ಶಾಸಕ ಯತ್ನಾಳ್‌ಗೆ ಹೈಕಮಾಂಡ್ ಕ್ಲಾಸ್, ಸರ್ಕಾರದ ವಿರುದ್ಧ ಬಹಿರಂಗ ಹೇಳಿಕೆ ನೀಡದಂತೆ ಖಡಕ್ ವಾರ್ನಿಂಗ್

|

Updated on: Feb 23, 2021 | 7:30 AM

ಪಂಚಮಸಾಲಿ ಲಿಂಗಾಯತ ಪಾದಯಾತ್ರೆ ಸಮಾರೋಪ ಮುಗಿಸಿ ದೆಹಲಿಗೆ ಹೋಗಿದ್ದ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್‌ಗೆ ಹೈಕಮಾಂಡ್ ಖಡಕ್ ಸೂಚನೆ ನೀಡಿದೆ. ಅಷ್ಟಕ್ಕೂ ಯತ್ನಾಳ್ ದೆಹಲಿಗೆ ಹೋಗಿ ಎಲ್ಲಿದ್ರು. ಯಾರನ್ನ ಭೇಟಿ ಮಾಡಿದ್ರು. ಬಿಜೆಪಿ ಹೈಕಮಾಂಡ್ ಯತ್ನಾಳ್‌ಗೆ ಹೇಳಿದ್ದೇನು ಇಲ್ಲಿದೆ ಮಾಹಿತಿ.

ಶಾಸಕ ಯತ್ನಾಳ್‌ಗೆ ಹೈಕಮಾಂಡ್ ಕ್ಲಾಸ್, ಸರ್ಕಾರದ ವಿರುದ್ಧ ಬಹಿರಂಗ ಹೇಳಿಕೆ ನೀಡದಂತೆ ಖಡಕ್ ವಾರ್ನಿಂಗ್
ಬಸನಗೌಡ ಪಾಟೀಲ್ ಯತ್ನಾಳ್ (ಸಂಗ್ರಹ ಚಿತ್ರ)
Follow us on

ದೆಹಲಿ: ಪಂಚಮಸಾಲಿ ಸಮುದಾಯ ಸಮಾವೇಶದಲ್ಲಿ ಇಡೀ ದಿನ ಅಬ್ಬರಿಸಿ ಬೊಬ್ಬಿರಿದಿದ್ದ್ದ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ರಾತ್ರಿಯಾಗುತ್ತಿದ್ದಂತೆ ನಾಪತ್ತೆಯಾಗಿದ್ರು. ಎಲ್ಲಪ್ಪ ಹೋದ್ರೂ ಯತ್ನಾಳ್ ಅನ್ನುವಷ್ಟರಲ್ಲಿ, ಸರ್ಕಾರದ ವಿರುದ್ಧ ಬಾಯಿಗೆ ಬಂದಂತೆ ಮಾತನಾಡಿದ್ದಕ್ಕೆ ಹೈಕಮಾಂಡ್‌ ಬುಲಾವ್ ಬಂದಿದೆ ಅನ್ನೋ ವಿಚಾರ ಜಗಜ್ಜಾಹೀರಾಗಿತ್ತು. ಫೆ.21 ಭಾನುವಾರ ರಾತ್ರಿ ಬೆಂಗಳೂರಿನಿಂದ ನಾಪತ್ತೆಯಾಗಿದ್ದ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್‌ , ನಿನ್ನೆ ಇಡೀ ದಿನ ಎಲ್ಲಿದ್ರು. ಎಲ್ಲಿಗೆ ಹೋಗಿದ್ರು ಅನ್ನೋ ಸುಳಿವೇ ಸಿಕ್ಕಿರಲಿಲ್ಲ. ಆದ್ರೆ ಹೈಕಮಾಂಡ್ ಬುಲಾವ್ ಮೇರೆಗೆ ದೆಹಲಿಗೆ ತೆರಳಿದ್ದ ಬಸನಗೌಡ ಪಾಟೀಲ್ ಯತ್ನಾಳ್ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆ‌ಪಿ ನಡ್ಡಾರನ್ನ ಭೇಟಿಯಾಗಿದ್ದಾರೆ ಎಂದು ಮೂಲಗಳು ತಿಳಿಸಿವೆ. ಭೇಟಿಯ ವೇಳೆ ಮುಖ್ಯಮಂತ್ರಿ ಬಿ.ಎಸ್‌. ಯಡಿಯೂರಪ್ಪ ಹಾಗೂ ರಾಜ್ಯ ಸರ್ಕಾರದ ವಿರುದ್ಧ ಯಾವುದೇ ರೀತಿಯ ಬಹಿರಂಗ ಹೇಳಿಕೆ ನೀಡದಂತೆ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆ.ಪಿ. ನಡ್ಡಾ ಶಾಸಕ ಬಸನಗೌಡ ಪಾಟೀಲ ಯತ್ನಾಳ್‌ ಗೆ ಸೂಚಿಸಿದ್ದಾರೆ ಎನ್ನಲಾಗಿದೆ.

ಪಂಚಮಸಾಲಿ ಬೇಡಿಕೆ ಈಡೇರಿಸಬೇಕೆಂದು ಹೈಕಮಾಂಡ್ ಬಳಿ ಯತ್ನಾಳ್ ವಾದ
ಬಿಜೆಪಿ ಹೈಕಮಾಂಡ್ ಸರ್ಕಾರದ ವಿರುದ್ಧ ಹೇಳಿಕೆ ನೀಡದಂತೆ ಸೂಚಿಸಿದ್ದಂತೆ, ಮೌನ ಮುರಿದ ಯತ್ನಾಳ್, ಮೀಸಲಾತಿ ಕೋರಿ ಪಂಚಮಸಾಲಿ ಸಮುದಾಯ ಹಿಂದಿನಿಂದಲೂ ಹೋರಾಟ ನಡೆಸುತ್ತಿದೆ‌. ನಾನು ಮೀಸಲಾತಿ ಹೋರಾಟದಲ್ಲಿ ಹೊಸದಾಗಿ ಭಾಗಿಯಾಗಿಲ್ಲ. ಲಿಂಗಾಯತ ಪಂಚಮಸಾಲಿ ಸಮುದಾಯ ನಡೆಸುತ್ತಿರುವ ಹೋರಾಟ ನ್ಯಾಯಸಮ್ಮತವಾಗಿದ್ದು, ಸರ್ಕಾರ ಬೇಡಿಕೆ ಈಡೇರಿಸಬೇಕಿದೆ ಎಂದು ಯತ್ನಾಳ್‌ ರಾಷ್ಟ್ರೀಯ ಅಧ್ಯಕ್ಷ ನಡ್ಡ ಬಳಿ ವಾದಿಸಿದ್ದಾರೆ. ಆದ್ರೆ ಇನ್ನು ಮುಂದೆ‌ ಸರ್ಕಾರವಾಗಲಿ ಅಥವಾ ಯಡಿಯೂರಪ್ಪ ವಿರುದ್ಧವಾಗಲಿ ಯಾವುದೇ ರೀತಿಯ ಹೇಳಿಕೆ ನೀಡದಂತೆ ಯತ್ನಾಳ್​ಗೆ ನಡ್ಡಾ ಸೂಚನೆ ನೀಡಿದ್ದಾರೆ ಎನ್ನಲಾಗಿದೆ. ಅಷ್ಟೇ ಅಲ್ಲ ಸರ್ಕಾರಕ್ಕೆ ಮತ್ತು ಪಕ್ಷಕ್ಕೆ ಇರುಸುಮುರುಸು ಉಂಟು ಮಾಡಿದರೆ ಶಿಸ್ತು ಕ್ರಮ ಅನಿವಾರ್ಯ ಎಂಬ ಎಚ್ಚರಿಕೆಯನ್ನೂ ವರಿಷ್ಠರು ನೀಡಿದ್ದಾರೆ ಎನ್ನಲಾಗಿದೆ.

ಅಂದಹಾಗೆ ಈ ಹಿಂದೆ ಹಲವು ಬಾರಿ ಯಡಿಯೂರಪ್ಪ ವಿರುದ್ಧ ಬಹಿರಂಗವಾಗಿಯೇ ವಾಗ್ದಾಳಿ ನಡೆಸಿದ್ದ ಯತ್ನಾಳ್​ಗೆ ಹೈಕಮಾಂಡ್ ನೋಟಿಸ್ ಜಾರಿ ಮಾಡಿತ್ತು. ನೋಟಿಸ್‌ಗೆ ಉತ್ತರ ನೀಡುವಂತೆ ಹೈಕಮಾಂಡ್ ಸೂಚನೆ ನೀಡಿತ್ತು. 11 ಪುಟಗಳ ಉತ್ತರ ನೀಡಿದ್ದ ಯತ್ನಾಳ್ ತಮ್ಮ ಅಸಮಧಾನ ಹೊರಹಾಕಿದ್ರು. ದೆಹಲಿಗೆ ಬುಲಾವ್ ನೀಡಿದ್ದ ಹೈಕಮಾಂಡ್ ಪಕ್ಷದ ಶಿಸ್ತು ಪಾಲನಾ ಸಮಿತಿ ಎದುರು ಹಾಜರಾಗುವಂತೆ ಸೂಚಿಸಿತ್ತು.

ಸಾಮಾನ್ಯವಾಗಿ ಯತ್ನಾಳ ದೆಹಲಿಗೆ ಬಂದಾಗ ವಾಸ್ತವ್ಯ ಹೂಡುತ್ತಿದ್ದ ಕರ್ನಾಟಕ ಭವನದ ಬದಲಿಗೆ ಖಾಸಗಿ ಹೋಟೆಲ್‌ ಒಂದರಲ್ಲಿ ತಂಗಿದ್ದಾರೆ ಎನ್ನಲಾಗಿದೆ. ದೆಹಲಿ ಭೇಟಿ ವಿಚಾರವನ್ನು ರಹಸ್ಯವಾಗಿಯೇ ಇಟ್ಟಿದ್ದು ಯಾಕೆ ಅನ್ನೋದು ಮಾತ್ರ ಪ್ರಶ್ನೆಯಾಗಿ ಉಳಿದಿದೆ.

ಇದನ್ನೂ ಓದಿ: ಪಂಚಮಸಾಲಿ ಸಮಾವೇಶದಲ್ಲಿ ಸಿಎಂ BSY ವಿರುದ್ಧ ಯತ್ನಾಳ್​ ಗುಡುಗು.. ಹೈಕಮಾಂಡ್​ನಿಂದ ಬಂತು ಬುಲಾವ್

ವ್ಯಕ್ತಿ ವ್ಯಕ್ತಿತ್ವ | ವಿವಾದಗಳ ಮಾಲೆಯನ್ನೇ ಸುತ್ತಿಕೊಂಡ ಬೆಂಕಿಯುಗುಳುವ ನಾಯಕ ಬಸನಗೌಡ ಪಾಟೀಲ್ ಯತ್ನಾಳ್