ನವದೆಹಲಿ: ಬಿಜೆಪಿ ದೆಹಲಿಯಲ್ಲಿ ರಾಷ್ಟ್ರಪತಿ ಆಳ್ವಿಕೆ ಹೇರುವ ಮೂಲಕ ಅರವಿಂದ್ ಕೇಜ್ರಿವಾಲ್ ನೇತೃತ್ವದ ಸರ್ಕಾರವನ್ನು ಉರುಳಿಸಲು ಪಿತೂರಿ ನಡೆಸುತ್ತಿದೆ ಎಂದು ದೆಹಲಿ ಹಣಕಾಸು ಸಚಿವೆ ಅತಿಶಿ ಆರೋಪಿಸಿದ್ದಾರೆ. ದೆಹಲಿಯು ಸಾಂವಿಧಾನಿಕ ಬಿಕ್ಕಟ್ಟನ್ನು ಎದುರಿಸುತ್ತಿದೆ ಎಂದು ಅವರು ಹೇಳಿದ್ದಾರೆ.
ದೆಹಲಿಯ ಬಿಜೆಪಿ ಶಾಸಕರಿಂದ ಗೃಹ ವ್ಯವಹಾರಗಳ ಸಚಿವಾಲಯಕ್ಕೆ (MHA) ಜ್ಞಾಪಕ ಪತ್ರವನ್ನು ರಾಷ್ಟ್ರಪತಿಗಳ ಸಚಿವಾಲಯ ರವಾನಿಸಿದ ಬೆನ್ನಲ್ಲೇ ಅವರ ಈ ಹೇಳಿಕೆ ಬಂದಿದೆ. ಬಿಜೆಪಿಯು ಎಎಪಿ ಸರ್ಕಾರವನ್ನು ಪತನಗೊಳಿಸಿದರೆ, ಮುಂಬರುವ ವಿಧಾನಸಭಾ ಚುನಾವಣೆಯಲ್ಲಿ ಎಲ್ಲಾ 70 ಸ್ಥಾನಗಳನ್ನು ಗೆಲ್ಲಲು ಆಮ್ ಆದ್ಮಿ ಪಕ್ಷವನ್ನು ಆಯ್ಕೆ ಮಾಡುವ ಮೂಲಕ ದೆಹಲಿಯ ಜನರು ಬಿಜೆಪಿಯನ್ನು ಶೂನ್ಯ ಸ್ಥಾನಕ್ಕೆ ಇಳಿಸಿ ಸರಿಯಾದ ಉತ್ತರವನ್ನು ನೀಡಲಿದ್ದಾರೆ ಎಂದು ಅತಿಶಿ ಹೇಳಿದ್ದಾರೆ.
ಇದನ್ನೂ ಓದಿ: ನಿರಪರಾಧಿ ಅಫ್ಜಲ್ ಗುರು ವಿರುದ್ಧ ಪೊಲೀಸರ ಸಂಚು; ಬಿಜೆಪಿ ಮಿತ್ರ ಪಕ್ಷ ಜೆಡಿಯು ನಾಯಕನ ವಿವಾದಾತ್ಮಕ ಹೇಳಿಕೆ
ಬಿಜೆಪಿಯು ತನ್ನ “ಆಪರೇಷನ್ ಕಮಲ”ದ ಮೂಲಕ ದೇಶಾದ್ಯಂತ ಪ್ರಜಾಸತ್ತಾತ್ಮಕವಾಗಿ ಚುನಾಯಿತ ಸರ್ಕಾರಗಳನ್ನು ಉರುಳಿಸಿದ ಇತಿಹಾಸವನ್ನು ಹೊಂದಿದೆ. ಮಹಾರಾಷ್ಟ್ರ, ಕರ್ನಾಟಕ ಮತ್ತು ಮಣಿಪುರದಲ್ಲಿ ಇದೇ ರೀತಿಯ ಪರಿಸ್ಥಿತಿಗಳನ್ನು ನಿರ್ಮಿಸಿದೆ ಎಂದು ಅತಿಶಿ ಟೀಕಿಸಿದ್ದಾರೆ.
ಇದನ್ನೂ ಓದಿ: Kedarnath Landslide: ಕೇದಾರನಾಥ ಮಾರ್ಗದಲ್ಲಿ ಭೂಕುಸಿತದಿಂದ 5 ಜನ ಸಾವು; ಸಿಎಂ ಧಾಮಿ ಸಂತಾಪ
ದೆಹಲಿಯ ವಿರೋಧ ಪಕ್ಷದ ನಾಯಕ ವಿಜೇಂದರ್ ಗುಪ್ತಾ ಅರವಿಂದ್ ಕೇಜ್ರಿವಾಲ್ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ. ಕಳೆದ 5 ತಿಂಗಳಿಂದ ಯಾವುದೇ ಕಡತಗಳಿಗೆ ಸಹಿ ಹಾಕಿಲ್ಲ, ಸಚಿವ ಸಂಪುಟ ಸಭೆ ನಡೆಸಿಲ್ಲ ಎಂದು ದೂರಿದ್ದಾರೆ. ಅಬಕಾರಿ ನೀತಿ ಪ್ರಕರಣದಲ್ಲಿ ಪ್ರಸ್ತುತ ನ್ಯಾಯಾಂಗ ಬಂಧನದಲ್ಲಿರುವ ಅರವಿಂದ್ ಕೇಜ್ರಿವಾಲ್ ಸರ್ಕಾರವನ್ನು ಜೈಲಿನಿಂದ ನಡೆಸಲು ಪ್ರಯತ್ನಿಸುತ್ತಿದ್ದಾರೆ ಎಂದು ಗುಪ್ತಾ ಹೇಳಿದ್ದಾರೆ.
ಇನ್ನಷ್ಟು ರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ