ರಾಜ್ಯ ಸಭೆಯಲ್ಲಿ ಸದನದ ನಾಯಕನ ಸ್ಥಾನಕ್ಕೆ ಪಿಯುಶ್ ಗೋಯಲ್, ಲೋಕ ಸಭೆಯಲ್ಲಿ ಚೌಧುರಿಯನ್ನೇ ಪಕ್ಷದ ನಾಯಕನಾಗಿ ಮುಂದುವರೆಸಿದ ಕಾಂಗ್ರೆಸ್
ಕಳೆದೆರಡು ವರ್ಷಗಳಲ್ಲಿ ಗೋಯಲ್ ಅವರು, ರಾಜ್ಯ ಸಭೆಯಲ್ಲಿ ಪ್ರಮುಖ ವಿರೋಧ ಪಕ್ಷವಾಗಿರುವ ಕಾಂಗ್ರೆಸ್ ಮತ್ತು ಬಿಜೆಡಿ, ಎಐಎಡಿಎಮ್ಕೆ ಹಾಗೂ ವೈಎಸ್ಆರ್ಸಿಪಿ ಪಕ್ಷಗಳನ್ನು ಅತ್ಯಂತ ಸಮರ್ಥವಾಗಿ ಎದುರಿಸಿ ಬಿಜೆಪಿಗೆ ನೆರವಾಗಿದ್ದಾರೆ.
ನವದೆಹಲಿ: ಕೇಂದ್ರ ಜವಳಿ ಖಾತೆ ಸಚಿವ ಪಿಯುಶ್ ಗೋಯಲ್ ಅವರನ್ನು ರಾಜ್ಯ ಸಭೆಯಲ್ಲಿ ಸದನದ ನಾಯಕರಾಗಿ ಭಾರತೀಯ ಜನತಾ ಪಕ್ಷ ಘೋಷಿಸಿದ್ದು ಅವರ, ತಾವರ್ ಚಂದ್ ಗೆಹ್ಲೋಟ್ ಅವರು ತೆರವು ಮಾಡಿರುವ ಸ್ಥಾನಕ್ಕೆ ಬರಲಿದ್ದಾರೆ. ಕರ್ನಾಟಕದ ರಾಜ್ಯಪಾಲರಾಗಿ ನೇಮಕಗೊಂಡಿರುವ ಗೆಹ್ಲೋಟ್ ಅವರು ಇತ್ತೀಚಿಗಷ್ಟೇ ಪ್ರಮಾಣ ವಚನ ಸ್ವೀಕರಿಸಿದ್ದರು.
ಗೋಯಲ್ ಅವರ ನೇಮಕಾತಿಯನ್ನು ಜುಲೈ 19 ರಿಂದ ಆಗಸ್ಟ್ 13ರವರೆಗೆ ನಡೆಯಲಿರುವ ಸಂಸತ್ತಿನ ಮುಂಗಾರು ಅಧಿವೇಶನಕ್ಕಿಂತ ಮೊದಲು ಮಾಡಲಾಗಿದೆ. ಕೇಂದ್ರ ಸರ್ಕಾರದಲ್ಲಿ ಹಲವು ಜವಾಬ್ದಾರಿಯುತ ಸ್ಥಾನಗಳನ್ನು ಹೊಂದಿರುವ ಗೋಯಲ್ ಅವರು 2010 ರಿಂದ ರಾಜ್ಯ ಸಭಾ ಸದಸ್ಯರಾಗಿದ್ದಾರೆ. ಗೆಹ್ಲೋಟ್ ಅವರನ್ನು ಕರ್ನಾಟಕದ ರಾಜ್ಯಪಾಲರನ್ನಾಗಿ ನೇಮಕ ಮಾಡಿದ ನಂತರ ಸಂಸತ್ತಿನ ಮೇಲ್ಮನೆಯಲ್ಲಿ ಬಿಜೆಪಿಗೆ ನಾಯಕನಿಲ್ಲದಂತಾಗಿತ್ತು.
ಕಳೆದೆರಡು ವರ್ಷಗಳಲ್ಲಿ ಗೋಯಲ್ ಅವರು, ರಾಜ್ಯ ಸಭೆಯಲ್ಲಿ ಪ್ರಮುಖ ವಿರೋಧ ಪಕ್ಷವಾಗಿರುವ ಕಾಂಗ್ರೆಸ್ ಮತ್ತು ಬಿಜೆಡಿ, ಎಐಎಡಿಎಮ್ಕೆ ಹಾಗೂ ವೈಎಸ್ಆರ್ಸಿಪಿ ಪಕ್ಷಗಳನ್ನು ಅತ್ಯಂತ ಸಮರ್ಥವಾಗಿ ಎದುರಿಸಿ ಬಿಜೆಪಿಗೆ ನೆರವಾಗಿದ್ದಾರೆ.
ಜುಲೈ 8 ರಂದು ಗೋಯಲ್ ಅವರು ಕೇಂದ್ರ ವಾಣಿಜ್ಯ ಮತ್ತು ಕೈಗಾರಿಕೆ, ಗ್ರಾಹಕ ವ್ಯವಹಾರಗಳು, ಆಹಾರ ಮತ್ತು ಸಾರ್ವಜನಿಕ ವಿತರಣೆ ಹಾಗೂ ಜವಳಿ ಸಚಿವರಾಗಿ ಪ್ರಮಾಣ ವಚನ ಸ್ವೀಕರಿಸಿದರು. ಏತನ್ಮಧ್ಯೆ ಕಾಂಗ್ರೆಸ್, ಮುಂಬರುವ ಸಂಸತ್ತಿನ ಮುಂಗಾರು ಅಧಿವೇಶನದಲ್ಲಿ ಅಧೀರ್ ರಂಜನ್ ಚೌಧುರಿಯವರನ್ನೇ ಲೋಕಸಭೆಯಲ್ಲಿ ಪಕ್ಷದ ನಾಯಕನಾಗಿ ಮುಂದುವರಿಸಲು ನಿರ್ಧರಿಸಿದೆ, ಎಂದು ಎಎನ್ಐ ಸುದ್ದಿಸಂಸ್ಥೆ ಬುಧವಾರದಂದು ವರದಿ ಮಾಡಿದೆ. ಗಮನಿಸಬೇಕಾದ ಸಂಗತಿಯೆಂದರೆ, ಚೌಧುರಿಯವರನ್ನು ಬದಲಾಯಿಸುವ ಸಾಧ್ಯತೆ ಇದೆಯೆಂದು ಪಕ್ಷದ ಮೂಲಗಳು ಅನುಮಾನ ವ್ಯಕ್ತಪಡಿಸಿದ್ದವು.
There is no change in the post of Leader of Congress in the Lok Sabha party at present. In this session, Adhir Ranjan Chowdhury will remain the Leader of Congress in Lok Sabha: Congress Sources
— ANI (@ANI) July 14, 2021
ಭಾರತದ ರಾಜಕೀಯ ಇತಿಹಾಸದಲ್ಲೇ ಅತ್ಯಂತ ಹಳೆಯ ಪಕ್ಷ ಎನಿಸಿಕೊಂಡಿರುವ ಕಾಂಗ್ರೆಸ್ ಸಂಸತ್ತಿನಲ್ಲಿ ವಿರೋಧ ಪಕ್ಷದ ಸ್ಥಾನಮಾನ ಪಡೆಯುವಷ್ಟು ಸ್ಥಾನಗಳನ್ನು ಪಡೆದಿಲ್ಲವಾದರೂ, ಪಶ್ಚಿಮ ಬಂಗಾಳದ ಬೆಹ್ರಂಪುರ್ ಲೋಕ ಸಭಾ ಕ್ಷೇತ್ರದ ಸಂಸದರಾಗಿರುವ ಚೌಧುರಿ ಅವರು ಸದನದಲ್ಲಿ ಪಕ್ಷದ ನಾಯಕರಾಗಿ ಕಾರ್ಯ ನಿರ್ವಹಿಸುತ್ತಿದ್ದಾರೆ.
2019ರಲ್ಲಿ ನಡೆದ ಸಾರ್ವತ್ರಿಕ ಚುನಾವಣೆಯಲ್ಲಿ ಕಾಂಗ್ರೆಸ್ ಕೇವಲ 52 ಸ್ಥಾನಗಳನ್ನು ಮಾತ್ರ ಗೆದ್ದಿತ್ತು . ಬುಧವಾರದಂದು ನವದೆಹಲಿಯಲ್ಲಿ ಸುದ್ದಿಗೋಷ್ಟಿಯೊಂದನ್ನು ಉದ್ದೇಶಿಸಿ ಮಾತಾಡಿದ ಲೋಕ ಸಭಾ ಸ್ಪೀಕರ್ ಓಮ್ ಬಿರ್ಲಾ ಅವರು, ಸಂಸತ್ತಿನ ಮುಂಗಾರು ಅಧಿವೇಶನ ನಡೆಯುವ ಅವಧಿಯಲ್ಲಿ ಕೊರೋನಾವೈರಸ್ ಸೋಂಕನ್ನು ತಡೆಯುವ ಎಲ್ಲ ಮುಂಜಾಗ್ರತೆ ಮತ್ತು ಸುರಕ್ಷತಾ ಕ್ರಮಗಳನ್ನು ಜಾರಿಯಲ್ಲಿಡುವ ಏರ್ಪಾಟು ಮಾಡಲಾಗಿದೆ ಎಂದು ಹೇಳಿದರು.