ದೆಹಲಿಯಲ್ಲಿ ಒಳ್ಳೆ ಕೆಲಸ ಮಾಡಿದ ಆಮ್ ಆದ್ಮಿ ಸಚಿವರನ್ನು ಬಿಜೆಪಿ ಜೈಲಿಗೆ ತಳ್ಳಿದೆ; ಸಿಎಂ ಭಗವಂತ್ ಮಾನ್ ಆರೋಪ

ಪಂಜಾಬ್ ಮುಖ್ಯಮಂತ್ರಿ ಭಗವಂತ್ ಮಾನ್ ಅವರು ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್, ಮಾಜಿ ಉಪ ಮುಖ್ಯಮಂತ್ರಿ ಮನೀಷ್ ಸಿಸೋಡಿಯಾ ಮತ್ತು ಮಾಜಿ ಸಚಿವ ಸತೇಂದರ್ ಜೈನ್ ಅವರ ಬಂಧನವನ್ನು ಖಂಡಿಸಿದ್ದಾರೆ. ಈ ಬಂಧನ ರಾಜಕೀಯ ಪ್ರೇರಿತ ಎಂದು ಹೇಳಿದ್ದಾರೆ.

ದೆಹಲಿಯಲ್ಲಿ ಒಳ್ಳೆ ಕೆಲಸ ಮಾಡಿದ ಆಮ್ ಆದ್ಮಿ ಸಚಿವರನ್ನು ಬಿಜೆಪಿ ಜೈಲಿಗೆ ತಳ್ಳಿದೆ; ಸಿಎಂ ಭಗವಂತ್ ಮಾನ್ ಆರೋಪ
ಭಗವಂತ್ ಮಾನ್
Follow us
ಸುಷ್ಮಾ ಚಕ್ರೆ
|

Updated on: Jul 30, 2024 | 3:55 PM

ನವದೆಹಲಿ: ಪಂಜಾಬ್ ಮುಖ್ಯಮಂತ್ರಿ ಭಗವಂತ್ ಮಾನ್ ಅವರು ಬಿಜೆಪಿ ನೇತೃತ್ವದ ಕೇಂದ್ರ ಸರ್ಕಾರದ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದ್ದಾರೆ. ದೆಹಲಿಯ ಶಿಕ್ಷಣ ಮತ್ತು ಆರೋಗ್ಯ ಕ್ಷೇತ್ರಗಳಲ್ಲಿ ಗಮನಾರ್ಹ ಸುಧಾರಣೆಗಳನ್ನು ಮಾಡಿದ ಆಮ್ ಆದ್ಮಿ ಪಕ್ಷದ (ಎಎಪಿ) ನಾಯಕರನ್ನು ಬಿಜೆಪಿ ಜೈಲಿಗೆ ತಳ್ಳಿದೆ ಎಂದು ಆರೋಪಿಸಿದ್ದಾರೆ.

ಆಮ್ ಆದ್ಮಿ ಪಕ್ಷದ ನಾಯಕರಾದ ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್, ದೆಹಲಿ ಮಾಜಿ ಡಿಸಿಎಂ ಮನೀಶ್ ಸಿಸೋಡಿಯಾ ಮತ್ತು ಮಾಜಿ ಸಚಿವ ಸತೇಂದರ್ ಜೈನ್ ಅವರ ಬಂಧನವನ್ನು ಖಂಡಿಸಿದ ಭಗವಂತ್ ಮಾನ್, ಅದನ್ನು ರಾಜಕೀಯ ಪ್ರೇರಿತ ಎಂದು ಹೇಳಿದ್ದಾರೆ.

ಶಿಕ್ಷಣ ಕ್ಷೇತ್ರ ಸುಧಾರಿಸಿದಾಗ ಮನೀಶ್ ಸಿಸೋಡಿಯಾ ಅವರನ್ನು ಜೈಲಿಗೆ ಹಾಕಲಾಯಿತು. ಆರೋಗ್ಯ ಸೇವೆ ಸುಧಾರಿಸಿದಾಗ ಸತೇಂದರ್ ಜೈನ್ ಅವರನ್ನು ಜೈಲಿಗೆ ಹಾಕಲಾಯಿತು. ಇಡೀ ದೇಶ ಅರವಿಂದ್ ಕೇಜ್ರಿವಾಲ್ ಅವರನ್ನು ಬೆಂಬಲಿಸುತ್ತಿರುವುದನ್ನು ಕಂಡಾಗ ಅವರನ್ನೂ ಬಿಜೆಪಿ ಸರ್ಕಾರ ಬಂಧಿಸಿ ಜೈಲಿಗೆ ಹಾಕಿತು ಎಂದು ಭಗವಂತ್ ಮಾನ್ ಸೋಮವಾರ ಸಾರ್ವಜನಿಕ ಸಭೆಯಲ್ಲಿ ಆರೋಪಿಸಿದ್ದಾರೆ.

ಇದನ್ನೂ ಓದಿ: ಮದ್ಯ ನೀತಿ ಹಗರಣ: ದೆಹಲಿ ಸಿಎಂ ಅರವಿಂದ್ ಕೇಜ್ರಿವಾಲ್​ ವಿರುದ್ಧ ಸಿಬಿಐನಿಂದ ಚಾರ್ಜ್​ಶೀಟ್​ ಸಲ್ಲಿಕೆ

ಅಡುಗೆ ಅನಿಲಕ್ಕೆ ಇತ್ತೀಚಿಗೆ 100 ರೂ.ಗಳ ಬೆಲೆ ಇಳಿಕೆಯಂತಹ ಸಣ್ಣಪುಟ್ಟ ರಿಯಾಯತಿಗಳಿಂದ ಸಾರ್ವಜನಿಕರನ್ನು ಓಲೈಸಬೇಡಿ ಎಂದು ಭಗವಂತ್ ಮಾನ್ ಒತ್ತಾಯಿಸಿದ್ದಾರೆ. ಅರವಿಂದ್ ಕೇಜ್ರಿವಾಲ್ ಅವರ ನಾಯಕತ್ವದಲ್ಲಿ ಹರಿಯಾಣ ಮತ್ತು ಭಾರತದಾದ್ಯಂತ ರಾಜಕೀಯ ಬದಲಾವಣೆಗೆ ಕರೆ ನೀಡಿದ್ದಾರೆ.

“ಮೋದಿಯವರು ಸುಮಾರು 4 ವರ್ಷಗಳ ಕಾಲ ಲೂಟಿ ಮಾಡಿದರು. ಅಂತಿಮವಾಗಿ ಎಲ್​ಪಿಜಿ ಸಿಲಿಂಡರ್ ಬೆಲೆಯನ್ನು 100 ರೂ.ಗಳಷ್ಟು ಕಡಿಮೆ ಮಾಡುವ ಮೂಲಕ ಸಾರ್ವಜನಿಕರಿಗೆ ಲಾಲಿಪಾಪ್ ನೀಡುತ್ತಿದ್ದಾರೆ” ಎಂದು ಭಗವಂತ್ ಮಾನ್ ಹೇಳಿದ್ದಾರೆ.

ಹರಿಯಾಣದಲ್ಲಿ ವಿಧಾನಸಭಾ ಚುನಾವಣೆಗೆ ಮುನ್ನ, ಪಂಜಾಬ್ ಮುಖ್ಯಮಂತ್ರಿ ಭಗವಂತ್ ಮಾನ್ ಬಿಜೆಪಿ ನೀಡುವ ಇಂತಹ ಲಾಲಿಪಾಪ್‌ಗಳಿಗೆ ಬೀಳದಂತೆ ಮತದಾರರಿಗೆ ಎಚ್ಚರಿಕೆ ನೀಡಿದ್ದಾರೆ. ರಾಜ್ಯದಲ್ಲಿ ಎಎಪಿಯನ್ನು ಅಧಿಕಾರಕ್ಕೆ ತರುವಂತೆ ಮನವಿ ಮಾಡಿದ್ದಾರೆ.

ಇದನ್ನೂ ಓದಿ: ಅರವಿಂದ್ ಕೇಜ್ರಿವಾಲ್ ಅಕ್ರಮ ಬಂಧನ ವಿರೋಧಿಸಿ ಇಂಡಿಯಾ ಬಣದಿಂದ ಇಂದು ಪ್ರತಿಭಟನೆ

“ಈ ಬಾರಿ ಹರಿಯಾಣದಲ್ಲಿ ಜಾಡು (ಎಎಪಿ ಚುನಾವಣಾ ಚಿಹ್ನೆ ಪೊರಕೆ) ಇದೆ. ಈ ಹಿಂದೆ ಕೇವಲ ಮನೆ ಮತ್ತು ಅಂಗಡಿಗಳನ್ನು ಜಾಡುವಿನಿಂದ ಸ್ವಚ್ಛಗೊಳಿಸಲಾಗಿತ್ತು. ಈ ಬಾರಿ ಅರವಿಂದ್ ಕೇಜ್ರಿವಾಲ್ ನೇತೃತ್ವದಲ್ಲಿ ಇಡೀ ಭಾರತವನ್ನು ಸ್ವಚ್ಛಗೊಳಿಸಲಾಗುವುದು” ಎಂದು ಅವರು ಪ್ರತಿಪಾದಿಸಿದ್ದಾರೆ.

ಹರಿಯಾಣ ವಿಧಾನಸಭಾ ಚುನಾವಣೆಯಲ್ಲಿ ಸ್ವಂತ ಬಲದಿಂದ ಸ್ಪರ್ಧಿಸುವುದಾಗಿ ಎಎಪಿ ಈ ಹಿಂದೆ ಘೋಷಿಸಿತ್ತು. ಅರವಿಂದ್ ಕೇಜ್ರಿವಾಲ್ ನೇತೃತ್ವದ ಪಕ್ಷವು ಈ ಹಿಂದೆ ಕಾಂಗ್ರೆಸ್‌ನೊಂದಿಗೆ ಮೈತ್ರಿ ಮಾಡಿಕೊಂಡಿತ್ತು ಮತ್ತು ರಾಜ್ಯದಲ್ಲಿ ಲೋಕಸಭೆ ಚುನಾವಣೆಯಲ್ಲಿ ಒಂದು ಸ್ಥಾನವನ್ನು ಗಳಿಸಿತ್ತು. ಈಗ ಎಲ್ಲಾ 90 ವಿಧಾನಸಭಾ ಸ್ಥಾನಗಳಲ್ಲಿ ಏಕಾಂಗಿಯಾಗಿ ಸ್ಪರ್ಧಿಸಲಿದೆ.

ಇನ್ನಷ್ಟು ರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ