ಪೆಟ್ರೋಲ್ ಬೆಲೆ ಏರಿಕೆ ಬಗ್ಗೆ ಪ್ರಶ್ನಿಸಿದ್ದಕ್ಕೆ ಅಫ್ಘಾನಿಸ್ತಾನಕ್ಕೆ ತೆರಳಿ ಎಂದು ಉತ್ತರಿಸಿದ ಬಿಜೆಪಿ ನಾಯಕ
Petrol Price Hike: ಬೆಲೆ ಏರಿಕೆ ಬಗ್ಗೆ ಕೇಳಿದಾಗ. ಭಾರತದಲ್ಲಿ ಕೊರೊನಾ ಮೂರನೇ ಅಲೆ ಬರುವ ಆತಂಕ ಇದೆ. ಈ ಬಿಕ್ಕಟ್ಟಿನಲ್ಲಿ ನಾವಿದ್ದೇವೆ. ನೀವು ಪೆಟ್ರೋಲ್ ಬಗ್ಗೆ ಮಾತನಾಡುತ್ತಿದ್ದೀರಿ ಎಂದು ಹೇಳಿದ್ದಾರೆ.
ದೆಹಲಿ: ಭಾರತದಲ್ಲಿ ಪೆಟ್ರೋಲ್ ಬೆಲೆ ಏರಿಕೆ ಬಿಸಿ ಜನರನ್ನು ಹಣಕಾಸಿನ ಸಮಸ್ಯೆಗೆ ದೂಡಿದೆ. ಅಡುಗೆ ಅನಿಲ ದರ ಕೂಡ ಏರಿಕೆ ಕಾಣುತ್ತಿದೆ. ಇದರಿಂದಾಗಿ ದಿನನಿತ್ಯದ ಅಗತ್ಯ ವಸ್ತುಗಳ ಬೆಲೆಯಲ್ಲಿ ಕೂಡ ಗಣನೀಯ ಏರಿಕೆ ಕಂಡುಬಂದಿದೆ. ವಿಪಕ್ಷಗಳು ಬೆಲೆ ಏರಿಕೆ ವಿರುದ್ಧ ಭಾರೀ ಟೀಕೆ, ಪ್ರತಿಭಟನೆ ವ್ಯಕ್ತಪಡಿಸುತ್ತಿವೆ. ಈ ಮಧ್ಯೆ ಭಾರತೀಯ ಜನತಾ ಪಾರ್ಟಿಯ (BJP) ಮಧ್ಯಪ್ರದೇಶದ ನಾಯಕರೊಬ್ಬರು ಪೆಟ್ರೋಲ್ ಬೆಲೆ ಏರಿಕೆ ಬಗ್ಗೆ ಕೇಳಿದ್ದಕ್ಕೆ ನೀವು ಅಫ್ಘಾನಿಸ್ತಾನಕ್ಕೆ ತೆರಳಿ ಎಂದು ಉತ್ತರ ಕೊಟ್ಟಿದ್ದಾರೆ.
ಗಗನಕ್ಕೆ ಏರುತ್ತಿರುವ ಇಂಧನ ದರದ ಬಗ್ಗೆ ಪ್ರಶ್ನಿಸಿದಾಗ ತಾಲಿಬಾನ್ ಆಡಳಿತ ಇರುವ ಅಫ್ಘಾನಿಸ್ತಾನಕ್ಕೆ ಹೋಗಿ ಎಂದು ಹೇಳಿದ್ದಾರೆ. ಕೊರೊನಾ ವೈರಸ್ ಮೂರನೇ ಅಲೆ ಭೀತಿ ಹಾಗೂ ಇಂಧನ ಬೆಲೆ ಏರಿಕೆ ಬಗ್ಗೆ ಮಾಧ್ಯಮದ ಜೊತೆಗೆ ಮಾತನಾಡುತ್ತಿದ್ದ ರಾಮ್ರತನ್ ಪಾಯಲ್ ಎಂಬ ಬಿಜೆಪಿ ನಾಯಕ ಹೀಗೆ ಉತ್ತರಿಸಿದ್ದಾರೆ.
ಕೊರೊನಾ ವೈರಸ್ ಬಗ್ಗೆ ಮಾತನಾಡುತ್ತಿದ್ದ ನಾಯಕನ ಸುತ್ತಮುತ್ತಲು ಇದ್ದ ಜನರು, ಬೆಂಬಲಿಗರು ಕೊರೊನಾ ನಿಯಮಗಳನ್ನು ಮರೆತೇ ವರ್ತಿಸುತ್ತಿದ್ದರು. ಸಾಮಾಜಿಕ ಅಂತರ ಅಥವಾ ಮಾಸ್ಕ್ ಕೂಡ ಧರಿಸಿ ಇರಲಿಲ್ಲ. ಅವರು ಹೀಗೆ ಮಾಧ್ಯಮದ ಜೊತೆಗೆ ಮಾತನಾಡುತ್ತಿರುವ ವಿಡಿಯೋ ಈಗ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಪೆಟ್ರೋಲ್ ಬೆಲೆ ಬಗ್ಗೆ ಕೇಳಿದಾಗ ಉತ್ತರಿಸಿದ್ದು ಕೂಡ ವೈರಲ್ ಆಗಿದೆ. ಮಾತಿನ ಹದ ಕಳೆದುಕೊಂಡ ಅವರು ನೀವು ತಾಲಿಬಾನ್ರಿಂದ ಪೆಟ್ರೋಲ್ ತನ್ನಿ. ಅಲ್ಲಿ ಕೇವಲ 50 ರೂಪಾಯಿಗೆ, ಕಡಿಮೆಗೆ ಇಂಧನ ಸಿಗುತ್ತೆ. ಆದರೆ ಅಲ್ಲಿ ಅದನ್ನು ಬಳಸಲು ಯಾರೂ ಇಲ್ಲ. ಕನಿಷ್ಠ ಪಕ್ಷ ಇಲ್ಲಿ ಸುರಕ್ಷತೆ ಆದರೂ ಇದೆ ಎಂದು ಹೇಳಿದ್ದಾರೆ.
ಮತ್ತೂ ಮುಂದುವರಿದು ಬೆಲೆ ಏರಿಕೆ ಬಗ್ಗೆ ಕೇಳಿದಾಗ. ಭಾರತದಲ್ಲಿ ಕೊರೊನಾ ಮೂರನೇ ಅಲೆ ಬರುವ ಆತಂಕ ಇದೆ. ಈ ಬಿಕ್ಕಟ್ಟಿನಲ್ಲಿ ನಾವಿದ್ದೇವೆ. ನೀವು ಪೆಟ್ರೋಲ್ ಬಗ್ಗೆ ಮಾತನಾಡುತ್ತಿದ್ದೀರಿ ಎಂದು ಹೇಳಿದ್ದಾರೆ. ಹಾಗೂ ಈ ವೇಳೆ, ಅವರು ಮತ್ತು ಸುತ್ತಲಿನ ಮಂದಿ ಯಾವುದೇ ಕೊರೊನಾ ನಿಯಮ ಪಾಲಿಸದೇ ಇದ್ದದ್ದು ವಿಷಾದನೀಯ ವಿಚಾರ.
ಪ್ರಮುಖ ನಗರಗಳ ಇಂದಿನ ಇಂಧನ ದರ ಹೀಗಿದೆ ಮುಂಬೈನಲ್ಲಿ ಲೀಟರ್ ಪೆಟ್ರೋಲ್ ಬೆಲೆ 107.83 ರೂಪಾಯಿ ಇದ್ದರೆ, ಲೀಟರ್ ಡೀಸೆಲ್ ಬೆಲೆ 96.84 ರೂಪಾಯಿಗೆ ಇಳಿಕೆಯಾಗಿದೆ. ಚೆನ್ನೈನಲ್ಲಿ ಲೀಟರ್ ಪೆಟ್ರೋಲ್ ಬೆಲೆ 101.49 ರೂಪಾಯಿ ಇದೆ. ಲೀಟರ್ ಡೀಸೆಲ್ ಬೆಲೆ 93.84 ರೂಪಾಯಿಗೆ ಇಳಿಕೆ ಕಂಡಿದೆ. ಅದೇ ರೀತಿ ಕೋಲ್ಕತ್ತಾದಲ್ಲಿ ಲೀಟರ್ ಪೆಟ್ರೋಲ್ ಬೆಲೆ 102.25 ರೂಪಾಯಿ ಇದ್ದರೆ, ಲೀಟರ್ ಡೀಸೆಲ್ ಬೆಲೆ 92.32 ರೂಪಾಯಿಗೆ ಇಳಿಕೆಯಾಗಿದೆ. ಬೆಂಗಳೂರಿನಲ್ಲಿ ಲೀಟರ್ ಪೆಟ್ರೋಲ್ ಬೆಲೆ 105.25 ರೂಪಾಯಿ ಇದೆ. ಲೀಟರ್ ಡೀಸೆಲ್ ಬೆಲೆ 94.65 ರೂಪಾಯಿಗೆ ಇಳಿದಿದೆ.
ಇದನ್ನೂ ಓದಿ: ದಿಕ್ಕುತಪ್ಪಿರುವ ಅಫ್ಘಾನಿಸ್ತಾನದ ಆಡಳಿತಕ್ಕೆ ತಾಲಿಬಾನಿಯ ಈ ಏಳು ಮಂದಿಯೇ ಸೂತ್ರಧಾರಿಗಳು!
Sharia Law: ಅಫ್ಘಾನಿಸ್ತಾನದಲ್ಲಿ ಷರಿಯಾ ಆಡಳಿತ ಜಾರಿಗೆ ಸಿದ್ಧತೆ; ಷರಿಯಾ ಕಾನೂನು ಎಂದರೇನು?
Published On - 9:45 am, Fri, 20 August 21