ಪಂಬಾಬ್​ನ ಬಿಜೆಪಿ ಶಾಸಕ ಅರುಣ್ ನಾರಂಗ್ ಮೇಲೆ ರೈತ ಪ್ರತಿಭಟನಾಕಾರರಿಂದ ಹಲ್ಲೆ

ಶನಿವಾರ ಸಂಜೆ ಸುಮಾರು 3.40ಕ್ಕೆ ಶಾಸಕ ಅರುಣ್ ನಾರಂಗ್ ಮಾಲೌಟ್ ನಗರಕ್ಕೆ ತಲುಪಿದಾಗ ಬಿಕೆಯು ಏಕ್ತಾ ಸಿಧುಪುರ್, ಬಿಕೆಯು ಲೊಖೊವಾಲ್ ಮತ್ತು ಬಿಕೆಯು ಕಡಿಯಾನ್ ರೈತ ಸಂಘಟನೆಯ ಸದಸ್ಯರು ಎಂದು ಹೇಳಲಾದ ಪ್ರತಿಭಟನೆಕಾರರು ಬಿಜೆಪಿ ಕಚೇರಿ ಬಳಿ ಗುಂಪು ಸೇರಿದ್ದರು.

ಪಂಬಾಬ್​ನ ಬಿಜೆಪಿ ಶಾಸಕ ಅರುಣ್ ನಾರಂಗ್ ಮೇಲೆ ರೈತ ಪ್ರತಿಭಟನಾಕಾರರಿಂದ ಹಲ್ಲೆ
ಅರುಣ್ ನಾರಂಗ್
Follow us
ರಶ್ಮಿ ಕಲ್ಲಕಟ್ಟ
|

Updated on:Mar 28, 2021 | 11:23 AM

ಬಟಿಂಡಾ: ಪಂಜಾಬ್​ನ ಮುಕ್ತಾರ್ ಜಿಲ್ಲೆಯ ಮಲೌಟ್ ನಗರದಲ್ಲಿ ಶನಿವಾರ ಸಂಜೆ ಸುದ್ದಿಗೋಷ್ಠಿ ನಡೆಸಲು ಹೋಗಿದ್ದ ವೇಳೆ ಅಬೋಹರ್​ ವಿಧಾನಸಭಾ ಕ್ಷೇತ್ರದ ಬಿಜೆಪಿ ಶಾಸಕ ಅರುಣ್ ನಾರಂಗ್ ಮೇಲೆ ರೈತ ಪ್ರತಿಭಟನಾಕಾರರು ಮಸಿ ಎರಚಿ, ಹಲ್ಲೆ ನಡೆಸಿ ಬಟ್ಟೆ ಹರಿದು ಹಾಕಿದ್ದಾರೆ. ಪ್ರತಿಭಟನಾಕಾರರ ಹಲ್ಲೆಯಿಂದ ಶಾಸಕರನ್ನು ರಕ್ಷಿಸಿ ಸುರಕ್ಷಿತ ಸ್ಥಳಕ್ಕೆ ಕರೆದೊಯ್ಯಲು ಪೊಲೀಸರು 15-20 ನಿಮಿಷಗಳ ಕಾಲ ಹರಸಾಹಸಪಟ್ಟರು.  ಘಟನೆಯನ್ನು ಖಂಡಿಸಿ ಮಾತನಾಡಿದ ಪಂಜಾಬ್  ರಾಜ್ಯ ಬಿಜೆಪಿ ಘಟಕ ಅಧ್ಯಕ್ಷ ಅಶ್ವನಿ ಶರ್ಮಾ  ರಾಜ್ಯದಲ್ಲಿ ಕಾನೂನು ವ್ಯವಸ್ಥೆ ಹದಗೆಟ್ಟಿದ್ದು ರಾಷ್ಟ್ರಪತಿ ಆಡಳಿತ ತರಬೇಕು ಎಂದು  ಒತ್ತಾಯಿಸಿದ್ದಾರೆ.

ಶನಿವಾರ ಸಂಜೆ ಸುಮಾರು 3.40ಕ್ಕೆ ನಾರಂಗ್ ಮಾಲೌಟ್ ನಗರಕ್ಕೆ ತಲುಪಿದಾಗ ಬಿಕೆಯು ಏಕ್ತಾ ಸಿಧುಪುರ್, ಬಿಕೆಯು ಲೊಖೊವಾಲ್ ಮತ್ತು ಬಿಕೆಯು ಕಡಿಯಾನ್ ರೈತ ಸಂಘಟನೆಯ ಸದಸ್ಯರು ಎಂದು ಹೇಳಲಾದ ಪ್ರತಿಭಟನೆಕಾರರು ಬಿಜೆಪಿ ಕಚೇರಿ ಬಳಿ ಗುಂಪು ಸೇರಿದ್ದರು. ಇದನ್ನು ನೋಡಿದ ಕೂಡಲೇ ಪೊಲೀಸರು ನಾರಂಗ್ ಅವರನ್ನು ಹತ್ತಿದ ಅಂಗಡಿಯೊಂದಕ್ಕೆ ಕರೆದೊಯ್ದರು. ಅಂಗಡಿಯಿಂದ ಪೊಲೀಸರು ಶಾಸಕರನ್ನು ಹೊರಗೆ ಕರೆದುಕೊಂಡು ಬರುವ ಹೊತ್ತಲ್ಲಿ ಗುಂಪಿನಲ್ಲಿದ್ದ ಪ್ರತಿಭಟನಾಕಾರರು ಮಸಿ ಎರಚಿದ್ದಾರೆ. ನಂತರ ಬಿಜೆಪಿ ಕಚೇರಿ ಮೇಲೆ ದಾಂದಲೆ ನಡೆಸಿದ್ದಾರೆ.

ನನಗೆ ಪ್ರತಿಭಟನಾಕಾರರು ಯಾರು ಎಂದು ಗೊತ್ತಿಲ್ಲ. ಅವರು ನನ್ನ ಮೇಲೆ ಹಲ್ಲೆ ನಡೆಸಿ ನನ್ನ ಬಟ್ಟೆ ಹರಿದರು. ಪೊಲೀಸರು ಕಷ್ಟಪಟ್ಟು ನನ್ನನ್ನು ಅಂಗಡಿಗೆ ಕರೆದೊಯ್ದರು. ಈ ಘಟನೆ ಬಗ್ಗೆ ನಾನು ಪಕ್ಷದ ನಾಯಕರಿಗೆ ತಿಳಿಸಿದ್ದೇನೆ ಎಂದು ನಾರಂಗ್ ಹೇಳಿರುವುದಾಗಿ ಟೈಮ್ಸ್ ಆಫ್ ಇಂಡಿಯಾ ವರದಿ ಮಾಡಿದೆ.

ರಾಜ್ಯದಲ್ಲಿ ಕಾನೂನು ವ್ಯವಸ್ಥೆ ಹದಗೆಟ್ಟಿದೆ. ಚುನಾಯಿತ ಪ್ರತಿನಿಧಿಯೊಬ್ಬರ ಮೇಲೆ ಹಲ್ಲೆ ನಡೆದಿರುವುದು ಇದಕ್ಕೆ ಸ್ಪಷ್ಟ ಉದಾಹರಣೆ. ಕ್ಯಾಪ್ಟನ್ ಅಮರಿಂದರ್ ಸಿಂಗ್ ಅವರು ಈ ಘಟನೆಯ ನೈತಿಕ ಹೊಣೆ ಹೊತ್ತು ರಾಜೀನಾಮೆ ನೀಡಬೇಕು ಇಲ್ಲವೇ ಸರ್ಕಾರವನ್ನು ವಿಸರ್ಜಿಸಬೇಕು. ಅವರು ರಾಜ್ಯದಲ್ಲಿ ಕಾನೂನು ವ್ಯವಸ್ಥೆಯನ್ನು ಕಾಪಾಡಲು ವಿಫಲರಾಗಿದ್ದು ಸಮಾಜ ವಿರೋಧಿ ಶಕ್ತಿಯನ್ನು ಬೆಂಬಲಿಸುತ್ತಿದ್ದಾರೆ ಎಂದು ಬಿಜೆಪಿ ರಾಜ್ಯ ಘಟಕ ಅಧ್ಯಕ್ಷ ಅಶ್ವನಿ ಶರ್ಮಾ ಆರೋಪಿಸಿದ್ದಾರೆ.

ಶಾಸಕರ ಮೇಲೆ ಹಲ್ಲೆ ನಡೆಸಬೇಕು ಎಂಬ ಯಾವುದೇ ಉದ್ದೇಶ ನಮಗಿರಲಿಲ್ಲ ಎಂದು ರೈತರು ಹೇಳಿದ್ದಾರೆ. ಈ ಘಟನೆ ಬಗ್ಗೆ ವಿಚಾರಣೆ ನಡೆಸಿ, ಕೃತ್ಯದ ಹಿಂದೆ ಯಾರ ಕೈವಾಡ ಇದೆ ಎಂಬುದನ್ನು ಪತ್ತೆ ಹಚ್ಚಲಾಗುವುದು ಎಂದು ರೈತ ಸಂಘಟನೆಯ ಪ್ರಧಾನ ಕಾರ್ಯದರ್ಶಿ ಹರಿಂದರ್ ಸಿಂಗ್ ಲೊಖೊವಾಲ್ ಹೇಳಿದ್ದಾರೆ. ಶಾಸಕರ ಆರೋಪದ ಮೇರೆಗೆ ಆರೋಪಿಗಳ ಮೇಲೆ ಕ್ರಮ ಕೈಗೊಳ್ಳಲಾಗುವುದು ಎಂದು ಬಂಟಿಂಡಾ ವಲಯದ ಐಜಿಪಿ ಜಸ್ಕರನ್ ಸಿಂಗ್ ಹೇಳಿದ್ದಾರೆ.

ಪಂಜಾಬ್ ನಲ್ಲಿ ಬಿಜೆಪಿ ರಾಜಕಾರಣಿಗಳು ಯಾವುದೇ ಕಾರ್ಯಕ್ರಮ ನಡೆಸುತ್ತಿದ್ದರೂ ಅಲ್ಲಿ ಕೇಂದ್ರ ಸರ್ಕಾರದ  ಕೃಷಿ ಕಾಯ್ದೆ ವಿರೋಧಿಸಿ ಪ್ರತಿಭಟನೆ ನಡೆಸುತ್ತಿರುವ ರೈತರ ಮೇಲೆ ಟೀಕಾಪ್ರಹಾರಗಳನ್ನು ಮಾಡುತ್ತಲೇ ಇರುತ್ತಾರೆ. ಶನಿವಾರ ಬಿಜೆಪಿ ಉಪಾಧ್ಯಕ್ಷ ಪ್ರವೀಣ್ ಬನ್ಸಾಲ್ ಬರ್ನಾಲಾದಲ್ಲಿರುವ ಪಿಡಬ್ಲ್ಯುಡಿ ಅತಿಥಿ ಗೃಹದಲ್ಲಿ ಪತ್ರಿಕಾಗೋಷ್ಠಿ ನಡೆಸಲು ಹೋದಾಗ ರೈತರು ಅಲ್ಲಿಗೆ ಮುತ್ತಿಗೆ ಹಾಕಿದ್ದರು.

ಬಿಕೆಯು ಏಕ್ತಾ ಉಗ್ರಹನ್ ಸಂಘಟನೆಯ ನೂರಾರು ಕಾರ್ಯಕರ್ತರು ರಸ್ತೆಲ್ಲಿ ಕುಳಿತು ನರೇಂದ್ರ ಮೋದಿ ಸರ್ಕಾರದ ವಿರುದ್ಧ ಘೋಷಣೆ ಕೂಗಿದ್ದರು. ಇವರ ಜತೆ ಇತರ ರೈತ ಸಂಘಟನೆ ಸದಸ್ಯರು ಇದ್ದರು. ಶಾಸಕ ನಾರಂಗ್ ಮೇಲೆ ನಡೆದ ಹಲ್ಲೆಯನ್ನು ಖಂಡಿಸಿದ ಮುಖ್ಯಮಂತ್ರಿ ಅಮರಿಂದರ್ ಸಿಂಗ್, ರಾಜ್ಯದಲ್ಲಿ ಶಾಂತಿ ಕದಡುವ ಪ್ರಯತ್ನ ಮಾಡಿದ ವ್ಯಕ್ತಿಗಳ ಮೇಲೆ ಕಠಿಣ ಕ್ರಮ ಕೈಗೊಳ್ಳಲಾಗುವುದು ಎಂದು ಹೇಳಿದ್ದಾರೆ.

ಇದನ್ನೂ ಓದಿ:  ಹಕ್ಕಿ ಜ್ವರ ಹಬ್ಬಿಸಲು ರೈತ ಪ್ರತಿಭಟನಾಕಾರರು ಬಿರಿಯಾನಿ ತಿನ್ನುತ್ತಿದ್ದಾರೆ: ಬಿಜೆಪಿ ಶಾಸಕನ ಹೇಳಿಕೆಗೆ ಆಕ್ರೋಶ

Published On - 11:19 am, Sun, 28 March 21