ಬಿಹಾರದಲ್ಲಿ ಶಾಸಕರಾಗಿ, ಸಚಿವರಾಗಿ ಉತ್ತಮ ಸೇವೆ ಸಲ್ಲಿಸಿದ್ದಾರೆ. ಜನರ ಆಶೋತ್ತರಗಳು, ಅವರ ಸಮಸ್ಯೆಗಳನ್ನು ಆಲಿಸಿ ಪರಿಹರಿಸುವ ಪ್ರಾಮಾಣಿಕ ಪ್ರಯತ್ನ ಮಾಡಿದ್ದಾರೆ. ಪ್ರತಿಯೊಬ್ಬರನ್ನು ಗೌರವದಿಂದ ಕಾಣುವ ನಿತಿನ್ ನಬಿ ಕಾರ್ಯಾಧ್ಯಕ್ಷತೆಯಲ್ಲಿ ಬಿಜೆಪಿ ಮತ್ತಷ್ಟು ಉತ್ತುಂಗಕ್ಕೆ ಏರಲಿದೆ. ನಿತಿನ್ ನಬಿನ್ ಮೇಲೆ ನನಗೆ ಸಂಪೂರ್ಣ ವಿಶ್ವಾಸವಿದೆ ಎಂದು ಪ್ರಧಾನಿ ಮೋದಿ ಸಾಮಾಜಿ ಜಾಲತಾಣಗಳಲ್ಲಿ ಹಂಚಿಕೊಂಡಿದ್ದಾರೆ.
Shri Nitin Nabin Ji has distinguished himself as a hardworking Karyakarta. He is a young and industrious leader with rich organisational experience and has an impressive record as MLA as well as Minister in Bihar for multiple terms. He has diligently worked to fulfil people’s…
— Narendra Modi (@narendramodi) December 14, 2025
ಇವರೇ ಮುಂದಿನ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷರು?
ಹೌದು..ಕಾರ್ಯಾಧ್ಯಕ್ಷರಾಗಿ ಆಯ್ಕೆಯಾಗಿರುವ ನಿತಿನ್ ನಬಿನ್ ಅವರೇ ರಾಷ್ಟ್ರೀಯ ಅಧ್ಯಕ್ಷರಾಗಲಿದೆ ಎನ್ನುವ ಸುದ್ದಿ ಕೇಳಿಬಂದಿದೆ. ಜೆ.ಪಿ ನಡ್ಡಾ ಸ್ಥಾನವನ್ನು ನಿತಿನ್ ನಬಿನ್ ತುಂಬಲಿದ್ದಾರೆ ಎನ್ನುವ ಚರ್ಚೆ ಜೋರಾಗಿದೆ. ಹೀಗಾಗಿ ಅವರನ್ನು ಮೊದಲಿಗೆ ಕಾರ್ಯಾಧ್ಯಕ್ಷರನ್ನಾಗಿ ಆಯ್ಕೆ ಮಾಡಲಾಗಿದೆ ಎನ್ನಲಾಗಿದೆ.
ಒಂದು ವೇಳೆ ಅಂದುಕೊಂಡಂತೆ ಆದರೆ ಬಿಜೆಪಿಯ ಅತ್ಯಂತ ಕಿರಿಯ ಅಧ್ಯಕ್ಷ ಎನ್ನುವ ಹೆಗ್ಗಳಿಕೆ ನಬಿನ್ ಪಾತ್ರರಾಗಲಿದ್ದಾರೆ. 45 ವರ್ಷದ ನಿತಿನ್ ನಬಿನ್ ಪ್ರಮುಖ ಸಚಿವ ಖಾತೆಗಳನ್ನು ನಿರ್ವಹಿಸಿ ಆಡಳಿತಾತ್ಮಕ ಅನುಭವ ಹೊಂದಿದ್ದಾರೆ. ಅಲ್ಲದೇ ನಬಿನ್ ಅವರಿಗೆ ಎರಡು ದಶಕಗಳ ಸಂಘಟನಾ ಅನುಭವವೂ ಇದೆ.
ನಿತಿನ್ ನಬಿನ್ ಯಾರು?
ನಿತಿನ್ ನಬಿನ್ ಕುಟುಂಬ ರಾಜಕೀಯ ಹಿನ್ನಲೆ ಹೊಂದಿದೆ. ನಿತಿನ್ ನಬಿನ್ ತಂದೆ ನಬಿನ್ ಕಿಶೋರ್ ಪ್ರಸಾದ್ ಸಿನ್ಹ ಬಿಜೆಪಿಯ ಹಿರಿಯ ನಾಯಕರಾಗಿದ್ದರು. ಶಾಸಕರಾಗಿಯೂ ಸೇವೆ ಸಲ್ಲಿಸಿದ್ದಾರೆ. ತಂದೆ ನಿಧನದ ಬಳಿಕ ಬಿಜೆಪಿಯಲ್ಲಿ ನಿತಿನ್ ನಬಿನ್ ಸಕ್ರಿಯರಾಗಿದ್ದು, ಹಂತ ಹಂತವಾಗಿ ಬಿಜೆಪಿಯಲ್ಲಿ ಉನ್ನತ ಸ್ಥಾನಕ್ಕೇರಿದ್ದಾರೆ. ಕಾರ್ಯಕರ್ತನಾಗಿ, ಮುಖಂಡನಾಗಿ, ಶಾಸಕನಾಗಿ ಬಳಿಕ ಸಚಿವರಾಗಿ ಸೇವೆ ಸಲ್ಲಿಸಿದ್ದಾರೆ. ನಿತಿಶ್ ಕುಮಾರ್ ಸರ್ಕಾರದಲ್ಲಿ ಸಚಿವರಾಗಿ ಸೇವೆ ಸಲ್ಲಿಸುತ್ತಿದ್ದಾರೆ.
- 1980ರ ಮೇ 23ರಂದು ಜಾರ್ಖಂಡ್‌ನ ರಾಂಚಿಯಲ್ಲಿ ಜನಿಸಿದ ನಿತಿನ್ ನಬಿನ್ ರಾಜಕೀಯ ಹಿನ್ನೆಲೆ ಹೊಂದಿರುವ ಕುಟುಂಬದಿಂದ ಬಂದವರು.
- ಹಿರಿಯ ಬಿಜೆಪಿ ನಾಯಕ ಮತ್ತು ಮಾಜಿ ಶಾಸಕ ದಿವಂಗತ ನಬಿನ್ ಕಿಶೋರ್ ಪ್ರಸಾದ್ ಸಿನ್ಹಾ ಅವರ ಮಗ. ನಬಿನ್ ತಮ್ಮ ತಂದೆಯ ನಿಧನದ ನಂತರ ಸಕ್ರಿಯ ರಾಜಕೀಯಕ್ಕೆ ಪ್ರವೇಶಿಸಿದರು
- 2006ರಲ್ಲಿ ಬಿಹಾರ ವಿಧಾನಸಭೆ ಚುನಾವಣೆಯಲ್ಲಿ ಗೆಲ್ಲುವ ಮೂಲಕ ರಾಜಕೀಯ ಪ್ರವೇಶಿಸಿದ್ದು, ನಂತರ ಅವರು 2010, 2015, 2020 ಮತ್ತು 2025 ರಲ್ಲಿ ಬಂಕಿಪುರ ಕ್ಷೇತ್ರದಿಂದ ಸತತ ನಾಲ್ಕು ವಿಧಾನಸಭಾ ಚುನಾವಣೆಗಳಲ್ಲಿ ಗೆದ್ದಿದ್ದಾರೆ.
- 2008ರಲ್ಲಿ ಬಿಜೆಪಿಯಲ್ಲಿ ಅವರು ಭಾರತೀಯ ಜನತಾ ಯುವ ಮೋರ್ಚಾದ ರಾಷ್ಟ್ರೀಯ ಕಾರ್ಯಕಾರಿ ಸಮಿತಿ ಸದಸ್ಯರಾಗಿ ಮತ್ತು ಯುವ ವಿಭಾಗದ ಸಹ-ಪ್ರಭಾರಿಯಾಗಿ ಸೇವೆ ಸಲ್ಲಿಸಿದ್ದಾರೆ.
- 2010-2013 ರಲ್ಲಿ ಅವರು ಯುವ ಮೋರ್ಚಾದ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿಯಾಗಿದ್ದರು.
- 2016-19ರ ವರೆಗೆ ಬಿಹಾರ ಬಿಜೆಪಿ ಯುವ ಮೋರ್ಚಾದ ರಾಜ್ಯಾಧ್ಯಕ್ಷರಾಗಿದ್ದರು.
- 2019ರಲ್ಲಿ ಸಿಕ್ಕಿಂನಲ್ಲಿ ಬಿಜೆಪಿ ಚುನಾವಣಾ ಉಸ್ತುವಾರಿಯಾಗಿದ್ದರು. ಜೂನ್ 2019 ರಲ್ಲಿ, ಅವರನ್ನು ಸಿಕ್ಕಿಂ ರಾಜ್ಯ ಬಿಜೆಪಿ ಸಂಘಟನಾ ಉಸ್ತುವಾರಿಯನ್ನಾಗಿ ಮಾಡಲಾಗಿತ್ತು.
Published On - 9:51 pm, Sun, 14 December 25




