ಹರ್ಯಾಣ ಸಂಪುಟ ವಿಸ್ತರಣೆ; ಇಬ್ಬರು ನೂತನ ಸಚಿವರಿಂದ ಪ್ರಮಾಣ ವಚನ ಸ್ವೀಕಾರ

ಹರ್ಯಾಣ ಸಂಪುಟ ವಿಸ್ತರಣೆ; ಇಬ್ಬರು ನೂತನ ಸಚಿವರಿಂದ ಪ್ರಮಾಣ ವಚನ ಸ್ವೀಕಾರ
ಕಮಲ್​ಗುಪ್ತಾ ಮತ್ತು ದೇವೇಂದ್ರ ಸಿಂಗ್​ ಬಾಬ್ಲಿ

ಕಮಲ್​ ಗುಪ್ತಾ ಅವರು ಹಿಸಾರ್​ನ ಬಿಜೆಪಿ ಶಾಸಕರಾಗಿದ್ದು, ಈ ಕ್ಷೇತ್ರದಿಂದ ಎರಡು ಬಾರಿ ಗೆದ್ದವರು. ಹಿಸಾರ್ ಮತ್ತು ಈ ರಾಜ್ಯದ ಅಭಿವೃದ್ಧಿ ತಮ್ಮ ಆದ್ಯತೆ ಎಂದು ಹೇಳಿದ್ದಾರೆ. 

TV9kannada Web Team

| Edited By: Lakshmi Hegde

Dec 29, 2021 | 8:16 AM

ನಿನ್ನೆ (ಡಿಸೆಂಬರ್​ 28ರಂದು) ಹರ್ಯಾಣ ಸರ್ಕಾರ ಸಂಪುಟ ವಿಸ್ತರಣೆ(Haryana Cabinet Expansion)ಯಾಗಿದೆ. ಬಿಜೆಪಿಯ ಒಬ್ಬರು ಶಾಸಕ ಮತ್ತು ಜನನಾಯಕ ಜನತಾ ಪಾರ್ಟಿಯ (JJP) ಒಬ್ಬ ಶಾಸಕ, ಸಚಿವರಾಗಿ ಪ್ರಮಾಣವಚನ ಸ್ವೀಕಾರ ಮಾಡಿದ್ದಾರೆ.  ಹರ್ಯಾಣದಲ್ಲಿ ಬಿಜೆಪಿ -ಜೆಜೆಪಿ ಮೈತ್ರಿ ಸರ್ಕಾರವಿದ್ದು, ಈ ಬಾರಿ ಸಂಪುಟ ವಿಸ್ತರಣೆ ಸಂದರ್ಭದಲ್ಲಿ ಎರಡೂ ಪಕ್ಕಗಳ ಒಬ್ಬೊಬ್ಬರಿಗೆ ಅವಕಾಶ ನೀಡಲಾಗಿದೆ. ಅಂದಹಾಗೆ ನಿನ್ನೆ, ಬಿಜೆಪಿ ಶಾಸಕ ಕಮಲ್​ ಗುಪ್ತಾ, ಜೆಜೆಪಿ ಶಾಸಕ ದೇವೇಂದ್ರ ಸಿಂಗ್​ ಬಾಬ್ಲಿ ಅವರು ನಿನ್ನೆ ಸಂಜೆ ಪ್ರಮಾಣ ವಚನ ಸ್ವೀಕಾರ ಮಾಡಿದ್ದು,  ರಾಜ್ಯಪಾಲ ಬಂಡಾರು ದತ್ತಾತ್ರೇಯ ಅವರು ಪ್ರಮಾಣವಚನ ಬೋಧಿಸಿದ್ದಾರೆ. ಚಂಡಿಗಢ್​ನ ಹರ್ಯಾಣ ರಾಜಭವನದಲ್ಲಿ ಕಾರ್ಯಕ್ರಮ ನಡೆದಿತ್ತು. ಇವರಿಬ್ಬರಲ್ಲಿ ಕಮಲ್​ ಗುಪ್ತಾ ಸಂಸ್ಕೃತದಲ್ಲಿ ಮತ್ತು ದೇವೇಂದ್ರ ಸಿಂಗ್​ ಬಾಬ್ಲಿ ಹಿಂದಿಯಲ್ಲಿ ಪ್ರಮಾಣ ವಚನ ಸ್ವೀಕಾರ ಮಾಡಿದ್ದಾರೆ.   

ಕಮಲ್​ ಗುಪ್ತಾ ಅವರು ಹಿಸಾರ್​ನ ಬಿಜೆಪಿ ಶಾಸಕರಾಗಿದ್ದು, ಈ ಕ್ಷೇತ್ರದಿಂದ ಎರಡು ಬಾರಿ ಗೆದ್ದವರು. ಹಿಸಾರ್ ಮತ್ತು ಈ ರಾಜ್ಯದ ಅಭಿವೃದ್ಧಿ ತಮ್ಮ ಆದ್ಯತೆ ಎಂದು ಹೇಳಿದ್ದಾರೆ.  ಕಮಲ್​ ಗುಪ್ತಾ ಆರ್​ಎಸ್​ಎಸ್​ ಹಿನ್ನೆಲೆಯಿಂದ ಬಂದವರಾಗಿದ್ದು, ಮುಖ್ಯಮಂತ್ರಿ ಮನೋಹರ್ ಲಾಲ್​ ಖಟ್ಟರ್​ ಆಪ್ತವಲಯದಲ್ಲಿ ಗುರುತಿಸಿಕೊಂಡವರು. ಅವರಿಗೆ ಯಾವುದೇ ಕೆಲಸ ಕೊಟ್ಟರೂ ಯಶಸ್ವಿಯಾಗಿ ನಿರ್ವಹಿಸುತ್ತಾರೆ ಎಂದು ಹರ್ಯಾಣ ಬಿಜೆಪಿ ಮುಖ್ಯಸ್ಥ ಒಪಿ ಧಂಖರ್ ತಿಳಿಸಿದ್ದಾರೆ.  ಹಾಗೇ, ದೇವೇಂದ್ರ ಸಿಂಗ್​ ಬಾಬ್ಲಿ ಟೊಹಾನಾದಿಂದ ಮೊದಲ ಬಾರಿಗೆ ಆಯ್ಕೆಯಾದ ಶಾಸಕರು. ಇಲ್ಲಿ ರೈತರು ಕೃಷಿ ಕಾಯ್ದೆಗಳ ವಿರುದ್ಧ ಬಹುದೊಡ್ಡ ಮಟ್ಟದಲ್ಲಿ ಪ್ರತಿಭಟನೆ ನಡೆಸಿದ್ದರು. ಬಾಬ್ಲಿ ಕೂಡ ರೈತರ ಪ್ರತಿಭಟನೆ ಎದುರಿಸಿದ್ದರು. ಜೂನ್​​ನಲ್ಲಿ ಅವರ ಮೇಲೆ ಎರಗಿದ್ದ ರೈತರು, ಅವರಿಗೆ ಸೇರಿದ ಎಸ್​ಯುವಿಯ ಕಿಟಕಿ ಗಾಜು ಒಡೆದಿದ್ದರು.  ಬಾಬ್ಲಿ ಜಾಟ್​ ಸಮುದಾಯಕ್ಕೆ ಸೇರಿದ ಪ್ರಮುಖ ನಾಯಕರಾಗಿದ್ದಾರೆ.

ಈ ಇಬ್ಬರು ಎಂಎಲ್​ಎಗಳ ಸೇರ್ಪಡೆಯೊಂದಿಗೆ ಹರ್ಯಾಣ ಕ್ಯಾಬಿನೆಟ್​ ಸಚಿವರ ಸಂಖ್ಯೆ 14ಕ್ಕೆ ಏರಿಕೆಯಾಗಿದೆ. ಅದರಲ್ಲಿ ಮುಖ್ಯಮಂತ್ರಿ ಮತ್ತು ಉಪಮುಖ್ಯಮಂತ್ರಿ ಹೊರತು ಪಡಿಸಿ 10 ಮಂದಿ ಸಚಿವರು ಇದ್ದಾರೆ. ಇದೀಗ ಇಬ್ಬರು ಸೇರ್ಪಡೆಯಾಗಿದ್ದು, 12 ಮಂದಿ ಸಚಿವರಾದಂತೆ ಆಗಿದೆ. ಇಲ್ಲಿ ಮುಖ್ಯಮಂತ್ರಿ ಸೇರಿ 10 ಸಚಿವರುಗಳು ಬಿಜೆಪಿಯವರು ಮತ್ತು ಉಪಮುಖ್ಯಮಂತ್ರಿ ಸೇರಿ ಮೂವರು ಸಚಿವರು ಜೆಜೆಪಿಯವರು. ರಂಜಿತ್​ ಸಿಂಗ್​ ಚೌತಲಾ ಸ್ವತಂತ್ರ ಶಾಸಕರಾಗಿ, ಹರ್ಯಾಣ ಕ್ಯಾಬಿನೆಟ್​ ಸೇರಿದ್ದಾರೆ. 2019ರ ಚುನಾವಣೆಯಲ್ಲಿ ಒಟ್ಟು 90 ಕ್ಷೇತ್ರಗಳಲ್ಲಿ 40 ಸೀಟ್​ಗಳನ್ನು ಬಿಜೆಪಿ ಗೆದ್ದುಕೊಂಡಿತ್ತು. ಸರ್ಕಾರ ರಚನೆಗೆ ಶಾಸಕರು ಕಡಿಮೆ ಬಿದ್ದ ಹಿನ್ನೆಲೆಯಲ್ಲಿ ಜೆಜೆಪಿ ಮತ್ತು ಸ್ವತಂತ್ರ್ಯ ಶಾಸಕರೊಂದಿಗೆ ಸೇರಿ ಸರ್ಕಾರ ರಚನೆ ಮಾಡಿದೆ. ಈ ಜೆಜೆಪಿ ಒಟ್ಟು 10 ಕ್ಷೇತ್ರಗಳನ್ನು ಗೆದ್ದುಕೊಂಡಿತ್ತು. 2019ರ ನವೆಂಬರ್​​ನಲ್ಲಿ ಸಂಪುಟ ರಚನೆಯಾದ ಮೇಲೆ ಈಗಲೇ ಅದರ ವಿಸ್ತರಣೆಯಾಗುತ್ತಿದೆ.

ಇದನ್ನೂ ಓದಿ: ಕೊರೊನಾ ನೆಗೆಟಿವ್​ ಆಗುತ್ತಿದ್ದಂತೆಯೇ ಪಾರ್ಟಿ ಶುರು ಮಾಡಿಕೊಂಡ ಕರೀನಾ; ನೆಟ್ಟಿಗರಿಂದ ಹಿಗ್ಗಾಮುಗ್ಗಾ ಟ್ರೋಲ್​

Follow us on

Related Stories

Most Read Stories

Click on your DTH Provider to Add TV9 Kannada