ಬಂಗಾಳದಲ್ಲಿ ಉಪಚುನಾವಣೆ ಪ್ರಚಾರದ ವೇಳೆ ಬಿಜೆಪಿ- ಟಿಎಂಸಿ ನಡುವೆ ಘರ್ಷಣೆ; ಗನ್ ತೋರಿಸಿದ ದಿಲೀಪ್ ಘೋಷ್ ಸಿಬ್ಬಂದಿ

| Updated By: ಸುಷ್ಮಾ ಚಕ್ರೆ

Updated on: Sep 27, 2021 | 4:17 PM

ಇಂದು ನಡೆದ ಗಲಾಟೆ ವೇಳೆ ದಿಲೀಪ್ ಘೋಷ್ ಅವರನ್ನು ರಸ್ತೆಯಲ್ಲಿ ಅಡ್ಡ ಹಾಕಲಾಗಿತ್ತು. ಈ ವೇಳೆ ಅವರನ್ನು ಎಳೆದಾಡಲಾಗಿದೆ. ಇದರಿಂದ ಟಿಎಂಸಿ ಕಾರ್ಯಕರ್ತರಿಗೆ ದಿಲೀಪ್ ಘೋಷ್ ಅವರ ಭದ್ರತಾ ಸಿಬ್ಬಂದಿ ಗನ್ ತೋರಿಸಿ ಹೆದರಿಸಿದ ಘಟನೆಯೂ ನಡೆಯಿತು.

ಬಂಗಾಳದಲ್ಲಿ ಉಪಚುನಾವಣೆ ಪ್ರಚಾರದ ವೇಳೆ ಬಿಜೆಪಿ- ಟಿಎಂಸಿ ನಡುವೆ ಘರ್ಷಣೆ; ಗನ್ ತೋರಿಸಿದ ದಿಲೀಪ್ ಘೋಷ್ ಸಿಬ್ಬಂದಿ
ದಿಲೀಪ್ ಘೋಷ್
Follow us on

ಕೊಲ್ಕತ್ತಾ: ಪಶ್ಚಿಮ ಬಂಗಾಳದಲ್ಲಿ ಉಪಚುನಾವಣೆ ಪ್ರಚಾರ ಜೋರಾಗಿಯೇ ನಡೆಯುತ್ತಿದೆ. ಮಮತಾ ಬ್ಯಾನರ್ಜಿ ಮುಖ್ಯಮಂತ್ರಿ ಸ್ಥಾನದಲ್ಲಿ ಮುಂದುವರೆಯುತ್ತಾರೋ ಇಲ್ಲವೋ ಎಂಬುದನ್ನು ಈ ಚುನಾವಣೆ ನಿರ್ಧರಿಸಲಿದೆ. ಕಳೆದ ಬಾರಿ ನಂದಿಗ್ರಾಮದಿಂದ ಸ್ಪರ್ಧಿಸಿ ಸೋತಿದ್ದ ಮಮತಾ ಬ್ಯಾನರ್ಜಿ ಸಿಎಂ ಆಗಿ ಮುಂದುವರೆಯಬೇಕೆಂದರೆ ಈ ಉಪಚುನಾವಣೆಯಲ್ಲಿ ಬಾಬನೀಪುರದಿಂದ ಗೆಲ್ಲಲೇಬೇಕಾದ ಅನಿವಾರ್ಯತೆಯಿದೆ. ಬಾಬನೀಪುರ ಕ್ಷೇತ್ರದಲ್ಲಿ ಇಂದು ಕೊನೆಯ ದಿನದ ಚುನಾವಣಾ ಪ್ರಚಾರ ನಡೆಸಲಾಯಿತು. ಈ ವೇಳೆ ಟಿಎಂಸಿ ಹಾಗೂ ಬಿಜೆಪಿ ಕಾರ್ಯಕರ್ತರ ನಡುವೆ ಭಾರೀ ಗಲಾಟೆ ನಡೆದಿದ್ದು, ಮನೆ ಮನೆ ಪ್ರಚಾರಕ್ಕೆ ಬಂದಿದ್ದ ಬಿಜೆಪಿ ರಾಷ್ಟ್ರೀಯ ಉಪಾಧ್ಯಕ್ಷ ದಿಲೀಪ್ ಘೋಷ್ ಅವರನ್ನು ತಳ್ಳಿ, ಹಲ್ಲೆ ನಡೆಸಲಾಗಿದೆ. ಇದರಿಂದ ಕೋಪಗೊಂಡ ಅವರು ಅರ್ಧಕ್ಕೆ ತಮ್ಮ ಚುನಾವಣಾ ಪ್ರಚಾರವನ್ನು ನಿಲ್ಲಿಸಿ ವಾಪಾಸ್ ತೆರಳಿದ್ದಾರೆ.

ದಿಲೀಪ್ ಘೋಷ್ ಅವರನ್ನು ತಳ್ಳಿ, ಹಲ್ಲೆ ನಡೆಸಲಾಗಿದೆ ಎಂದು ಪಶ್ಚಿಮ ಬಂಗಾಳದ ಬಿಜೆಪಿ ಅಧ್ಯಕ್ಷ ಸುಕಾಂತ್ ಮಜುಮ್ದಾರ್ ಆರೋಪಿಸಿದ್ದಾರೆ. ಟಿಎಂಸಿ ಹಾಗೂ ಬಿಜೆಪಿ ಕಾರ್ಯಕರ್ತರ -ನಡುವೆ ನಡೆದ ಗಲಾಟೆಯಲ್ಲಿ ಓರ್ವ ಬಿಜೆಪಿ ಕಾರ್ಯಕರ್ತನಿಗೆ ಭಾರೀ ಗಾಯವಾಗಿದೆ. ಈ ಬಗ್ಗೆ ದಿಲೀಪ್ ಘೋಷ್ ಕೂಡ ಟ್ವೀಟ್ ಮಾಡಿದ್ದು, ಬಾಬನೀಪುರದಲ್ಲಿ ನಡೆದ ಗಲಾಟೆಯ ವಿಡಿಯೋವನ್ನು ಶೇರ್ ಮಾಡಿಕೊಂಡಿದ್ದಾರೆ. ಹಾಗೇ, ಜನಪ್ರತಿನಿಧಿಗಳೇ ಈ ರೀತಿಯ ಹಲ್ಲೆಯಾದರೆ ಜನಸಾಮಾನ್ಯರ ಕತೆಯೇನು? ಎಂದು ಪ್ರಶ್ನಿಸಿದ್ದಾರೆ.

ಇಂದು ನಡೆದ ಗಲಾಟೆ ವೇಳೆ ದಿಲೀಪ್ ಘೋಷ್ ಅವರನ್ನು ರಸ್ತೆಯಲ್ಲಿ ಅಡ್ಡ ಹಾಕಲಾಗಿತ್ತು. ಈ ವೇಳೆ ಅವರನ್ನು ಎಳೆದಾಡಲಾಗಿದೆ. ಇದರಿಂದ ಟಿಎಂಸಿ ಕಾರ್ಯಕರ್ತರಿಗೆ ದಿಲೀಪ್ ಘೋಷ್ ಅವರ ಭದ್ರತಾ ಸಿಬ್ಬಂದಿ ಗನ್ ತೋರಿಸಿ ಹೆದರಿಸಿದ ಘಟನೆಯೂ ನಡೆಯಿತು. ಈ ಬಗ್ಗೆ ಪ್ರತಿಕ್ರಿಯೆ ನೀಡಿರುವ ಬಿಜೆಪಿ ನಾಯಕ ದಿಲೀಪ್ ಘೋಷ್, ಇಂತಹ ಪರಿಸ್ಥಿತಿಯಲ್ಲಿ ಪಶ್ಚಿಮ ಬಂಗಾಳದಲ್ಲಿ ಹೇಗೆ ಉಪಚುನಾವಣೆ ನಡೆಯುತ್ತದೋ ಎಂದು ನನಗೆ ಆತಂಕ ಶುರುವಾಗಿದೆ. ಅಲ್ಲಿ ಜನರಿಗೆ ಯಾವುದೇ ಭದ್ರತೆಯಿಲ್ಲ. ಅಲ್ಲಿನ ಜನರು ನನ್ನನ್ನೂ ತಳ್ಳಿ, ನಮ್ಮ ಕಾರ್ಯಕರ್ತರ ಮೇಲೆ ಹಲ್ಲೆ ನಡೆಸಿದರು. ಬಂಗಾಳದಲ್ಲಿ ಪ್ರಜಾಪ್ರಭುತ್ವ ಎಲ್ಲಿದೆ? ನಾವು ಚುನಾವಣಾ ಆಯೋಗಕ್ಕೆ ಈ ಬಗ್ಗೆ ದೂರು ನೀಡುತ್ತೇವೆ ಎಂದಿದ್ದಾರೆ.


ಸೆ. 30ರಂದು ಪಶ್ಚಿಮ ಬಂಗಾಳದ 3 ವಿಧಾನಸಭಾ ಕ್ಷೇತ್ರಗಳು ಹಾಗೂ ಒರಿಸ್ಸಾದ 1 ವಿಧಾನಸಭಾ ಕ್ಷೇತ್ರಕ್ಕೆ ಉಪ ಚುನಾವಣೆ ನಡೆಯಲಿದೆ. ಅ. 3ರಂದು ಮತ ಎಣಿಕೆ ನಡೆಯಲಿದೆ. ಬಾಬಿನೀಪುರ ಮಾತ್ರವಲ್ಲದೆ ಪಶ್ಚಿಮ ಬಂಗಾಳದ ಸಂಸೇರ್​ನಗರ್, ಜಾಂಗೀಪುರ್ ಹಾಗೂ ಒರಿಸ್ಸಾದ ಪಿಪ್ಲಿ ಕ್ಷೇತ್ರಗಳಿಗೆ ಚುನಾವಣೆ ನಡೆಯಲಿದೆ. ಇಂದು ಮನೆ ಮನೆ ಪ್ರಚಾರಕ್ಕೆ ಅವಕಾಶ ನೀಡಲಾಗಿತ್ತು.

ಕಳೆದ ಏಪ್ರಿಲ್-ಮೇ ತಿಂಗಳಲ್ಲಿ ನಡೆದ ವಿಧಾನಸಭಾ ಚುನಾವಣೆಯಲ್ಲಿ ಸಿಎಂ ಮಮತಾ ಬ್ಯಾನರ್ಜಿ ನಂದಿಗ್ರಾಮದಿಂದ ಸ್ಪರ್ಧಿಸಿದ್ದರು. ಮಮತಾ ಬ್ಯಾನರ್ಜಿ ಅವರ ಎದುರಾಳಿಯಾಗಿ ಟಿಎಂಸಿ ತೊರೆದು ಬಿಜೆಪಿಗೆ ಸೇರ್ಪಡೆಯಾದ ಸುವೇಂದು ಅಧಿಕಾರಿ ಸ್ಪರ್ಧಿಸಿದ್ದರು. ಸುವೇಂದು ಅಧಿಕಾರಿ ಎದುರು ಮಮತಾ ಬ್ಯಾನರ್ಜಿ ಸೋಲನ್ನು ಅನುಭವಿಸಿದ್ದರು. ಅದಾದ ಬಳಿಕ ಬಹುಮತ ಪಡೆದ ಟಿಎಂಸಿ ಪಕ್ಷ ಅಧಿಕಾರಕ್ಕೆ ಬಂದ ಹಿನ್ನೆಲೆಯಲ್ಲಿ ಮಮತಾ ಬ್ಯಾನರ್ಜಿ ಮುಖ್ಯಮಂತ್ರಿಯಾಗಿ ಅಧಿಕಾರ ಸ್ವೀಕರಿಸಿದ್ದರು. ಹೀಗಾಗಿ, ಈ ಬಾರಿಯ ಉಪಚುನಾವಣೆಯಲ್ಲಿ ಮಮತಾ ಬ್ಯಾನರ್ಜಿ ಗೆದ್ದರೆ ಮಾತ್ರ ಮುಖ್ಯಮಂತ್ರಿಯಾಗಿ ಮುಂದುವರೆಯಲಿದ್ದಾರೆ.

ಇದನ್ನೂ ಓದಿ: Sukanta Majumdar ಪಶ್ಚಿಮ ಬಂಗಾಳದ ಬಿಜೆಪಿ ಅಧ್ಯಕ್ಷ ಸುಕಾಂತ ಮಜುಂದಾರ್ ವ್ಯಕ್ತಿ ಪರಿಚಯ

ಪಶ್ಚಿಮ ಬಂಗಾಳದಲ್ಲಿ ಅರ್ಜುನ್ ಸಿಂಗ್ ನಿವಾಸದ ಹೊರಗೆ ಮತ್ತೊಂದು ಬಾಂಬ್ ಸ್ಫೋಟ; ಟಿಎಂಸಿ ತನ್ನನ್ನು ಕೊಲ್ಲಲು ಪ್ರಯತ್ನಿಸುತ್ತಿದೆ ಎಂದ ಬಿಜೆಪಿ ಸಂಸದ

(BJP Leader Dilip Ghosh ‘Kicked, pushed by TMC Workers in Bhabanipur bypoll campaign of West Bengal)

Published On - 4:16 pm, Mon, 27 September 21