ಮುಂಬೈ: ಮಹಾರಾಷ್ಟ್ರ ಸಚಿವ ನವಾಬ್ ಮಲಿಕ್ (Nawab Malik) ಬಂಧನಕ್ಕೆ ಸಂಬಂಧಪಟ್ಟಂತೆ ಬಿಜೆಪಿ ಕೇಂದ್ರ ಸರ್ಕಾರದ ವಿರುದ್ಧ ಎನ್ಸಿಪಿ ಮುಖ್ಯಸ್ಥ ಶರದ್ ಪವಾರ್ ತೀವ್ರ ಆಕ್ರೋಶ ಹೊರಹಾಕಿದ್ದಾರೆ. ಸಚಿನ ನವಾಬ್ ಮಲಿಕ್ ಬಂಧನ ರಾಜಕೀಯ ಪ್ರೇರಿತವಾದದ್ದು ಎಂದು ಹೇಳಿದ ಅವರು, ಬಿಜೆಪಿ ಯಾವ ಮುಸ್ಲಿಮನನ್ನು ಬೇಕಿದ್ದರೂ ಭೂಗತ ಪಾತಕಿ ದಾವೂದ್ ಇಬ್ರಾಹಿಂನೊಂದಿಗೆ ಸಂಪರ್ಕದಲ್ಲಿದ್ದ ಎಂಬಂತೆ ಬಿಂಬಿಸುತ್ತದೆ ಎಂದು ಆರೋಪ ಮಾಡಿದ್ದಾರೆ.
ಬಿಜೆಪಿಯವರ ಕಣ್ಣಿಗೆ ಯಾವುದೇ ಪಕ್ಷದ ಮುಸ್ಲಿಮರು ಬೀಳುವುದೇ ತಪ್ಪು. ಅವರು ದಾವೂದ್ ಇಬ್ರಾಹಿಂ ಜತೆ ಸಂಪರ್ಕದಲ್ಲಿದ್ದರು, ವ್ಯವಹಾರ ನಡೆಸಿದ್ದರು ಎಂಬಂತೆ ಬಿಂಬಿಸಿಬಿಡುತ್ತಾರೆ. ಇದೀಗ ನವಾಬ್ ಮಲ್ಲಿಕ್ಗೂ ಕೂಡ ದಾವೂದ್ ಇಬ್ರಾಹಿಂ ಜತೆ ಸಂಪರ್ಕವಿತ್ತು ಎಂದು ಹೇಳಿ ಅವರನ್ನು ಬಂಧಿಸಲಾಗಿದೆ. ಬಿಜೆಪಿಯವರು ಮಲಿಕ್ ರಾಜೀನಾಮೆ ಕೇಳುತ್ತಿದ್ದಾರೆ. ಈ ಮಧ್ಯೆ ನನ್ನದೊಂದು ಪ್ರಶ್ನೆಯಿದೆ. ಇತ್ತೀಚೆಗೆ ಕೇಂದ್ರ ಸಚಿವ ನಾರಾಯಣ್ ರಾಣೆಯನ್ನು ಬಂಧಿಸಲಾಗಿತ್ತು. ಅವರು ಜಾಮೀನು ಪಡೆದು ವಾಪಸ್ ಬಂದಿದ್ದಾರೆ. ಹೀಗಿದ್ದಾಗ್ಯೂ ಅವರೇಕೆ ರಾಜೀನಾಮೆ ನೀಡಿಲ್ಲ. ಇದಕ್ಕೆ ಪ್ರಧಾನಿ ಮೋದಿ ವಿವರಣೆ ಕೊಡಬೇಕು ಎಂದು ಶರದ್ ಪವಾರ್ ಆಗ್ರಹಿಸಿದ್ದಾರೆ.
ಸಚಿವ ನಾರಾಯಣ್ ರಾಣೆ, ಮಹಾರಾಷ್ಟ್ರ ಮುಖ್ಯಮಂತ್ರಿ ಉದ್ಧವ್ ಠಾಕ್ರೆಯನ್ನು ಅವಹೇಳನ ಮಾಡಿದ್ದರು. ಸ್ವಾತಂತ್ರ್ಯೋತ್ಸವದ ಭಾಷಣ ಮಾಡುವಾಗ ಉದ್ಧವ್ ಠಾಕ್ರೆ ನಮ್ಮ ದೇಶಕ್ಕೆ ಸ್ವಾತಂತ್ರ್ಯ ಬಂದ ವರ್ಷವನ್ನು ತಪ್ಪಾಗಿ ಹೇಳಿದ್ದಕ್ಕೆ ಪ್ರತಿಕ್ರಿಯೆ ನೀಡಿದ್ದ ಅವರು, ನಾನೇನಾದರೂ ಅಲ್ಲಿದ್ದಿದ್ದರೆ ಉದ್ಧವ್ ಠಾಕ್ರೆ ಕಪಾಳಕ್ಕೆ ಏಟು ಹಾಕುತ್ತಿದ್ದೆ ಎಂದಿದ್ದರು. ಇದೇ ಕಾರಣಕ್ಕೆ ಅವರ ವಿರುದ್ಧ ದೂರು ದಾಖಲಾಗಿ ಬಂಧಿಸಲಾಗಿತ್ತು. ಅದನ್ನು ಉಲ್ಲೇಖಿಸಿದ ಶರದ್ ಪವಾರ್, ನಾರಾಯಣ್ ರಾಣೆ ಜೈಲಿಗೆ ಹೋಗಿ ಬಂದಿದ್ದರೂ ರಾಜೀನಾಮೆ ಯಾಕೆ ಕೊಡಲಿಲ್ಲ ಎಂದು ಕೇಳಿದ್ದಾರೆ.
ಭೂಗತ ಪಾತಕಿ ದಾವೂದ್ ಇಬ್ರಾಹಿಂ ಸಹಚರರೊಂದಿಗೆ ನವಾಬ್ ಮಲಿಕ್ ಆಸ್ತಿ ವ್ಯವಹಾರ ನಡೆಸಿದ್ದರು ಎಂಬ ಆರೋಪ ಕೇಳಿ ಬಂದ ಬೆನ್ನಲ್ಲೇ ಇ.ಡಿ.ತನಿಖೆ ಚುರುಕುಗೊಂಡಿತ್ತು. ಅಕ್ರಮ ಹಣ ವರ್ಗಾವಣೆ ತಡೆ ಕಾಯ್ದೆಯಡಿ ಎಫ್ಐಆರ್ ದಾಖಲು ಮಾಡಿ ವಿಚಾರಣೆಗೆ ಒಳಪಡಿಸಲಾಗಿತ್ತು. ನಂತರ ನವಾಬ್ ಮಲಿಕ್ರನ್ನು ಬಂಧಿಸಲಾಗಿದ್ದು, ಸದ್ಯ ಮಾರ್ಚ್ 7ರವರೆಗೂ ಅವರಿಗೆ ಇ.ಡಿ.ಕಸ್ಟಡಿ ವಿಧಿಸಲಾಗಿದೆ.
ಇದನ್ನೂ ಓದಿ: Big Breaking: ಮಹಾರಾಷ್ಟ್ರ ಸಚಿವ, ಎನ್ಸಿಪಿ ನಾಯಕ ನವಾಬ್ ಮಲಿಕ್ರನ್ನು ಬಂಧಿಸಿದ ಇ.ಡಿ.
Published On - 5:51 pm, Sun, 6 March 22