National Defence: ಭಾರತಕ್ಕೆ ಬೇಕು, ನಿಖರ ದಾಳಿಯ ಪ್ರಬಲ ಹೆಲಿಕಾಪ್ಟರ್‌ಗಳು

National Defence: ಭಾರತಕ್ಕೆ ಬೇಕು, ನಿಖರ ದಾಳಿಯ ಪ್ರಬಲ ಹೆಲಿಕಾಪ್ಟರ್‌ಗಳು
ಎಚ್​ಎಎಲ್ ಅಭಿವೃದ್ಧಿಪಡಿಸಿರುವ ಹಗುರ ಹೆಲಿಕಾಪ್ಟರ್

Indian Air Force: ಕಾರ್ಗಿಲ್ ಯುದ್ಧದ ಅನಂತರ, ಎತ್ತರದ ಪ್ರದೇಶಗಳಲ್ಲಿ ನಿಖರವಾದ ದಾಳಿಗಳನ್ನು ಸಂಘಟಿಸುವ ಸಾಮರ್ಥ್ಯವಿರುವ ಪ್ರಬಲ ಹೆಲಿಕಾಪ್ಟರ್‌ನ ಅಗತ್ಯವನ್ನು ಭಾರತೀಯ ವಾಯುಪಡೆ ಮನಗಂಡಿತು.

TV9kannada Web Team

| Edited By: Ghanashyam D M | ಡಿ.ಎಂ.ಘನಶ್ಯಾಮ

Jan 30, 2022 | 9:18 PM

ಕಾರ್ಗಿಲ್ ಯುದ್ಧವು (1999) ಭಾರತೀಯ ಸಶಸ್ತ್ರ ಪಡೆಗಳಲ್ಲಿ ಮಹಾ ಪರಿವರ್ತನೆಗಳಿಗೆ ಕಾರಣವಾಯಿತು. ಭಾರತೀಯ ವಾಯುಪಡೆಯು ತನ್ನ ಎರಡು ವಿಮಾನಗಳು ಮತ್ತು ಎಂಐ 17 ಹೆಲಿಕಾಪ್ಟರ್ ಅನ್ನು ಕಳೆದುಕೊಂಡಿತು. ಇದರ ತರುವಾಯ ಅದರ ಫೈಟರ್ ಪೈಲಟ್ ಕಂಬಂಪತಿ ನಚಿಕೇತ ಅವರನ್ನು ಯುದ್ಧ ಖೈದಿಯಾಗಿ ವಶಕ್ಕೆ ಪಡೆಯಿತು. ಒಂದು ವಾರದ ಬಳಿಕ ಬಿಡುಗಡೆಯನ್ನೂ ಮಾಡಿತು. 1999ರ ಕಾರ್ಗಿಲ್ ಯುದ್ಧದ ಅನಂತರ, ಎತ್ತರದ ಪ್ರದೇಶಗಳಲ್ಲಿ ನಿಖರವಾದ ದಾಳಿಗಳನ್ನು ಸಂಘಟಿಸುವ ಸಾಮರ್ಥ್ಯವಿರುವ ಪ್ರಬಲ ಹೆಲಿಕಾಪ್ಟರ್‌ನ ಅಗತ್ಯವನ್ನು ಭಾರತೀಯ ವಾಯುಪಡೆ (Indian Air Force – IAF) ಮನಗಂಡಿತ್ತು. ಇದು ಎಲ್‌ಸಿಎಚ್‌ನ ಸಂಶೋಧನೆ ಮತ್ತು ಅಭಿವೃದ್ಧಿಗೆ ಅಡಿಪಾಯವನ್ನು ಹಾಕಿತು. ಅದಕ್ಕಾಗಿ ಅಕ್ಟೋಬರ್ 2006ರಲ್ಲಿ ಭಾರತ ಸರ್ಕಾರದ ಅನುಮತಿಯನ್ನು ಪಡೆಯಿತು.

ಐಎಎಫ್ ಬಳಿಕ, ಆರ್ಮಿ ಏವಿಯೇಷನ್ ಕಾರ್ಪ್ಸ್ (ಎಎಸಿ) ಕೂಡ ಅದೇ ವರ್ಷದ ಡಿಸೆಂಬರ್‌ನಲ್ಲಿ ಈ ಕಾರ್ಯಕ್ರಮಕ್ಕೆ ಸೇರಿಕೊಂಡಿತು. ಐಎಎಫ್ ಮತ್ತು ಎಎಸಿಯ ಎಲ್‌ಸಿಎಚ್‌ನ ಸಂಯೋಜಿತ ಆವಶ್ಯಕತೆಗಳು 160ನ್ನು ತಲುಪಿದವು. ಸರ್ಕಾರಿ ಸ್ವಾಮ್ಯದ ಹಿಂದೂಸ್ತಾನ್ ಏರೋನಾಟಿಕ್ಸ್ ಲಿಮಿಟೆಡ್ (ಎಚ್ಎಎಲ್) ಅಭಿವೃದ್ಧಿಪಡಿಸಿರುವ ಲಘು ಯುದ್ಧ ಹೆಲಿಕಾಪ್ಟರ್ (Light Combat Helicopter – LCH) ಐದರಿಂದ ಎಂಟು ಟನ್ ತೂಕದ ಅವಳಿ ಎಂಜಿನ್ ಹೆಲಿಕಾಪ್ಟರ್ ಆಗಿದೆ. ಪ್ರಪಂಚದ ಏಕೈಕ ದಾಳಿ ಹೆಲಿಕಾಪ್ಟರ್ ಇದೆಂದು ಹೇಳಲಾಗುತ್ತದೆ. ಈ ಹೆಲಿಕಾಪ್ಟರ್ ಗರಿಷ್ಠ 6,500 ಮೀಟರ್ (21,300 ಅಡಿ) ಎತ್ತರದಲ್ಲಿ ಹಾರಬಲ್ಲದು.

ಸೇನಾಪಡೆಗಳನ್ನು ಬೆಂಬಲಿಸಲು ಎಲ್‌ಸಿಎಚ್ ಅತ್ಯುತ್ತಮ ವೇದಿಕೆಯಾಗಿದೆ. ಎತ್ತರದ ಪ್ರದೇಶಗಳಲ್ಲಿ (ಎಚ್ಎಎ) ಅವುಗಳನ್ನು ನಿಯೋಜಿಸಲಾಗಿದೆ. ಮೈನಸ್ 50 ಡಿಗ್ರಿ ಸೆಲ್ಸಿಯಸ್‌ನಿಂದ ಆರಂಭಿಸಿ, ಒಣ ಮರುಭೂಮಿಯ ಪರಿಸ್ಥಿತಿಗಳಲ್ಲಿ 50 ಡಿಗ್ರಿ ಸೆಲ್ಸಿಯಸ್​ವರೆಗಿನ ವಿವಿಧ ತಾಪಮಾನಗಳಲ್ಲಿ ಇದು ಕಾರ್ಯನಿರ್ವಹಿಸಬಲ್ಲದು. ಸ್ಥಳೀಯವಾಗಿ ನಿರ್ಮಿಸಿರುವ ಈ ಹೆಲಿಕಾಪ್ಟರ್ ಗಾಳಿಯಿಂದ ಗಾಳಿಗೆ ಮತ್ತು ಗಾಳಿಯಿಂದ ನೆಲಕ್ಕೆ ಕ್ಷಿಪಣಿಗಳೊಂದಿಗೆ ದಾಳಿ ಮಾಡಿ, ಮಾರಕವಾದ ಹೊಡೆತಗಳನ್ನು ನೀಡಬಲ್ಲದು. ಇದು 20 ಎಂಎಂ ಗನ್‌ನಿಂದ ಶಸ್ತ್ರಸಜ್ಜಿತವಾಗಿದೆ ಮತ್ತು 70 ಎಂಎಂ ರಾಕೆಟ್‌ಗಳನ್ನು ಸಾಗಿಸಬಲ್ಲದು. ಅತ್ಯಾಧುನಿಕ ಏವಿಯಾನಿಕ್ಸ್ ಮತ್ತು ಶಸ್ತ್ರಾಸ್ತ್ರಗಳ ಸಹಾಯದಿಂದ ಎಲ್‌ಸಿಎಚ್ ವಾಯು ಮತ್ತು ನೆಲದ ಗುರಿಗಳನ್ನು ಪಡೆದುಕೊಳ್ಳಬಲ್ಲದು ಮತ್ತು ತಟಸ್ಥಗೊಳಿಸಬಲ್ಲದು.

ಎಚ್ಎಎಲ್‌ ನಿರ್ಮಿಸಿದ ಎಲ್‌ಸಿಎಚ್ ಎರಡು ವಿಭಿನ್ನ ಪ್ರಯೋಜನಗಳನ್ನು ಹೊಂದಿದೆ. ಪ್ರಪಂಚದ ಬೇರೆ ಯಾವ ದಾಳಿ ಹೆಲಿಕಾಪ್ಟರ್ ಕೂಡ ಆ ಪ್ರಯೋಜನಗಳನ್ನು ಒಳಗೊಂಡಿಲ್ಲ. ಅವು ಸ್ಟೆಲ್ತ್ ವಿನ್ಯಾಸವನ್ನು ಹೊಂದಿವೆ. ಈ ಮೂಲಕ ಅವು ಸಂಘರ್ಷವಿರುವ ಪ್ರದೇಶದ ಸನಿಹಕ್ಕೆ ಹೋಗಲು ಸಾಧ್ಯವಾಗುತ್ತದೆ. ಪರ್ವತಗಳ ಹಿಂದಿನಿಂದ ಹಠಾತ್ತಾಗಿ ಪ್ರತ್ಯಕ್ಷವಾಗುವ ಮೂಲಕ ಆಶ್ಚರ್ಯ ಮೂಡಿಸುವ ಅಂಶವನ್ನು ಹೊಂದಿರುತ್ತದೆ. ಸ್ಪಷ್ಟವಾಗಿ ಹೇಳಬೇಕೆಂದರೆ, ಎಲ್‌ಸಿಎಚ್ ಅನ್ನು ನೆಲದಿಂದ ಆರಂಭಿಸಿ ಎತ್ತರದ ಪ್ರದೇಶಗಳಲ್ಲಿ ಹೋರಾಡುವಂತೆ ವಿನ್ಯಾಸಗೊಳಿಸಲಾಗಿದೆ. ಚೀನಾ ಮತ್ತು ಪಾಕಿಸ್ತಾನ ದೇಶಗಳ ಕಾರಣದಿಂದ ನಾವು ಭವಿಷ್ಯದಲ್ಲಿ ನಿರೀಕ್ಷಿಸುವ ಎಲ್ಲ ಚಕಮಕಿಗಳನ್ನು ನಿಭಾಯಿಸಲು ಇದು ಅಗತ್ಯವಾಗಿದೆ.

ಇತರ ಅಂಶಗಳಿಗೆ ಹೋಲಿಸಿದರೆ, ಎಲ್‌ಸಿಎಚ್ ಕೂಡ ಹಿಂದುಳಿದಿಲ್ಲ. ಎಎಲ್ಎಚ್ ಧ್ರುವ್ ತನ್ನ ಸಾಮರ್ಥ್ಯವನ್ನು ಈಗಾಗಲೇ ಸಾಬೀತುಪಡಿಸಿದೆ. ಇದು ವಿಶ್ವಾಸಾರ್ಹ ಮತ್ತು ಹಲವು ಕಾಲಮಾನಗಳನ್ನು ಪರಿಣಾಮಕಾರಿಯಾಗಿ ಕಾರ್ಯನಿರ್ವಹಿಸಿದ್ದನ್ನು ಸಾಬೀತುಪಡಿಸಿದೆ. ಇತರ ಹೆಲಿಕಾಪ್ಟರ್‌ಗಳು ಮತ್ತು ಯುಎಎಚ್‌ಗಳನ್ನೂ ಇದು ತೊಡಗಿಸಿಕೊಳ್ಳಬಹುದು. ಈ ವಿನ್ಯಾಸವು ಕೌಂಟರ್ ಇನ್ಸರ್ಜೆನ್ಸಿ ಮತ್ತು ಕೌಂಟರ್ ಸರ್ಫೇಸ್ ಫೋರ್ಸ್ ಆಪರೇಷನ್ಸ್ ಎರಡಕ್ಕೂ ಸೂಕ್ತವಾಗಿದೆ. ಇದು ಸಾಕಷ್ಟು ರಕ್ಷಾಕವಚದ ರಕ್ಷಣೆಯನ್ನು ಹೊಂದಿದೆ. ಕೆಲವು ಭಾಗಗಳು 50 ಕ್ಯಾಲಿಬರ್ ಆಯುಧಗಳಿಂದ ನೇರ ಹೊಡೆತಗಳನ್ನೂ ತಡೆದುಕೊಳ್ಳಬಲ್ಲವು. ಅಪಘಾತದ ಸಮಯದಲ್ಲೂ ಬಿರುಕು ಬಿಡದ ಸ್ವಯಂ-ಸೀಲಿಂಗ್ ಇರುವ ಇಂಧನ ಟ್ಯಾಂಕ್‌ಗಳನ್ನೂ ಇದು ಹೊಂದಿದೆ.

ವಿಸ್ವದ ವಿವಿಧೆಡೆ ಇದೀಗ ಬಳಕೆಯಲ್ಲಿರುವ ಅನೇಕ ದಾಳಿ ಹೆಲಿಕಾಪ್ಟರ್‌ಗಳಿಗಿಂತ ಭಿನ್ನವಾಗಿ, ಎಲ್‌ಸಿಎಚ್ ಸಮಗ್ರ ಡೇಟಾ ಲಿಂಕ್ ಹೊಂದಿದ್ದು, ನೆಟ್‌ವರ್ಕ್ ಕೇಂದ್ರಿತ ಕಾರ್ಯಾಚರಣೆಗಳಲ್ಲಿ ಭಾಗವಹಿಸಲು ಅನುವು ಮಾಡಿಕೊಡುತ್ತದೆ. ಲಾಂಗ್‌ಬೋ ರಾಡಾರ್ ಹೊರತುಪಡಿಸಿ, ಎಲ್‌ಸಿಎಚ್‌ನಲ್ಲಿರುವ ಹಾರ್ಡ್‌ವೇರ್ ಮತ್ತು ಸೆನ್ಸಾರ್‌ಗಳನ್ನು ಹೋಲಿಸಬಹುದಾಗಿದೆ ಮತ್ತು ಎಎಚ್-64ಇ ಅಪಾಚಿಗಿಂತ ಅನೇಕ ಅಂಶಗಳಲ್ಲಿ ಉತ್ತಮವಾಗಿದೆ.

HAL-LUH

ಎಚ್​ಎಎಲ್ ಅಭಿವೃದ್ಧಿಪಡಿಸಿರುವ ಹಗುರ ಹೆಲಿಕಾಪ್ಟರ್ (ಒಳಚಿತ್ರ: ಲೇಖಕ ಗಿರೀಶ್ ಲಿಂಗಣ್ಣ)

ಶಸ್ತ್ರಾಸ್ತ್ರಗಳ ಬಗ್ಗೆ ಹೇಳುವುದಾದರೆ, ಹೆಲಿನಾ ಕ್ಷಿಪಣಿಯನ್ನು ಎಲ್‌ಸಿಎಚ್ ಶೀಘ್ರದಲ್ಲೇ ಹೊಂದಲಿದೆ. ಇದು ಇತ್ತೀಚಿನ ಪ್ರಯೋಗಗಳಲ್ಲಿ ತನ್ನ ಮೌಲ್ಯವನ್ನು ಸಾಬೀತುಪಡಿಸಿದೆ. ಈ ಸಂಯೋಜನೆಗಳು ಎಲ್‌ಸಿಎಚ್ ಅನ್ನು ಅತ್ಯಂತ ಮಾರಕ, ಮತ್ತು ದಾಳಿಗಳನ್ನು ತಾಳಿಕೊಂಡು ಮರಳುವಂತಹ ಯಂತ್ರವನ್ನಾಗಿ ರೂಪಿಸುತ್ತವೆ. ಹೆಚ್ಚಿನ ಶಸ್ತ್ರಾಸ್ತ್ರಗಳು ಮತ್ತು ಭಾರವಾದ ರಕ್ಷಾಕವಚ ರಕ್ಷಣೆಯು ಈ ಹೆಲಿಕಾಪ್ಟರ್ ಅನ್ನು ಇನ್ನೂ ಭಾರವಾಗಿಸುತ್ತವೆ ಮತ್ತು ಗಾಲ್ವಾನ್, ಲಡಾಖ್, ಅರುಣಾಚಲ ಪ್ರದೇಶ ಮುಂತಾದ ಎತ್ತರದ ಪ್ರದೇಶಗಳಲ್ಲಿ ಅವುಗಳು ಟೇಕಾಫ್​ ಮಾಡಲು ಅಥವಾ ಚಲಿಸಲು ಸಾಧ್ಯವಾಗುವುದಿಲ್ಲ. ಆದರೂ, ಅಪಾಚೆಗಿಂತ ಭಿನ್ನವಾಗಿ, ಈ ಹೆಲಿಕಾಪ್ಟರ್ ಅಷ್ಟೇನೂ ಶಸ್ತ್ರಸಜ್ಜಿತವಾಗಿಲ್ಲ. ಆದರೆ, ನಮ್ಮ ಆವಶ್ಯಕತೆಗಳಿಗೆ ಹೊಂದುವಂತೆ ಅದನ್ನು ರೂಪಿಸಿರುವುದು ಇದಕ್ಕೆ ಕಾರಣ. ನಮಗೆ ಬೇಕಿರುವ ನಿಖರತೆಯಲ್ಲೇ ಅದನ್ನು ನಿರ್ಮಿಸಲಾಗಿದೆ.

ಬರಹ: ಗಿರೀಶ್ ಲಿಂಗಣ್ಣ, ಲೇಖಕರು: ವ್ಯವಸ್ಥಾಪಕ ನಿರ್ದೇಶಕರು, ಎಡಿಡಿ  ಎಂಜಿನಿಯರಿಂಗ್ ಇಂಡಿಯಾ ಲಿಮಿಟೆಡ್.

ಇದನ್ನೂ ಓದಿ:

Follow us on

Related Stories

Most Read Stories

Click on your DTH Provider to Add TV9 Kannada