ಮಹಾರಾಷ್ಟ್ರ ಸಚಿವ ನವಾಬ್ ಮಲಿಕ್ಗೆ ಮಾರ್ಚ್ 7ರವರೆಗೂ ಇ.ಡಿ. ಕಸ್ಟಡಿ; ಮುಂಬೈ ಕೋರ್ಟ್ನಿಂದ ಆದೇಶ
ಫೆ.25ಕ್ಕೆ ನವಾಬ್ ಮಲಿಕ್ ಅವರಲ್ಲಿ ಆರೋಗ್ಯ ಸಮಸ್ಯೆ ಕಾಣಿಸಿಕೊಂಡು ಆಸ್ಪತ್ರೆಗೆ ದಾಖಲಾದರು. ಫೆ.28ಕ್ಕೆ ಅಲ್ಲಿಂದ ಡಿಸ್ಚಾರ್ಜ್ ಆದರು. ಆ ಅವಧಿಯಲ್ಲಿ ಅವರ ಹೇಳಿಕೆಗಳನ್ನು ದಾಖಲಿಸಲು ಸಾಧ್ಯವಾಗಲಿಲ್ಲ ಎಂದು ಹೆಚ್ಚುವರಿ ಸಾಲಿಸಿಟರ್ ಜನರಲ್ ಅನಿಲ್ ಸಿಂಗ್ ಕೋರ್ಟ್ನಲ್ಲಿ ವಾದ ಮಂಡಿಸಿದ್ದರು.
ಅಕ್ರಮ ಹಣ ವರ್ಗಾವಣೆ ತಡೆ ಕಾಯ್ದೆಯಡಿ ಬಂಧಿಸಲ್ಪಟ್ಟಿರುವ ಮಹಾರಾಷ್ಟ್ರ ಸಚಿವ ನವಾಬ್ ಮಲಿಕ್ (Nawab Malik) ಅವರು ಮಾರ್ಚ್ 7ರವರೆಗೂ ಇ.ಡಿ.ಕಸ್ಟಡಿಯಲ್ಲೇ ಇರಲಿದ್ದಾರೆ. ಫೆ.23ರಂದು ಬಂಧನಕ್ಕೆ ಒಳಗಾಗಿದ್ದ ನವಾಬ್ ಮಲಿಕ್ರನ್ನು ಮುಂಬೈನ ವಿಶೇಷ ಕೋರ್ಟ್ನಲ್ಲಿ ವಿಚಾರಣೆಗೆ ಒಳಪಡಿಸಲಾಗಿತ್ತು. ನಂತರ ಮಾರ್ಚ್ 3ರವರೆಗೆ ಇ.ಡಿ. ಕಸ್ಟಡಿಗೆ ವಹಿಸಲಾಗಿತ್ತು. ಇಂದು ವಿಚಾರಣೆ ನಡೆದಿದ್ದು, ಮತ್ತೆ 7ನೇ ತಾರೀಖಿನವರೆಗೂ ಅವರ ಕಸ್ಟಡಿ ಅವಧಿ ಮುಂದುವರಿದಿದೆ.
ನವಾಬ್ ಮಲಿಕ್ರನ್ನು ಇನ್ನೂ ಕೆಲವು ದಿನಗಳ ಕಾಲ ಕಸ್ಟಡಿಗೆ ನೀಡಬೇಕು ಎಂದು ಕೋರ್ಟ್ನಲ್ಲಿ ವಾದ ಮಂಡಿಸಿದ ಹೆಚ್ಚುವರಿ ಸಾಲಿಸಿಟರ್ ಜನರಲ್ ಅನಿಲ್ ಸಿಂಗ್, ನವಾಬ್ ಮಲಿಕ್ರನ್ನು ಫೆ.23ರಂದು ಬಂಧಿಸಲಾಯಿತು. ಫೆ.25ಕ್ಕೆ ಅವರಿಗೆ ಆರೋಗ್ಯ ಸಮಸ್ಯೆ ಕಾಣಿಸಿಕೊಂಡು ಆಸ್ಪತ್ರೆಗೆ ದಾಖಲಾದರು. ಫೆ.28ಕ್ಕೆ ಅಲ್ಲಿಂದ ಡಿಸ್ಚಾರ್ಜ್ ಆದರು. ಆ ಅವಧಿಯಲ್ಲಿ ಅವರ ಹೇಳಿಕೆಗಳನ್ನು ದಾಖಲಿಸಲು ಸಾಧ್ಯವಾಗಲಿಲ್ಲ. ಹೀಗಾಗಿ ಅವರನ್ನು ಮತ್ತಷ್ಟು ಕಾಲಗಳ ಕಾಲ ಕಸ್ಟಡಿಗೆ ನೀಡಬೇಕು ಎಂದು ವಾದಿಸಿದ್ದರು.
ನವಾಬ್ ಮಲಿಕ್ ಅವರು ಇ.ಡಿಯಿಂದ ಬಂಧಿತರಾಗಿದ್ದು, ಭೂಗತ ಪಾತಕಿ ದಾವೂದ್ ಇಬ್ರಾಹಿಂ ಮತ್ತು ಅವರ ಸಹಚರರಿಗೆ ಸಂಬಂಧಪಟ್ಟ ಪ್ರಕರಣದಲ್ಲಿ. 20 ವರ್ಷಗಳ ಹಿಂದೆ ಮುಂಬೈನ ಕುರ್ಲಾದಲ್ಲಿ ಮೂರು ಎಕರೆ ಜಾಗಕ್ಕಾಗಿ ದಾವೂದ್ ಇಬ್ರಾಹಿಂ ಸೋದರಿ ಹಸೀನಾ ಪರ್ಕರ್ಗೆ ಇವರು 55 ಲಕ್ಷ ರೂಪಾಯಿ ನಗದು ನೀಡಿದ್ದು ವಿಚಾರಣೆ ವೇಳೆ ಗೊತ್ತಾಗಿದೆ ಎಂದು ಇ.ಡಿ. ರಿಮ್ಯಾಂಡ್ ಕಾಪಿಯಲ್ಲಿ ಹೇಳಿತ್ತು. ಆದರೆ ಇಂದು ಇ.ಡಿ., ಅದು 55 ಲಕ್ಷವಲ್ಲ. 5 ಲಕ್ಷ. ಅಂದಿನ ಕಾಪಿಯಲ್ಲಿ ಮುದ್ರಣ ದೋಷವಾಗಿದೆ ಎಂದು ಸ್ಪಷ್ಟನೆ ನೀಡಿದೆ.
ಭೂಗತ ಪಾತಕಿ, ಭಯೋತ್ಪಾದಕ ಚಟುವಟಿಕೆಗಳಿಗೆ ಹಣಕಾಸು ನೆರವು ನೀಡುತ್ತಿದ್ದ ದಾವೂದ್ ಇಬ್ರಾಹಿಂ, ಆತನ ಸಹೋದರ ಅನೀಸ್ ಇಕ್ಬಾಲ್, ಸಹಾಯಕ ಚೋಟಾ ಶಕೀಲ್ ಮತ್ತು ಇತರರ ವಿರುದ್ಧ ಕಾನೂನು ಬಾಹಿರ ಚಟುವಟಿಕೆಗಳ ತಡೆ ಕಾಯ್ದೆಯಡಿ ಅಕ್ರಮ ಹಣವರ್ಗಾವಣೆ ಕೇಸ್ ದಾಖಲಿಸಿರುವ ಇ.ಡಿ., ಇದೇ ವಿಚಾರದಲ್ಲಿ ಅನೇಕ ರಾಜಕಾರಣಿಗಳ ಮೇಲೆ ಕಣ್ಗಾವಲು ಇಟ್ಟಿತ್ತು. ದಾವೂದ್ ಇಬ್ರಾಹಿಂ ಹಲವು ರಾಜಕಾರಣಿಗಳೊಂದಿಗೆ ಆಸ್ತಿ, ಹಣಕಾಸು ವ್ಯವಹಾರ ನಡೆಸಿದ್ದಾನೆ ಎಂಬ ಶಂಕೆಯಡಿ ಹಲವರ ವಿಚಾರಣೆ ನಡೆಸುತ್ತಿದೆ.
ಬಂಧಿತರಾದ ಎರಡನೇ ಸಚಿವ ಮಹಾರಾಷ್ಟ್ರದಲ್ಲಿ ಇ.ಡಿ.ಬಂಧನಕ್ಕೆ ಒಳಗಾಗುತ್ತಿರುವ ಎರಡನೇ ಸಚಿವ ಈ ನವಾಬ್ ಮಲಿಕ್. ಈ ಹಿಂದೆ 2021ರ ನವೆಂಬರ್1ರಂದು ತಡರಾತ್ರಿ ಹಣ ಅಕ್ರಮ ವರ್ಗಾವಣೆ ಪ್ರಕರಣದಡಿಯಲ್ಲಿ ಮಹಾರಾಷ್ಟ್ರ ಗೃಹ ಸಚಿವ ಅನಿಲ್ ದೇಶ್ಮುಖ್ರನ್ನು ಜಾರಿ ನಿರ್ದೇಶನಾಲಯ ಬಂಧಿಸಿದೆ. ಅವರನ್ನು ಬಂಧಿಸುವುದಕ್ಕೂ ಮೊದಲು ಸತತ 12 ಗಂಟೆ ವಿಚಾರಣೆಗೆ ಒಳಪಡಿಸಲಾಗಿತ್ತು. ಪೊಲೀಸ್ ಇಲಾಖೆಯಲ್ಲಿ ₹100 ಕೋಟಿ ರೂಪಾಯಿ ಲಂಚ ವಸೂಲಿ, ಸುಲಿಗೆ ಕುರಿತು ಮುಂಬೈ ಪೊಲೀಸ್ ಕಮಿಷನರ್ ಪರಮ್‌ಬೀರ್ ಸಿಂಗ್ ಅವರು ದೇಶ್ಮುಖ್ ವಿರುದ್ಧ ಆರೋಪ ಮಾಡಿದ್ದರು. ಈ ಪ್ರಕರಣದ ತನಿಖೆ ಕೈಗೆತ್ತಿಕೊಂಡಿದ್ದ ಇ.ಡಿ., ಅನಿಲ್ ದೇಶ್ಮುಖ್ ಯಾವ ಪ್ರಶ್ನೆಗಳಿಗೂ ಸರಿಯಾಗಿ ಉತ್ತರಿಸುತ್ತಿಲ್ಲ. ನುಣುಚಿಕೊಳ್ಳುತ್ತಿದ್ದಾರೆ. ಹೀಗಾಗಿ ಅವರನ್ನು ಬಂಧಿಸಲಾಗುತ್ತಿದೆ ಎಂದು ಹೇಳಿತ್ತು.
ಇದನ್ನೂ ಓದಿ: ಮೂರು ವರ್ಷದ ಹಿಂದೆ ಪ್ರೀತಿಸಿ ಮದುವೆಯಾದ ಜೋಡಿ ಮಧ್ಯೆ ಕಲಹ; ಪೊಲೀಸರ ಸೋಗಿನಲ್ಲಿ ಕಿಡ್ನ್ಯಾಪ್, ಪತ್ನಿ ವಿರುದ್ಧವೇ ಆರೋಪ!