ಕೋಲ್ಕತ್ತಾ: ಪಶ್ಚಿಮ ಬಂಗಾಳ ವಿಧಾನಸಭಾ ಚುನಾವಣೆಯ ಕಾವು ಈಗಾಗಲೇ ಶುರುವಾಗಿದೆ. ಬಿಜೆಪಿಯನ್ನು ಮಟ್ಟಹಾಕಲು ಕಾಂಗ್ರೆಸ್ ಮತ್ತು ಎಡಪಕ್ಷಗಳು ಮಮತಾ ಬ್ಯಾನರ್ಜಿಯನ್ನು ಹಿಂಬಾಲಿಸಲಿ ಎಂದು ಟಿಎಂಸಿ ಸಂಸದ ನಿನ್ನೆಯಷ್ಟೇ ಹೇಳಿಕೆ ನೀಡಿದ್ದರು. ವಿಪರ್ಯಾಸವೆಂದರೆ ಬಿಜೆಪಿಗೂ ಮುನ್ನವೇ ಕಾಂಗ್ರೆಸ್ ಇದನ್ನು ವಿರೋಧಿಸಿ ಟಿಎಂಸಿಯನ್ನು ಮುಜುಗರಕ್ಕೆ ಸಿಲುಕಿಸಿತ್ತು.
ಇದೀಗ ಬಿಜೆಪಿಯ ರಾಷ್ಟ್ರ ಮಟ್ಟದ ಮುಖ್ಯ ಕಾರ್ಯದರ್ಶಿ ಕೈಲಾಶ್ ವಿಜಯ್ ವರ್ಗೀಯಾ ಹೊಸದೊಂದು ಬಾಂಬ್ ಸಿಡಿಸಿದ್ದು, ಟಿಎಂಸಿ ಪಕ್ಷದ 41 ಶಾಸಕರು ಬಿಜೆಪಿ ಸೇರಲು ತುದಿಗಾಲಲ್ಲಿ ನಿಂತಿದ್ದಾರೆ ಎಂದು ಹೇಳಿದ್ದಾರೆ. ಮಮತಾ ಬ್ಯಾನರ್ಜಿ ಸರ್ಕಾರದಲ್ಲಿರುವ ಶಾಸಕರು ಬಿಜೆಪಿಗೆ ಬರಲು ಉತ್ಸುಕರಾಗಿದ್ದಾರೆ. ನಾವೇನಾದರೂ ಈಗಲೇ ಒಪ್ಪಿದರೆ ಮಮತಾ ಸರ್ಕಾರ ಪತನಗೊಳ್ಳಲಿದೆ ಎಂದು ತಿಳಿಸಿದ್ದಾರೆ.
ಮುಂದಿನ ಚುನಾವಣೆಯಲ್ಲಿ ಟಿಎಂಸಿ ಪಕ್ಷ ಹೀನಾಯವಾಗಿ ಸೋಲಲಿದೆ. ಪ. ಬಂಗಾಳದಲ್ಲಿ ಬಿಜೆಪಿ ಅಧಿಕಾರಕ್ಕೇರುವುದು ಖಚಿತ. ಈ ಕ್ಷಣವೇ ನಮ್ಮ ಸಂಪರ್ಕದಲ್ಲಿರುವ ಶಾಸಕರನ್ನು ಸೇರಿಸಿಕೊಂಡರೂ ಸರ್ಕಾರ ಉರುಳಲಿದೆ. ಆದರೆ, ನಾವು ಎಲ್ಲರನ್ನೂ ತೆಗೆದುಕೊಳ್ಳುವುದಿಲ್ಲ. ಯಾರು ಶುದ್ಧ ಹಸ್ತರಿರುತ್ತಾರೋ ಅವರನ್ನು ಮಾತ್ರ ಬರಮಾಡಿಕೊಳ್ಳುತ್ತೇವೆ ಎಂದು ಹೇಳಿದ್ದಾರೆ.
ಮಮತಾ ಬ್ಯಾನರ್ಜಿ ಸರ್ಕಾರಕ್ಕೆ ಬರೀ ಸುಳ್ಳು ಹೇಳುವುದೇ ಕೆಲಸ. ರಾಜ್ಯದಲ್ಲಿ ಉಚಿತವಾಗಿ ಕೊರೊನಾ ಲಸಿಕೆ ವಿತರಿಸುತ್ತೇವೆ ಎಂದು ಘೋಷಿಸಿದ್ದಾರೆ. ಆದರೆ, ಕೇಂದ್ರ ಸರ್ಕಾರ ಕೊರೊನಾ ಲಸಿಕೆಗಳ ವೆಚ್ಚವನ್ನು ಭರಿಸುತ್ತಿದೆ ಎನ್ನುವ ಸತ್ಯವನ್ನು ಹೇಳುವುದೇ ಇಲ್ಲ. ಬಿಜೆಪಿ ಅಧಿಕಾರಕ್ಕೆ ಬಂದರೆ ಕೊಳ್ಳೆ ಹೊಡೆಯುವುದಕ್ಕೆ ಅಡ್ಡಿಯಾಗುತ್ತದೆ ಎಂಬ ಆತಂಕ ಅವರಿಗಿದೆ. ಆದ್ದರಿಂದಲೇ ಬಿಜೆಪಿ ಕಾರ್ಯಕರ್ತರನ್ನು ಹೆದರಿಸಿ, ಬೆದರಿಸಿ ಬಾಯಿಮುಚ್ಚಿಸುವ ಯತ್ನಕ್ಕೆ ಕೈ ಹಾಕುತ್ತಿದ್ದಾರೆ ಎಂದು ಕಿಡಿಕಾರಿದ್ದಾರೆ.
ಬಿಜೆಪಿ ಪಾಪಗಳನ್ನು ತೊಳೆಯುವ ವಾಶಿಂಗ್ ಮಶೀನ್.. ಭ್ರಷ್ಟರನ್ನೂ ಸಾಧುಗಳನ್ನಾಗಿಸುತ್ತದೆ: ಮಮತಾ ಬ್ಯಾನರ್ಜಿ ವ್ಯಂಗ್ಯ