Defence Budget: ರಕ್ಷಣಾ ವಲಯದಲ್ಲಿ ರಚನಾತ್ಮಕ ಬದಲಾವಣೆಗೆ ಮುನ್ನುಡಿ ಬರೆದ ಬಜೆಟ್
Indian Armed Forces: ರಕ್ಷಣೆಗೆ ಒತ್ತು ಕೊಡುವ ಮೃದು ದೇಶ ಎನ್ನುವ ಹಂತದಿಂದ ದಾಳಿಗೆ ಸಿದ್ಧವಿರುವ ದೃಢವಾದ ಶಕ್ತಿ ಎನ್ನುವ ಸ್ಥಿತಿಯನ್ನು ನಮ್ಮ ದೇಶ ತಲುಪಬೇಕಿದೆ.
ಸಂಸತ್ತಿನಲ್ಲಿ ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ ಮಂಡಿಸಿದ ಕೇಂದ್ರ ಬಜೆಟ್ (Budget 2022) ಸಹಜವಾಗಿಯೇ ಚುನಾವಣಾ ಒತ್ತಡ ಹಾಗೂ ಪ್ರಜಾಸತ್ತಾತ್ಮಕ ಸಂಸ್ಥೆಗಳ ನಡುವೆ ಸಮತೋಲನ ಕಾಪಾಡುವ ಪ್ರಯತ್ನ ಮಾಡಿದೆ. ಹಣಕಾಸು ಹಂಚಿಕೆಗೂ ಸಾಕಷ್ಟು ತರ್ಕವನ್ನು ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ (Nirmala Sitharaman) ಒದಗಿಸಿದ್ದಾರೆ. ಮೇಲ್ನೋಟಕ್ಕೆ ಈ ಬಜೆಟ್ ಸಾಕಷ್ಟು ಪ್ರಗತಿಪರ ಮತ್ತು ರಾಷ್ಟ್ರೀಯ ಆಶಯಗಳಿಗೆ ಅನುಗುಣವಾಗಿರುವಂತೆ ಕಂಡುಬರುತ್ತದೆ. ಈ ಹಣಕಾಸು ಹಂಚಿಕೆಯ ಲೆಕ್ಕಾಚಾರದಲ್ಲಿ ಕೇಂದ್ರ ಸರ್ಕಾರವು ರಕ್ಷಣಾ ವಲಯವು ತನ್ನ ಆದ್ಯತೆಯ ಕ್ಷೇತ್ರ ಎಂದು ಸಾರಿ ಹೇಳಿದೆ. ಈ ವರ್ಷದ ಬಜೆಟ್ ಅಂಕಿಅಂಶಗಳನ್ನು ರಕ್ಷಣಾ ವಲಯದ ಆದ್ಯತೆ ಮತ್ತು ಅಗತ್ಯವನ್ನು ಗಮನದಲ್ಲಿರಿಸಿಕೊಂಡು ವಿಶ್ಲೇಷಿಸಿದ್ದಾರೆ ಸೇನಾಧಿಕಾರಿ ಲೆಫ್ಟಿನೆಂಟ್ ಜನರಲ್ ರಾಮೇಶ್ವರ್ ಯಾದವ್.
ಬಜೆಟ್ನಲ್ಲಿ ರಕ್ಷಣಾ ವಲಯಕ್ಕೆ ಮೀಸಲಿಟ್ಟಿರುವ ಹಣ ದೇಶದ ಸಶಸ್ತ್ರಪಡೆಗಳ ಎಲ್ಲ ಅಗತ್ಯಗಳನ್ನು ಪೂರೈಸಲು ಸಾಕಾಗುವಷ್ಟಿದೆ ಎಂದು ಹೇಳಲು ಆಗುವುದಿಲ್ಲ. ಕೊರೊನಾ ಸಾಂಕ್ರಾಮಿಕ ಪಿಡುಗು ಮತ್ತು ದೇಶದ ಆರ್ಥಿಕತೆಯ ಮೇಲೆ ಅದು ಬೀರಿದ ದುಷ್ಪರಿಣಾಮಗಳ ಹಿನ್ನೆಲೆಯಲ್ಲಿ ಆಲೋಚಿಸಿದರೆ ಇದನ್ನು ಖಂಡಿತ ಉತ್ತಮ ಮೊತ್ತ ಪರಿಗಣಿಸಬಹುದು. ರಾಷ್ಟ್ರೀಯ ಆರ್ಥಿಕ ವಿದ್ಯಮಾನಗಳ ಒತ್ತಡಗಳಿಗೆ ಸಹಜವಾಗಿಯೇ ಸಶಸ್ತ್ರ ಪಡೆಗಳೂ ಈಡಾಗುತ್ತವೆ. ಕಳೆದ ವರ್ಷವೂ ಸಹ ಸರ್ಕಾರವು ಅಗತ್ಯಬಿದ್ದರೆ ಹೆಚ್ಚುವರಿ ಅನುದಾನ ಒದಗಿಸುವುದಾಗಿ ರಕ್ಷಣಾ ಇಲಾಖೆಗೆ ಭರವಸೆ ನೀಡಿತ್ತು. ರಕ್ಷಣಾ ವಲಯದ ಪ್ರಸ್ತುತ ಹಾಗೂ ಭವಿಷ್ಯದ ಅಗತ್ಯಗಳನ್ನು ಗಮನದಲ್ಲಿರಿಸಿಕೊಳ್ಳುವ ಜೊತೆಗೆ ದೇಶದ ಭದ್ರತೆಗೆ ಇರುವ ಆತಂಕಗಳನ್ನು ಪರಿಗಣಿಸಿಯೇ, ಬಜೆಟ್ ಹಂಚಿಕೆಯನ್ನು ವಿಶ್ಲೇಷಿಸಬೇಕಾಗುತ್ತದೆ.
ಕಳೆದ 70 ವರ್ಷಗಳಿಂದಲೂ ಪಾಕಿಸ್ತಾನ ಮತ್ತು ಚೀನಾ ಭಾರತದ ವಿರುದ್ಧ ಮಿಲಿಟರಿ ಕಾರ್ಯಾಚರಣೆಗೆ ಒಂದಲ್ಲ ಒಂದು ರೀತಿ ಪ್ರಯತ್ನಿಸುತ್ತಲೇ ಇವೆ. ಒಂದು ಹಂತದಿಂದ ಆಚೆಗೆ ಭಾರತವು ಎಂದಿಗೂ ಎದಿರೇಟು ನೀಡಲಾರದು, ಭಾರತ ಒಂದು ಮೃದು ದೇಶ ಎನ್ನುವ ಹುಂಬ ಧೈರ್ಯ ಅವುಗಳಿಗಿದೆ. ವಿಶ್ವದ ಕಣ್ಣಲ್ಲಿ ಭಾರತದ ಬಗ್ಗೆ ಇರುವ ಈ ಮನಃಸ್ಥಿತಿ ಬದಲಾಗಬೇಕಿದೆ. ಭಾರತವನ್ನು ಭದ್ರತಾ ಚಿಂತನೆಯಲ್ಲಿ ಹಾಸುಕೊಕ್ಕಾಗಿರುವ ರಕ್ಷಣಾತ್ಮಕ ಕ್ರಮಗಳ ಸ್ಥಾನದಲ್ಲಿ ದಾಳಿಯ ಸಾಧ್ಯತೆಯ ಬಗ್ಗೆ ಗಂಭೀರವಾಗಿ ಯೋಚಿಸುವ ಕ್ರಮ ರೂಢಿಯಾಗಬೇಕಿದೆ. ಆಗ ಮಾತ್ರ ವಿಶ್ವದ ಇತರ ದೇಶಗಳು ಭಾರತವನ್ನು ನೋಡುವ ದೃಷ್ಟಿಕೋನ ಬದಲಾಗುತ್ತವೆ. ಇಂಥ ಪ್ರಯತ್ನಗಳನ್ನು ಮಾಡುವಾಗ ನಾವು ಚೀನಾ ಮತ್ತು ಪಾಕಿಸ್ತಾನಗಳ ಮಿಲಿಟರಿ ಒಗ್ಗೂಡಿದರೆ ಉಂಟಾಗಬಹುದಾದ ಪರಿಸ್ಥಿತಿಯನ್ನು ಗಮನದಲ್ಲಿರಿಸಿಕೊಳ್ಳಬೇಕು. ಇದರ ಜೊತೆಗೆ ಹಿಂದೂ ಮಹಾಸಾಗರದಲ್ಲಿ ಪಾರಮ್ಯ ಉಳಿಸಿಕೊಳ್ಳಲು ಇತರ ದೇಶಗಳೊಂದಿಗೆ ಸಾಮರಿಕ ಒಪ್ಪಂದಗಳನ್ನು ಮಾಡಿಕೊಳ್ಳಬೇಕಿದೆ.
ಹಿಂದೂ ಮಹಾಸಾಗರದಲ್ಲಿರುವ ಹಲವು ದೇಶಗಳನ್ನು ಪ್ರಲೋಭನೆ ಅಥವಾ ಬೆದರಿಕೆ ತಂತ್ರ ಬಳಸುವ ಮೂಲಕ ಚೀನಾದ ತನ್ನ ತೆಕ್ಕೆಗೆ ತೆಗೆದುಕೊಳ್ಳುತ್ತಿದೆ. ಇದನ್ನು ಭಾರತ ಎಂದಿಗೂ ನಿರ್ಲಕ್ಷಿಸಲು ಆಗದು. ವಿಶ್ವದ ಪ್ರವರ್ಧಮಾನಕ್ಕೆ ಬರುತ್ತಿರುವ ಆರ್ಥಿಕತೆ ಎನಿಸಿರುವ ಭಾರತವು ತನ್ನನ್ನು ವಿರೋಧಿಸುವ ದೇಶಗಳ ಬೆಳೆಯುತ್ತಿರುವ ಪ್ರಭಾವದ ಮೇಲೆಯೂ ಕಣ್ಣಿಟ್ಟಿರಲೇ ಬೇಕಿದೆ.
ಭಾರತದ ಈವರೆಗಿನ ಮಿಲಿಟರಿ ಕಾರ್ಯತಂತ್ರವು ರಕ್ಷಣೆಗೆ ಹೆಚ್ಚು ಒತ್ತು ನೀಡುವಂತಿದೆ. ಭಾರತದ ಸಶಸ್ತ್ರಪಡೆಗಳ ಬತ್ತಳಿಕೆಯಲ್ಲಿರುವ ಬಹುತೇಕ ಶಸ್ತ್ರಾಸ್ತ್ರಗಳು ತೀರಾ ಹಳೆಯದಾಗಿವೆ. ಚೀನಾ ಮತ್ತು ಪಾಕಿಸ್ತಾನಗಳೊಂದಿಗೆ ಭಾರತವು ಹೊಂದಿರುವ ಗಡಿವಿವಾದ ಮತ್ತು ಅದರಿಂದ ಉಂಟಾಗುವ ಸಂಘರ್ಷವು ಪರ್ವತ ಪ್ರದೇಶಗಳಲ್ಲಿ ನಡೆಯುವುದೇ ಹೆಚ್ಚು. ಭಾರತದ ದಾಳಿ ಪಡೆಗಳು ಮತ್ತು ದಾಳಿಗೆ ಬಳಕೆಯಾಗುವ ಯುದ್ಧೋಪಕರಣಗಳನ್ನು ಹೆಚ್ಚಾಗಿ ಪಾಕಿಸ್ತಾನದ ಗಡಿಯಲ್ಲಿಯೇ ನಿಯೋಜಿಸಲಾಗಿದೆ. ಈ ಯುದ್ಧೋಪಕರಣಗಳು ಸ್ಥಾಪನೆಯಾಗಿವುರುವ ಪ್ರದೇಶಗಳು ಬಹುತೇಕ ಮಟ್ಟಿಗೆ ಈಗಾಗಲೇ ನಿಷ್ಕರ್ಷೆಗೊಂಡಿರುವ ಅಂತಾರಾಷ್ಟ್ರೀಯ ಗಡಿಯೇ ಆಗಿವೆ. ನಿಯೋಜನೆ ಮತ್ತು ಕಾರ್ಯತಂತ್ರ ರೂಪಿಸುವಲ್ಲಿ ಆಗಿರುವ ತಪ್ಪುಗಳನ್ನು ಹೆಚ್ಚು ತಡಮಾಡದೇ ಸರಿಪಡಿಸಬೇಕಿದೆ. ಲಡಾಖ್ನಲ್ಲಿ ಇತ್ತೀಚೆಗೆ ಸಂಭವಿಸಿದ ಸಂಘರ್ಷವು ರಕ್ಷಣೆಯ ವಿಷಯದಲ್ಲಿ ಭಾರತದ ಚಿಂತನೆ ಬದಲಾಗಬೇಕಿರುವುದನ್ನು ಸಾರಿ ಹೇಳಿದೆ. ಕಾರ್ಯತಂತ್ರ ಮತ್ತು ಸಿದ್ಧತೆಯ ಮಟ್ಟದಲ್ಲಿ ಭಾರತ ತುರ್ತಾಗಿ ತೆಗೆದುಕೊಳ್ಳಬೇಕಿರುವ ಕ್ರಮಗಳನ್ನೂ ಇದು ಎತ್ತಿ ತೋರಿಸಿದೆ.
ಭಾರತೀಯ ವಾಯುಪಡೆಯು ಹೋರಾಟದ ಸ್ಕ್ವಾರ್ಡನ್ಗಳ ಕೊರತೆ ಎದುರಿಸುತ್ತಿದೆ. ಮಂಜೂರಾಗಿರುವ 42 ಸ್ಕ್ವಾರ್ಡನ್ಗಳಿಗಿಂತಲೂ ಕಡಿಮೆ ಪ್ರಮಾಣದ ಸಾಮರ್ಥ್ಯದಲ್ಲಿ ವಾಯುಪಡೆ ಕಾರ್ಯನಿರ್ವಹಿಸುತ್ತಿದೆ. ಹಳೆ ತಲೆಮಾರಿನ ಯುದ್ಧವಿಮಾನಗಳನ್ನು ಬದಲಿಸುವ ಮೂಲಕ ವಾಯುಪಡೆಗೆ ತುರ್ತಾಗಿ ಹೊಸಶಕ್ತಿ ತುಂಬಬೇಕಿದೆ. ಭಾರತೀಯ ನೌಕಾಪಡೆಯ ಸಾಮರ್ಥ್ಯವು ಹೆಚ್ಚಾಗಬೇಕಿದೆ. ಪ್ರಸ್ತುತ ಕೇವಲ ಒಂದೇ ಕ್ಯಾರಿಯರ್ ಗ್ರೂಪ್ನೊಂದಿಗೆ ತೀರ ರಕ್ಷಣೆಗೆ ಶ್ರಮಿಸುತ್ತಿದೆ. ಇಂಡೊ-ಪೆಸಿಫಿಕ್ ಸಾಗರ ವಲಯದಲ್ಲಿ ಹೆಚ್ಚುತ್ತಿರುವ ಒತ್ತಡ ಮತ್ತು ವಿಶ್ವದ ಬಲಾಢ್ಯ ದೇಶಗಳ ಹೆಚ್ಚಾಗುತ್ತಿರುವ ಉಪಸ್ಥಿತಿಯನ್ನು ನಿರ್ವಹಿಸಲು ನೌಕಾಪಡೆಗೆ ಶಕ್ತಿ ತುಂಬಬೇಕಿದೆ. ದಾಳಿ ಮತ್ತು ರಕ್ಷಣೆಯನ್ನು ನಿರ್ವಹಿಸುವ ಇನ್ನಷ್ಟು ಕ್ಯಾರಿಯರ್ ಗ್ರೂಪ್ಗಳನ್ನು ರಚಿಸಬೇಕಿದೆ. ಇದರ ಜೊತೆಗೆ ಸೈಬರ್, ಬಾಹ್ಯಾಕಾಶ ಮತ್ತು ಸೈನಿಕರು ಪರಸ್ಪರ ಮುಖಾಮುಖಿಯೇ ಆಗದ ಹೈಬ್ರಿಡ್ ಯುದ್ಧ ವಿಧಾನಗಳಲ್ಲಿ ಭಾರತದ ಸಾಧನೆ ಸುಧಾರಿಸಬೇಕಿದೆ. ಮುಂದಿನ ದಿನಗಳಲ್ಲಿ ಯುದ್ಧದ ವಿಧಾನ ಸಂಪೂರ್ಣ ಬದಲಾಗಲಿದೆ. ಯಾವುದೇ ಯುದ್ಧವನ್ನು ಗೆಲ್ಲಲು ಮಾನವ ಸಂಪನ್ಮೂಲದೊಂದಿಗೆ ತಂತ್ರಜ್ಞಾನದ ಸಾಮರ್ಥ್ಯವೂ ಅಗಾಧವಾಗಿ ಬೇಕಾಗುತ್ತದೆ. ಇದನ್ನು ಸಾಧಿಸಲು ಸಾಕಷ್ಟು ಹೂಡಿಕೆ ಮಾಡಬೇಕು. ಅಷ್ಟೇ ಅಲ್ಲ, ತಂತ್ರಜ್ಞಾನಗಳು ಸದಾ ಬದಲಾಗುತ್ತಲೇ ಇರುತ್ತವೆ.
ರಕ್ಷಣಾ ಬಜೆಟ್ ದೇಶದ ಭದ್ರತೆಯ ಅತ್ಯಗತ್ಯ ಅಂಶಗಳು ಮತ್ತು ಅದಕ್ಕೆ ಪೂರಕವಾಗಿ ರೂಪುಗೊಳ್ಳಬೇಕಿರುವ ವ್ಯವಸ್ಥೆಯ ಕಡೆಗೆ ಗಮನ ಹರಿಸಬೇಕು. ಇದನ್ನು ಒಂದೇ ಬಜೆಟ್ನಲ್ಲಿ ಈಡೇರಿಸಬಲ್ಲದು ಎಂದು ನಿರೀಕ್ಷಿಸಲು ಆಗುವುದಿಲ್ಲ. ಆದರೆ ಯುದ್ಧೋಪಕರಣಗಳ ಖರೀದಿ ಮತ್ತು ಸ್ವಾಧೀನಪಡಿಸಿಕೊಳ್ಳುವ ಪ್ರಕ್ರಿಯೆಗೆ ಮಾರ್ಗಸೂಚಿಗಳನ್ನು ನಿಗದಿಪಡಿಸಿಕೊಳ್ಳಬೇಕಾಗುತ್ತದೆ. ಸರ್ಕಾರಿ ವ್ಯವಸ್ಥೆಯ ಜಟಿಲ ನಿಯಮಗಳ ಗೋಜಲಿನಿಂದ ರಕ್ಷಣಾ ಹಣಕಾಸು ವ್ಯವಹಾರಗಳನ್ನು ಹೊರತಂದು, ತುರ್ತು ಪರಿಸ್ಥಿತಿಯಲ್ಲಿ ಬಳಸಲು ಸಾಧ್ಯವಾಗುವ ಸುಲಭ ಕಾರ್ಯಾಚರಣೆಯ ವ್ಯವಸ್ಥೆ ರೂಪಿಸಬೇಕಿದೆ. ರಕ್ಷಣಾ ಬಜೆಟ್ನ ಛಾಯೆಯಡಿ ಪಾವತಿಸುತ್ತಿರುವ ನಾಗರಿಕ ಸಿಬ್ಬಂದಿಯ ವೇತನವನ್ನು ಸರಿಯಾದ ಲೆಕ್ಕಶೀರ್ಷಿಕೆಯ ಅಡಿಗೆ ತರಬೇಕಿದೆ. ಆಗ ಮಾತ್ರ ರಕ್ಷಣಾ ಇಲಾಖೆಯಲ್ಲಿ ಸಂಪತ್ತಿನ ಅರ್ಥಪೂರ್ಣ ವಿನಿಯೋಗ ಸಾಧ್ಯವಾಗುತ್ತದೆ.
ಭಾರತದ ಒಟ್ಟು ರಾಷ್ಟ್ರೀಯ ಉತ್ಪನ್ನದ (ಜಿಡಿಪಿ) ಶೇ 3ರಷ್ಟು ಮೊತ್ತವನ್ನು ರಕ್ಷಣೆಗಾಗಿ ವಿನಿಯೋಗಿಸಬೇಕು. ಸದ್ಯದ ಪರಿಸ್ಥಿತಿಯಲ್ಲಿ ಇದು ಪ್ರಾಯೋಗಿಕವಾದುದು ಮತ್ತು ಅತ್ಯಗತ್ಯವೂ ಹೌದು. ಚೀನಾ ಸಹ ಸರಿಸುಮಾರು ಇಷ್ಟೇ ಮೊತ್ತವನ್ನು ರಕ್ಷಣೆಗಾಗಿ ವಿನಿಯೋಗಿಸುತ್ತಿದೆ. ಆದರೆ ಭಾರತವು ಕಳೆದ ವರ್ಷ ತನ್ನ ಜಿಡಿಪಿಯ ಶೇ 1.58ರಷ್ಟನ್ನು ಮಾತ್ರ ರಕ್ಷಣೆಗಾಗಿ ಮೀಸಲಿಟ್ಟಿತ್ತು.
ಪ್ರಸಕ್ತ ಸಾಲಿನಲ್ಲಿ ಭಾರತ ಸರ್ಕಾರವು ₹ 5,25,166.15 ಕೋಟಿಯನ್ನು (2.25 ಲಕ್ಷ ಕೋಟಿ ರೂಪಾಯಿ) ರಕ್ಷಣೆಗಾಗಿ ಮೀಸಲಿಟ್ಟಿದೆ. ಕಳೆದ ವರ್ಷಕ್ಕೆ ಹೋಲಿಸಿದರೆ ₹ 47,000 ಕೋಟಿ ಹೆಚ್ಚುವರಿಯಾಗಿ ರಕ್ಷಣಾ ವಲಯಕ್ಕೆ ಸಿಕ್ಕಿದೆ. ಕಳೆದ ವರ್ಷ ₹ 4.78 ಲಕ್ಷ ಕೋಟಿಯನ್ನು ರಕ್ಷಣೆಗಾಗಿ ಮೀಸಲಿಡಲಾಗಿತ್ತು. ಅತ್ಯಗತ್ಯ ಯುದ್ಧೋಪಕರಣಗಳ ಖರೀದಿಗೆ, ಅಂದರೆ ರೆವಿನ್ಯೂ ಎಕ್ಸ್ಪೆಂಡಿಚರ್ಗೆ ಈ ವರ್ಷ ಹೆಚ್ಚಿನ ಅನುದಾನ ಸಿಕ್ಕಂತೆ ಆಗಿದೆ. ಆದರೆ ಭಾರತ ಎದುರಿಸುತ್ತಿರುವ ಸವಾಲು ಮತ್ತು ಅನುಸರಿಸುತ್ತಿರುವ ಕಾರ್ಯತಂತ್ರಗಳಲ್ಲಿ ಆಗಬೇಕಿರುವ ಬದಲಾವಣೆಗಳನ್ನು ಗಮನಿಸಿದಾಗ ಈ ಮೊತ್ತ ಸಾಲದು ಎನಿಸುತ್ತದೆ. ಇತ್ತೀಚಿನ ವರ್ಷಗಳಲ್ಲಿ ಹಲವು ದೊಡ್ಡ ಮಟ್ಟದ ಖರೀದಿ ಒಪ್ಪಂದಗಳನ್ನು ಭಾರತ ಮಾಡಿಕೊಂಡಿದೆ. ಇದೀಗ ಭಾರತ ಸರ್ಕಾರ ಬಜೆಟ್ನಲ್ಲಿ ಘೋಷಿಸಿರುವ ಮೊತ್ತದ ಬಹುಪಾಲ ಹಣವು ಈ ಬಾಧ್ಯತೆಗಳನ್ನು ಈಡೇರಿಸಲು ಬಳಕೆಯಾಗಲಿದೆ. ಆದರೆ ಒಟ್ಟಾರೆಯಾಗಿ ಸಶಸ್ತ್ರ ಪಡೆಗಳ ಸುಧಾರಣೆ ಪ್ರಕ್ರಿಯೆ ಆರಂಭವಾಗಿರುವ ಮತ್ತು ಅದಕ್ಕೆ ಸರ್ಕಾರವು ಸಾಕಷ್ಟು ಹಣಕಾಸು ನೆರವು ಒದಗಿಸುತ್ತಿರುವುದು ಗಮನಾರ್ಹ ಅಂಶವಾಗಿದೆ.
ಈ ಬಾರಿಯ ಬಜೆಟ್ ಭಾಷಣದಲ್ಲಿ ಸರ್ಕಾರವು ರಕ್ಷಣಾ ಉಪಕರಣಗಳ ಆಮದು ಅವಲಂಬನೆ ಕಡಿಮೆ ಮಾಡಲು ಮತ್ತು ಸ್ವಾವಲಂಬನೆಗೆ ಪ್ರೋತ್ಸಾಹ ನೀಡುವ ನಿಲುವನ್ನು ಸ್ಪಷ್ಟವಾಗಿ ಘೋಷಿಸಿತು. ಸಂಶೋಧನೆ ಮತ್ತು ಅಭಿವೃದ್ಧಿಗೆ ಮೀಸಲಿಟ್ಟಿರುವ ಒಟ್ಟು ಅನುದಾನದಲ್ಲಿ ಶೇ 25ರಷ್ಟನ್ನು ಖಾಸಗಿ ವಲಯಗಳಿಗೆ ನೀಡುವುದಾಗಿಯೂ ರಕ್ಷಣಾ ಸಚಿವರು ಹೇಳಿದರು. ರಕ್ಷಣಾ ವಲಯದ ಸಂಶೋಧನೆಗಳಲ್ಲಿ ಖಾಸಗಿ ಕಂಪನಿಗಳು, ಮುಖ್ಯವಾಗಿ ಸ್ಟಾರ್ಟ್ಅಪ್ಗಳು ಹೆಚ್ಚಾಗಿ ತೊಡಗಿಸಿಕೊಳ್ಳಲು, ತಂತ್ರಜ್ಞಾನದಲ್ಲಿ ಇರುವ ಅಂತರ ಕಡಿಮೆಯಾಗಲು ಈ ಕ್ರಮವು ಪ್ರೋತ್ಸಾಹ ನೀಡುತ್ತದೆ. ಖಾಸಗಿ ವಲಯಗಳು ಸರ್ಕಾರದ ಪರೀಕ್ಷಾ ಸೌಲಭ್ಯ ಬಳಸಿಕೊಳ್ಳಲು ಅವಕಾಶ ನೀಡಲು ಮುಂದಿನ ದಿನಗಳಲ್ಲಿ ಅವಕಾಶ ಸಿಗಲಿದೆ. ಇದು ಸಮಾನ ಕ್ಷೇತ್ರದಲ್ಲಿ ಕಾರ್ಯನಿರ್ವಹಿಸುತ್ತಿರುವವರಿಗೆ ಸಮಾನ ಅವಕಾಶ ಒದಗಿಸುವ ನಿಟ್ಟಿನಲ್ಲಿ ಮಹತ್ವದ ಹೆಜ್ಜೆ ಎನಿಸಿಕೊಂಡಿದೆ.
ಭಾರತೀಯ ಕೈಗಾರಿಕೆಗಳಿಂದಲೇ ಶೇ 68ರಷ್ಟು (ಯುದ್ಧೋಪಕರಣಗಳ) ಖರೀದಿಗೆ ಸರ್ಕಾರ ಸೂಚಿಸಿರುವುದು ಸ್ಥಳೀಯ ಉತ್ಪಾದಕರಲ್ಲಿ ಆತ್ಮವಿಶ್ವಾಸ ಹೆಚ್ಚಿಸಿದೆ. ರಕ್ಷಣಾ ವಲಯಕ್ಕೆ ಬೇಕಿರುವ ಉತ್ಪನ್ನಗಳ ಉತ್ಪಾದನೆಯನ್ನು ದೇಶೀಯವಾಗಿ ಶೇ 10ರಷ್ಟು ಹೆಚ್ಚಿಸಬೇಕೆಂಬ ಗುರಿಯನ್ನು ಸರ್ಕಾರ ನೀಡಿದೆ. ಇದು ಕಾರ್ಯಸಾಧು ಎನಿಸುವ ಮತ್ತು ದೇಶೀಯ ಉದ್ಯಮಿಗಳಿಗೆ ಪೂರಕವಾದ ನಿರ್ಧಾರ. ಈ ನೀತಿಗಳು ಆಮದು ಮಾಡಿಕೊಳ್ಳಲು ಬಳಕೆಯಾಗುತ್ತಿದ್ದ ರಕ್ಷಣಾ ನಿಧಿಯನ್ನು ತಗ್ಗಿಸುವುದಲ್ಲದೇ ದೇಶೀಯ ಆರ್ಥಿಕತೆಗೆ ಪ್ರೋತ್ಸಾಹದಾಯಕವೂ ಆಗುತ್ತವೆ. ವಿಶ್ವದ ಯುದ್ಧೋಪಕರಣ ತಯಾರಿ ರಾಷ್ಟ್ರಗಳಲ್ಲಿ ಭಾರತದ ಸ್ಥಾನ ಗಟ್ಟಿ ಮಾಡುವುದಲ್ಲದೇ, ಜಾಗತಿ ವಿದ್ಯಮಾನಗಳಲ್ಲಿ ಭಾರತದ ಮಾತಿಗೆ ಹೆಚ್ಚು ಬೆಲೆಯನ್ನು ತಂದುಕೊಡಲಿದೆ.
ಭಾರತಕ್ಕೆ ತನ್ನ ವಿರೋಧಿಗಳನ್ನು ಎದುರಿಸಲು ದೃಢವಾದ ಆತ್ಮಬಲ, ಸ್ವಾವಲಂಬನೆಯ ಹಾದಿ ತುಳಿಯದೇ ಬೇರೆ ಮಾರ್ಗವಿಲ್ಲ. ಇಂಥ ಶಕ್ತಿ ಪಡೆದುಕೊಳ್ಳಲು ಅಗತ್ಯ ಪ್ರಮಾಣದ ಹಣಕಾಸು ಒದಗಿಸಬೇಕು. ಭದ್ರತೆಯ ವಿಚಾರದಲ್ಲಿ ದೇಶ ಎದುರಿಸುತ್ತಿರುವ ಅಪಾಯವನ್ನು ಎದುರಿಸಲು ಮಾಡಿಕೊಳ್ಳಬೇಕಾದ ಸಿದ್ಧತೆಯನ್ನು ಮುಂದೂಡುವುದು ಸರಿಯಾಗ ಕ್ರಮವಲ್ಲ. ಇದು ಸಾಧ್ಯವಾಗಲು ನಮ್ಮ ರಾಜಕೀಯ ಇಚ್ಛಾಶಕ್ತಿಯೂ ಅದಕ್ಕೆ ಪೂರಕವಾಗಿ ವರ್ತಿಸಬೇಕಿದೆ. ರಕ್ಷಣೆಗೆ ಒತ್ತು ಕೊಡುವ ಮೃದು ದೇಶ ಎನ್ನುವ ಹಂತದಿಂದ ದಾಳಿಗೆ ಸಿದ್ಧವಿರುವ ದೃಢವಾದ ಶಕ್ತಿ ಎನ್ನುವ ಸ್ಥಿತಿಯನ್ನು ನಮ್ಮ ದೇಶ ತಲುಪಬೇಕಿದೆ.
ಇದನ್ನೂ ಓದಿ: National Defence: ಭಾರತಕ್ಕೆ ಬೇಕು, ನಿಖರ ದಾಳಿಯ ಪ್ರಬಲ ಹೆಲಿಕಾಪ್ಟರ್‌ಗಳು
Published On - 8:00 am, Thu, 3 February 22