ದಿ ಕಾಶ್ಮೀರ್ ಫೈಲ್ಸ್ (The Kashmir Files)ಸಿನಿಮಾ ನೋಡಿ ವಾಪಸ್ ಬರುತ್ತಿದ್ದ ಬಿಜೆಪಿ ಸಂಸದ ಜಗನ್ನಾಥ್ ಸರ್ಕಾರ್ (BJP MP Jagannath Sarkar)ಮೇಲೆ ಹಲ್ಲೆ ಪ್ರಯತ್ನ ನಡೆದಿದೆ. ಪಶ್ಚಿಮ ಬಂಗಾಳದ (West Bengal) ನಾದಿಯಾ ಜಿಲ್ಲೆಯಲ್ಲಿ ಹಾರಿಂಘಾಟಾ ಪಟ್ಟಣದಲ್ಲಿ ಘಟನೆ ನಡೆದಿದ್ದು, ಇವರು ಕಾರನ್ನೇ ಗುರಿಯಾಗಿಸಿಕೊಂಡು ಬಾಂಬ್ ದಾಳಿ ಮಾಡಲಾಗಿತ್ತು. ಆದರೆ ಕಾರಿನ ಹಿಂಭಾಗದಲ್ಲಿ ಬಾಂಬ್ ಬಿದ್ದು ಸ್ಫೋಟಗೊಂಡಿದ್ದರಿಂದ ಇವರು ಅಪಾಯದಿಂದ ಪಾರಾಗಿದ್ದಾರೆ. ಜತೆಗಿದ್ದವರಿಗೂ ಯಾರಿಗೂ ಗಾಯವಾಗಿಲ್ಲ. ಈ ಬಗ್ಗೆ ಎಎನ್ಐ ಸುದ್ದಿ ಮಾಧ್ಯಮದ ಜತೆ ಮಾತನಾಡಿದ ಜಗನ್ನಾಥ್ ಸರ್ಕಾರ್, ನಾನು ದಿ ಕಾಶ್ಮೀರ್ ಫೈಲ್ಸ್ ಸಿನಿಮಾ ನೋಡಿಕೊಂಡು ವಾಪಸ್ ಬರುತ್ತಿದ್ದೆ. ಈ ವೇಳೆ ನನ್ನ ಕಾರಿನ ಹಿಂಭಾಗದಲ್ಲಿ ಬಾಂಬ್ ಬ್ಲಾಸ್ಟ್ ಆಗಿದೆ. ಸ್ವಲ್ಪದರಲ್ಲೇ ತಪ್ಪಿಸಿಕೊಂಡಿದ್ದೇವೆ. ನಾವು ಕೂಡಲೇ ಪೊಲೀಸರಿಗೆ ಕರೆ ಮಾಡಿದ್ದೇವೆ. ಆದರೆ ಅವರು 10 ನಿಮಿಷದ ನಂತರ ಸ್ಥಳಕ್ಕೆ ಬಂದರು. ಪಶ್ಚಿಮ ಬಂಗಾಳದಲ್ಲಿ ಯಾರಿಗೂ ಭದ್ರತೆಯಿಲ್ಲ. ಇಲ್ಲಿ ಈಗಿರುವ ಹಿಂಸಾಚಾರ, ಅಭದ್ರತೆ ವಾತಾವರಣ ಸರಿಯಾಗಬೇಕು ಎಂದರೆ ರಾಷ್ಟ್ರಪತಿ ಆಳ್ವಿಕೆ (ಆರ್ಟಿಕಲ್ 356) ಜಾರಿಯಾಗಬೇಕು. ಇಲ್ಲದಿದ್ದರೆ ಸರಿಯಾಗುವುದಿಲ್ಲ ಎಂದು ಹೇಳಿದ್ದಾರೆ.
BJP MP Jagannath Sarkar from Ranaghat in West Bengal attacked. “I was returning after watching ‘The Kashmir Files’. ..A bomb was hurled at my car on my way back, we escaped it (bomb) narrowly…We pulled out the car a little far to see…police came after 10 min,” he says pic.twitter.com/gMj7HZBBSq
— ANI (@ANI) March 19, 2022
ಈ ಘಟನೆಯನ್ನು ಬಿಜೆಪಿ ತೀವ್ರವಾಗಿ ಖಂಡಿಸಿದೆ. ಪಶ್ಚಿಮ ಬಂಗಾಳದ ಬಿಜೆಪಿ ಮುಖ್ಯಸ್ಥ ಸುಕಾಂತಾ ಮಜುಂದಾರ್ ಟ್ವೀಟ್ ಮಾಡಿ, ತೃಣಮೂಲ ಕಾಂಗ್ರೆಸ್ ಆಡಳಿತದಲ್ಲಿ ಬೇರೆ ಪಕ್ಷಗಳ ಜನಪ್ರತಿನಿಧಿಗಳೂ ಸುರಕ್ಷಿತರಲ್ಲ ಎಂದು ಹೇಳಿದ್ದಾರೆ. ಇದೀಗ ರಾಣ್ಘಾಟ್ನ ಬಿಜೆಪಿ ಸಂಸದರನ್ನು ಗುರಿಯಾಗಿಸಿ ಬಾಂಬ್ ದಾಳಿ ನಡೆದಿದೆ. ಇಲ್ಲಿ ಗೂಂಡಾಗಳನ್ನು ಸ್ವತಂತ್ರವಾಗಿ ಬಿಟ್ಟುಬಿಡಲಾಗಿದೆ. ಅವರನ್ನು ನಿಯಂತ್ರಣ ಮಾಡುವವರೇ ಇಲ್ಲದಂತಾಗಿದೆ. ಮಮತಾ ಬ್ಯಾನರ್ಜಿ ಆಡಳಿತದಲ್ಲಿ ಯಾರಿಗೂ ಕಾನೂನು ಮತ್ತು ಸುವ್ಯವಸ್ಥೆಯ ಭಯವೇ ಇಲ್ಲದಂತಾಗಿದೆ ಎಂದು ಆರೋಪಿಸಿದ್ದಾರೆ.
ಇನ್ನು ದಿ ಕಾಶ್ಮೀರ್ ಫೈಲ್ಸ್ ವಿಚಾರಕ್ಕೆ ಬಂದರೆ, ಸದ್ಯ ದೇಶದಲ್ಲಿ ಭರ್ಜರಿ ಚರ್ಚೆಯಾಗುತ್ತಿರುವ ಸಿನಿಮಾ. ಹಾಗೇ, ಟೀಕೆಗೂ ಒಳಗಾಗುತ್ತಿದೆ. ಕಾಶ್ಮೀರಿ ಪಂಡಿತರ ಹತ್ಯಾಕಾಂಡ, 1990ರ ದಶಕದಲ್ಲಿ ನಡೆದ ಅವರ ವಲಸೆಯ ಚಿತ್ರಣವನ್ನೊಳಗೊಂಡ ದಿ ಕಾಶ್ಮೀರ್ ಫೈಲ್ಸ್ನ್ನು ಕೆಲವು ರಾಜಕೀಯ ಪಕ್ಷಗಳು ವಿರೋಧಿಸುತ್ತಿವೆ. ಈ ಚಿತ್ರ ನಿರ್ಮಾಣ ಮಾಡಿದ ವಿವೇಕ್ ಅಗ್ನಿಹೋತ್ರಿಯವರಿಗೆ ಬೆದರಿಕೆಗಳೂ ಬರುತ್ತಿದ್ದು, ವೈ ಕೆಟೆಗರಿ ಭದ್ರತೆಯನ್ನೂ ವಿಧಿಸಲಾಗಿದೆ. ಇದು ಕೋಮು ಸೌಹಾರ್ದತೆ ಕದಡುವ ಸಿನಿಮಾ ಎಂಬ ಆರೋಪವನ್ನೂ ಮಾಡಲಾಗುತ್ತಿದೆ. ಅದರಾಚೆಗೆ ಬಹುಸಂಖ್ಯೆಯಲ್ಲಿ ಜನರು ಈ ಸಿನಿಮಾ ನೋಡುತ್ತಿದ್ದಾರೆ. ಹಲವು ರಾಜ್ಯಗಳು ತೆರಿಗೆ ವಿನಾಯಿತಿಯನ್ನೂ ಘೋಷಿಸಿವೆ.
ಇದನ್ನೂ ಓದಿ: ‘ದಿ ಕಾಶ್ಮೀರ್ ಫೈಲ್ಸ್’ ನಿರ್ದೇಶಕನ ಮುಂದಿನ ಸಿನಿಮಾ ‘ದಿ ದಿಲ್ಲಿ ಫೈಲ್ಸ್’: ಇದರ ಕಥೆ ಇನ್ನೂ ಭಯಾನಕ
Published On - 9:02 am, Sun, 20 March 22