National Defence: ಭಾರತೀಯ ಸಶಸ್ತ್ರಪಡೆಗಳ ಬಲವರ್ಧನೆಗೆ ಬೇಕಿದೆ ಮಾರಿಟೈಮ್ ಥಿಯೇಟರ್ ಕಮಾಂಡ್

ಚೀನಾದ ಪಿಎಲ್ಎ (PLA) ನೌಕಾಪಡೆಯು 2017ರಲ್ಲಿ ಜಿಬೌಟಿಯಲ್ಲಿ ತನ್ನ ಮೊದಲ ನೌಕಾನೆಲೆಯನ್ನು ಸ್ಥಾಪಿಸುವ ಮೂಲಕ ತನ್ನ ಸ್ಥಾನ ಬಲಪಡಿಸಿಕೊಂಡಿತು. ಆರ್ಥಿಕ ಮತ್ತು ರಾಜಕೀಯ ಪ್ರಭಾವವನ್ನು ವಿಸ್ತರಿಸಲು ರೆಡ್‌ ಡ್ರ್ಯಾಗನ್‌ಗಳಿಗೆ ಬೆಲ್ಟ್ ಮತ್ತು ರೋಡ್ ಉಪಕ್ರಮವು ಸಹಾಯ ಮಾಡಿತು.

National Defence: ಭಾರತೀಯ ಸಶಸ್ತ್ರಪಡೆಗಳ ಬಲವರ್ಧನೆಗೆ ಬೇಕಿದೆ ಮಾರಿಟೈಮ್ ಥಿಯೇಟರ್ ಕಮಾಂಡ್
ಮಾರಿಟೈಮ್ ಥಿಯೇಟರ್ ಕಮಾಂಡ್ ರೂಪಿಸುವ ಪ್ರಯತ್ನಗಳು ಸಾಗಿವೆ
Follow us
TV9 Web
| Updated By: Ghanashyam D M | ಡಿ.ಎಂ.ಘನಶ್ಯಾಮ

Updated on: Mar 20, 2022 | 12:37 PM

ಸೊಮಾಲಿಯಾದ ಕಡಲ್ಗಳ್ಳರ ಬೆದರಿಕೆಯನ್ನು ನಿವಾರಿಸುವ ನೆಪದಲ್ಲಿ ಚೀನಾದ ನೌಕಾಪಡೆಯು ಹಿಂದೂ ಮಹಾಸಾಗರವನ್ನು 2009ರಲ್ಲಿ ಮೊದಲ ಬಾರಿಗೆ ಪ್ರವೇಶಿಸಿತು. ಆದರೆ, ಅದನ್ನು ಮೀರಿ ನೆರೆಯ ದೇಶಗಳ ಮೇಲೆ ತನ್ನ ಪ್ರಭಾವವನ್ನು ಬೀರಿತು. ಚೀನಾದ ಪಿಎಲ್ಎ (PLA) ನೌಕಾಪಡೆಯು 2017ರಲ್ಲಿ ಜಿಬೌಟಿಯಲ್ಲಿ ತನ್ನ ಮೊದಲ ನೌಕಾನೆಲೆಯನ್ನು ಸ್ಥಾಪಿಸುವ ಮೂಲಕ ತನ್ನ ಸ್ಥಾನ ಬಲಪಡಿಸಿಕೊಂಡಿತು. ಆರ್ಥಿಕ ಮತ್ತು ರಾಜಕೀಯ ಪ್ರಭಾವವನ್ನು ವಿಸ್ತರಿಸಲು ರೆಡ್‌ ಡ್ರ್ಯಾಗನ್‌ಗಳಿಗೆ ಬೆಲ್ಟ್ ಮತ್ತು ರೋಡ್ ಉಪಕ್ರಮವು ಸಹಾಯ ಮಾಡಿತು. ಈ ಬೆಳವಣಿಗೆಗಳು ಭಾರತೀಯ ನೌಕಾಪಡೆಯನ್ನು ತೀವ್ರ ಒತ್ತಡಕ್ಕೆ ಸಿಲುಕಿಸಿದವು ಮತ್ತು ಈ ಪರಿಸರದಲ್ಲಿ ಉದ್ವಿಗ್ನತೆಗೆ ಕಾರಣವಾಯಿತು. ಪಿಎಲ್ಎ ನೌಕಾಪಡೆಯ ಚಟುವಟಿಕೆಗಳ ಕಾರಣ ಭಾರತೀಯ ನೌಕಾಪಡೆಯು ತನ್ನ ಕಾರ್ಯಾಚರಣೆ ಹೆಚ್ಚಿಸಿಕೊಳ್ಳಬೇಕಾಯಿತು. 2019ರಲ್ಲಿ ಸ್ಥಿತಿ ಬಿಗಡಾಯಿಸಿತು; ಚೀನಾ ನೌಕಾಪಡೆಯ ಒಂದು ನೌಕೆಯು ಭಾರತದ ಜಲಪ್ರದೇಶವನ್ನು ಪ್ರವೇಶಿಸಿತು. ಭಾರತೀಯ ನೌಕಾಪಡೆಯು ಅದನ್ನು ಬಲವಂತವಾಗಿ ಹೊರದಬ್ಬಿತು. ಚೀನೀಯರು ಭಾರತದ ಭೂಪ್ರದೇಶ ಇರುವ ಆಯಕಟ್ಟಿನ ಜಾಗದಲ್ಲಿ ಭಾರತೀಯ ನೌಕಾಪಡೆಯ ಸಾಮರ್ಥ್ಯವನ್ನು ಪ್ರಶ್ನಿಸಲು ಯತ್ನಿಸಿದರು. ಹಿಂದೂ ಮಹಾಸಾಗರ ಪ್ರದೇಶದಲ್ಲಿ ಭಾರತದ ನಾಯಕತ್ವಕ್ಕೆ ಸವಾಲನ್ನು ಒಡ್ಡಿದರು. ಭಂಡ ಧೈರ್ಯ ಹೊಂದಿರುವ ಚೀನಾ 2017ರಲ್ಲಿ ಡೋಕ್ಲಾಮ್‌ನಲ್ಲಿ ಮತ್ತು ಅನಂತರ 2020 ಮತ್ತು 2021ರಲ್ಲಿ ಲಡಾಖ್ ಪ್ರದೇಶದಲ್ಲಿ ವಾಸ್ತವಿಕ ನಿಯಂತ್ರಣ ರೇಖೆಯ (LAC) ಉದ್ದಕ್ಕೂ ಸಂಘರ್ಷದ ಪರಿಸ್ಥಿತಿಯನ್ನು ಉಂಟುಮಾಡಿತು.

ಯುದ್ಧದ ಕಾರ್ಮೋಡಗಳು ಕವಿದ ಹಿನ್ನೆಲೆಯಲ್ಲಿ ಆತಂಕಗೊಂಡ ಭಾರತವು ಚೀನಾವನ್ನು ಎದುರಿಸುವ ಸಿದ್ಧತೆಯ ಭಾಗವಾಗಿ ಅಮೆರಿಕ, ಜಪಾನ್ ಮತ್ತು ಆಸ್ಟ್ರೇಲಿಯಾಕ್ಕೆ ಹತ್ತಿರವಾಯಿತು. ದೇಶದ ಗಡಿಭಾಗದಲ್ಲಿ ಯಾವುದೇ ಪ್ರಮುಖ ‘ಸಾಹಸ’ವನ್ನು ಕೈಗೊಳ್ಳದಂತೆ ಚೀನೀಯರನ್ನು ತಡೆಯುವಲ್ಲಿ ಇದು ಅಪೇಕ್ಷಿತ ಪರಿಣಾಮವನ್ನು ಹೊಂದಿದೆ. ಆದರೆ ಭಾರತವು ಮ್ಯಾರಿಟೈಮ್ ಥಿಯೇಟರ್ ಕಮಾಂಡ್ (MTC) ಅನ್ನು ರಚಿಸಲು ಯೋಜಿಸುವ ಮೂಲಕ ಅಂತಹ ಯಾವುದೇ ಪ್ರಯತ್ನಗಳ ವಿರುದ್ಧ ತನ್ನನ್ನು ತಾನು ರಕ್ಷಿಸಿಕೊಳ್ಳಲು ಮುಂದಾಗಿದೆ.

ಹಿಂದೂ ಮಹಾಸಾಗರ ಮತ್ತು ಅಂಡಮಾನ್-ನಿಕೋಬಾರ್ ದ್ವೀಪಗಳಿಗೆ ಸಂಪರ್ಕ ಕಲ್ಪಿಸುವ ಕೇಂದ್ರ ಸ್ಥಳವಾಗಿರುವ ಭಾರತದ ದಕ್ಷಿಣ ಸಮುದ್ರದಲ್ಲಿ ಬಹುಮುಖ್ಯ ಹಡಗು ಮಾರ್ಗಗಳು ಮತ್ತು ಕಾರ್ಯತಂತ್ರದ ಬಿಂದುಗಳನ್ನು ಮೇಲ್ವಿಚಾರಣೆ ಮಾಡುವಲ್ಲಿ ಚೀನಾಕ್ಕಿಂತ ಭಾರತಕ್ಕೆ ಭೌಗೋಳಿಕವಾಗಿ ಹಲವು ಅನುಕೂಲಗಳನ್ನು ಒದಗಿಸಿದೆ. ಚೀನಾ ತನ್ನ ಜಾಗತಿಕ ವ್ಯಾಪಾರ ಮತ್ತು ಇಂಧನ ಅಗತ್ಯಗಳ ಈಡೇರಿಕೆಗಾಗಿ ಸಮುದ್ರ ಮಾರ್ಗವನ್ನು ಅವಲಂಬಿಸಿದೆ. ಬಲಿಷ್ಠ ಚೀನಾದ ಜತೆಗೆ ಸಮಬಲವನ್ನು ಸಾಧಿಸಿಕೊಳ್ಳಲು ಈ ಭೌಗೋಳಿಕ ಅನುಕೂಲವು ಈ ಹಂತದವರೆಗೆ ಭಾರತದ ಪರವಾಗಿ ಕೆಲಸ ಮಾಡಿದೆ ಎಂದು ತೋರುತ್ತದೆ.

ಇಂಡೋ-ಪೆಸಿಫಿಕ್ ಮಹಾಸಾಗರಗಳಲ್ಲಿ ಗಮನಿಸಬೇಕಾದ ಸಂಗತಿಯೆಂದರೆ, ಈ ನೀರಿನ ಮೂಲಕ ನಾವು ಸುಮಾರು 200 ಬಿಲಿಯನ್ ಡಾಲರ್ ವ್ಯಾಪಾರವನ್ನು ಹೊಂದಿದ್ದೇವೆ. ನಮ್ಮ ಯೋಜನೆ ಯಾವುದೇ ದೇಶದ ವಿರುದ್ಧ ಅಲ್ಲ; ನಮ್ಮ ಯೋಜನೆ ನಮ್ಮ ಸ್ವಂತ ಕಡಲ ಸಾಮರ್ಥ್ಯಕ್ಕಾಗಿ. ಕಳೆದ ದಶಕದಲ್ಲಿ ಹಿಂದೂ ಮಹಾಸಾಗರ ಪ್ರದೇಶದಲ್ಲಿ ಚೀನಾದ ನೌಕಾಪಡೆಯ ಶಕ್ತಿ ಮತ್ತು ರಾಜತಾಂತ್ರಿಕ ಪ್ರಭಾವವು ಕ್ಷಿಪ್ರ ಬೆಳವಣಿಗೆ ಕಂಡಿದೆ. ಎಂಟಿಸಿ (Maritime Theatre Command – MTC) ರಚನೆಯು ಹಿಂದೂ ಮಹಾಸಾಗರ ಪ್ರದೇಶದಲ್ಲಿ ತನ್ನ ನೌಕಾಶಕ್ತಿಯನ್ನು ಸ್ಥಿರಗೊಳಿಸಲು ಮತ್ತು ಬಲಪಡಿಸಲು ಭಾರತಕ್ಕೆ ಸಹಾಯ ಮಾಡುತ್ತದೆ.

ಪ್ರಸ್ತಾವಿತ ಕಮಾಂಡ್ ಪೂರ್ವ ದಿಕ್ಕಿದಲ್ಲಿ ಅಂಡಮಾನ್‌ನಿಂದ ಪಶ್ಚಿಮದ ಲಕ್ಷದ್ವೀಪದವರೆಗಿನ ಭಾರತೀಯ ಸಮುದ್ರ ವಲಯವನ್ನು ನೋಡಿಕೊಳ್ಳುತ್ತದೆ. ಜತೆಗೆ, ಇಡೀ ಹಿಂದೂ ಮಹಾಸಾಗರ ಮತ್ತು ಪೆಸಿಫಿಕ್ ಪ್ರದೇಶದಲ್ಲಿ ದೇಶದ ಹಿತಾಸಕ್ತಿಯ ಕ್ಷೇತ್ರಗಳಲ್ಲಿ ಕಟ್ಟೆಚ್ಚರವನ್ನು ವಹಿಸುತ್ತದೆ. ಕಾರವಾರದಲ್ಲಿ ಮಾರಿಟೈಮ್ ಥಿಯೇಟರ್ ಕಮಾಂಡ್ ಅನ್ನು ಸ್ಥಾಪಿಸುವ ಪ್ರಸ್ತಾವನೆಯ ಮೇಲೆ ಭಾರತೀಯ ನೌಕಾಪಡೆಯು ಇದೀಗ ಗಮನಹರಿಸುತ್ತಿದೆ. ಕಾರವಾರವು ಭಾರತದ ಪಶ್ಚಿಮ ಕರಾವಳಿಯಲ್ಲಿ, ಗೋವಾ ಗಡಿಯಲ್ಲಿರುವ ಪುಟ್ಟ ನಗರ. ಆದರೆ ಈ ಮಾರಿಟೈಮ್ ಥಿಯೇಟರ್ ಕಮಾಂಡ್ ಭಾರತದ 7,500 ಕಿ.ಮೀ. ಉದ್ದದ ಕಡಲಗಡಿಯನ್ನು ಭದ್ರಪಡಿಸಲು ಮಾತ್ರವಲ್ಲದೆ ಉತ್ತರ ಅರೇಬಿಯನ್ ಸಮುದ್ರದಿಂದ ದಕ್ಷಿಣ ಚೀನಾ ಸಮುದ್ರದವರೆಗೆ ಇಂಡೋ ಪೆಸಿಫಿಕ್ ಪ್ರದೇಶದಲ್ಲಿ ಭಾರತದ ಹಿತಾಸಕ್ತಿಗಳನ್ನು ರಕ್ಷಿಸುವ ಮಹತ್ತರವಾದ ಜವಾಬ್ದಾರಿಯನ್ನು ಹೊಂದಿದೆ.

MTC ಭಾರತೀಯ ವಾಯುಪಡೆಯ ಸ್ವತ್ತುಗಳ ರಕ್ಷಣೆಯ ಕಾರ್ಯಭಾರವನ್ನೂ ಒಳಗೊಂಡಿರುತ್ತದೆ. ಅದು ಜಾಮ್‌ನಗರದಲ್ಲಿರುವ ಜಾಗ್ವಾರ್ ಆಗಿರಲಿ ಅಥವಾ ತಂಜಾವೂರಿನಲ್ಲಿರುವ SU-30MKIಗಳಾಗಿರಲಿ, ಸೈನ್ಯದ ಉಭಯ ದಳಗಳು ಭಾರತೀಯ ನೌಕಾಪಡೆಯ ಅಧೀನದಲ್ಲಿರುತ್ತವೆ. ಆದರೆ, ಮಾಡುವುದಕ್ಕಿಂತ ಹೇಳುವುದು ಸುಲಭವೇ ಎಂಬ ಪ್ರಶ್ನೆ ಉಳಿಯುತ್ತದೆ. ನಾಲ್ಕು ಹೊಸ ಥಿಯೇಟರ್ ಕಮಾಂಡ್‌ಗಳನ್ನು ರಚಿಸುವುದು ಡಿಎಂಎ (DMA)ಯ ಯೋಜನೆಯಾಗಿದೆ. ಆದರೆ, ಇದು ಕಳೆದ ಎರಡು ದಶಕಗಳಲ್ಲಿ ಕ್ರಮವಾಗಿ ಪಾಕಿಸ್ತಾನ ಮತ್ತು ಚೀನಾದ ಸೇನೆಗಳ ಎರಡು ಆಕ್ರಮಣಗಳನ್ನು ಕಂಡಿರುವ ಅತ್ಯಂತ ಸೂಕ್ಷ್ಮವಾದ ಲಡಾಖ್ ವಲಯವನ್ನು ಒಳಗೊಂಡಿರುವುದಿಲ್ಲ ಎಂದು ಮೂಲಗಳು ತಿಳಿಸಿವೆ.

ನೌಕಾಪಡೆ, ಭೂಸೇನೆ ಮತ್ತು ವಾಯುಪಡೆಯಿಂದ MTC ರಚನೆಯ ಕುರಿತಾದ ಅಧ್ಯಯನದ ವಿವರಗಳನ್ನು ಏಪ್ರಿಲ್‌ನಲ್ಲಿ ಸಲ್ಲಿಸುವ ನಿರೀಕ್ಷೆಯಿದೆ. ಈ ವರ್ಷದ ಆಗಸ್ಟ್ 15ರೊಳಗೆ ಮೊದಲ ಮಾರಿಟೈಮ್ ಥಿಯೇಟರ್ ಕಮಾಂಡ್ ರಚನೆಯನ್ನು ಕೇಂದ್ರ ಸರ್ಕಾರ ಘೋಷಿಸುವ ಸಾಧ್ಯತೆಯಿದೆ ಎಂದು ಮೂಲಗಳು ತಿಳಿಸಿವೆ. MTC ನೇತೃತ್ವವನ್ನು ಕಮಾಂಡರ್ ಇನ್ ಚೀಫ್ ಅವರು ವಹಿಸುತ್ತಾರೆ. ಅವರೇ ಮೂರೂ ಸೇವೆಗಳು ಮತ್ತು ಭಾರತದ ಸಮುದ್ರ ಪ್ರದೇಶದ ರಕ್ಷಣೆಗೆ ಶ್ರಮಿಸುತ್ತಿರುವ ಕೋಸ್ಟ್ ಗಾರ್ಡ್ ಸ್ವತ್ತುಗಳ ಮುಖ್ಯಸ್ಥರೂ ಆಗಿರುತ್ತಾರೆ. ಅವರು ಚೀಫ್ಸ್ ಆಫ್ ಸ್ಟಾಫ್ ಕಮಿಟಿ ಮೂಲಕ ಸಿಡಿಎಸ್​ಗೆ (CDS) ವರದಿ ಮಾಡುತ್ತಾರೆ ಮತ್ತು ಸಮುದ್ರದ ಭದ್ರತಾ ಕಾರ್ಯಾಚರಣೆಗಳನ್ನು ಸಂಪೂರ್ಣವಾಗಿ ತಮ್ಮ ಸುಪರ್ದಿಗೆ ತೆಗೆದುಕೊಳ್ಳುತ್ತಾರೆ. ವಿಮಾನಗಳು, ದೀರ್ಘ ಶ್ರೇಣಿಯ ಕ್ಷಿಪಣಿಗಳು, ಸೈಬರ್ ಯುದ್ಧೋಪಕರಣಗಳಂತಹ ಪಿಎಲ್ಎ (PLA) ಯ ಎಲ್ಲ ಸಂಯೋಜಿತ ಅಂಶಗಳೊಂದಿಗೆ ಇದು ಹೋರಾಡುತ್ತದೆ.

ಸವಾಲುಗಳು

ಹಿಂದೂ ಮಹಾಸಾಗರದಲ್ಲಿ ಚೀನೀ ನೌಕಾಪಡೆಯ ಬೆಳವಣಿಗೆಯ ಹೆಜ್ಜೆಗುರುತನ್ನು ಎದುರಿಸುವುದು ಮಾರಿಟೈಮ್ ಥಿಯೇಟರ್‌ ಕಮಾಂಡ್‌ಗೆ ದೊಡ್ಡ ಸವಾಲಾಗಿದೆ. ಪಿಎಲ್ಎ (PLA) ಸುಮಾರು 350 ಯುದ್ಧನೌಕೆಗಳನ್ನು ಹೊಂದಿದೆ ಮತ್ತು ಇದು ವಿಶ್ವದಲ್ಲೇ ಅತಿ ದೊಡ್ಡದಾಗಿದೆ. ವಿಶ್ವದ ಅತಿದೊಡ್ಡ ನೌಕಾಪಡೆಯಾಗಲು ಪಿಎಲ್ಎ ಯೋಜಿಸಿದೆ ಮತ್ತು ಅಮೆರಿಕವನ್ನು ಎದುರಿಸಲು ಬಯಸುತ್ತಿದೆ. ಇದು ನಮ್ಮನ್ನು ಎಲ್ಲಿ ಬಿಡುತ್ತದೆ? ಈ ಮಾರಿಟೈಮ್ ಥಿಯೇಟರ್ ಕಮಾಂಡ್‌ನೊಂದಿಗೆ ಪಾಕಿಸ್ತಾನ ಮತ್ತು ಚೀನಾದ ಬೆದರಿಕೆಗಳನ್ನು ನಾವು ಹೇಗೆ ಎದುರಿಸುತ್ತೇವೆ ಮತ್ತು 26/11 ಮಾದರಿಯಲ್ಲಿ ಸಮುದ್ರ ಮಾರ್ಗವನ್ನು ಬಳಸಿ ಭಾರತದೊಳಕ್ಕೆ ನುಗ್ಗಿ ಮತ್ತೊಮ್ಮೆ ದಾಳಿ ಮಾಡಲು ಪಾಕಿಸ್ತಾನಿ ಭಯೋತ್ಪಾದಕರು ಪ್ರಯತ್ನಿಸಬಹುದು.

26/11 ರೀತಿಯ ಭಯೋತ್ಪಾದಕ ದಾಳಿಯಿಂದ ಭಾರತೀಯ ಕರಾವಳಿಯನ್ನು ರಕ್ಷಿಸುವ, ಸಮುದ್ರದ ಭದ್ರತೆಯಿಂದ ಹಿಡಿದು ಹಿಂದೂ ಮಹಾಸಾಗರ ಪ್ರದೇಶದಲ್ಲಿ ಚೀನಾ ಮತ್ತು ಪಾಕಿಸ್ತಾನದ ನೌಕಾಪಡೆಗಳನ್ನು ತಡೆಯುವವರೆಗೆ ಎಲ್ಲ ಜವಾಬ್ದಾರಿಗಳನ್ನೂ ಎಂಟಿಸಿ (MTC) ಒಳಗೊಂಡಿದೆ. ಚೀನಾದಿಂದ ಗರಿಷ್ಠ ನೆರವು ಪಡೆದು ಪಾಕಿಸ್ತಾನವೂ ತನ್ನ ನೌಕಾಪಡೆಯನ್ನು ಗಣನೀಯವಾಗಿ ನವೀಕರಿಸುತ್ತಿದೆ. ಚೀನಾದಿಂದ ಪಾಕಿಸ್ತಾನವು 8 ಮುಂಚೂಣಿ ಜಲಾಂತರ್ಗಾಮಿಗಳು, ಹೊಸ ದಾಳಿ ಜಲಾಂತರ್ಗಾಮಿ ನೌಕೆಗಳನ್ನು, ದೀರ್ಘ ಶ್ರೇಣಿಯ ಕಡಲ ಗಸ್ತು ವಿಮಾನ ಮತ್ತು ಯುದ್ಧನೌಕೆಗಳನ್ನು ಪಡೆಯುತ್ತಿದೆ. ಪಾಕಿಸ್ತಾನದ ಮತ್ತು ಚೀನೀ ನೌಕಾಪಡೆಗಳು ಕಡಲಿನಲ್ಲಿ ಕಿತಾಪತಿಗಳನ್ನು ಮಾಡುತ್ತಿರುವುದು ನಮ್ಮ ಭದ್ರತಾ ಯೋಜಕರಿಗೆ ಸಾಕಷ್ಟು ತಿಳಿದಿರುವ ವಿಷಯ. ಮಾರಿಟೈಮ್ ಥಿಯೇಟರ್ ಕಮಾಂಡ್ ನೇಮಕವು ಆ ದಿಕ್ಕಿನಲ್ಲಿ ಒಂದು ಮಹತ್ವದ ಹೆಜ್ಜೆಯಾಗಿದೆ.

ಎಂಟಿಸಿ (MTC) ಭಾರತದ ಪಶ್ಚಿಮ ಕರಾವಳಿಯ ಕಾರವಾರದಲ್ಲಿ ನೆಲೆಸಿರುತ್ತದೆ, ಅಸ್ತಿತ್ವದಲ್ಲಿರುವ ಪಶ್ಚಿಮ ಮತ್ತು ಪೂರ್ವ ನೌಕಾ ಕಮಾಂಡ್​ನ ನೌಕಾಪಡೆಗಳು, ಕಡಲಿನಲ್ಲಿ ದಾಳಿ ಮಾಡಬಲ್ಲ ಫೈಟರ್ ಜೆಟ್‌ಗಳು, ವಾಯುಪಡೆ ಮತ್ತು ನೌಕಾಪಡೆಯ ಸಾರಿಗೆ ವಿಮಾನಗಳು, ಸೇನೆಯ ಎರಡು ದಳಗಳು, ಅಂಡಮಾನ್ ಮತ್ತು ನಿಕೋಬಾರ್ ಜಂಟಿ ಕಮಾಂಡ್ ಅಡಿಯಲ್ಲಿರುವ ಮತ್ತು ಇತರ ಸ್ವತ್ತುಗಳ ಕಾರ್ಯಾಚರಣೆಯ ಮೇಲೆ ಸಂಪೂರ್ಣ ನಿಯಂತ್ರಣವನ್ನು ಹೊಂದಿರುತ್ತದೆ. ಇದು 2022ರ ಅಂತ್ಯದ ವೇಳೆಗೆ ಕಾರ್ಯಾರಂಭ ಮಾಡುವ ನಿರೀಕ್ಷೆಯಿದೆ.

1947ರಲ್ಲಿ ಭಾರತದ ಸ್ವಾತಂತ್ರ್ಯ ಗಳಿಸಿದ ಮೇಲೆ ಭಾರತೀಯ ಭೂಸೇನೆ, ನೌಕಾಪಡೆ ಮತ್ತು ವಾಯುಪಡೆಗಳು ಪ್ರತ್ಯೇಕ ಕಾರ್ಯಾಚರಣೆಯ ಕಮಾಂಡ್‌ಗಳ ಅಡಿಯಲ್ಲಿ ರಚನೆಯಾದ ಬಳಿಕ ಅತ್ಯಂತ ದೊಡ್ಡ ಮಿಲಿಟರಿ ಪುನಾರಚನೆ ಯೋಜನೆಯ ಭಾಗವಾಗಿ ರಚಿಸಲಾದ ಮೊದಲ ಹೊಸ ‘ಭೌಗೋಳಿಕ’ ಥಿಯೇಟರ್ ಕಮಾಂಡ್ ಇದಾಗಿರುತ್ತದೆ. ಚೀಫ್ ಆಫ್ ಡಿಫೆನ್ಸ್ ಸ್ಟಾಫ್ ಆಗಿದ್ದ ದಿವಂಗತ ಜನರಲ್ ಬಿಪಿನ್ ರಾವತ್ ನೇತೃತ್ವದ ಮಿಲಿಟರಿ ವ್ಯವಹಾರಗಳ ಇಲಾಖೆ (DMA) ಈ ವರ್ಷದ ಏಪ್ರಿಲ್ ಒಳಗೆ ಥಿಯೇಟರ್ ಕಮಾಂಡ್‌ಗಳಿಗೆ ಸಂಬಂಧಿಸಿದ ತಮ್ಮ ಅಧ್ಯಯನಗಳನ್ನು ಸಲ್ಲಿಸುವಂತೆ ಮೂರು ಪಡೆಗಳಿಗೆ ಕೇಳಿದೆ.

ಹೆಲಿಕಾಪ್ಟರ್ ಅಪಘಾತದಲ್ಲಿ ಮೃತರಾದ ಜನರಲ್ ರಾವತ್, ಭಾರತವು ಅಮೆರಿಕ, ಯುಕೆ, ರಷ್ಯಾ ಮತ್ತು ಚೀನಾದ ಥಿಯೇಟರ್ ಕಮಾಂಡ್ ಮಾದರಿಗಳನ್ನು ಕೆಲವು ಉತ್ತಮ ಅಭ್ಯಾಸಗಳನ್ನು ಅಳವಡಿಸಿಕೊಳ್ಳಲು ವ್ಯಾಪಕವಾಗಿ ಅಧ್ಯಯನ ಮಾಡಿದೆ ಎಂದು ಹೇಳಿದ್ದರು. ಜನರಲ್ ರಾವತ್ ಅವರ ಅಕಾಲಿಕ ಮರಣವು ಎಂಟಿಸಿ (MTC) ರಚನೆಗೆ ಹಿನ್ನಡೆ ಉಂಟು ಮಾಡಿದೆ ಎಂದು ಹೇಳಲಾಗಿದ್ದರೂ, ಚೀಫ್ ಆಫ್ ಡಿಫೆನ್ಸ್ ಸ್ಟಾಫ್ ಜನರಲ್ ಎಂ.ಎಂ. ನರವಾಣೆ ಅವರು ಇದನ್ನು ಯೋಜನೆಯ ಅನುಸಾರವೇ ಮುಂದುವರಿಸುವುದಾಗಿ ಭರವಸೆ ನೀಡಿದ್ದಾರೆ.

ವಿಶ್ವದ 32ಕ್ಕೂ ಹೆಚ್ಚು ದೇಶಗಳು ಮಿಲಿಟರಿ ಶಾಖೆಗಳ ನಡುವೆ ಉತ್ತಮ ಏಕೀಕರಣಕ್ಕಾಗಿ ಕೆಲವು ರೀತಿಯ ಥಿಯೇಟರ್ ಅಥವಾ ಜಂಟಿ ಕಮಾಂಡ್‌ಗಳನ್ನು ಈಗಾಗಲೇ ಹೊಂದಿವೆ. ಅಮೆರಿಕವು ಮೊದಲ ಬಾರಿಗೆ ಥಿಯೇಟರ್ ಕಮಾಂಡ್ ವ್ಯವಸ್ಥೆ ಮತ್ತು ಪ್ರಸ್ತುತ ಆರು ಭೌಗೋಳಿಕ ಮತ್ತು ನಾಲ್ಕು ಕ್ರಿಯಾತ್ಮಕ ಕಮಾಂಡ್‌ಗಳನ್ನು ಹೊಂದಿದೆ.

ಥಿಯೇಟರ್ ಕಮಾಂಡ್‌ ಬಗ್ಗೆ

ಕಮಾಂಡ್ ರಚನೆಯ ವಿಷಯದಲ್ಲಿ, ಭಾರತೀಯ ಭೂಸೇನೆ, ನೌಕಾಪಡೆ ಮತ್ತು ವಾಯುಪಡೆಗಳು ಲಂಬವಾಗಿ ವಿಭಜಿಸಲಾದ ಹಲವು ಕಮಾಂಡ್‌ಗಳನ್ನು ಹೊಂದಿವೆ. ಭೂಸೇನೆಯು 7, ನೌಕಾಪಡೆಯು 3 ಕಮಾಂಡ್‌ಗಳನ್ನು ಹೊಂದಿವೆ. ಥಿಯೇಟರ್ ಕಮಾಂಡ್ ಒಂದು ಸಾಂಸ್ಥಿಕ ರಚನೆಯಾಗಿದ್ದು, ಎಲ್ಲ ಮೂರು ಪಡೆಗಳು ಸಂಯೋಜಿತ ರೀತಿಯಲ್ಲಿ ಕಾರ್ಯನಿರ್ವಹಿಸುವಂತೆ ಮಾಡಲು ಮತ್ತು ಯುದ್ಧದ ಸನ್ನಿವೇಶಗಳಲ್ಲಿ ಎಲ್ಲ ಮಿಲಿಟರಿ ಸ್ವತ್ತುಗಳನ್ನು ನಿಯಂತ್ರಿಸಲು ವಿನ್ಯಾಸಗೊಳಿಸಲಾಗಿದೆ. ಥಿಯೇಟರ್ ಕಮಾಂಡ್‌ ತಂತ್ರಜ್ಞಾನ, ತಂತ್ರ, ವೇಗ ಮತ್ತು ಯುದ್ಧಭೂಮಿಯಲ್ಲಿ ಪರಿಣಾಮಕಾರಿ ಫಲಿತಾಂಶಗಳನ್ನು ಖಚಿತಪಡಿಸಿಕೊಳ್ಳುವ ಜತೆಗೆ, ಸಮಯವನ್ನು ಉಳಿಸುತ್ತದೆ.

Girish-Linganna

ಒಳಚಿತ್ರದಲ್ಲಿ ಗಿರೀಶ್ ಲಿಂಗಣ್ಣ

(ಗಿರೀಶ್ ಲಿಂಗಣ್ಣ, ಲೇಖಕರು: ವ್ಯವಸ್ಥಾಪಕ ನಿರ್ದೇಶಕರು, ಎಡಿಡಿ ಎಂಜಿನಿಯರಿಂಗ್ ಇಂಡಿಯಾ ಲಿಮಿಟೆಡ್)

ಇದನ್ನೂ ಓದಿ: National Defence: ಭಾರತಕ್ಕೆ ಬೇಕು, ನಿಖರ ದಾಳಿಯ ಪ್ರಬಲ ಹೆಲಿಕಾಪ್ಟರ್‌ಗಳು

ಇದನ್ನೂ ಓದಿ: National Defence: ತೈವಾನ್ ಮೇಲೇಕೆ ಚೀನಾಕ್ಕೆ ಕೆಂಗಣ್ಣು? ಅಮೆರಿಕಕ್ಕೆ ಇರುವ ಆಯ್ಕೆಗಳೇನು?