
ಜಬಲ್ಪುರ, ಡಿಸೆಂಬರ್ 23: ಮಧ್ಯಪ್ರದೇಶದಲ್ಲಿ ಬಿಜೆಪಿ ನಾಯಕಿಯೊಬ್ಬರು ಅಂಧ(Visually Impaired)
ಮಹಿಳೆ ಮೇಲೆ ಹಲ್ಲೆ ನಡೆಸಿರುವ ಘಟನೆ ನಡೆದಿದೆ. ಜಬಲ್ಪುರದಲ್ಲಿ ಈ ಘಟನೆ ನಡೆದಿದೆ. ಅಂಧ ಮಹಿಳೆಯೊಬ್ಬರಿಗೆ ಬಿಜೆಪಿ ನಾಯಕಿ ಕಿರುಕುಳ ನೀಡುತ್ತಿರುವ ವಿಡಿಯೋ ವೈರಲ್ ಆಗಿದ್ದು, ತೀವ್ರ ಆಕ್ರೋಶ ವ್ಯಕ್ತವಾಗಿದೆ. ವಿಡಿಯೋದಲ್ಲಿ ದೃಷ್ಟಿಹೀನತೆ ಬಗ್ಗೆ ಕೆಟ್ಟದಾಗಿ ಕಮೆಂಟ್ ಮಾಡುವುದನ್ನು ಕಾಣಬಹುದು. ಈ ಜನ್ಮದಲ್ಲಿ ಕುರುಡರಾಗಿ ಇರುವವರು ಮುಂದಿನ ಜನ್ಮದಲ್ಲೂ ಕುರುಡರಾಗಿಯೇ ಹುಟ್ಟುತ್ತಾರೆ ಎಂದು ಬಿಜೆಪಿ ನಾಯಕಿ ಅಂಧ ಮಹಿಳೆಗೆ ನೋವಾಗುವ ರೀತಿಯಲ್ಲಿ ಮಾತನಾಡುತ್ತಿರುವುದು ವಿಡಿಯೋದಲ್ಲಿ ಕಾಣಬಹುದು. ಅಷ್ಟೇ ಅಲ್ಲದೆ ಅಂಧ ಮಹಿಳೆ ಮೇಲೆ ಹಲ್ಲೆ ಕೂಡ ನಡೆಸಿದ್ದಾರೆ.
ಕ್ರಿಶ್ಚಿಯನ್ನರೊಬ್ಬರು ಸಿಂಧೂರ ಧರಿಸಿ ಬಂದಿದ್ದಕ್ಕೆ ಅವರನ್ನೂ ಪ್ರಶ್ನಿಸಿರುವುದನ್ನು ಕಾಣಬಹುದು. ವಿಡಿಯೋದಲ್ಲಿ ಬಿಜೆಪಿ ನಾಯಕಿ ಅಂಧ ಮಹಿಳೆಯ ಮೈ ಕೈ ಮುಟ್ಟಿ ಜಗಳವಾಡಿದ್ದಾರೆ. ಸ್ಥಳದಲ್ಲಿದ್ದ ಪೊಲೀಸ್ ಸಿಬ್ಬಂದಿ ಪರಿಸ್ಥಿತಿಯನ್ನು ತಿಳಿಗೊಳಿಸಲು ಮಧ್ಯಪ್ರವೇಶಿಸುತ್ತಿರುವುದನ್ನು ಕಾಣಬಹುದು.
ಈ ಘಟನೆಯು ಡಿಸೆಂಬರ್ 20 ರಂದು ಜಬಲ್ಪುರದ ಗೋರಖ್‌ಪುರ ಪ್ರದೇಶದ ಚರ್ಚ್‌ನಲ್ಲಿ ನಡೆದ ಪ್ರತಿಭಟನೆಗೆ ಸಂಬಂಧಿಸಿದ್ದು ಎನ್ನಲಾಗಿದೆ. ಅಲ್ಲಿ ಹೆಚ್ಚಿನ ಸಂಖ್ಯೆಯ ಹಿಂದೂ ಸಂಘಟನೆ ಕಾರ್ಯಕರ್ತರು ಬಲವಂತದ ಧಾರ್ಮಿಕ ಮತಾಂತರವನ್ನು ಆರೋಪಿಸಿ ಜಮಾಯಿಸಿದ್ದರು.
ದೃಷ್ಟಿಹೀನ ವಿದ್ಯಾರ್ಥಿಗಳನ್ನು ಮತಾಂತರಕ್ಕಾಗಿ ಚರ್ಚ್‌ಗೆ ಕರೆತರಲಾಗುತ್ತಿದೆ ಎಂದು ಪ್ರತಿಭಟನಾಕಾರರು ಹೇಳಿಕೊಂಡಿದ್ದು, ಎರಡೂ ಕಡೆಯ ನಡುವೆ ತೀವ್ರ ಘರ್ಷಣೆಗೆ ಕಾರಣವಾಯಿತು. ಮೂಲಗಳ ಪ್ರಕಾರ, ಬಿಜೆಪಿ ಜಿಲ್ಲಾ ಕಾರ್ಯಕರ್ತೆ ಅಂಜು ಭಾರ್ಗವ ಅವರು ಹಿಂದೂ ಸಂಘಟನೆಗಳ ಸದಸ್ಯರೊಂದಿಗೆ ಪ್ರತಿಭಟನೆಯಲ್ಲಿ ಉಪಸ್ಥಿತರಿದ್ದರು. ಅವರು ಮಕ್ಕಳು ಮತ್ತು ಅಂಗವಿಕಲ ಮಹಿಳೆ ಕುಳಿತಿದ್ದ ಚರ್ಚ್ ಆವರಣಕ್ಕೆ ಪ್ರವೇಶಿಸಿದಾಗ, ವಾಗ್ವಾದ ನಡೆದು, ಅಂತಿಮವಾಗಿ ವೈರಲ್ ವೀಡಿಯೊದಲ್ಲಿ ಕಂಡುಬರುವ ವಾಗ್ವಾದಕ್ಕೆ ಕಾರಣವಾಯಿತು ಎಂದು ಆರೋಪಿಸಲಾಗಿದೆ.
ಘಟನೆಯ ವಿಡಿಯೋ
यह औरत जो एक दृष्टिहीन लड़की के साथ मारपीट कर रही है वो जबलपुर में BJP की उप जिलाध्यक्ष अंजू भार्गव हैं
यह जाहिलियत और क्रूरता करना BJP में आगे बढ़ने का सबसे आसान तरीका है
धब्बे हैं यह लोग समाज पर
pic.twitter.com/tgsxjzhaLA— Supriya Shrinate (@SupriyaShrinate) December 22, 2025
ಸೋಮವಾರ ಈ ವಿಡಿಯೋ ವೈರಲ್ ಆದ ನಂತರ, ಕಾಂಗ್ರೆಸ್ ಬಿಜೆಪಿ ವಿರುದ್ಧ ತೀವ್ರ ವಾಗ್ದಾಳಿ ನಡೆಸಿತು. ಕಾಂಗ್ರೆಸ್ ನಾಯಕಿ ಸುಪ್ರಿಯಾ ಶ್ರೀನಾಟೆ ಈ ವಿಡಿಯೋವನ್ನು ಸಾಮಾಜಿಕ ಮಾಧ್ಯಮದಲ್ಲಿ ಹಂಚಿಕೊಂಡಿದ್ದು, ದೃಷ್ಟಿಹೀನ ವ್ಯಕ್ತಿಯ ಮೇಲೆ ಹಲ್ಲೆ ನಡೆಸುತ್ತಿರುವ ಮಹಿಳೆ ಬಿಜೆಪಿಯ ಜಬಲ್ಪುರ ಜಿಲ್ಲಾ ಉಪಾಧ್ಯಕ್ಷೆ ಅಂಜು ಭಾರ್ಗವ ಎಂದು ಆರೋಪಿಸಿದ್ದಾರೆ.
ಮತ್ತಷ್ಟು ಓದಿ: ಕೊಪ್ಪಳ ವಿವಿಯಿಂದ ಮಾದರಿ ಕಾರ್ಯ: ದೇವದಾಸಿ ಮಕ್ಕಳಿಗೆ, ಅಂಧ ವಿದ್ಯಾರ್ಥಿಗಳಿಗೆ ಉಚಿತ ಪ್ರವೇಶ
ವೈರಲ್ ಆಗಿರುವ ವಿಡಿಯೋ ಅಥವಾ ಘಟನೆಯ ಸುತ್ತಲಿನ ಆರೋಪಗಳ ಕುರಿತು ಬಿಜೆಪಿ ಇದುವರೆಗೆ ಯಾವುದೇ ಅಧಿಕೃತ ಹೇಳಿಕೆ ಅಥವಾ ಪ್ರತಿಕ್ರಿಯೆಯನ್ನು ನೀಡಿಲ್ಲ.
ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
Published On - 10:46 am, Tue, 23 December 25