ಕಾಯಿಲೆಯಿಂದ ಬಳಲುತ್ತಿದ್ದೇನೆ ಎಂದ ಅರವಿಂದ್ ಕೇಜ್ರಿವಾಲ್‌ಗಾಗಿ ಆಂಬುಲೆನ್ಸ್ ಕಳುಹಿಸಿದ ಬಿಜೆಪಿ ನಾಯಕ 

ದೆಹಲಿ ಸಿಎಂ ಅರವಿಂದ್ ಕೇಜ್ರಿವಾಲ್ ಅವರು ಪಿಇಟಿ-ಸಿಟಿ ಸ್ಕ್ಯಾನ್ ಸೇರಿದಂತೆ ಕೆಲವು ವೈದ್ಯಕೀಯ ಪರೀಕ್ಷೆಗಳಿಗೆ ಒಳಗಾಗಬೇಕು ಎಂಬ ಕಾರಣಕ್ಕಾಗಿ ತಮ್ಮ ಮಧ್ಯಂತರ ಜಾಮೀನನ್ನು 7 ದಿನಗಳವರೆಗೆ ವಿಸ್ತರಿಸಬೇಕೆಂದು ಕೋರಿ ಮೇ 26ರಂದು ಸುಪ್ರೀಂ ಕೋರ್ಟ್‌ಗೆ ಅರ್ಜಿ ಸಲ್ಲಿಸಿದ್ದರು.

ಕಾಯಿಲೆಯಿಂದ ಬಳಲುತ್ತಿದ್ದೇನೆ ಎಂದ ಅರವಿಂದ್ ಕೇಜ್ರಿವಾಲ್‌ಗಾಗಿ ಆಂಬುಲೆನ್ಸ್ ಕಳುಹಿಸಿದ ಬಿಜೆಪಿ ನಾಯಕ 
ಅರವಿಂದ್ ಕೇಜ್ರಿವಾಲ್
Follow us
ಸುಷ್ಮಾ ಚಕ್ರೆ
|

Updated on: Jun 01, 2024 | 4:18 PM

ನವದೆಹಲಿ: ಲೋಕಸಭಾ ಚುನಾವಣೆ (Lok Sabha Elections 2024) ಪ್ರಚಾರಕ್ಕಾಗಿ ಮಧ್ಯಂತರ ಜಾಮೀನು ಪಡೆದಿರುವ ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ (Arvind Kejriwal) ಅವರ ಆರೋಗ್ಯ ಸರಿಯಾಗಿಲ್ಲ ಎನ್ನಲಾಗಿದೆ. ತಾನು ಕೆಲವು ಗಂಭೀರ ಕಾಯಿಲೆಗಳಿಂದ ಬಳಲುತ್ತಿದ್ದೇನೆ ಎಂದು ಹೇಳಿರುವ ಆಮ್ ಆದ್ಮಿ ಪಕ್ಷದ (ಎಎಪಿ) ನಾಯಕ ಅರವಿಂದ್ ಕೇಜ್ರಿವಾಲ್ ಅವರನ್ನು ವೈದ್ಯಕೀಯ ಪರೀಕ್ಷೆಗಾಗಿ ಆಸ್ಪತ್ರೆಗೆ ಕರೆದೊಯ್ಯಲು ಹಿರಿಯ ಬಿಜೆಪಿ ನಾಯಕ ವಿಜಯ್ ಗೋಯೆಲ್ ಇಂದು ಆಂಬುಲೆನ್ಸ್ ಕಳುಹಿಸಿದ್ದಾರೆ.

ಕೇಜ್ರಿವಾಲ್ ಅವರು ಪಿಇಟಿ-ಸಿಟಿ ಸ್ಕ್ಯಾನ್ ಸೇರಿದಂತೆ ಕೆಲವು ವೈದ್ಯಕೀಯ ಪರೀಕ್ಷೆಗಳಿಗೆ ಒಳಗಾಗಬೇಕು ಎಂಬ ಕಾರಣಕ್ಕಾಗಿ ತಮ್ಮ ಮಧ್ಯಂತರ ಜಾಮೀನನ್ನು 7 ದಿನಗಳವರೆಗೆ ವಿಸ್ತರಿಸಬೇಕೆಂದು ಕೋರಿ ಮೇ 26ರಂದು ಸುಪ್ರೀಂ ಕೋರ್ಟ್‌ಗೆ ಅರ್ಜಿ ಸಲ್ಲಿಸಿದ್ದರು. ನಾನು ಜೈಲಿನಲ್ಲಿ 7 ಕೆಜಿ ತೂಕವನ್ನು ಕಳೆದುಕೊಂಡಿದ್ದೇನೆ ಮತ್ತು ನನ್ನ ಕೀಟೋನ್ ಮಟ್ಟಗಳು ತುಂಬಾ ಹೆಚ್ಚಾಗಿದೆ. ಜೈಲಿನಲ್ಲಿ ನನಗೆ ನನ್ನ ಮಾತ್ರೆಗಳನ್ನು ತೆಗೆದುಕೊಳ್ಳಲು ಸರಿಯಾಗಿ ಅವಕಾಶ ನೀಡುತ್ತಿರಲಿಲ್ಲ ಎಂದು ಅವರು ತಮ್ಮ ಮನವಿಯಲ್ಲಿ ಹೇಳಿಕೊಂಡಿದ್ದರು.

ಇದನ್ನೂ ಓದಿ: ಸ್ವಾತಿ ಮಲಿವಾಲ್ ಮೂಲಕ ಅರವಿಂದ್ ಕೇಜ್ರಿವಾಲ್ ವಿರುದ್ಧ ಬಿಜೆಪಿ ಷಡ್ಯಂತ್ರ; ಆಮ್ ಆದ್ಮಿ ಆರೋಪ

ಇಲ್ಲಿನ ಸಿವಿಲ್ ಲೈನ್ಸ್‌ನಲ್ಲಿರುವ ಮುಖ್ಯಮಂತ್ರಿಯವರ ಅಧಿಕೃತ ನಿವಾಸಕ್ಕೆ ಹೋಗುವ ಮಾರ್ಗಮಧ್ಯೆ ಪೊಲೀಸರು ಗೋಯೆಲ್ ಕಳುಹಿಸಿದ್ದ ಆಂಬುಲೆನ್ಸ್ ಅನ್ನು ತಡೆದಿದ್ದಾರೆ.

ದೆಹಲಿ ಮದ್ಯ ನೀತಿ ಹಗರಣಕ್ಕೆ ಸಂಬಂಧಿಸಿದ ಅಕ್ರಮ ಹಣ ವರ್ಗಾವಣೆ ಪ್ರಕರಣದಲ್ಲಿ ಬಂಧಿತರಾಗಿದ್ದ ಅರವಿಂದ್ ಕೇಜ್ರಿವಾಲ್‌ಗೆ ಲೋಕಸಭೆ ಚುನಾವಣೆಗೆ ಪ್ರಚಾರ ಮಾಡಲು ಅನುಕೂಲವಾಗುವಂತೆ ಮೇ 10ರಂದು ಸುಪ್ರೀಂ ಕೋರ್ಟ್ 21 ದಿನಗಳ ಮಧ್ಯಂತರ ಜಾಮೀನು ನೀಡಿತ್ತು.

7 ಹಂತಗಳ ಲೋಕಸಭೆ ಚುನಾವಣೆ ಮುಗಿದ ಒಂದು ದಿನದ ನಂತರ ಜೂನ್ 2ರಂದು ಶರಣಾಗುವಂತೆ ಆಪ್ ರಾಷ್ಟ್ರೀಯ ಸಂಚಾಲಕರೂ ಆಗಿರುವ ಅರವಿಂದ್ ಕೇಜ್ರಿವಾಲ್ ಅವರಿಗೆ ನಿರ್ದೇಶನ ನೀಡಲಾಗಿತ್ತು.

ಜನರ ಸಹಾನುಭೂತಿ ಗಳಿಸಲು ಕೇಜ್ರಿವಾಲ್ ಅವರು ಆರೋಗ್ಯ ಸಮಸ್ಯೆಗಳನ್ನು ಮುಂದಿಟ್ಟುಕೊಂಡು ನಾಟಕ ರಚಿಸುತ್ತಿದ್ದಾರೆ ಎಂದು ಗೋಯಲ್ ಆರೋಪಿಸಿದ್ದಾರೆ. ಮುಖ್ಯಮಂತ್ರಿಗಳು ‘ನಾಟಕ’ವನ್ನು ನಿಲ್ಲಿಸಿ ಅವರ ಆರೋಗ್ಯದ ಬಗ್ಗೆ ಕಾಳಜಿ ಇದ್ದರೆ ಆಂಬುಲೆನ್ಸ್​ನಲ್ಲಿ ಪರೀಕ್ಷೆಗೆ ಹೋಗಬೇಕು ಎಂದು ಅವರು ಹೇಳಿದ್ದಾರೆ.

ಇದನ್ನೂ ಓದಿ: ಆಮ್ ಆದ್ಮಿ ನಾಯಕರು ಹೋಲ್​ಸೇಲ್ ಡ್ರಗ್ಸ್ ವ್ಯಾಪಾರಿಗಳು; ಪಂಜಾಬ್‌ನಲ್ಲಿ ಮೋದಿ ಟೀಕೆ

ಮಧ್ಯಂತರ ಜಾಮೀನು ಕೋರಿ ಮುಖ್ಯಮಂತ್ರಿ ಸಲ್ಲಿಸಿರುವ ಅರ್ಜಿಯನ್ನು ದೆಹಲಿ ನ್ಯಾಯಾಲಯವು ಸೋಮವಾರ ವಿಚಾರಣೆ ಮಾಡುವ ಸಾಧ್ಯತೆಯಿದೆ. ವೈದ್ಯಕೀಯ ಪರೀಕ್ಷೆಗೆ ಒಳಗಾಗಲು ಮಧ್ಯಂತರ ಜಾಮೀನನ್ನು 7 ದಿನಗಳವರೆಗೆ ವಿಸ್ತರಿಸುವಂತೆ ಕೋರಿ ಅವರು ಸಲ್ಲಿಸಿದ ಅರ್ಜಿಯ ತುರ್ತು ಪಟ್ಟಿಯನ್ನು ಸುಪ್ರೀಂ ಕೋರ್ಟ್ ರಿಜಿಸ್ಟ್ರಿ ಬುಧವಾರ ನಿರಾಕರಿಸಿತ್ತು.

ಕಿಡ್ನಿ, ಕ್ಯಾನ್ಸರ್, ಗಂಭೀರ ಹೃದಯ ಸಂಬಂಧಿ ಕಾಯಿಲೆಗಳನ್ನು ಸೂಚಿಸುವ “ಹಠಾತ್ ತೂಕ ಇಳಿಕೆ ಮತ್ತು ಹೆಚ್ಚಿನ ಕೀಟೋನ್ ಮಟ್ಟ” ದ ದೃಷ್ಟಿಯಿಂದ ಪಿಇಟಿ-ಸಿಟಿ ಸ್ಕ್ಯಾನ್ ಸೇರಿದಂತೆ ಹಲವಾರು ವೈದ್ಯಕೀಯ ಪರೀಕ್ಷೆಗಳಿಗೆ ಒಳಗಾಗಲು ತಮ್ಮ ಮಧ್ಯಂತರ ಜಾಮೀನಿನ ವಿಸ್ತರಣೆಯನ್ನು ಮುಖ್ಯಮಂತ್ರಿ ಕೇಜ್ರಿವಾಲ್ ಕೋರಿದ್ದರು.

ಇನ್ನಷ್ಟು ರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ